ಟಿಕೆಟ್ ಕೊಡದಿದ್ದರೂ ಕಾಂಗ್ರೆಸ್‌ನಲ್ಲೇ ಉಳಿಯುತ್ತೇವೆ: ಬಾಲಕೃಷ್ಣ

7

ಟಿಕೆಟ್ ಕೊಡದಿದ್ದರೂ ಕಾಂಗ್ರೆಸ್‌ನಲ್ಲೇ ಉಳಿಯುತ್ತೇವೆ: ಬಾಲಕೃಷ್ಣ

Published:
Updated:

ರಾಮನಗರ: ‘ನಮಗೆ(ಜೆಡಿಎಸ್ ಬಂಡಾಯ ಶಾಸಕರಿಗೆ) ಗೆಲ್ಲುವ ಸಾಮರ್ಥ್ಯ ಇರುವುದರಿಂದಲೇ ಎಐಸಿಸಿ ಗುರುತಿಸಿ ಪಕ್ಷಕ್ಕೆ ಆಹ್ವಾನಿಸಿದೆ, ಟಿಕೆಟ್ ಕೊಡುವ ಗ್ರೀನ್ ಸಿಗ್ನಲ್ ಸಹ ಕೊಟ್ಟಿದೆ’ ಎಂದು ಶಾಸಕ ಎಚ್.ಸಿ. ಬಾಲಕೃಷ್ಣ ಹೇಳಿದರು.

ಇಲ್ಲಿನ ತಹಶೀಲ್ದಾರ್ ಸಭಾಂಗಣದಲ್ಲಿ ಮಂಗಳವಾರ ನಡೆದ ಸಭೆಯ ನಂತರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ ನಮ್ಮ ಜತೆಗೆ ಸಕಾರಾತ್ಮಕವಾಗಿ ಸ್ಪಂದಿಸುತ್ತಿದ್ದಾರೆ, ಕಾಂಗ್ರೆಸ್ ಸೇರುವ ನಮ್ಮ ನಿರ್ಧಾರ ಅಚಲವಾಗಿದೆ. ಚುನಾವಣೆಯಲ್ಲಿ ಟಿಕೆಟ್ ಕೊಡದಿದ್ದರೂ ಸಹ ಅಲ್ಲಿಯೇ ಉಳಿಯುತ್ತೇವೆ, ಪಕ್ಷದ ಅಭ್ಯರ್ಥಿ ಪರ ಪ್ರಚಾರದಲ್ಲಿ ತೊಡಗುತ್ತೇವೆ ಎಂದರು.

ಜೆಡಿಎಸ್ ವರಿಷ್ಠರು ರಾಜ್ಯದ ಬೇರೆ ಕ್ಷೇತ್ರಗಳಿಗಿಂತ ಬಂಡಾಯ ಶಾಸಕರು ಸ್ಪರ್ಧಿಸುವ 7 ಕ್ಷೇತ್ರಗಳನ್ನು ಮುಖ್ಯವಾಗಿ ಗುರಿಯಾಗಿಸಿಕೊಂಡಿದ್ದಾರೆ, ಅದರಲ್ಲೂ ನಾಗಮಂಗಲ, ಶ್ರೀರಂಗಪಟ್ಟಣ ಮತ್ತು ಮಾಗಡಿ– ಈ ಮೂರು ವಿಧಾನಸಭಾ ಕ್ಷೇತ್ರಗಳ ಮೇಲೆ ಕಣ್ಣಿಟ್ಟಿದ್ದಾರೆ, ಹೀಗಾಗಿಯೇ ಅವರು ರಾಜ್ಯ ಸುತ್ತುವುದನ್ನು ಬದಿಗಿಟ್ಟು ಈ ಕ್ಷೇತ್ರಗಳ ಸುತ್ತಲೂ ಗಿರಕಿ ಹೊಡೆಯುತ್ತಿದ್ದಾರೆ ಎಂದು ಲೇವಡಿ ಮಾಡಿದರು.

ಇದರಿಂದ ನಮ್ಮ ಸಾಮರ್ಥ್ಯ ಎಷ್ಟರ ಮಟ್ಟಿಗಿದೆ ಎಂಬುದನ್ನು ಕಾಂಗ್ರೆಸ್‍ ನವರು ಅರ್ಥ ಮಾಡಿಕೊಳ್ಳಬೇಕು. ಕೆಲವರು ಉದ್ದೇಶಪೂರ್ವಕವಾಗಿ ನಮ್ಮ ವಿರುದ್ಧ ಸುಳ್ಳು ಸಮೀಕ್ಷೆಗಳನ್ನು ಹೇಳಿಕೊಂಡು ಓಡಾಡುತ್ತಿದ್ದಾರೆ. ಕ್ಷೇತ್ರವಾರು ಸಮೀಕ್ಷೆ ಸಕಾರಾತ್ಮಕವಾಗಿ ನಮ್ಮ ಪರವಾಗಿಯೇ ಇದೆ. ಕಾಂಗ್ರೆಸ್ ನಿಂದ ನಮಗೆ ಟಿಕೆಟ್ ಖಾತರಿ ಆದ ನಂತರವೇ ನಾವೆಲ್ಲರೂ ಆ ಪಕ್ಷದಲ್ಲಿ ಅಧಿಕೃತವಾಗಿ ಗುರುತಿಸಿಕೊಂಡಿದ್ದೇವೆ ಎಂದು ಸ್ಪಷ್ಟಪಡಿಸಿದರು.

ಜೆಡಿಎಸ್‌ನಿಂದ ನಾವು ದೂರ ಉಳಿದ ಮೇಲೆ ನಮ್ಮ ಜೊತೆಗಿದ್ದ ಜಿಲ್ಲಾ, ತಾಲ್ಲೂಕು ಹಾಗೂ ಗ್ರಾಮ ಪಂಚಾಯಿತಿ ಸದಸ್ಯರಲ್ಲಿ ಶೇ 90ರಷ್ಟು ಬೆಂಬಲಿಗರು ಕಾಂಗ್ರೆಸ್ ಸೇರ್ಪಡೆಯಾಗಿದ್ದಾರೆ. ಇನ್ನೂ ಕೆಲವರನ್ನು ಪಕ್ಷಕ್ಕೆ ಕರೆತರುವ ಪ್ರಯತ್ನ ನಡೆಯುತ್ತಿದೆ. ಫೆಬ್ರವರಿ ಕೊನೆಯ ವಾರದಲ್ಲಿ ನಾವು ಸಹ ಅಧಿಕೃತವಾಗಿ ಕಾಂಗ್ರೆಸ್ ಸೇರಲಿದ್ದೇವೆ ಎಂದು ಅವರು ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry