‘ವಾಹನ್‌, ಸಾರಥಿ-–4’ ಅಳವಡಿಕೆ

7
ರಾಜ್ಯದಾದ್ಯಂತ ಆನ್‌ಲೈನ್‌ನಲ್ಲಿ ಸಾರಿಗೆ ಇಲಾಖೆ ಸೇವೆಗಳು * ರಾಮನಗರ ಆರ್‌ಟಿಒ ಕಚೇರಿಯಲ್ಲಿ ಉತ್ತಮ ಸ್ಪಂದನೆ

‘ವಾಹನ್‌, ಸಾರಥಿ-–4’ ಅಳವಡಿಕೆ

Published:
Updated:
‘ವಾಹನ್‌, ಸಾರಥಿ-–4’ ಅಳವಡಿಕೆ

ಬೆಂಗಳೂರು: ಸಾರಿಗೆ ಇಲಾಖೆ ಸೇವೆಗಳನ್ನು ಸಾರ್ವಜನಿಕರಿಗೆ ಆನ್‌ಲೈನ್ ಮೂಲಕ ಒದಗಿಸುವ ಉದ್ದೇಶದಿಂದ ಸಿದ್ಧಪಡಿಸಿರುವ ‘ವಾಹನ್‌– 4’ ಹಾಗೂ ‘ಸಾರಥಿ–4‘ ಸಾಫ್ಟ್‌ವೇರ್‌ಗಳನ್ನು ರಾಜ್ಯದ ಎಲ್ಲ ಪ್ರಾದೇಶಿಕ ಸಾರಿಗೆ ಅಧಿಕಾರಿ (ಆರ್‌ಟಿಒ) ಕಚೇರಿಗಳಲ್ಲಿ ಅಳವಡಿಸಲು ತೀರ್ಮಾನಿಸಲಾಗಿದೆ.

ಮಂಗಳವಾರ ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಾರಿಗೆ ಇಲಾಖೆಯ ಆಯುಕ್ತ ಬಿ.ದಯಾನಂದ್‌, ‘ರಾಮನಗರ ಆರ್‌ಟಿಒ ಕಚೇರಿಯಲ್ಲಿ ವಾಹನ್‌ ಹಾಗೂ ಬೆಂಗಳೂರಿನ ಆರ್‌ಟಿಒ ಕಚೇರಿಗಳಲ್ಲಿ ಸಾರಥಿ ಸಾಫ್ಟ್‌ವೇರ್‌ ಅನ್ನು ಪ್ರಾಯೋಗಿಕವಾಗಿ ಅಳವಡಿಸಲಾಗಿತ್ತು. ಅಲ್ಲಿ ಉತ್ತಮ ಸ್ಪಂದನೆ ವ್ಯಕ್ತವಾಗಿದ್ದರಿಂದ ರಾಜ್ಯದಾದ್ಯಂತ ವಿಸ್ತರಿಸುತ್ತಿದ್ದೇವೆ’ ಎಂದರು.

‘ಇದಕ್ಕಾಗಿ ಆರ್‌ಟಿಒ ಕಚೇರಿಯ ಕೆಲವು ಚಟುವಟಿಕೆಗಳನ್ನು ಕೆಲ ದಿನಗಳವರೆಗೆ ಬಂದ್‌ ಮಾಡಬೇಕಾಗುತ್ತದೆ. ಒಂದೇ ಸಮಯದಲ್ಲಿ ರಾಜ್ಯದ 67 ಕಚೇರಿಗಳಲ್ಲಿ ಸಾಫ್ಟ್‌ವೇರ್‌ ಅಳವಡಿಸಲು ಮುಂದಾದರೆ, ಜನರಿಗೆ ತೊಂದರೆಯಾಗಲಿದೆ. ಹೀಗಾಗಿ ಹಂತ ಹಂತವಾಗಿ ಸಾಫ್ಟ್‌ವೇರ್‌ ಅಳವಡಿಸುತ್ತೇವೆ. ಫೆಬ್ರುವರಿ ಅಂತ್ಯದಲ್ಲಿ ಎಲ್ಲೆಡೆ ಈ ಸಾಫ್ಟ್‌ವೇರ್‌ ಲಭ್ಯವಾಗಲಿದೆ’ ಎಂದು ಹೇಳಿದರು.

ಏನಿದು ವಾಹನ್‌, ಸಾರಥಿ: ‘ಕೇಂದ್ರ ಸರ್ಕಾರದ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯವು ನ್ಯಾಷನಲ್ ಇನ್‌ಫಾರ್ಮೆಟಿಕ್ಸ್ ಸೆಂಟರ್ (ಎನ್ಐಸಿ) ಸಹಯೋಗದಲ್ಲಿ ವಾಹನ್‌ ಹಾಗೂ ಸಾರಥಿ ಸಾಫ್ಟ್‌ವೇರ್‌ಗಳನ್ನು ಅಭಿವೃದ್ಧಿಪಡಿಸಿದೆ. ಇಲಾಖೆಯ ಎಲ್ಲ ಸೇವೆಗಳನ್ನು ಆನ್‌ಲೈನ್‌ನಲ್ಲಿ ಸಿಗುವಂತೆ ಮಾಡುವುದು ಇದರ ಉದ್ದೇಶ’ ಎಂದು ದಯಾನಂದ್ ತಿಳಿಸಿದರು.

‘ವಾಹನಗಳ ನೋಂದಣಿ, ಶುಲ್ಕ ಹಾಗೂ ತೆರಿಗೆ ಪಾವತಿ, ನೋಂದಣಿ ಸಂಖ್ಯೆ ಹಂಚಿಕೆ, ನಿರಾಕ್ಷೇಪಣಾ ಪತ್ರ ಸೇರಿದಂತೆ ವಾಹನಗಳಿಗೆ ಸಂಬಂಧಪಟ್ಟ ಸೇವೆಗಳನ್ನು ’ವಾಹನ್‌–4‘ ಸಾಫ್ಟ್‌ವೇರ್‌ನಲ್ಲಿ ಪಡೆಯಬಹುದು. ಚಾಲನಾ ಪರವಾನಗಿಗೆ ಸಂಬಂಧಪಟ್ಟ ಸೇವೆಗಳು ‘ಸಾರಥಿ–4’ರಲ್ಲಿ ಲಭ್ಯವಿರಲಿವೆ. ಆನ್‌ಲೈನ್‌ ಪ್ರಕ್ರಿಯೆ ಮಾಹಿತಿಯು ಕೇಂದ್ರ ಸರ್ಕಾರದ ಸರ್ವರ್‌ನಲ್ಲಿ ದಾಖಲಾಗಲಿದೆ’ ಎಂದರು.

’ಇ–ಚಲನ್‌, ಡಿಜಿಟಲ್‌ ಲಾಕರ್‌ ವ್ಯವಸ್ಥೆ, ಅಂತರರಾಷ್ಟ್ರೀಯ ಚಾಲನಾ ಪರವಾನಗಿ, ಆಟೊಗಳ ಪರ್ಮಿಟ್‌ ಸೇವೆಗಳನ್ನೂ ಆನ್‌ಲೈನ್‌ ವ್ಯವಸ್ಥೆ ಅಡಿ ತರಲು ತಯಾರಿ ನಡೆಸಿದ್ದೇವೆ’ ಎಂದರು.

**

ಗುಜರಿ ಬದಲು ಎಲೆಕ್ಟ್ರಿಕ್‌ ಬ್ಯಾಟರಿಗೆ ಸಹಾಯಧನ

‘2 ಸ್ಟ್ರೋಕ್‌ ಆಟೊಗಳನ್ನು ಗುಜರಿಗೆ ಹಾಕಲೇಬೇಕು ಎಂಬುದು ಕಡ್ಡಾಯವಲ್ಲ. ಅದರ ಬದಲು ಅಂಥ ಆಟೊಗಳಿಗೆ ಎಲೆಕ್ಟ್ರಿಕ್‌ ಬ್ಯಾಟರಿ ಅಳವಡಿಸಿಕೊಳ್ಳಬಹುದು. ಅದಕ್ಕೂ ₹30 ಸಾವಿರ ಸಹಾಯಧನ ನೀಡಲು ಅನುಮತಿ ಕೋರಿ ಉನ್ನತ ಅಧಿಕಾರಿಗೆ ಪ್ರಸ್ತಾವ ಸಲ್ಲಿಸಿದ್ದೇವೆ’ ಎಂದು ದಯಾನಂದ್ ತಿಳಿಸಿದರು.

‘ಬಜೆಟ್‌ನಲ್ಲಿ ಘೋಷಿಸಿದಂತೆ 2 ಸ್ಟ್ರೋಕ್‌ ಆಟೊಗಳ ಸಂಚಾರವನ್ನು ನಗರದಲ್ಲಿ ಏಪ್ರಿಲ್‌ 1ರಿಂದ ನಿಷೇಧಿಸಲಾಗುತ್ತಿದೆ. ಅಷ್ಟರೊಳಗೆ ಮಾಲೀಕರು ಪರ್ಯಾಯ ವ್ಯವಸ್ಥೆ ಮಾಡಿಕೊಳ್ಳಬೇಕು’ ಎಂದರು.

***

2018ರಲ್ಲಿ ಚಾಲನಾ ಪರವಾನಗಿ ಪತ್ರ(ಡಿಎಲ್‌) ಪಡೆದವರ ವಿವರ:

7,77,180

ಡಿಎಲ್‌ ಪಡೆದವರು

6,66,990

ಡಿಎಲ್‌ ಪಡೆದ ಪುರುಷರು

1,10,190

ಡಿಎಲ್‌ ಪಡೆದ ಮಹಿಳೆಯರು

***

4,64,218

ದ್ವಿ–ಚಕ್ರ ವಾಹನಗಳ ಡಿಎಲ್‌ ಪಡೆದವರು

3,11,013

ನಾಲ್ಕು–ಚಕ್ರ ವಾಹನಗಳ ಡಿಎಲ್‌ ಪಡೆದವರು

***

2017ರ ವಾಹನ ನೋಂದಣಿ ಅಂಕಿ–ಸಂಖ್ಯೆ:

15,93,974

ನೋಂದಣಿಯಾದ ವಾಹನಗಳು

11,40,174

ದ್ವಿ–ಚಕ್ರ ವಾಹನಗಳು

1,94,160

ನಾಲ್ಕು–ಚಕ್ರ ವಾಹನಗಳು

43,372

ಟ್ರ್ಯಾಕ್ಟರ್‌ ಟ್ರೇಲರ್‌ಗಳು

 

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry