‘ಕುದ್ರೋಳಿಗೆ ‘ಕಲ್ಲಡ್ಕ’ ಬಂದದ್ದು ಅವಮಾನ’

7

‘ಕುದ್ರೋಳಿಗೆ ‘ಕಲ್ಲಡ್ಕ’ ಬಂದದ್ದು ಅವಮಾನ’

Published:
Updated:
‘ಕುದ್ರೋಳಿಗೆ ‘ಕಲ್ಲಡ್ಕ’ ಬಂದದ್ದು ಅವಮಾನ’

ಮಂಗಳೂರು: ‘ಜಾತ್ಯತೀತ ಪರಂಪರೆ ದೊಡ್ಡ ಪ್ರತಿಪಾದಕರಾಗಿದ್ದ ಬ್ರಹ್ಮಶ್ರೀ ನಾರಾಯಣ ಗುರುಗಳು ಸ್ಥಾಪಿಸಿದ ಕುದ್ರೋಳಿಯ ಜಾತ್ಯತೀತ ದೇಗುಲಕ್ಕೆ ಆರ್‌ಎಸ್‌ಎಸ್‌ ಮುಖಂಡ ಕಲ್ಲಡ್ಕ ಡಾ.ಪ್ರಭಾಕರ ಭಟ್‌ ಬಂದಿದ್ದು ಗುರುಗಳಿಗೆ ಮಾಡಿದ ಅವಮಾನ’ ಎಂದು ಮುಖ್ಯಮಂತ್ರಿ ಮಾಧ್ಯಮ ಸಲಹೆಗಾರ ದಿನೇಶ್‌ ಅಮೀನ್‌ ಮಟ್ಟು ಹೇಳಿದರು.

ಸೌಹಾರ್ದತೆಗಾಗಿ ಕರ್ನಾಟಕ ವತಿಯಿಂದ ಮಂಗಳವಾರ ಇಲ್ಲಿನ ನೆಹರೂ ಮೈದಾನದ ಸುತ್ತ ಆಯೋಜಿಸಿದ್ದ ಮಾನವ ಸರಪಳಿಯಲ್ಲಿ ಭಾಗವಹಿಸಿದ ಬಳಿಕ ಅಲ್ಲಿಯೇ ನಡೆದ ಬಹಿರಂಗ ಸಭೆಯಲ್ಲಿ ಅವರು ಮಾತನಾಡಿದರು.

‘ಸೌಹಾರ್ದದ ಕೊಂಡಿಗಳನ್ನು ತುಂಡರಿಸಲು ಆಗಾಗ ಪ್ರಯತ್ನಗಳು ನಡೆಯುತ್ತಲೇ ಇರುತ್ತವೆ. ಅವುಗಳಲ್ಲಿ ಕೆಲವು ನಮ್ಮೊಳಗೂ ಇರುತ್ತವೆ. ಬಿಲ್ಲವ ಯುವಕರ ಸಾವಿಗೆ, ಅವರು ಜೈಲು ಸೇರಲು ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ಕಾರಣವಾಗಿರುವ ಪ್ರಭಾಕರ ಭಟ್‌ ಜತೆ ಜನಾರ್ದನ ಪೂಜಾರಿ ಕೈ ಜೋಡಿಸಿದ್ದಾರೆ. ಸ್ವಾರ್ಥ, ವೈಯಕ್ತಿಕ ರಾಜಕೀಯ ಕಾರಣಗಳಿಗಾಗಿ ಸೈದ್ಧಾಂತಿಕವಾಗಿ ರಾಜಿ ಆಗಿದ್ದಾರೆ’ ಎಂದರು.

‘ಶತ್ರು ಮತ್ತು ಮಿತ್ರರನ್ನು ಗುರುತಿಸಲು ಸಾಧ್ಯವಾಗದಂತೆ ಸೈದ್ಧಾಂತಿಕ ದ್ರೋಹ ಬಗೆಯುವುದನ್ನು ಸಹಿಸಲು ಸಾಧ್ಯವಿಲ್ಲ. ದಕ್ಷಿಣ ಕನ್ನಡ ಜಿಲ್ಲೆಯ ಕಾಂಗ್ರೆಸ್‌ ಮುಖಂಡರು ಕಲ್ಲಡ್ಕ ಪ್ರಭಾಕರ ಭಟ್ಟರ ವಿರುದ್ಧ ಮಾತನಾಡಲು ಹೆದರುತ್ತಿದ್ದಾರೆ. ಏಕೆ ಎಂಬುದು ಗೊತ್ತಾಗುತ್ತಿಲ್ಲ. ಅವರೇನು ಪ್ರಧಾನಿಯಾ? ರಾಷ್ಟ್ರಪತಿಯಾ? ಪ್ರಭಾಕರ ಭಟ್‌ ಯಾರು ಎಂದು ತಿಳಿಯಲು ಇತಿಹಾಸ ಓದಬೇಕಿಲ್ಲ. ಇತ್ತೀಚೆಗೆ ಅವರು ಮಾಡಿದ ಭಾಷಣಗಳನ್ನು ಕೇಳಿದರೆ ಅರ್ಥವಾಗುತ್ತದೆ’ ಎಂದು ಹೇಳಿದರು.

‘ಪೂಜಾರಿಯವರು ಭಟ್ಟರನ್ನು ವೇದಿಕೆ ಮೇಲೆ ಕೂರಿಸಿಕೊಂಡು ಕಣ್ಣೀರು ಹಾಕುತ್ತಾರೆ. ಯಾವುದಕ್ಕಾಗಿ ಈ ಅಳು? ಬಿಲ್ಲವರ ಮಕ್ಕಳು ಸಂಘ ಪರಿವಾರದ ಕಾಲಾಳುಗಳಾಗಿ ಹಿಂಸೆಗೆ ಇಳಿದು, ಅದಕ್ಕೇ ಬಲಿಯಾಗುತ್ತಿರುವ ಬಗ್ಗೆ ಏಕೆ ಅವರು ಮಾತನಾಡುತ್ತಿಲ್ಲ. ಕಟ್ಟುಕತೆಗಳನ್ನು ಹೇಳಿ ಅಳುವುದಲ್ಲ. ದಿಕ್ಕು ತಪ್ಪಿರುವ ಮಕ್ಕಳನ್ನು ಸರಿದಾರಿಗೆ ತರುವ ಕೆಲಸ ಮಾಡಬೇಕಿತ್ತು’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

‘ಸಂಘ ಪರಿವಾರದ ಕಾಲಾಳುಗಳಾಗಿ ಹಿಂಸೆಗೆ ಇಳಿಯುತ್ತಿರುವವರ ಮೆದುಳು ಶುದ್ಧೀಕರಣ ಮಾಡಬೇಕಿದೆ. ಅದಕ್ಕೂ ಮೊದಲು ತೆರೆಯ ಮರೆಯಲ್ಲಿ ಕುಳಿತು ಹಿಂಸೆಯನ್ನು ಪ್ರಚೋದಿಸುತ್ತಿರುವ ಮೆದುಳನ್ನು ಒಡೆಯಬೇಕು’ ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry