ತಟ್ಟೆ ತೊಳೆಯಲು ಕೊಳಕು ನೀರು ಬಳಕೆ

7

ತಟ್ಟೆ ತೊಳೆಯಲು ಕೊಳಕು ನೀರು ಬಳಕೆ

Published:
Updated:
ತಟ್ಟೆ ತೊಳೆಯಲು ಕೊಳಕು ನೀರು ಬಳಕೆ

ಮೈಸೂರು: ಬಹಳ ಉತ್ಸಾಹದಿಂದ ನಗರದಲ್ಲಿ ಆರಂಭಗೊಂಡಿರುವ ‘ಇಂದಿರಾ ಕ್ಯಾಂಟೀನ್‌’ಗಳಲ್ಲಿ ಶುಚಿತ್ವವೇ ಕಾಣುತ್ತಿಲ್ಲ. ಹೊರ ನೋಟಕ್ಕೆ ಎಲ್ಲವೂ ಚಂದವಾಗಿದೆ ಎನಿಸುತ್ತದೆ. ಆದರೆ ಶುಚಿತ್ವ ಮಾತ್ರ ಮರೆಯಾಗಿದೆ.

ಸರಿಯಾಗಿ ತಟ್ಟೆ ತೊಳೆಯುವುದಿಲ್ಲ. ತಿಂಡಿ, ಊಟ ಸೇವಿಸಿದ ತಟ್ಟೆಗಳನ್ನು ಒಂದು ಬಕೆಟ್‌ ನೀರಿನಲ್ಲಿ ತೊಳೆಯಲಾಗುತ್ತದೆ. ಮತ್ತೆ ಮತ್ತೆ ಅದೇ ನೀರಿನಲ್ಲಿ ಅದ್ದಿ ತೆಗೆದು ಸ್ವಚ್ಛವಾಗದ ತಟ್ಟೆಯಲ್ಲೇ ಆಹಾರ ಸರಬರಾಜು ಮಾಡುತ್ತಿರುವುದು ಇಂದಿರಾ ಕ್ಯಾಂಟೀನ್‌ಗಳಿಗೆ ಭೇಟಿ ನೀಡಿದ ಸಮಯದಲ್ಲಿ ಕಂಡು ಬಂದ ದೃಶ್ಯಗಳು.

ಕಾಡಾ ಕಚೇರಿ ಆವರಣದಲ್ಲಿರುವ ಇಂದಿರಾ ಕ್ಯಾಂಟೀನ್‌ನಲ್ಲಿ ಊಟ ಮಾಡಿದವರ ತಟ್ಟೆಗಳು ಟೇಬಲ್‌ ಮೇಲೆ ಹಾಗೆಯೇ ಇದ್ದವು. ಜತೆಗೆ, ತಟ್ಟೆ ತೊಳೆದ ನೀರು ಸಿಂಕ್‌ನಿಂದ ಹೊರ ಹೋಗುತ್ತಿರಲಿಲ್ಲ. ಇದಕ್ಕಾಗಿ ಬಕೆಟುಗಳಲ್ಲಿ ಸಂಗ್ರಹಿಸಿ ಆಚೆಗೆ ಚೆಲ್ಲಬೇಕಿತ್ತು. ಬೇರೆ ನೀರು ಬಳಸದೆ, ಈಗಾಗಲೇ ತೊಳೆದ ತಟ್ಟೆಯ ನೀರಲ್ಲೇ ಮತ್ತೊಂದಿಷ್ಟು ತೊಳೆದು ಊಟ ಬಡಿಸಲು ಕೊಡಲಾಗುತ್ತಿತ್ತು.

ಇದರೊಂದಿಗೆ ಗುಣಮಟ್ಟದ ಆಹಾರ ಇಲ್ಲ, ಶುಚಿ, ರುಚಿ ಇಲ್ಲ. ಸ್ವಚ್ಛತೆ ಮೊದಲೇ ಇಲ್ಲ ಎನ್ನುವ ಅಸಮಾಧಾನವನ್ನು ಸಾರ್ವಜನಿಕರು ಹೊರ ಹಾಕಿದರು. ಬಡವರಿಗೆ ರಿಯಾಯಿತಿ ದರದಲ್ಲಿ ಊಟ ಮತ್ತು ಉಪಾಹಾರ ಸಿಗಬೇಕೆಂಬ ಉದ್ದೇಶದಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಕ್ಯಾಂಟೀನ್‌ಗೆ ಚಾಲನೆ ನೀಡಿದ್ದಾರೆ. ನಗರದಲ್ಲಿ 11 ಇಂದಿರಾ ಕ್ಯಾಂಟೀನ್‌ಗಳು ಬಡವರ ಉದರ ತುಂಬಿಸುತ್ತಿವೆ. ಆದರೆ, ಶುಚಿ, ರುಚಿಯಿಲ್ಲದ ಆಹಾರ ಸೇವಿಸಿ ಅನಾರೋಗ್ಯಕ್ಕೆ ಈಡಾಗುವ ಭಯ ಅನೇಕರಲ್ಲಿದೆ. ಇದಕ್ಕಾಗಿ ಕಡಿಮೆ ದುಡ್ಡಿಗೆ ಆಹಾರ ಸಿಗುತ್ತದೆಂದು ಸೇವಿಸಿ ಆರೋಗ್ಯ ಹದಗೆಡಿಸಿಕೊಳ್ಳುವುದೇಕೆ ಎನ್ನುವ ಪ್ರಶ್ನೆ ಅನೇಕರನ್ನು ಕಾಡುತ್ತಿದೆ.

ಕೆಲ ಕ್ಯಾಂಟೀನುಗಳಲ್ಲಿ ಬೇಡಿಕೆಯಿದ್ದಲ್ಲಿ ಸರಿಯಾಗಿ ಆಹಾರ ಪೂರೈಕೆಯಾಗುತ್ತಿಲ್ಲ ಎನ್ನುವ ಆರೋಪವೂ ಇದೆ. ಕಾಡಾ ಕಚೇರಿ ಆವರಣದಲ್ಲಿರುವ ಇಂದಿರಾ ಕ್ಯಾಂಟೀನ್‌ನಲ್ಲಿ ಸರತಿ ಸಾಲಿನಲ್ಲಿ ನಿಂತಿದ್ದ ಆಟೊ ಚಾಲಕ ನಿಂಗಪ್ಪ, ‘ಹಸಿವು ಇದ್ದರೂ ಸರತಿ ಸಾಲಿನಲ್ಲಿ ನಿಂತಿದ್ದೆ. ಊಟ ಖಾಲಿಯಾಗಿದೆ ಎಂದಾಗ ಹೇಗಾಗಬೇಡ ಹೇಳಿ. ಜೆ.ಪಿ.ನಗರದಿಂದ ಬಂದಿರುವೆ. ಮಧ್ಯಾಹ್ನ ಮೂರೂವರೆವರೆಗೂ ಊಟ ಕೊಡಲಾಗುವುದು ಎಂದಿದ್ದರೂ ಎರಡೂವರೆಗೇ ಮುಗಿದಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಅವರ ಮಾತಿಗೆ ಧ್ವನಿಗೂಡಿಸುತ್ತಾರೆ ದಟ್ಟಗಳ್ಳಿಯಿಂದ ಬಂದಿದ್ದ ರಾಜೇಂದ್ರಪ್ರಸಾದ್. ‘ಮೊದಲು ಚೆನ್ನಾಗಿ ಆಹಾರ ಕೊಡುತ್ತಿದ್ದರು. ಈಗ ಎಲ್ಲವೂ ಅಸ್ತವ್ಯಸ್ತ’ ಎಂದು ಅಸಮಾಧಾನ ವ್ಯಕ್ತಪಡಿಸಿದರು. ‘ಸೋಮವಾರ ಬೆಳಿಗ್ಗೆ ಪುಳಿಯೊಗರೆ ಚೆನ್ನಾಗಿರಲಿಲ್ಲ. ಮಧ್ಯಾಹ್ನ ಊಟಕ್ಕೆ ಪಲ್ಯ ಕೊಡಬೇಕು. ಯಾವತ್ತೂ ಕೊಟ್ಟಿಲ್ಲ’ ಎನ್ನುವ ದೂರು ಎಟಿಎಂ ಭದ್ರತಾ ಸಿಬ್ಬಂದಿ ಎ.ಪ್ರಕಾಶ್‌ ಅವರದು. ನಂಜುಂಡ ಆರಾಧ್ಯ, ‘ಅನ್ನ ನುಚ್ಚಕ್ಕಿಯಾಗಿದೆ. ಪೂರ್ತಿ ಕಲಸಿದ್ರೆ ಹಿಟ್ಟು ಕಲಸಿದ ಹಾಗಾಯಿತು. ಮೊನ್ನೆ ಇಲ್ಲಿ ಊಟ ಮಾಡಿದ ಮೇಲೆ ಹೊಟ್ಟೆನೋವು ಬಂತು’ ಎಂದು ಅಳಲು ತೋಡಿಕೊಂಡರು. ಆಟೊ ಚಾಲಕ ಸೋಮಶೇಖರ್, ‘ಅಕ್ಕಿ ಬೇಯಬೇಕು. ಅರ್ಧಂಬರ್ಧ ಬೇಯ್ದಿತ್ತು. ಮೊಸರನ್ನ ಖಾಲಿ ಅಂದ್ರು. 10 ರೂಪಾಯಿ ಕಡಿಮೆಯೇ. ಆದ್ರೆ ಸರಿಯಾಗಿ ಬೆಂದಿ ರುವುದನ್ನು ಕೊಡಬೇಕು’ ಎನ್ನುತ್ತಾರೆ.

‘ಊಟ ಚೆನ್ನಾಗಿಲ್ಲ. ಸ್ವಚ್ಛತೆ ಇಲ್ಲ. ಆರಂಭದ ದಿನಗಳಲ್ಲಿ ಕೊಟ್ಟ ಹಾಗೆ ಈಗ ಕೊಡುತ್ತಿಲ್ಲ. ಕಡಿಮೆಯೂ ಕೊಡುತ್ತಾರೆ. ಜತೆಗೆ, ರುಚಿಯಿಲ್ಲ, ಶುಚಿಯಿಲ್ಲ’ ಎಂದು ಕಾಂಗ್ರೆಸ್‌ ಕಾರ್ಯಕರ್ತ ಮಲ್ಲಪ್ಪ ಬೇಸರ ವ್ಯಕ್ತಪಡಿಸಿದರು.

ಇವರೊಂದಿಗೆ ಊಟ ಮಾಡಿದ ಪಾಲಿಕೆ ಸದಸ್ಯ ಎನ್‌.ಸುನೀಲಕುಮಾರ್, ‘ಊಟ ಚೆನ್ನಾಗಿಲ್ಲವೆಂದು ಸಾರ್ವಜನಿಕರಿಂದ ದೂರು ಬರುತ್ತಿರುವ ಕಾರಣ ಖುದ್ದಾಗಿ ಬಂದು ಊಟ ಮಾಡಿದೆ. ಇದು ಗುತ್ತಿಗೆದಾರರ ಸಮಸ್ಯೆ. ಅಧಿಕಾರಿಗಳೊಂದಿಗೆ ಮಾತನಾಡುವೆ’ ಎಂದರು.

ನಿತ್ಯ ಬೆಳಿಗ್ಗೆ ಸಿಲ್ಕ್‌ ಫ್ಯಾಕ್ಟರಿ ಎದುರಿನ ನೀರಿನ ಟ್ಯಾಂಕ್ ಆವರಣದಲ್ಲಿರುವ ಕ್ಯಾಂಟೀನ್‌ನಲ್ಲಿ ತಿಂಡಿ ತಿನ್ನುವ ರಾಮಯ್ಯ ‘ಇದು ಕೂಲಿಗಳಿಗೆ ಹೇಳಿಮಾಡಿಸಿದ ಕ್ಯಾಂಟೀನ್‌. ಆದರೆ, ಟೇಸ್ಟ್‌ ಇಲ್ಲ’ ಎಂದರು. ಸೂಯೆಜ್‌ ಫಾರಂ ಬಳಿಯ ಕ್ಯಾಂಟೀನಿನಲ್ಲಿ ತಿಂಡಿ ತಿನ್ನುವ, ಹುಲ್ಲು ಕೊಯ್ಯುವ ಲಿಂಗರಾಜು, ‘ದಿನಾಲೂ ಬಾತ್‌, ಪುಳಿಯೊಗರೆ, ಪೊಂಗಲ್‌ ಕೊಡ್ತಾರೆ. ಇಡ್ಲಿ ಕೊಟ್ಟೇ ಇಲ್ಲ. ಮಂಗಳವಾರ ಬೆಳಿಗ್ಗೆ ಖಾರಾಬಾತ್‌ ಪರವಾಗಿಲ್ಲ’ ಎಂದರು.

ಇನ್ನು ಶಾರದಾದೇವಿನಗರದ ನೀರಿನ ಟ್ಯಾಂಕ್ ಆವರಣದಲ್ಲಿರುವ ಕ್ಯಾಂಟೀನ್‌ಗೆ ಹೆಚ್ಚು ಜನರು ತೆರಳುತ್ತಿಲ್ಲ. ಈ ಕುರಿತು ಅಲ್ಲಿನ ಸಿಬ್ಬಂದಿ, ‘ಇದು ಹೆಚ್ಚು ಪ್ರಚಾರಕ್ಕೆ ಬಂದಿಲ್ಲ. ಮೂಲೆಯಲ್ಲಾಯಿತು. ಸಾಕಷ್ಟು ಜನರಿಗೆ ಗೊತ್ತೇ ಇಲ್ಲ. ಬೆಳಿಗ್ಗೆ 250, ಮಧ್ಯಾಹ್ನ 200, ರಾತ್ರಿ 150 ಜನರು ಬರ್ತಾರಷ್ಟೆ. ಬಂದವರಾರೂ ಮತ್ತೆ ಬರುತ್ತಿಲ್ಲ. ಹೊಸಬರು ಮಾತ್ರ ಬರುತ್ತಿದ್ದಾರೆ’ ಎಂದು ತಿಳಿಸಿದರು.

ಗ್ರಾಮೀಣ ಬಸ್‌ ನಿಲ್ದಾಣ ಎದುರಿನ ಸರ್ಕಾರಿ ಪಿಯು ಕಾಲೇಜಿನ ಆವರಣದಲ್ಲಿರುವ ಕ್ಯಾಂಟೀನ್‌ಗೆ ನೂಕುನುಗ್ಗಲು ಇದೆ. ವಿದ್ಯಾರ್ಥಿಗಳೊಂದಿಗೆ ಸಾರ್ವಜನಿಕರು ಲಗ್ಗೆ ಇಡುತ್ತಾರೆ. ‘ಆದರೆ, ಸರಿಯಾಗಿ ತಟ್ಟೆ ತೊಳೆಯಲ್ಲ, ಶುಚಿತ್ವ ಕಾಪಾಡದ ಕಾರಣ ನೊಣಗಳ ಕಾಟ ಹೆಚ್ಚಿದೆ’ ಎಂದು ಮಾರುಕಟ್ಟೆ ಪ್ರತಿನಿಧಿ ರಾಮು ಬೇಸರ ವ್ಯಕ್ತಪಡಿಸಿದರು.

₹ 5ಕ್ಕೆ ತಿಂಡಿ, ₹ 10ಕ್ಕೆ ಊಟ

ಬೆಳಗಿನ ಉಪಾಹಾರ ₹ 5

ಮಧ್ಯಾಹ್ನ, ರಾತ್ರಿ ಊಟ ₹ 10.

ಸಮಯ: ಉಪಾಹಾರ– ಬೆಳಿಗ್ಗೆ 7.30ರಿಂದ 10 ಗಂಟೆ. ಊಟ: ಮಧ್ಯಾಹ್ನ 1ರಿಂದ 3.30. ರಾತ್ರಿ– 7.30ರಿಂದ 9.30.

ಎಲ್ಲೆಲ್ಲಿವೆ ಇಂದಿರಾ ಕ್ಯಾಂಟೀನ್‌

lಕಾಡಾ ಕಚೇರಿ ಆವರಣ

lಕುಂಬಾರಕೊಪ್ಪಲು ಮುಖ್ಯರಸ್ತೆ (ಜಯದೇವ ಆಸ್ಪತ್ರೆ ಎದುರು)

lಸಿಲ್ಕ್‌ ಫ್ಯಾಕ್ಟರಿ ವೃತ್ತ (ನೀರಿನ ಟ್ಯಾಂಕ್‌ ಆವರಣ)

lಸೂಯೆಜ್‌ ಫಾರಂ (ವಿದ್ಯಾರಣ್ಯಪುರಂ)

lಶಾರದಾದೇವಿನಗರ (ನೀರು ಸಂಗ್ರಹಾಲಯದ ಕಾಂಪೌಂಡ್‌ ಒಳಗೆ)

lಕೆ.ಆರ್‌.ಆಸ್ಪತ್ರೆ ಆವರಣ

lಆಲನಹಳ್ಳಿ ವೃತ್ತ

lತ್ರಿವೇಣಿ ವೃತ್ತ

lಅಜೀಜ್‌ ಸೇಠ್‌ ಜೋಡಿರಸ್ತೆ (ಸೆಂಟ್ರಲ್‌ ಆಸ್ಪತ್ರೆ ಎದುರು)

lಗ್ರಾಮಾಂತರ ಬಸ್‌ ನಿಲ್ದಾಣ ಬಳಿ (ಬಾಲಕಿಯರ ಪದವಿಪೂರ್ವ ಕಾಲೇಜು)

lಜೋಡಿ ತೆಂಗಿನ ಮರದ ರಸ್ತೆ (ಬನ್ನಿಮಂಟಪ)

* * 

ಇಂದಿರಾ ಕ್ಯಾಂಟೀನ್‌ ಚುನಾವಣಾ ಗಿಮಿಕ್‌. ಊಟ ಮಾಡಲು ಜನರು ಕ್ಯೂನಲ್ಲಿ ನಿಲ್ಲುತ್ತಾರೆ. ಸಿಗದೆ ಬೈಯ್ದುಕೊಳ್ಳುತ್ತ ಬೇರೆಡೆ ಹೋಗುತ್ತಾರೆ ಆರ್.ಲಿಂಗಪ್ಪ, ಪಾಲಿಕೆ ಸದಸ್ಯ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry