ಎರೆ ಭೂಮಿಗೆ ಹನಿ ನೀರಾವರಿ: ಚಿಂತನೆ

7

ಎರೆ ಭೂಮಿಗೆ ಹನಿ ನೀರಾವರಿ: ಚಿಂತನೆ

Published:
Updated:
ಎರೆ ಭೂಮಿಗೆ ಹನಿ ನೀರಾವರಿ: ಚಿಂತನೆ

ವಿಜಯಪುರ: ‘ಎರೆ ಭೂಮಿಗೆ ಹನಿ ನೀರಾವರಿ ವ್ಯವಸ್ಥೆ ಅಳವಡಿಸಿ, ನೀರಾವರಿ ಸೌಲಭ್ಯ ಕಲ್ಪಿಸಲು ಚಿಂತನೆ ನಡೆದಿದೆ’ ಎಂದು ಜಲಸಂಪನ್ಮೂಲ ಸಚಿವ ಎಂ.ಬಿ.ಪಾಟೀಲ ಹೇಳಿದರು.

ವಿಜಯಪುರ ತಾಲ್ಲೂಕಿನ ಸಾರವಾಡ ಕೆರೆಗೆ ಮಂಗಳವಾರ ಬಾಗಿನ ಅರ್ಪಿಸಿ ಮಾತನಾಡಿದ ಅವರು ‘ನೀರಾವರಿ ಸೌಕರ್ಯದಿಂದ ಎರೆ ಭೂಮಿ (ಕಪ್ಪು ಮಣ್ಣು) ಬಂಜರಾಗುವುದನ್ನು ತಪ್ಪಿಸಲು, ಹನಿ ನೀರಾವರಿ ವ್ಯವಸ್ಥೆ ಮೂಲಕ ನೀರಾವರಿ ಸೌಲಭ್ಯ ಕಲ್ಪಿಸಲು ವರದಿ ನೀಡುವಂತೆ ಈಗಾಗಲೇ ಅಧಿಕಾರಿಗಳಿಗೆ ಸೂಚಿಸಿದ್ದೇನೆ’ ಎಂದು ತಿಳಿಸಿದರು.

‘ಹುನಗುಂದ ತಾಲ್ಲೂಕಿನ ರಾಮಥಾಳ ಯೋಜನೆ ಹನಿ ನೀರಾವರಿ ಯೋಜನೆಯಾಗಿದ್ದು, ಅಲ್ಲಿನ ರೈತರು 400 ವಿವಿಧ ಬೆಳೆಗಳನ್ನು ಈ ಪದ್ಧತಿ ಮೂಲಕ ಬೆಳೆದಿದ್ದಾರೆ. ಒಂದೂವರೆ ಎಕರೆ ಹೊಲವಿರುವ ಅಜ್ಜಿಯೊಬ್ಬರು ಹನಿ ನೀರಾವರಿ ಮೂಲಕ 20 ಬೆಳೆಗಳನ್ನು ಬೆಳೆದು ದೊಡ್ಡ ರೈತರಿಗೆ ಮಾದರಿಯಾಗಿದ್ದಾರೆ. ಈ ಮಾದರಿ ನಮ್ಮ ಎಲ್ಲ ರೈತ ಮಹಿಳೆಯರಿಗೆ ಸ್ಫೂರ್ತಿಯಾಗಬೇಕು. ಹೆಣ್ಣು ಮಕ್ಕಳು ಕಾಯಿಪಲ್ಲೆ ಕೃಷಿಯಲ್ಲಿ ತೊಡಗಿದರೆ ಸ್ವಾವಲಂಬಿಗಳಾಗಿ ಮನೆಯನ್ನು ಮುನ್ನೆಡಸಬಹುದು’ ಎಂದರು.

‘ತುಂಗಭದ್ರಾ ಯೋಜನಾ ಪ್ರದೇಶದಲ್ಲಿ ರೈತರು ತಮ್ಮ ಜಮೀನನ್ನು ಆಂಧ್ರದವರಿಗೆ ಲೀಜ್ ಕೊಟ್ಟು, ಮಾರಿ ಭೂಮಿಯನ್ನು ಹಾಳು ಮಾಡಿ ಕೊಂಡಿದ್ದಾರೆ. ನಮ್ಮ ಹಿರಿಯರು ಹಿಂದೆ ಹಣ, ಒಡವೆಯನ್ನು ನಮಗಾಗಿ ಆಸ್ತಿ ಮಾಡದೆ, ಭೂಮಿಯನ್ನೇ ಆಸ್ತಿ ಮಾಡಿಕೊಟ್ಟಿದ್ದಾರೆ. ಅದನ್ನು ಕಾಪಾಡಿ ಕೊಂಡು ನೀರಾವರಿ ಸೌಕರ್ಯದಿಂದ ಅಭಿವೃದ್ಧಿ ಸಾಧಿಸಬೇಕು’ ಎಂದು ಎಂ.ಬಿ.ಪಾಟೀಲ ಕಿವಿಮಾತು ಹೇಳಿದರು.

ನಾಗಠಾಣದ ಚನ್ನಮಲ್ಲಿಕಾರ್ಜುನ ಶ್ರೀ, ಬೊಮ್ಮನಳ್ಳಿಯ ಜಯಶಾಂತಲಿಂಗ ಸ್ವಾಮೀಜಿ, ಯರನಾಳದ ಗುರುಸಂಗನ ಬಸವ ಸ್ವಾಮೀಜಿ, ಅಥಣಿಯ ಮೋಟಗಿ ಮಠದ ಪ್ರಭು ಚನ್ನಬಸವ ಸ್ವಾಮೀಜಿ, ಸಿಂದಗಿಯ ಶಾಂತಗಂಗಾಧರ ಸ್ವಾಮೀಜಿ, ಮುರಘೇಂದ್ರ ಸ್ವಾಮೀಜಿ, ರೇಣುಕಾ ಮಾತಾಜಿ, ರುದ್ರಮುನಿ ಸ್ವಾಮೀಜಿ, ಮುಳಸಾವಳಗಿಯ ದಯಾ ನಂದ ಸ್ವಾಮೀಜಿ, ಗುಗದಡ್ಡಿಯ ಸಿದ್ಧರಾಮೇಶ್ವರ ಸ್ವಾಮೀಜಿ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.

ಎಸ್.ಕೆ.ಚಿಕರಡ್ಡಿ ಸ್ವಾಗತಿಸಿದರು. ಗ್ರಾಮಸ್ಥರು ಸಚಿವ ಎಂ.ಬಿ.ಪಾಟೀಲ, ಆಶಾ ಎಂ.ಪಾಟೀಲ ದಂಪತಿಯನ್ನು ಸನ್ಮಾನಿಸಿದರು. ಜಿ.ಪಂ.ಸದಸ್ಯೆ ಸುಜಾತಾ ಸೋಮನಾಥ ಕಳ್ಳಿಮನಿ ಇದ್ದರು.

ಸಮಾರಂಭಕ್ಕೂ ಮುನ್ನ ಸಾರವಾಡ, ದದಾಮಟ್ಟಿಯ ಮಹಿಳೆಯರು ಈಶ್ವರ ದೇವಸ್ಥಾನದಿಂದ ಕೆರೆಯವರೆಗೆ ಕುಂಭ ಹೊತ್ತು, ವಿವಿಧ ಜಾನಪದ ಕಲಾ ತಂಡಗಳೊಂದಿಗೆ ಮೆರವಣಿಗೆ ನಡೆಸಿ ಗಂಗಾ ಪೂಜೆ ಸಲ್ಲಿಸಿ, ಬಾಗಿನ ಅರ್ಪಿಸಿದರು.

* * 

ವಿಜಯಪುರ ತಾಲ್ಲೂಕಿನ ಡೋಣಿ ನದಿಯ ವ್ಯಾಪ್ತಿಯಲ್ಲಿ ಹನಿ ನೀರಾವರಿ ಯೋಜನೆಯನ್ನು ಜಾರಿಗೊಳಿಸಲು ಚಿಂತನೆ ನಡೆದಿದೆ

ಎಂ.ಬಿ.ಪಾಟೀಲ, ಜಲಸಂಪನ್ಮೂಲ ಸಚಿವ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry