4

ಸಮಗ್ರ ವಸತಿ ಹಕ್ಕು ಕಾಯ್ದೆ ಜಾರಿಗೆ ಒತ್ತಾಯ

Published:
Updated:
ಸಮಗ್ರ ವಸತಿ ಹಕ್ಕು ಕಾಯ್ದೆ ಜಾರಿಗೆ ಒತ್ತಾಯ

ರಾಯಚೂರು: ರಾಜ್ಯದಲ್ಲಿ ಸಮಗ್ರ ವಸತಿ ಹಕ್ಕು ಕಾಯ್ದೆ ಜಾರಿಗೊಳಿಸುವುದಾಗಿ ಘೋಷಿಸುವ ಪಕ್ಷಗಳಿಗೆ ಮತ ಚಲಾಯಿಸಬೇಕು ಎನ್ನುವ ಪ್ರಚಾರಾಂದೋಲನ ಆರಂಭಿಸಲಾಗಿದೆ ಎಂದು ಸ್ಲಂ ಜನಾಂದೋಲನ–ಕರ್ನಾಟಕದ ರಾಜ್ಯ ಸಂಚಾಲಕ ಎ.ನರಸಿಂಹಮೂರ್ತಿ ಹೇಳಿದರು.

ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನ.23 ರಿಂದ ಸ್ಲಂ ಜನರಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಪ್ರಚಾರಾಂದೋಲನಕ್ಕೆ ಚಾಲನೆ ನೀಡಲಾಗಿದೆ. ಫೆ.12 ರಂದು ಬೆಂಗಳೂರಿನಲ್ಲಿ ಆಂದೋಲನದ ಸಮಾರೋಪ ನಡೆಸಲಾಗುವುದು ಎಂದರು.

ರಾಜ್ಯದಲ್ಲಿ ಸಮಗ್ರ ವಸತಿ ಹಕ್ಕು ಕಾಯ್ದೆ ಜಾರಿಗೊಳಿಸಬೇಕು ಎಂದು ಆಗ್ರಹಿಸಿ ಹಲವು ವರ್ಷಗಳಿಂದ ಹೋರಾಟ ಹಮ್ಮಿಕೊಂಡು ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದೆ. ರಾಜ್ಯದಲ್ಲಿ 69.39 ಲಕ್ಷ ಜನ ವಸತಿ ರಹಿತರಿದ್ದಾರೆ ಎಂದು ಸರ್ಕಾರವೇ ಇತ್ತೀಚಿಗೆ ನಡೆದ ಬೆಳಗಾವಿ ಅಧಿವೇಶನದಲ್ಲಿ ಬಹಿರಂಗಗೊಳಿಸಿದೆ. ಇಲ್ಲಿಯವರೆಗೂ ಸರ್ಕಾರವು ಹಲವು ವಸತಿ ಯೋಜನೆಗಳನ್ನು ಜಾರಿಗೊಳಿಸಿದರೂ ವಸತಿ ರಹಿತರ ಸಮಸ್ಯೆ ನಿವಾರಿಸಲು ಸಾಧ್ಯವಾಗಿಲ್ಲ ಎಂದು ಹೇಳಿದರು.

ಕೇಂದ್ರ ಸರ್ಕಾರವು 42 ಕೋಟಿ ಜನರಿಗೆ ಸೂರು ಕಲ್ಪಿಸುವುದಾಗಿ ಘೋಷಿಸಿದೆ. ಆದರೆ, 2022ರ ವೇಳೆಗೆ ಕೇವಲ 2 ಕೋಟಿ ಜನರಿಗೆ ಮಾತ್ರ ಸೂರು ಕಲ್ಪಿಸಲು ಸಾಧ್ಯವಾಗುತ್ತದೆ. ರಾಜ್ಯದಲ್ಲಿ ಸಮಗ್ರ ವಸತಿ ಹಕ್ಕು ಕಾಯ್ದೆ ಜಾರಿಗೊಳಿಸಬೇಕು. ಕೊಳಗೇರಿಗಳ ಅಭಿವೃದ್ಧಿಗೆ ಪ್ರತ್ಯೇಕ ಸಚಿವಾಲಯ ಮತ್ತು ಕೊಳಗೇರಿ ನಿವಾಸಿಗಳ ಜನಸಂಖ್ಯೆವಾರು ಬಜೆಟ್ ಮಂಡಿಸಬೇಕು ಎಂದು ಒತ್ತಾಯಿಸಿದರು.

ಜಿಲ್ಲಾ ಘಟಕದ ಅಧ್ಯಕ್ಷ ಜನಾರ್ಧನ ಹಳ್ಳಿಬೆಂಚಿ ಮಾತನಾಡಿ, ರಾಯಚೂರಿನಲ್ಲಿ 1,500 ಜನರಿಗೆ ವಸತಿ ನಿರ್ಮಿಸಿ ಕೊಡುವುದಕ್ಕೆ ಕೇಳಿಕೊಳ್ಳಲಾಗಿದೆ. ಒಟ್ಟು ಮೊತ್ತದಲ್ಲಿ ಶೇ 25 ರಷ್ಟು ಫಲಾನುಭವಿ ಭರಿಸಬೇಕು ಎಂದು ಹೇಳಿದ್ದಾರೆ. ಅಷ್ಟೊಂದು ಮೊತ್ತವನ್ನು ಬಡವರು ಕಟ್ಟುವುದು ಅಸಾಧ್ಯ. ಹೀಗಾಗಿ ಪ್ರತಿಯೊಬ್ಬರು ₹10 ಸಾವಿರ ಮಾತ್ರ ಕಟ್ಟಿ, ನಗರಸಭೆಯಲ್ಲಿ ಹೆಸರು ನೋಂದಾಯಿಸುತ್ತಿದ್ದಾರೆ ಎಂದರು.

ಶೇ 24.1 ಹಾಗೂ ಶೇ 7.25 ಹಣವನ್ನು ವಸತಿ ಯೋಜನೆಗೆ ಬಳಸುವಂತೆ ಮನವಿ ಮಾಡಲಾಗಿದೆ. ಶೀಘ್ರದಲ್ಲೆ ಬೇಡಿಕೆ ಈಡೇರಲಿದೆ ಎಂದು ಹೇಳಿದರು. ಚಂದ್ರಶೇಖರ ಯಕ್ಲಾಸಪೂರು, ವೆಂಕಟೇಶ ಭಂಡಾರಿ, ಎನ್.ಕೆ.ನಾಗರಾಜ, ಬಸವರಾಜ, ರಾಜಶೇಖರ ಯಕ್ಲಾಸಪೂರ ಪತ್ರಿಕಾಗೋಷ್ಠಿಯಲ್ಲಿ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry