ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಠ್ಯದಲ್ಲಿ ರಾಜಕೀಯ ಶಿಕ್ಷಣವೂ ಇರಲಿ

‘ಕರ್ನಾಟಕದಲ್ಲಿ ಶಾಲಾ ಶಿಕ್ಷಣದ ಭವಿಷ್ಯ’ ವಿಚಾರಸಂಕಿರಣದಲ್ಲಿ ರೂಪಾ ಸಲಹೆ
Last Updated 30 ಜನವರಿ 2018, 19:57 IST
ಅಕ್ಷರ ಗಾತ್ರ

ಬೆಂಗಳೂರು: ‘ರಾಜಕಾರಣವನ್ನೂ ವೃತ್ತಿಯಂತೆ ಪರಿಗಣಿಸಲು ಮಕ್ಕಳಿಗೆ ಚಿಕ್ಕಂದಿನಿಂದಲೇ ರಾಜಕೀಯ ಶಿಕ್ಷಣ ನೀಡಬೇಕು. ಶಾಸಕ, ಸಂಸದ ಸ್ಥಾನಗಳು ತಂದೆ ನಂತರ ಮಕ್ಕಳಿಗೆ ಎನ್ನುವ ಪರಿಸ್ಥಿತಿ ಮುಂದುವರಿಯಲು ಬಿಡಬಾರದು’ ಎಂದು ಗೃಹರಕ್ಷಕ ದಳದ ಹೆಚ್ಚುವರಿ ಕಮಾಂಡೆಂಟ್‌ ಡಿ.ರೂಪಾ ಅಭಿಪ್ರಾಯಪಟ್ಟರು.

ಒಸ್ವಾಲ್ ಬುಕ್ಸ್ ಮತ್ತು ಫಿಜೀಹಾ ಸಹಯೋಗದಲ್ಲಿ ನಗರದಲ್ಲಿ ಮಂಗಳವಾರ ಆಯೋಜಿಸಿದ್ದ ‘ಕರ್ನಾಟಕದಲ್ಲಿ ಶಾಲಾ ಶಿಕ್ಷಣದ ಭವಿಷ್ಯ’ ಕುರಿತ ಕಾರ್ಯಕ್ರಮದಲ್ಲಿ ಮಾತನಾಡಿದರು.

‘ಪಠ್ಯದಲ್ಲಿ ಲಿಂಗ ತಾರತಮ್ಯ ಬಿಂಬಿಸುವ ವಿಷಯಗಳು ಈಗಲೂ ಇವೆ. ಇದು ಬದಲಾಗದಿದ್ದರೆ ಸಮಾಜದಲ್ಲಿ ಎಂದಿಗೂ ಸಮಾನತೆ ಬರುವುದಿಲ್ಲ’ ಎಂದರು.

‘ನಮ್ಮ ಕಾಲದ ಹಾಗೂ ನಮ್ಮ ಹಿಂದಿನವರ ಕಾಲದ ಶಿಕ್ಷಣಕ್ಕೆ ಹೋಲಿಸಿದರೆ ಈಗಿನ ಶಿಕ್ಷಣ ಬಹಳಷ್ಟು ಬದಲಾಗಿದೆ. ಈಗಿನ ಮಕ್ಕಳು ಬಹಳ ಬೇಗ ಗಮನವಿಟ್ಟು ಕಲಿಯುತ್ತಾರೆ. ಅವರ ಏಕಾಗ್ರತೆ ಹೆಚ್ಚಿಸಲು ಉತ್ತೇಜನ ಕೊಡಬೇಕಿದೆ. ಇದು ಪುಸ್ತಕ ಓದುವುದು ಮತ್ತು ಧ್ಯಾನ ಮಾಡುವುದರಿಂದ ಸಿದ್ಧಿಸುತ್ತದೆ. ಧ್ಯಾನವನ್ನು ಪಠ್ಯದಲ್ಲಿ ಅಳವಡಿಸುವ ಅಗತ್ಯವಿದೆ’ ಎಂದರು.

ಸೈಬರ್‌ ಅಪರಾಧಗಳ ಬಗ್ಗೆಯೂ ಮಕ್ಕಳಿಗೆ ತಿಳಿವಳಿಕೆ ನೀಡಬೇಕಿದೆ. ಇದರಿಂದ ಮುಂದೆ ಅವರು ಸೈಬರ್‌ ಅಪರಾಧ ಚಟುವಟಿಕೆಗಳಲ್ಲಿ ತೊಡಗುವುದನ್ನು ತಪ್ಪಿಸಬಹುದಾಗಿದೆ ಎಂದರು.

ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ತನ್ವೀರ್‌ ಸೇಟ್‌, ‘ನಮ್ಮ ಮಕ್ಕಳನ್ನು ಸ್ಪರ್ಧಾತ್ಮಕ ಪರಿಸರದಲ್ಲಿ ಬೆಳೆಸಬೇಕಾಗಿದೆ. ನಾಳಿನ ಸವಾಲುಗಳನ್ನು ಸಮರ್ಥವಾಗಿ ಎದುರಿಸಲು ಈಗಿನಿಂದಲೇ ಅವರನ್ನು ಸಶಕ್ತಗೊಳಿಸಬೇಕಿದೆ. ಇದಕ್ಕಾಗಿ ಸಮಗ್ರವಾದ ಹೊಸ ಶಿಕ್ಷಣ ಮಾದರಿ ಸೃಷ್ಟಿಸುವ ಸವಾಲು ನಮ್ಮ ಮುಂದಿದೆ’ ಎಂದರು.

ವಾಲ್‌ನಟ್‌ ಸಹಸಂಸ್ಥಾಪಕ ರಾಘವ ಚಕ್ರವರ್ತಿ, ‘ಶಿಕ್ಷಕರು ಬೋಧನೆಯಲ್ಲಿ ತಂತ್ರಜ್ಞಾನವನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಬೇಕಿದೆ. ಮಕ್ಕಳ ಕಲಿಕೆಯ ಮಟ್ಟವನ್ನು ಸದಾ ಗಮನಿಸಬೇಕು. ಮಕ್ಕಳು ಪ್ರಶ್ನೆ ಕೇಳುವಂತೆ, ಕುತೂಹಲದಿಂದ ಕಲಿಯುವಂತೆ ಮಾಡಬೇಕು' ಎಂದು ಸಲಹೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT