ನಟರಾಜನ ಜಾಗಕ್ಕೆ ‘ರಾತ್ರಿ ಕನಸು’

7

ನಟರಾಜನ ಜಾಗಕ್ಕೆ ‘ರಾತ್ರಿ ಕನಸು’

Published:
Updated:
ನಟರಾಜನ ಜಾಗಕ್ಕೆ ‘ರಾತ್ರಿ ಕನಸು’

ಬೆಂಗಳೂರು: ನಾಟಕ ಅಕಾಡೆಮಿಯು ವಾರ್ಷಿಕ ಪ್ರಶಸ್ತಿ ಪುರಸ್ಕೃತರಿಗೆ ನೀಡುವ ಸ್ಮರಣಿಕೆಯಲ್ಲಿರುವ ನಟರಾಜನ ವಿನ್ಯಾಸ ಬದಲಿಸುವ ಅಧ್ಯಕ್ಷ ಜಿ.ಲೋಕೇಶ್ ಅವರ ಪ್ರಯತ್ನಕ್ಕೆ ಕೆಲವು ಸದಸ್ಯರಿಂದಲೇ ವಿರೋಧ ವ್ಯಕ್ತವಾಗಿದೆ.

‘ಅಕಾಡೆಮಿಯ ಛಾಪು ಮೂಡಿಸುವುದಷ್ಟೇ ನನ್ನ ಉದ್ದೇಶ’ ಎಂದು ಪಟ್ಟು ಹಿಡಿದಿರುವ ಅಧ್ಯಕ್ಷರು, ‘ಈ ಹಿಂದೆಯೂ ಹಲವರು ಸ್ಮರಣಿಕೆಯ ವಿನ್ಯಾಸ ಬದಲಿಸಿದ್ದರು’ ಎಂದು ಪ್ರತಿಪಾದಿಸಿದರು.

‘ಪ್ರಶಸ್ತಿ ಪುರಸ್ಕತರ ಬಳಿ ಶಾಶ್ವತವಾಗಿ ಉಳಿಯಬಲ್ಲ ಫಲಕವನ್ನು ವಿನ್ಯಾಸ ಮಾಡಿಸಬೇಕು ಎಂಬುದು ನನ್ನ ಆಶಯ. ಯಾರ ನಂಬಿಕೆಗಳಿಗೂ ನಾನು ಧಕ್ಕೆ ತರುವುದಿಲ್ಲ’ ಎಂದು ಲೋಕೇಶ್ ತಮ್ಮ ನಿಲುವನ್ನು ‘ಪ್ರಜಾವಾಣಿ’ಗೆ ಸ್ಪಷ್ಟಪಡಿಸಿದರು.

ಈ ಪ್ರಸ್ತಾವವನ್ನು ಆರಂಭದಿಂದಲೂ ವಿರೋಧಿಸುತ್ತಿರುವ ಅಕಾಡೆಮಿ ಸದಸ್ಯ ಆರ್. ವೆಂಕಟರಾಜು, ‘ನಾಟ್ಯ ಮತ್ತು ನಾಟಕ ಕಲೆಯ ಆದಿದೈವ ಎಂದೇ ಪರಿಗಣಿಸಲಾಗುವ ನಟರಾಜನ ವಿನ್ಯಾಸವೇ ನಾಟಕ ಅಕಾಡೆಮಿಯ ಪ್ರಶಸ್ತಿಯ ಫಲಕಕ್ಕೆ ಸೂಕ್ತ. ಫಲಕದ ವಿನ್ಯಾಸ ಬದಲಿಸಬಾರದು’ ಎಂದು ಪ್ರತಿವಾದ ಮುಂದಿಟ್ಟರು. ಈ ಸಂಬಂಧ ಅಕಾಡೆಮಿಯ ರಿಜಿಸ್ಟ್ರಾರ್‌ ಮಂಜುನಾಥ ಆರಾಧ್ಯ ಅವರಿಗೆ ವೆಂಕಟರಾಜು ಅವರು ಪತ್ರ ಬರೆದು ಅಸಮಾಧಾನ ದಾಖಲಿಸಿದ್ದಾರೆ.

‘ಡಿ.27ರಂದು ನಡೆದ ನಾಟಕ ಅಕಾಡೆಮಿ ಸಭೆಯಲ್ಲಿ ಈ ವಿಚಾರ ಪ್ರಸ್ತಾಪವಾಗಿತ್ತು’ ಎನ್ನುವುದು ಅಕಾಡೆಮಿಯ ಮತ್ತೋರ್ವ ಸದಸ್ಯ ಬೇಲೂರು ರಘುನಂದನ್ ಮಾತು. ‘ಸಭೆಯಲ್ಲಿ ಲಾಂಛನ ಮತ್ತು ಫಲಕದ ವಿನ್ಯಾಸ ಬದಲಾವಣೆ ಕುರಿತು ಸುದೀರ್ಘ ಚರ್ಚೆ ನಡೆಯಿತು. ಸದಸ್ಯರ ಮಾತಿಗೆ ಮನ್ನಣೆ ನೀಡಿದ ಅಧ್ಯಕ್ಷರು ಲಾಂಛನ ಬದಲಾವಣೆ ಪ್ರಸ್ತಾವ ಕೈಬಿಟ್ಟರು. ರಂಗಭೂಮಿ ಬಗ್ಗೆ ವಿಸ್ತಾರವಾದ ನೋಟವನ್ನು ನೀಡಬಲ್ಲ ಪ್ರತಿಮೆ, ದರ್ಶನ ಪ್ರಜ್ಞೆಯನ್ನು ಕಟ್ಟಿಕೊಡಬಲ್ಲ ಸ್ಮರಣಿಕೆ ರೂಪಿಸುವುದು ಸೂಕ್ತ ಎಂದು ಬಹುತೇಕ ಸದಸ್ಯರು ಒಪ್ಪಿಗೆ ನೀಡಿದರು. ಸಭೆಯ ನಂತರ ಏನಾಯಿತು ಎಂಬುದರ ಮಾಹಿತಿ ಇಲ್ಲ’ ಎನ್ನುತ್ತಾರೆ.

ಬಿ.ವಿ.ವೈಕುಂಠರಾಜು ಹಾಗೂ ಸಿ.ಜಿ ಕೃಷ್ಣಸ್ವಾಮಿ ಅಧ್ಯಕ್ಷರಾಗಿದ್ದಾಗ ಫಲಕಕ್ಕೆ ಹೊಸ ರೂಪ ನೀಡಲಾಗಿತ್ತು. ಸಿ.ಜಿ.ಕೆ. ಅವರು ವಿಜಯನಗರದ ಕಲ್ಲಿನರಥವನ್ನು ಫಲಕಕ್ಕೆ ಆಯ್ದುಕೊಂಡಿದ್ದರು. ಆಗಲೂ ರಂಗಭೂಮಿ ಕಲಾವಿದರು ಆಕ್ಷೇಪ ವ್ಯಕ್ತಪಡಿಸಿದ್ದರೂ ಪ್ರಶಸ್ತಿಯೊಂದಿಗೆ ಅದೇ ವಿನ್ಯಾಸದ ಫಲಕ ನೀಡಲಾಗಿತ್ತು. ಆನಂತರದ ದಿಗಳಲ್ಲಿ ಮತ್ತೆ ನಟರಾಜ ಫಲಕ ನೀಡುವ ಪರಿಪಾಠವೇ ಮುಂದುವರಿಯಿತು.

ಎಲ್ಲರೂ ಸ್ವಾಗತಿಸಿದ್ದಾರೆ

ಅಕಾಡೆಮಿಯ ಸ್ಥಾಯಿ ಸಮಿತಿ ಸಭೆಯಲ್ಲಿ ಲಾಂಛನ (ಲೋಗೊ) ಮತ್ತು ಫಲಕ ವಿನ್ಯಾಸದ ಬಗ್ಗೆ ಚರ್ಚೆ ನಡೆದಿರುವುದು ನಿಜ. ಸದಸ್ಯರು ತಮ್ಮ ಲೆಟರ್‌ಹೆಡ್‌

ನಲ್ಲಿ ಅಕಾಡೆಮಿ ಲಾಂಛನ ಬಳಸಿದ್ದಾರೆ. ಮತ್ತೆ ಹೊಸ ಲಾಂಛನ ಅಚ್ಚು ಹಾಕಿಸುವುದಕ್ಕೆ ಅವರು ತಯಾರಿರಲಿಲ್ಲ. ಹಾಗಾಗಿ ಲಾಂಛನ ಬದಲಾವಣೆ ಪ್ರಸ್ತಾಪ ಕೈಬಿಟ್ಟೆವು.

ನಾಡಿನ ಶ್ರೇಷ್ಠ ಕಲಾವಿದರಲ್ಲೊಬ್ಬರಾದ ಸುದೇಶ್‌ ಮಹಾನ್‌ ಅವರಲ್ಲಿ ಫಲಕ (ಸ್ಮರಣಿಕೆ) ವಿನ್ಯಾಸದ ಬಗ್ಗೆ ಚರ್ಚೆ ನಡೆಸಿದಾಗ ಅವರು ಆಧುನಿಕ ರಂಗ

ಭೂಮಿಯನ್ನು ಪ್ರತಿನಿಧಿಸುವ ಶಿಲ್ಪಕಲೆಯ ಚಿತ್ರ ಮಾಡಿಕೊಟ್ಟರು. ‘ಮಿಡ್‌ ಸಮ್ಮರ್‌ ನೈಟ್ಸ್‌ ಡ್ರೀಮ್‌’ ನಾಟಕದ ಸನ್ನಿವೇಶವೊಂದನ್ನು ಪ್ರತಿನಿಧಿಸುವ ಚಿತ್ರ ಅದು. ಆ ಮಾದರಿಯನ್ನು ಅಕಾಡೆಮಿ ಕಚೇರಿಯಲ್ಲಿ ಕೆಲದಿನ ಮುಕ್ತವಾಗಿ ಪ್ರದರ್ಶನಕ್ಕೂ ಇರಿಸಲಾಗಿತ್ತು. ಎಲ್ಲ ಸದಸ್ಯರೂ ಈ ಸ್ಮರಣಿಕೆಯನ್ನು ಸ್ವಾಗತಿಸಿದ್ದಾರೆ.

ಈ ಬಾರಿಯ ಅಕಾಡೆಮಿ ಪ್ರಶಸ್ತಿಯೊಂದಿಗೆ ಇದೇ ಸ್ಮರಣಿಕೆಯನ್ನು ನೀಡಲಾಗುತ್ತದೆ. ಏಳು ಕೆ.ಜಿ. ತೂಕದ ಈ ಫಲಕವನ್ನು ಸಾಗವಾನಿ ಮರದ ತಳಪಾಯದ ಮೇಲೆ ಅಳವಡಿಸಲಾಗಿದೆ. ಕಂಚಿನ ಫಿನಿಶಿಂಗ್‌ ಇರುವ ಹಿತ್ತಾಳೆಯ ಪ್ರತಿಮೆಯನ್ನು ಸ್ಮರಣಿಕೆ ಹೊಂದಿದೆ. ಪ್ರತಿ ಸ್ಮರಣಿಕೆ ನಿರ್ಮಾಣಕ್ಕೆ ಸುಮಾರು ₹10 ಸಾವಿರ ವೆಚ್ಚವಾಗುತ್ತದೆ.

ಫೆ.18ಕ್ಕೆ ಬಾಗಲಕೋಟೆಯಲ್ಲಿ ಸಮಾರಂಭ

ಈ ವರ್ಷದ ಅಕಾಡೆಮಿ ಪ್ರಶಸ್ತಿ ಪ್ರದಾನ ಸಮಾರಂಭ ಫೆಬ್ರುವರಿ 24ರಂದು ಬಾಗಲಕೋಟೆಯಲ್ಲಿ ನಡೆಯಲಿದೆ. ರವೀಂದ್ರ ಕಲಾಕ್ಷೇತ್ರ ಮುಚ್ಚಿರುವ ಕಾರಣ ಬೆಂಗಳೂರಿನಲ್ಲಿ ಸಮಾರಂಭ ನಡೆಸಲು ಸಾಧ್ಯವಾಗುತ್ತಿಲ್ಲ. ಮಂಡ್ಯ ರಮೇಶ್‌, ಕೃಷ್ಣಮೂರ್ತಿ ಕವತ್ತಾರು ಸೇರಿದಂತೆ 25 ಮಂದಿಗೆ ವಾರ್ಷಿಕ ಪ್ರಶಸ್ತಿ, ಪ್ರಸನ್ನ ಅವರಿಗೆ ಗೌರವ ಪ್ರಶಸ್ತಿ ನೀಡಲಾಗುತ್ತದೆ. ಎಂದಿನಂತೆ ನಿಗದಿತ ದತ್ತಿ ಪ್ರಶಸ್ತಿಗಳನ್ನೂ ನೀಡಲಾಗುವುದು.

* * 

ರಂಗಭೂಮಿ ಸಾಧಕರಿಗೆ ನಾಟಕ ಅಕಾಡೆಮಿ ಪ್ರಶಸ್ತಿಯೊಂದಿಗೆ ₹25 ಸಾವಿರ ಮತ್ತು ಪ್ರಶಸ್ತಿ ಪತ್ರ ನೀಡಬೇಕು ಎನ್ನುವ ನಿಯಮವಿದೆ. ನಟರಾಜ ಫಲಕ ಕೊಡುವುದು ಶಿಷ್ಟಾಚಾರ ಮಾತ್ರ

ಜಿ. ಲೋಕೇಶ್

ನಾಟಕ ಅಕಾಡೆಮಿ ಅಧ್ಯಕ್ಷ

ವಾಸ್ತವ ಏನೆಂದು ಅಕಾಡೆಮಿ ಸ್ಪಷ್ಟಪಡಿಸಿದ್ದರೆ ಅಸಮಾಧಾನ ಭುಗಿಲೇಳುತ್ತಿರಲಿಲ್ಲ. ರಂಗಭೂಮಿ ಸಾರ್ವಭೌಮತ್ವ ಪ್ರತಿನಿಧಿಸಲು ನಟರಾಜನನ್ನು ಬದಲಾಯಿಸಬೇಕು ಎಂದಾದರೆ ಮುಖವಾಡವನ್ನೇ ಆರಿಸಬಹುದಿತ್ತು.

ತೊಟ್ಟವಾಡಿ ನಂಜುಂಡಸ್ವಾಮಿ, ಹವ್ಯಾಸಿ ರಂಗಕರ್ಮಿ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry