ಚಂದ್ರಶೇಖರ ಕಂಬಾರ ಪ್ರತಿಷ್ಠಾನಕ್ಕೆ ಚಾಲನೆ

7
ಕನ್ನಡ ಸಾಹಿತ್ಯದ ಓದನ್ನು ಇನ್ನಷ್ಟು ವಿಸ್ತಾರಗೊಳಿಸುವ ಆಶಯ

ಚಂದ್ರಶೇಖರ ಕಂಬಾರ ಪ್ರತಿಷ್ಠಾನಕ್ಕೆ ಚಾಲನೆ

Published:
Updated:
ಚಂದ್ರಶೇಖರ ಕಂಬಾರ ಪ್ರತಿಷ್ಠಾನಕ್ಕೆ ಚಾಲನೆ

ಬೆಂಗಳೂರು: ಕನ್ನಡ ಸಾಹಿತ್ಯದ ಓದನ್ನು ಇನ್ನಷ್ಟು ವಿಸ್ತಾರಗೊಳಿಸುವ ಆಶಯದೊಂದಿಗೆ ಕರ್ನಾಟಕ ರಾಜ್ಯ ಪದವಿಪೂರ್ವ ಕಾಲೇಜು ಕನ್ನಡ ಉಪನ್ಯಾಸಕರ ವೇದಿಕೆ ‘ಚಂದ್ರಶೇಖರ ಕಂಬಾರ ಪ್ರತಿಷ್ಠಾನ’ ಆರಂಭಿಸಿದೆ.

ವೇದಿಕೆ ನಗರದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ‘ಕಂಬಾರರ ಸಾಹಿತ್ಯ ಕುರಿತ ರಾಷ್ಟ್ರೀಯ ವಿಚಾರಸಂಕಿರಣ’ದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಮನು ಬಳಿಗಾರ್‌ ಪ್ರತಿಷ್ಠಾನಕ್ಕೆ ಚಾಲನೆ ನೀಡಿದರು.

ಪ್ರತಿಷ್ಠಾನದ ಅಧ್ಯಕ್ಷರಾಗಿ ಬೆಂಗಳೂರು ಗ್ರಾಮಾಂತರ ಜಿಲ್ಲಾ ಪಂಚಾಯಿತಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ.ಎ.ದಯಾನಂದ್‌ ಆಯ್ಕೆಯಾಗಿದ್ದಾರೆ. ‘ಕಂಬಾರರ ಸಾಹಿತ್ಯ, ಕವಿತೆಗಳನ್ನು ಪ್ರತಿಷ್ಠಾನದ ಮೂಲಕ ವಿದ್ಯಾರ್ಥಿ ಸಮುದಾಯಕ್ಕೆ ತಲುಪಿಸುವ ಕೆಲಸ ಮಾಡುತ್ತೇವೆ. ಇದು ಕಂಬಾರರಿಗೆ ಮಾತ್ರ ಸೀಮಿತವಾಗುವುದಿಲ್ಲ. ಕಂಬಾರರ ಸೈದ್ಧಾಂತಿಕ ವಿಚಾರಗಳನ್ನು ಇಟ್ಟುಕೊಂಡು ಕನ್ನಡ ಸಾಹಿತ್ಯದ ವಿವಿಧ ಆಯಾಮಗಳ ಬಗ್ಗೆ ಚರ್ಚಿಸಲು ಇದು ವೇದಿಕೆಯಾಗುತ್ತದೆ’ ಎಂದು ದಯಾನಂದ್‌ ತಿಳಿಸಿದರು.

ಪರಿಷತ್ತಿನ ಅನುದಾನ ಬಳಸಿಕೊಳ್ಳಿ: ‘ಸಾಹಿತ್ಯ ಕಾರ್ಯಕ್ರಮಗಳಿಗಾಗಿ ಹಣ ಮೀಸಲಿಟ್ಟಿರುತ್ತೇವೆ. ಇದಕ್ಕಾಗಿ ಸಾಕಷ್ಟು ಅನುದಾನಗಳು ಬರುತ್ತವೆ. ಸಾಹಿತ್ಯ ಪ್ರತಿಷ್ಠಾನಗಳು ಇವುಗಳ ಉಪಯೋಗ ಪಡೆಯಬೇಕು. ಪರಿಷತ್ತಿನ ಸಹಯೋಗ ಪಡೆದರೆ, ಇನ್ನೂ ಉತ್ತಮ ರೀತಿಯಲ್ಲಿ ಕಾರ್ಯಕ್ರಮಗಳನ್ನು ನಡೆಸಬಹುದು. ಜನಗಳನ್ನು ಕರೆಸುತ್ತೇವೆ, ಬೆಳಿಗ್ಗೆಯ ಉಪಾಹಾರ ವ್ಯವಸ್ಥೆ ಮಾಡುತ್ತೇವೆ’ ಎಂದು ಬಳಿಗಾರ್‌ ಹೇಳಿದರು.

ಪೋಷಕರ ಹಿಂದೇಟು: ‘ಸರ್ಕಾರಿ ಶಾಲೆಗಳಿಗೆ ಮಕ್ಕಳನ್ನು ಕಳುಹಿಸಲು ಪೋಷಕರೇ ಹಿಂದೇಟು ಹಾಕುತ್ತಿದ್ದಾರೆ. ಮಕ್ಕಳನ್ನೇ ಆಕರ್ಷಿಸುವ ಅಗತ್ಯವಿದೆ. ಸರ್ಕಾರಿ ಶಾಲೆಗಳಲ್ಲಿ ಕನ್ನಡವನ್ನು ಮಾಧ್ಯಮವಾಗಿಟ್ಟುಕೊಂಡು ಇಂಗ್ಲಿಷ್‌ ಕಲಿಸಿದರೆ, ವಿದ್ಯಾರ್ಥಿಗಳ ಸಂಖ್ಯೆಯೂ ಹೆಚ್ಚುತ್ತದೆ. ಕನ್ನಡ ಮಾಧ್ಯಮದಲ್ಲಿ ಓದಿದರೂ ಆತ್ಮವಿಶ್ವಾಸವಿದ್ದರೆ ಎಂತಹ ಸಾಧನೆಯಾದರೂ ಮಾಡಲು ಸಾಧ್ಯ. ಇದಕ್ಕೆ ಸಿ.ಎನ್.ಆರ್. ರಾವ್‌ ಅವರೇ ನಿದರ್ಶನ’ ಎಂದು ಹಿರಿಯ ಸಂಶೋಧಕ ಹಂಪ ನಾಗರಾಜಯ್ಯ ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry