ಸಕಾಲ ಅರ್ಜಿ ವಿಲೇವಾರಿ ವಿಳಂಬ ಸಲ್ಲ

7

ಸಕಾಲ ಅರ್ಜಿ ವಿಲೇವಾರಿ ವಿಳಂಬ ಸಲ್ಲ

Published:
Updated:

ರಾಯಚೂರು: ‘ಸಕಾಲ’ದಲ್ಲಿ ಸ್ವೀಕೃತವಾಗುವ ಅರ್ಜಿಗಳ ವಿಲೇವಾರಿ ಪ್ರಕ್ರಿಯೆ ವಿಳಂಬ ಮಾಡುವ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್‌ ಎಚ್ಚರಿಸಿದರು. ಜಿಲ್ಲಾಡಳಿತ ಕಚೇರಿಯ ಸಭಾಂಗಣದಲ್ಲಿ ಮಂಗಳವಾರ ನಡೆದ ಸಾರ್ವಜನಿಕರ ಕುಂದು ಕೊರತೆ ಸಭೆಯಲ್ಲಿ ಅವರು ಮಾತನಾಡಿದರು.

ಸಕಾಲ ಅರ್ಜಿಗಳನ್ನು ವಿಲೇ ವಾರಿ ಮಾಡುವಲ್ಲಿ ಇನ್ನೂ ವಿಳಂಬ ಧೋರಣೆ ಅನುಸರಿಸಿದರೆ ಸಹಿಸಲ್ಲ. ಸಭೆಗೆ ಗೈರಾದ ಜಿಲ್ಲಾ ನೋಂದಣಾಧಿಕಾರಿಗೆ ದೂರವಾಣಿ ಮೂಲಕ ಸಂಪರ್ಕಿಸಿದ ಜಿಲ್ಲಾಧಿಕಾರಿ, ‘ನಿಮ್ಮ ಕರ್ತವ್ಯವನ್ನು ನಿರ್ವಹಿಸಲು ನಿತ್ಯ ಸೂಚಿಸುವುದು ನನ್ನ ಕೆಲಸವಲ್ಲ. ಕೆಲಸ ಮಾಡದಿದ್ದರೆ ಜಿಲ್ಲೆಯಿಂದ ಹೊರಗೆ ಕಳುಹಿಸಬೇಕಾಗುವುದು’ ಎಂದು ತಿಳಿಸಿದರು.

ಅಧಿಕಾರಿಗಳು ಕಚೇರಿಗೆ ಬಂದ ಕೂಡಲೇ ಆದ್ಯತೆ ಮೇರೆಗೆ ಸಕಾಲ ಅರ್ಜಿಗಳ ಪರಿಶೀಲನೆ ನಡೆಸಿ, ಕ್ರಮ ಜರುಗಿಸಬೇಕು. ಯಾವ ಕ್ರಮ ಕೈಗೊಳ್ಳಲಾಗಿದೆ ಎನ್ನುವ ವರದಿಯನ್ನು ಕೊಡಬೇಕು ಎಂದರು. ಹಿಟ್ಟಿನ ಗಿರಣಿಯವರು ವಿದ್ಯುತ್ ಪರವಾನಿಗೆ ಕೋರಿ ಆರು ತಿಂಗಳಾದರೂ ನಗರಸಭೆ ಪರವಾನಗಿ ನೀಡಿಲ್ಲ ಸುಚಿತ್ರ ಅವರು ಮನವಿ ಸಲ್ಲಿಸಿ, ವಿವರಿಸಿದರು.

‘ಪರವಾನಗಿ ನೀಡದ ಅಧಿಕಾರಿಗಳನ್ನು ಅಮಾನತುಗೊಳಿಸಿ ಕ್ರಮ ಜರುಗಿಸಬೇಕು‘ ಎಂದು ಜಿಲ್ಲಾಧಿಕಾರಿಯು ಪೌರಾಯುಕ್ತರಿಗೆ ಸೂಚಿಸಿದರು. ದೇವದುರ್ಗ ತಾಲ್ಲೂಕಿನ ಗೂಗಲ್ ಗ್ರಾಮದಲ್ಲಿ ಮಳೆಯಿಂದ ಮನೆ ಕುಸಿದು ಬಿದ್ದಿದ್ದು, ಖಾಲಿಯಿರುವ ನಿವೇಶನದಲ್ಲಿ ಮನೆ ನಿರ್ಮಿಸಿಕೊಡಲು ಬಸವರಾಜ ಮನವಿ ಮಾಡಿದರು. ವಸತಿ ಯೋಜನೆಯಡಿ ಆದ್ಯತೆಯಲ್ಲಿ ಸೌಲಭ್ಯ ಕಲ್ಪಿಸಲಾಗುವುದು ಜಿಲ್ಲಾಧಿಕಾರಿ ಭರವಸೆ ನೀಡಿದರು.

ರಿಮ್ಸ್‌ ಆಸ್ಪತ್ರೆಯಲ್ಲಿ ಮೂಲ ಸೌಕರ್ಯ ಒದಗಿಸದೆ ಅನುದಾನ ಲೂಟಿ ಮಾಡಲಾಗುತ್ತಿದೆ ಎಂದು ಜೈಕರವೇ ಮುಖಂಡ ಆಕ್ರೋಶ ವ್ಯಕ್ತಪಡಿಸಿದರು. ಜಿಲ್ಲಾಧಿಕಾರಿ ಮಾತನಾಡಿ, ದಾಖಲೆ ಸಮೇತವಾಗಿ ಆರೋಪಿಸಬೇಕು. ದಾಖಲೆಗಳೊಂದಿಗೆ ದೂರು ನೀಡುವಂತೆ ಸೂಚಿಸಿದರು.

ದೇವಸೂಗೂರಿನ ಅಂಗವಿಕಲ ದೇವರೆಡ್ಡಿ ಸರ್ಕಾರಿ ಉದ್ಯೋಗ ಒದಗಿಸಬೇಕು ಎಂದು ಅವರು ಕೋರಿದರು. ಅಧಿಸೂಚನೆ ಹೊರಡಿಸಿದಾಗ ಅರ್ಜಿ ಸಲ್ಲಿಸುವಂತೆ ಸೂಚಿಸಲಾಯಿತು.

ತುರುಕನಡೋಣಿ ಅಂಗನವಾಡಿ ಕೇಂದ್ರದ ಕಾರ್ಯಕರ್ತೆಯ ಸ್ಥಾನದಿಂದ ವಜಾ ಮಾಡಲಾಗಿದ್ದು, ಪುನಃ ಕೆಲಸಕ್ಕೆ ತೆಗೆದುಕೊಳ್ಳಬೇಕು ಎಂದು ಕೋರಿದಾಗ, ಕ್ರಿಮಿನಲ್‌ ಪ್ರಕರಣ ಮೇಲೆ ವಜಾಗೊಂಡಿರುವುದರಿಂದ ಪುನಃ ಸೇವೆಗೆ ತೆಗೆದುಕೊಳ್ಳಲು ಆಗುವುದಿಲ್ಲ ಎಂದರು. ಜಿಲ್ಲಾ ಪಂಚಾಯಿತಿ ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ಅಭಿರಾಂ ಜಿ.ಶಂಕರ,

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ನಾಸೀರ್‌, ಪೌರಾಯುಕ್ತ ರಮೇಶ ನಾಯಕ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಸಭೆಯಲ್ಲಿ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry