ಕೌಶಲ ಇದ್ದಾಗ ಉತ್ತಮ ಉದ್ಯೋಗಾವಕಾಶ

7

ಕೌಶಲ ಇದ್ದಾಗ ಉತ್ತಮ ಉದ್ಯೋಗಾವಕಾಶ

Published:
Updated:

ಉಡುಪಿ: ಪದವಿ ಪ್ರಮಾಣಪತ್ರ ಒಂದಿದ್ದರೆ ಉದ್ಯೋಗ ಸಿಗುವುದು ಕಷ್ಟ. ಆದ್ದರಿಂದ, ಯುವಕರು ಕೌಶಲವನ್ನು ಸಹ ಬೆಳೆಸಿಕೊಳ್ಳುವುದು ಅನಿವಾರ್ಯ ಎಂದು ಕ್ರೀಡೆ ಮತ್ತು ಯುವ ಸಬಲೀಕರಣ ಸಚಿವ ಪ್ರಮೋದ್ ಮಧ್ವರಾಜ್ ಹೇಳಿದರು.

ಕೈಗಾರಿಕಾ ತರಬೇತಿ ಮತ್ತು ಉದ್ಯೋಗ ಕೇಂದ್ರ, ಕಾಲೇಜು ಶಿಕ್ಷಣ ಇಲಾಖೆ, ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರ, ಡಾ.ಜಿ. ಶಂಕರ್ ಮಹಿಳಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರದ ಸಂಯುಕ್ತ ಆಶ್ರಯದಲ್ಲಿ ಕಾಲೇಜಿನಲ್ಲಿ ಮಂಗಳವಾರ ಏರ್ಪಡಿಸಿದ್ದ ಉದ್ಯೋಗ ಮೇಳಕ್ಕೆ ಚಾಲನೆ ನೀಡಿ ಮಾತನಾಡಿದರು.

ಉದ್ಯೋಗ ನೀಡುವ ಸಂಸ್ಥೆಗಳು ಅಭ್ಯರ್ಥಿಗಳು ಕೌಶಲ ಹೊಂದಿರಬೇಕು ಎಂದು ಬಯಸುತ್ತವೆ. ಪದವಿ ಪ್ರಮಾಣ ಪತ್ರ ಆಯ್ಕೆಗೆ ಹೋಗಲು ಪಾಸ್ ಇದ್ದಂತೆ. ಒಳಗೆ ಹೋಗಿ ಉದ್ಯೋಗ ಪಡೆದುಕೊಳ್ಳಬೇಕಾದರೆ ಕೌಶಲ ಅತ್ಯಗತ್ಯ. ಆದ್ದರಿಂದ ಯುವಕರು ಈ ನಿಟ್ಟಿನಲ್ಲಿ ಯೋಚನೆ ಮಾಡಬೇಕು. ಕೌಶಲ ಅಭಿವೃದ್ಧಿಗಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೌಶಲ ಯೋಜನೆಯನ್ನು ಜಾರಿಗೆ ತಂದಿದ್ದಾರೆ. ಅದರಲ್ಲಿ ಹೆಸರು ನೋಂದಾಯಿಸಿಕೊಂಡು ತರಬೇತಿ ಪಡೆದುಕೊಳ್ಳಬೇಕು ಎಂದು ಸಲಹೆ ನೀಡಿದರು.

‘ಉಡುಪಿ ಜಿಲ್ಲೆಯಲ್ಲಿ ವಿದ್ಯಾವಂತ ಯುವಕರ ಸಂಖ್ಯೆ ಹೆಚ್ಚಾಗಿದೆ. ಆದ್ದರಿಂದ ಎಲ್ಲರಿಗೂ ಒಳ್ಳೆಯ ಉದ್ಯೋಗ ಅವಕಾಶ ಸಿಗುತ್ತಿಲ್ಲ. ಸಂಬಂಧಿಸಿದ ಇಲಾಖೆಯವರು ಉಡುಪಿಯಂತಹ ಜಿಲ್ಲೆಗೆ ಹೆಚ್ಚಿನ ಆದ್ಯತೆ ನೀಡಿ ಯುವಕರಿಗೆ ಉದ್ಯೋಗ ಕಲ್ಪಿಸಿಕೊಡಲು ಪ್ರಯತ್ನಿಸಬೇಕು. ಕೇವಲ ಉದ್ಯೋಗ ಮಾತ್ರವಲ್ಲ, ಸ್ವಂತ ಉದ್ಯಮ ಆರಂಭಿಸಲು ಸಹ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಹಲವು ಯೋಜನೆಗಳನ್ನು ಜಾರಿಗೊಳಿಸಿವೆ. ಇವುಗಳನ್ನು ಸಹ ಬಳಸಿಕೊಂಡು ಉದ್ಯಮ ಆರಂಭಿಸಿ ನೀವೇ ಹತ್ತು ಮಂದಿಗೆ ಉದ್ಯೋಗ ನೀಡಲು ಪ್ರಯತ್ನಿಸಿ’ ಎಂದು ಕಿವಿ ಮಾತು ಹೇಳಿದರು.

ಉದ್ಯೋಗಾಧಿಕಾರಿ ಖಲಂದರ್ ಖಾನ್ ಮಾತನಾಡಿ, ‘ವಿದ್ಯಾವಂತರ ಸ್ವಾವಲಂಬಿ ಜೀವನಕ್ಕೆ ಉದ್ಯೋಗ ಅವಶ್ಯಕ, ಆದ್ದರಿಂದ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕೌಶಲ ತರಬೇತಿಗಾಗಿ ಹಲವು ಯೋಜನೆ ಜಾರಿಗೆ ತಂದಿವೆ. ಕೌಶಲಭರಿತ ಅಭ್ಯರ್ಥಿಗಳಿಗೆ ಖಚಿತವಾಗಿ ಉದ್ಯೋಗ ದೊರೆಯುತ್ತದೆ’ ಎಂದರು.

ಕಾಲೇಜಿನ ಪ್ರಾಂಶುಪಾಲ ಡಾ.ಭಾಸ್ಕರ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ಕೃಷ್ಣರಾವ್ ಕೊಡಂಚ, ಜಿಲ್ಲಾ ಕೌಶಲಾಭಿವೃದ್ಧಿ ಅಧಿಕಾರಿ ಜಗದೀಶ್, ಕಾಲೇಜಿನ ಪ್ಲೇಸ್‌ಮೆಂಟ್ ಆಧಿಕಾರಿ ಪ್ರೊ. ಶ್ರೀಧರ ಭಟ್, ವಿದ್ಯಾರ್ಥಿ ಕ್ಷೇಮಪಾಲನಾ ಅಧಿಕಾರಿ ಪ್ರೊ. ರಾಮರಾಯ ಆಚಾರ್ಯ ಇದ್ದರು. ದೈಹಿಕ ಶಿಕ್ಷಣ ನಿರ್ದೇಶಕ ಡಾ.ರೋಶನ್ ಕುಮಾರ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry