ಸಂಭ್ರಮದ ಮಹದೇಶ್ವರ ರಥೋತ್ಸವ

7

ಸಂಭ್ರಮದ ಮಹದೇಶ್ವರ ರಥೋತ್ಸವ

Published:
Updated:

ಎಚ್.ಡಿ.ಕೋಟೆ: ತಾಲ್ಲೂಕಿನ ಐತಿಹಾಸಿಕ ಧಾರ್ಮಿಕ ಕ್ಷೇತ್ರವಾದ ಭೀಮನಕೊಲ್ಲಿಯ ಮಹದೇಶ್ವರಸ್ವಾಮಿ ಜಾತ್ರಾ ಮಹೋತ್ಸವ ಅಂಗವಾಗಿ ಮಂಗಳವಾರ ವಿಜೃಂಭಣೆಯಿಂದ ರಥೋತ್ಸವ ನಡೆಯಿತು.

60 ಅಡಿ ಎತ್ತರದ ರಥದಲ್ಲಿ ಮಹದೇಶ್ವರಸ್ವಾಮಿ ಹುಲಿ ಸವಾರಿ ಮಾಡುವ ವಿಗ್ರಹ ಪ್ರತಿಷ್ಟಾಪಿಸಲಾಗಿತ್ತು. ವಿವಿಧ ಪೂಜಾ ಕೈಂಕರ್ಯ ನೆರವೇರಿಸಿದ ಬಳಿಕ ಬೆಳಿಗ್ಗೆ 11 ಗಂಟೆಗೆ ರಥೋತ್ಸವಕ್ಕೆ ಚಾಲನೆ ನೀಡಲಾಯಿತು. ಪ್ರವಾಸೋದ್ಯಮ ಇಲಾಖೆ ₹ 1 ಕೋಟಿ ವೆಚ್ಚದಲ್ಲಿ ನಿರ್ಮಿಸಿರುವ ವಿಶಾಲವಾದ ರಥದ ಬೀದಿಯಲ್ಲಿ ಸಾಗಿತು.

ದೇವಸ್ಥಾನ ಸುತ್ತಹಾಕಿ ಸ್ವಸ್ಥಾನಕ್ಕೆ ರಥ ಮರಳಿತು. ಹರಕೆ ಹೊತ್ತ ಭಕ್ತರು ಕಪಿಲಾ ನದಿಯಲ್ಲಿ ಮಿಂದು ಪೂಜೆ ಸಲ್ಲಿಸಿದರು. ಮತ್ತೆ ಕೆಲವರು ಉರುಳು ಸೇವೆ ಸಲ್ಲಿಸಿದರು. ಮಂಗಳವಾದ್ಯ, ವೀರ ಭದ್ರನ ಕುಣಿತ ಮೆರುಗು ನೀಡಿದರು.

ಜಾನುವಾರು ಮೆರುಗು: ಈ ಜಾತ್ರೆಯಲ್ಲಿ ಜಾನುವಾರುಗಳದ್ದು ವಿಶೇಷ. ರೈತರು ಜಾನುವಾರು ತೊಳೆದು ಹೂಗಳಿಂದ ಅಲಂಕರಿಸಿ ದೇವಸ್ಥಾನ ಮುಂಭಾಗಕ್ಕೆ ಕರೆತಂದು ಅಲ್ಲಿ ಹಾಕಿದ್ದ ಕೊಂಡದ ಸಮೀಪ ಪಂಜು ಸೇವೆ ನೀಡುತ್ತಿದ್ದು ಕಂಡು ಬಂತು.

ಜ 29ರ ಸೋಮವಾರದಿಂದ ಜಾತ್ರೆ ಆರಂಭವಾಗಿದೆ. ಮಂಗಳವಾರ ಕೊಂಡೋತ್ಸವ, ರಥೋತ್ಸವದ ನಂತರ ರಾತ್ರಿ 10 ಗಂಟೆಗೆ ಆನೆ ವಾಹನೋತ್ಸ ನಡೆಯಿತು. ಬುಧವಾರ ಸಮರೋಪ ಸಮಾರಂಭ ಮತ್ತು ರಾತ್ರಿ ತೆಪ್ಪೋತ್ಸವ ನಡೆಯಲಿದೆ.

ಅಕ್ಕಪಕ್ಕದ ಗುಂಡತ್ತೂರು, ಹೊಸಹೊಳಲು, ಮಗ್ಗೆ, ಮಳಲಿ ಗ್ರಾಮಗಳಿಂದ ಜನರು ಬರಲು ಕಪಿಲಾ ನದಿಯಲ್ಲಿ ದೇವಸ್ಥಾನ ಸಮಿತಿ ಒಂದು ಬೋಟ್, ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆಯಿಂದ 4 ಬೋಟ್ ವ್ಯವಸ್ಥೆ ಕಲ್ಪಿಸಲಾಗಿತ್ತು.

ರೈತರ ಅನುಕೂಲಕ್ಕಾಗಿ ಕೃಷಿ, ತೋಟಗಾರಿಕೆ ಮತ್ತು ರೇಷ್ಮೆ ಇಲಾಖೆಯಿಂದ ವಸ್ತುಪ್ರದರ್ಶನ ಏರ್ಪಡಿಸಲಾಗಿದೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಕಾರದಿಂದ ಭಜನೆ, ಭಕ್ತಿಗೀತೆ, ಸುಗಮ ಸಂಗೀತ, ಜಾನಪದ ಗೀತೆ, ಪೌರಣಿಕ ನಾಟಕ ಇತರೆ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತಿವೆ.

ರಥೋತ್ಸವದ ಸಂದರ್ಭದಲ್ಲಿ ದೇವಸ್ಥಾನ ಸಮಿತಿ ಅಧ್ಯಕ್ಷ ಎಂ.ಪಿ.ದೇವರಾಜು, ಗೌರವಾಧ್ಯಕ್ಷ ಎನ್.ಶಿವಣ್ಣ, ಕಾರ್ಯದರ್ಶಿ ಎಚ್.ದೇವದಾಸ್, ಕಾರ್ಯಕಾರಿ ಮಂಡಳಿ ಸದಸ್ಯರು ಇತರರು ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry