ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಗರದಲ್ಲಿ ಬೃಹತ್ ಮಾನವ ಸರಪಳಿ

Last Updated 31 ಜನವರಿ 2018, 6:40 IST
ಅಕ್ಷರ ಗಾತ್ರ

ಮೈಸೂರು: ಕೋಮುಸೌಹಾರ್ದತೆಗಾಗಿ ನಗರದಲ್ಲಿ ಮಂಗಳವಾರ ಬೃಹತ್ ಮಾನವ ಸರಪಳಿ ರಚಿಸಲಾಯಿತು. ಸೌಹಾರ್ದತೆಗಾಗಿ ಕರ್ನಾಟಕ ಸಂಘಟನೆಯ ನೇತೃತ್ವದಲ್ಲಿ ಸೇರಿದ ನೂರಾರು ಮಂದಿ ಕೋಟೆ ಆಂಜನೇಯಸ್ವಾಮಿ ದೇಗುಲದ ಆವರಣದಿಂದ ಪರಸ್ಪರ ಕೈ ಕೈ ಹಿಡಿದು ಸುಮಾರು 3 ಕಿ.ಮೀವರೆಗೂ ಕ್ರಮಿಸಿದರು.

ಮೊದಲಿಗೆ ಚಾಮರಾಜೇಂದ್ರ ವೃತ್ತದಲ್ಲಿ ಮಾನವ ಸರಪಳಿ ರಚಿಸುವ ಮೂಲಕ ನಟ ಪ್ರಕಾಶ್‌ ರೈ ಸರಪಳಿಗೆ ಚಾಲನೆ ನೀಡಿದರು. ಹತ್ತು ನಿಮಿಷಗಳಷ್ಟು ಕಾಲ ವೃತ್ತದಲ್ಲಿ ಸಂಚಾರವನ್ನು ತಡೆ ಹಿಡಿಯಲಾಗಿತ್ತು.

ಒಬ್ಬೊಬ್ಬರಾಗಿ ರಸ್ತೆ ಬದಿಯಲ್ಲಿ ಸಾಗುತ್ತಿದ್ದ ಕಾರ್ಯಕರ್ತರು ನೋಡನೋಡುತ್ತಿದ್ದಂತೆ ಪುರಭವನ, ದೊಡ್ಡಗಡಿಯಾರ ದಾಟಿ, ಅಶೋಕ ರಸ್ತೆ ಮೂಲಕ ಅಜ್ಹಮ್ ಮಸೀದಿ, ಸಿಪಿಸಿ ಪಾಲಿಟೆಕ್ನಿಕ್ ಕಾಲೇಜಿನವರೆಗೂ ಕಾರ್ಯಕರ್ತರು ಮಾನವ ಸರಪಳಿ ರಚಿಸಿದರು.

ಆಟೊದಲ್ಲಿ ರಸ್ತೆಯುದ್ದಕ್ಕೂ ಧ್ವನಿವರ್ಧಕದಲ್ಲಿ ಮಾನವ ಸರಪಳಿಯ ಉದ್ದೇಶ, ಗುರಿಗಳನ್ನು ಜನರಿಗೆ ವಿವರಿಸಲಾಗುತ್ತಿತ್ತು. ಸಂಜೆ ನಿಗದಿಯಾಗಿದ್ದಂತೆ 4 ಗಂಟೆಗೆ ಸರಿಯಾಗಿ ಆರಂಭಗೊಂಡ ಸರಪಳಿ 4.45ರ ವರೆಗೂ ನಡೆಯಿತು. ನಂತರ ಪುರಭವನದ ಆವರಣದಲ್ಲಿ ಜಮಾವಣೆಗೊಂಡ ಕಾರ್ಯಕರ್ತರು, ದೇವನೂರ ಮಹಾದೇವ ಅವರಿಂದ ಪ್ರತಿಜ್ಞಾ ವಿಧಿ ಸ್ವೀಕರಿಸಿದರು.

‘ಮಹಾತ್ಮ ಗಾಂಧಿ ಹುತಾತ್ಮರಾದ ದಿನವಾದ ಇಂದು ಕೋಮುಸೌಹಾರ್ದತೆಯನ್ನು ಕಾಪಾಡಿಕೊಳ್ಳಲು ಪ್ರತಿಜ್ಞಾ ವಿಧಿ ಸ್ವೀಕರಿಸುತ್ತಿರುವೆವು’ ಎಂದು ಸೇರಿದ ಜನರು ಘೋಷಿಸಿದರು. ಪ್ರಜಾಪ್ರಭುತ್ವದ ಆಶಯಗಳನ್ನು, ಅಭಿವ್ಯಕ್ತಿ ಸ್ವಾತಂತ್ರ್ಯದ ಉಳಿವಿಗೆ, ಧರ್ಮನಿರಪೇಕ್ಷತೆಯ ಸಾಧನೆಗೆ ಕಟಿಬದ್ಧರಾಗಿರುತ್ತೇವೆ ಎಂದು ಉಚ್ಚರಿಸಿದರು.

ಇದು ಜನಗಳ ಭಾರತ: ಇದಕ್ಕೂ ಮುನ್ನ ಮಾತನಾಡಿದ ಉರಿಲಿಂಗಪೆದ್ದಿ ಮಠದ ಜ್ಞಾನಪ್ರಕಾಶ ಸ್ವಾಮೀಜಿ, ‘ಇದು ದನಗಳ ಭಾರತ ಅಲ್ಲ, ಜನಗಳ ಭಾರತ’ ಎಂದು ಹೇಳಿದರು. ‘ನಮಗೆ ಜನರು ನೆಮ್ಮದಿಯಾಗಿ ಬದುಕುವ ಕೋಮುಸೌಹರ್ದತೆಯಿಂದ ಬದುಕುವ ಭಾರತ ಬೇಕಾಗಿದೆ. ಇದಕ್ಕೆ ಎಲ್ಲರೂ ಶ್ರಮಿಸಬೇಕು’ ಎಂದು ತಿಳಿಸಿದರು. ಸಾಹಿತಿ ಕೆ.ಎಸ್.ಭಗವಾನ್ ಮಾತನಾಡಿ, ‘ನಾವು ಯಾವುದೇ ಜಾತಿ, ಧರ್ಮದ ವಿರುದ್ಧ ಇಲ್ಲ. ನಾವು ಮಾನವತೆಯ ಪರವಾಗಿದ್ದೇವೆ’ ಎಂದರು.

ಪರಿಸರವಾದಿ ಕೃಪಾಕರ, ಪ್ರಾಧ್ಯಾಪಕರಾದ ಮುಜಾಫರ್ ಅಸ್ಸಾದಿ, ಮಹೇಶ್‌ಚಂದ್ರ ಗುರು, ಸಾಹಿತಿಗಳಾದ ಜಿ.ಎಚ್.ನಾಯಕ, ಕೆ.ಎಸ್.ಭಗವಾನ್, ರಂಗಕರ್ಮಿಗಳಾದ ರಾಮೇಶ್ವರಿವರ್ಮಾ, ಎಚ್.ಜನಾರ್ದನ್, ನಂದಾ ಹಳೆಮನೆ, ಮಂಡ್ಯ ರಮೇಶ್, ಹೋರಾಟಗಾರರಾದ ಪ.ಮಲ್ಲೇಶ್, ಮೀರಾ ನಾಯಕ, ಬಡಗಲಪುರ ನಾಗೇಂದ್ರ, ಸ.ರಾ.ಸುದರ್ಶನ್ ಭಾಗವಹಿಸಿದ್ದರು.

ಎಲ್ಲ ಮನುಷ್ಯರಿಗೆ ನಮಸ್ಕಾರ– ಪ್ರಕಾಶ್‌ ರೈ

ಪುರಭವನದಲ್ಲಿ ಜಮಾವಣೆಗೊಂಡ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ನಟ ಪ್ರಕಾಶ್‌ ರೈ, ‘ಎಲ್ಲಾ ಮನುಷ್ಯರಿಗೆ ನಮಸ್ಕಾರ’ ಎಂದು ಹೇಳುವ ಮೂಲಕ ಮಾತು ಆರಂಭಿಸಿದರು. ಈ ಮಾತುಗಳನ್ನು ಕೇಳುತ್ತಿದ್ದಂತೆ ಸೇರಿದ್ದ ನೂರಾರು ಮಂದಿ ಹರ್ಷಭರಿತರಾಗಿ ಕರತಾಡನ ಮಾಡಿದರು.

‘ಇಲ್ಲಿ ಯಾರು ಸಹ ಜಾತಿ, ಧರ್ಮ, ಹಣ ನೋಡಿಕೊಂಡು ಇಲ್ಲಿಗೆ ಬಂದಿಲ್ಲ. ಯಾರನ್ನೂ ಹಣ ಕೊಟ್ಟು ಲಾರಿ ಮೂಲಕ ಕರೆಸಿಲ್ಲ. ದೇಶದಲ್ಲಿ ನಡೆಯುತ್ತಿರುವ ವಿದ್ಯಮಾನಗಳಿಂದ ರೋಸಿ ಹೋಗಿ ಕೋಮುಸೌಹಾರ್ದತೆ ಬಯಸಿ, ಶಾಂತಿಗಾಗಿ ಬಂದಿದ್ದೀರಿ. ಇದೊಂದು ಬಹುದೊಡ್ಡ ಮೌನ ಪ್ರತಿಭಟನೆ. ಇದು ಮತ್ತಷ್ಟ ದೊಡ್ಡದಾಗಲಿದೆ. ಈ ಭಾಷೆ ಕೋಮು ದಳ್ಳುರಿ ಸೃಷ್ಟಿಸುವವರಿಗೆ ಅರ್ಥವಾಗುತ್ತದೆ ಎಂದುಕೊಂಡಿದ್ದೇನೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT