ಜೆಡಿಎಸ್ ಮುಗಿಸಲು ಮುಂದಾಗಿರುವ ಸಿ.ಎಂ

7

ಜೆಡಿಎಸ್ ಮುಗಿಸಲು ಮುಂದಾಗಿರುವ ಸಿ.ಎಂ

Published:
Updated:
ಜೆಡಿಎಸ್ ಮುಗಿಸಲು ಮುಂದಾಗಿರುವ ಸಿ.ಎಂ

ಮಾಗಡಿ: ಮುಂದಿನ ಚುನಾವಣೆಯಲ್ಲಿ ಜನಬಲದ ಮುಂದೆ ಹಣ ಬಲ ಏನೂ ಮಾಡಲು ಸಾಧ್ಯವಿಲ್ಲ ಎಂದು ಜೆಡಿಎಸ್‌ ವರಿಷ್ಠ ಎಚ್‌.ಡಿ.ದೇವೇಗೌಡ ಗುಡುಗಿದರು.

ಪಟ್ಟಣದಲ್ಲಿ ‘ಮನೆ ಮನೆಗೆ ಕುಮಾರಣ್ಣ’ ಮತ್ತು ಜೆಡಿಎಸ್‌ ಕಚೇರಿ ಉದ್ಘಾಟಿಸಿ ಅವರು ಮಾತನಾಡಿದರು.

‘ನಿಮ್ಮ ಅಪ್ಪನನ್ನು ಬಿಟ್ಟು ಬಂದರೆ, ನಿನ್ನನ್ನು ಮುಖ್ಯಮಂತ್ರಿ ಮಾಡುತ್ತೇನೆ ಎಂದು ಕುಮಾರಸ್ವಾಮಿ ಅವರನ್ನು 7ಮಂದಿ ಶಾಸಕರು ಕರೆದರು. ನಮ್ಮ ಕುಟುಂಬದ ಮೇಲೆ ಇರುವ ಅಸೂಯೆಯಿಂದ ಶಾಸಕರು ದ್ವೇಷ ಸಾಧಿಸಿದರು. ರೈತ ಕುಟುಂಬದಿಂದ ಬಂದ ನನ್ನನ್ನು ನಾಡಿನ ಜನ ಬೆಳೆಸಿದ್ದಾರೆ’ ಎಂದರು.

‘ನನಗಾಗಿ ಆರು ಅಡಿ ಜಾಗ ಸಹ ಮಾಡಿ ಕೊಂಡಿಲ್ಲ. ಜನರಿಗೆ ಮೋಸ ಮಾಡಿ ನಾವೇನು ಮಾಡಬಾರದು ಎಂದು ನನ್ನ ಮಕ್ಕಳಿಗೆ ಹೇಳಿದ್ದೇನೆ. ಅವರ ಹೆಸರಿನಲ್ಲಿ ರಾಜ್ಯ ಭಾರ ಮಾಡುವಾಗ ಬೊಕ್ಕಸ ಲೂಟಿ ಮಾಡ ಬೇಡಿ ಎಂದು ಹೇಳಿದ್ದೇನೆ. ಗೌಡ ಎಂಬುದು ಜಾತಿ ಅಲ್ಲ ಹಳ್ಳಿಯ ಯಜಮಾನ ಎಂದರ್ಥ. ಕುರುಬ, ಗೊಲ್ಲ, ಈಡಿಗ, ತಿಗಳರಲ್ಲೂ ಸಹ ಗೌಡರಿದ್ದಾರೆ. ಕುರುಬರನ್ನು ತಲೆಯ ಮೇಲೆ ಒತ್ತು ನಡೆದೆ, ಮುಖ್ಯಮಂತ್ರಿಗೆ ನಾವೇನು ಮೋಸ ಮಾಡಿದ್ದೇವೆ. ನಾನು ಬೆಳೆಸಿದ ಸಿದ್ದರಾಮಯ್ಯ ಜೆಡಿಎಸ್‌ ಮುಗಿಸಲು ಮುಂದಾಗಿದ್ದಾರೆ’ ಎಂದು  ಅವರು ಆಕ್ರೋಶ ವ್ಯಕ್ತಪಡಿಸಿದರು.

‘ನಾಡಿನ ಜನ ಶಿಕ್ಷೆ ಕೊಟ್ಟರು ಸಹ ಸ್ವೀಕರಿಸುತ್ತೇನೆ. ನಾಯಕ ಜನಾಂಗವನ್ನು ಎಸ್‌ಟಿ ಸೇರಿಸಿದ್ದು ನಾನು. ನಾಡಿನ ಜನ ಜೆಡಿಎಸ್‌ ಉಳಿಸಿಕೊಳ್ಳುತ್ತಾರೆ. ನಾನು ಹೋದ ಮೇಲೂ ಜೆಡಿಎಸ್‌ ಇರುತ್ತದೆ ಎಂದು ಕಂಬನಿ ಮಿಡಿದ ಅವರು, ಕೂಟಗಲ್‌ನಲ್ಲಿ ಕಳೆದ ಚುನಾವಣೆ ಯಲ್ಲಿ ಬಾಲಕೃಷ್ಣ ಅವರನ್ನು ಗೆಲ್ಲಿಸಲು ಎಚ್‌.ಡಿ.ಕುಮಾರಸ್ವಾಮಿ ಜನರ ಮುಂದೆ ಕಣ್ಣೀರು ಹಾಕಿದ್ದರು. ಈಗ ಅದೇ ಶಾಸಕ ಕುಮಾರಸ್ವಾಮಿಯೇ ಚುನಾವಣೆಗೆ ನಿಂತರೂ ನಾನೇ ಗೆಲ್ಲುತ್ತೇನೆ ಎಂದು ಅಹಂಕಾರದ ಮಾತನಾಡುತ್ತಾರೆ. ದುರಹಂಕಾರಿಗೆ ತಕ್ಕ ಉತ್ತರ ನೀಡಬೇಕು. ಜೆಡಿಎಸ್‌ಗೆ ಶಕ್ತಿ ತುಂಬಿದ್ದು ಮಾಗಡಿ ಮತದಾರರು. ಈ ಭಾರಿ ಎ.ಮಂಜುನಾಥ ಅವರನ್ನು ಕೈಹಿಡಿಯಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಜಿಲ್ಲಾ ಪಂಚಾಯಿತಿ ಸದಸ್ಯ ಎ.ಮಂಜುನಾಥ ಮಾತನಾಡಿ, ‘ನನ್ನ ಅಭಿಮಾನಿಯೊಬ್ಬ ಬಂಡೆಯ ಮೇಲೆ ನನ್ನ ಹೆಸರು ಬರೆಸಿದ್ದರೆ, ಶಾಸಕರು ಹೆಸರು ಅಳಿಸಿ ಹಾಕಿದ್ದಾರೆ. ದೇವೇಗೌಡ ಮತ್ತು ಕುಮಾರಸ್ವಾಮಿ ಅವರ ಮಾರ್ಗದರ್ಶನದಲ್ಲಿ ಕ್ಷೇತ್ರ ಅಭಿವೃದ್ಧಿಪಡಿಸುವುದಾಗಿ ತಿಳಿಸಿದರು. ಶಾಸಕ ಗೋಪಾಲಯ್ಯ, ವಿಧಾನ ಪರಿಷತ್ ಸದಸ್ಯ ಶರವಣ, ಮುಖಂಡರಾದ ಪೂಜಾರಿಪಾಳ್ಯದ ಕೃಷ್ಣಮೂರ್ತಿ, ಹೋರಾಟಗಾರ ಕಲ್ಕೆರೆ ಶಿವಣ್ಣ ಮಾತನಾಡಿದರು.

ದೇವರ ದರ್ಶನ: ತಿರುಮಲೆ ತಿರುವೆಂಗಳನಾಥ ರಂಗನಾಥ‌ಸ್ವಾಮಿ ದೇವರ ದರ್ಶನ ಪಡೆದ ಮಾಜಿ ಪ್ರಧಾನ ಮಂತ್ರಿ ದೇವೇಗೌಡ, ತೆರೆದ ವಾಹನದಲ್ಲಿ ರೋಡ್‌ ಶೋ

ನಡೆಸಿದರು. ತಿರುಮಲೆ ಮಹಾದ್ವಾರದಿಂದ ಜಿಲ್ಲಾ ಪಂಚಾಯಿತಿ ಸದಸ್ಯ ಎ.ಮಂಜುನಾಥ ಬೈಕ್‌ ಜಾಥಾಗೆ ಚಾಲನೆ ನೀಡಿದರು. ಸಾವಿರಾರು ಬೈಕ್‌ಗಳಲ್ಲಿ ಜೆಡಿಎಸ್‌ ಧ್ವಜ ಕಟ್ಟಿದ್ದ ಕಾರ್ಯಕರ್ತರು ಮೆರವಣಿಗೆಯಲ್ಲಿ ಕಲ್ಯಾಗೇಟ್‌ಗೆ ತೆರಳಿದರು. ಜೆಡಿಎಸ್‌ ಕಚೇರಿ ಉದ್ಘಾಟನೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕರ್ತರು ಇದ್ದರು.

ಕಾರ್ಯಕರ್ತರಿಂದ ಬೈಕ್‌ ರ‍್ಯಾಲಿ

ಬಿಡದಿ (ರಾಮನಗರ): ಮಾಗಡಿ ವಿಧಾನಸಭಾ ಕ್ಷೇತ್ರದಲ್ಲಿ ಜೆಡಿಎಸ್ ಭವನದ ಉದ್ಘಾಟನೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಇಲ್ಲಿನ ಸಾವಿರಾರು ಕಾರ್ಯಕರ್ತರು ಬೈಕ್‌ ರ‍್ಯಾಲಿ ಮೂಲಕ ಮಂಗಳವಾರ ಮಾಗಡಿಗೆ ತೆರಳಿದರು. ಬೈಕ್‌ ರ‍್ಯಾಲಿಗೆ ಜೆಡಿಎಸ್‌ ಮುಖಂಡ ಎ. ಮಂಜು ಚಾಲನೆ ನೀಡಿದರು. ‘ಕಾರ್ಯಕರ್ತರು ಸ್ವಪ್ರೇರಣೆಯಿಂದ ಭಾಗವಹಿಸಿದ್ದಾರೆ. ಅವರ ವಿಶ್ವಾಸ, ಪ್ರೀತಿಗೆ ಬೆಲೆ ಕಟ್ಟಲಾಗದು’ ಎಂದು ತಿಳಿಸಿದರು.

ಜಿಲ್ಲಾ ಪಂಚಾಯಿತಿ ಸದಸ್ಯ ಮಂಜುನಾಥ್, ಪುರಸಭೆ ಸದಸ್ಯರಾದ ರಮೇಶ್‌ಕುಮಾರ್, ದೇವರಾಜು, ಸಂತೋಷ್, ಹಿರಿಯ ಮುಖಂಡ ಎಚ್.ಎಲ್. ಚಂದ್ರು, ಮಹಿಳಾ ಘಟಕದ ಅಧ್ಯಕ್ಷೆ ನೇತ್ರಾವತಿ ಮಂಜುನಾಥ್, ಬಿಡದಿ ಹೋಬಳಿ ಜೆಡಿಎಸ್ ಘಟಕದ ಅಧ್ಯಕ್ಷ ಸಿ. ಉಮೇಶ್, ಹಿಂದುಳಿದ ವರ್ಗದ ಜಿಲ್ಲಾ ಘಟಕದ ಅಧ್ಯಕ್ಷ ಶಂಕರ್, ಮುಖಂಡರಾದ ಶೆಟ್ಟಿಗೌಡನದೊಡ್ಡಿ ನರಸಿಂಹಯ್ಯ, ರಾಮನಹಳ್ಳಿ ರಮೇಶ್, ಶೇಷಪ್ಪ, ಇಟ್ಟಮಡು ಗೋಪಾಲ್, ಅಬ್ಬನಕುಪ್ಪೆ ಬೆಟ್ಟಸ್ವಾಮಿ, ರೇಣುಕಪ್ಪ, ಸೋಮೇಗೌಡ, ರವಿಕುಮಾರ್ ಇದ್ದರು.

ನೆಲ್ಲಿಗುಡ್ಡ ರಸ್ತೆ ಮೂಲಕ ಸಾಗಿದ ರ‍್ಯಾಲಿಯು ಕರೇನಹಳ್ಳಿ, ಕಾಕರಾಮನಹಳ್ಳಿ, ಗಾಣಕಲ್, ಮಂಚನಬೆಲೆ, ವೀರೇಗೌಡನದೊಡ್ಡಿ, ಕರಲಮಂಗಲ, ಹೊಸಪೇಟೆ ಗೇಟ್ ಮಾರ್ಗವಾಗಿ ಮಾಗಡಿ ರಂಗನಾಥ ದೇವಾಲಯ ತಲುಪಿತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry