ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಳಕಲ್‌: ಭಾವೈಕ್ಯ ಪ್ರತೀಕದ ಉರುಸ್

Last Updated 31 ಜನವರಿ 2018, 9:10 IST
ಅಕ್ಷರ ಗಾತ್ರ

ಇಳಕಲ್‌: ಕೋಮು ಸೌಹಾರ್ದ ಹಾಗೂ ಭಾವೈಕ್ಯದ ಪ್ರತೀಕವಾದ ಹಜರತ್‌ ಸೈಯ್ಯದ್‌ ಶಹಾ ಮುರ್ತುಜಾ ಖಾದ್ರಿ ದರ್ಗಾದ 149 ನೇ ಉರುಸ್ ಮಂಗಳವಾರದಿಂದ ಆರಂಭವಾಗಿದೆ. ಲಕ್ಷಕ್ಕೂ ಹೆಚ್ಚು ಮುಸ್ಲಿಮರು, ಹಿಂದೂಗಳು ಒಟ್ಟಾಗಿ ಉರುಸ್‌ ಆಚರಣೆಯಲ್ಲಿ ಪಾಲ್ಗೊಂಡಿದ್ದಾರೆ. ತೆಲಂಗಾಣ, ಆಂಧ್ರಪ್ರದೇಶ, ಮಹಾರಾಷ್ಟ್ರದಿಂದಲೂ ಜನರು ಉರುಸ್‌ಗೆ ಬಂದು, ಶ್ರದ್ಧಾ ಭಕ್ತಿಯಿಂದ ದರ್ಗಾಕ್ಕೆ ಹರಕೆ ತೀರಿಸುತ್ತಾರೆ.

ಸೈಯ್ಯದ್‌ ಶಹಾ ಮುರ್ತುಜಾ ಖಾದ್ರಿ ಅವರು ಪ್ರಸಿದ್ಧ ಸೂಫಿ ಸಂತರು. ಜನರ ನಡುವಿನ ಎಲ್ಲ ರೀತಿಯ ಭೇದಗಳನ್ನು ತೊಡೆದು ಹಾಕಲು ಶ್ರಮಿಸಿದ್ದರು. ಜನರಿಗೆ ಸಮಾನತೆ, ಮಾನವೀಯತೆ ಹಾಗೂ ನೈತಿಕ ಮೌಲ್ಯಗಳನ್ನು ಬೋಧಿಸಿ, ಪ್ರೀತಿ, ವಿಶ್ವಾಸ ಹಾಗೂ ಗೌರವಕ್ಕೆ ಪಾತ್ರರಾಗಿದ್ದರು.

ವಿಜಯ ಮಹಾಂತೇಶ್ವರ ಮಠದ 16ನೇ ಪೀಠಾಧಿಪತಿ ಆಗಿದ್ದ ಚಿತ್ತರಗಿ ಚಿಜ್ಯೋತಿ ಲಿಂ.ವಿಜಯ ಮಹಾಂತ ಶ್ರೀಗಳು ಹಾಗೂ ಸೂಫಿ ಸಂತ ಸೈಯ್ಯದ್‌ ಷಾ ಮುರ್ತುಜಾ ಖಾದ್ರಿ ಅವರ ನಡುವಿನ ಸ್ನೇಹ ಹಾಗೂ ಆತ್ಮೀಯತೆ ಈ ಭಾಗದಲ್ಲಿ ಜನಜನಿತ. ಈ ಸಂತರ ನಡುವಿನ ಗೆಳೆತನ ಹಾಗೂ ವಿಶ್ವಾಸದ ಪ್ರಭಾವಳಿ ಇವತ್ತಿಗೂ ಈ ಭಾಗದ ಜನರ ನಡುವಳಿಕೆಯಲ್ಲಿ ಕಾಣಬಹುದು. ಧರ್ಮದ ಹೆಸರಿನಲ್ಲಿ ಜನರನ್ನು ಪ್ರಚೋದಿಸುವವರಿಗೆ ಇಲ್ಲಿ ಬೆಂಬಲ ಸಿಕ್ಕಿಲ್ಲ. ಸಹಿಷ್ಣುತೆ, ಭಾವೈಕ್ಯ ಇಲ್ಲಿಯ ಜನರ ಬದುಕಿನ ಪರಂಪರೆಯೇ ಆಗಿದೆ. ವಿಜಯ ಮಹಾಂತೇಶ್ವರ ಮಠ ಹಾಗೂ ಸೈಯ್ಯದ್‌ ಶಹಾ
ಮುರ್ತುಜಾ ಖಾದ್ರಿ ದರ್ಗಾ ಹಿಂದೂ– ಮುಸ್ಲಿಂರ ಹೃದಯದಲ್ಲಿ ಪ್ರೀತಿ, ವಿಶ್ವಾಸ ತುಂಬಿವೆ.

ಉರುಸ್‌ನ ಧಾರ್ಮಿಕ ವಿಧಿ ವಿಧಾನಗಳಲ್ಲಿ ನಗರದ ಚವ್ಹಾಣ, ಅರಳಿಕಟ್ಟಿ ಹಾಗೂ ಮನ್ನಾಪುರ ಕುಟುಂಬಗಳು ಪಾಲ್ಗೊಂಡು ಸಂಪ್ರದಾಯವನ್ನು ಮುಂದುವರಿಸಿವೆ. ಸಾವಿರಾರು ಹಿಂದೂಗಳು ಶ್ರದ್ಧೆಯಿಂದ ಉರುಸಿನಲ್ಲಿ ಪಾಲ್ಗೊಳ್ಳುತ್ತಾರೆ. ಸೂಫಿ ಪರಂಪರೆಯ ಪ್ರಭಾವವನ್ನು ಇಲ್ಲಿಯ ಜನರ ನಡುವಿನ ಸಾಮರಸ್ಯ, ಸೌಹಾರ್ದ ಕಾಣಬಹುದಾಗಿದೆ. ಅಂತಹ ನೂರಾರು ನಿದರ್ಶನಗಳು ಇಲ್ಲಿವೆ.

ವಿಶೇಷತೆ  15 ದಿನಗಳವರೆಗೆ ನಡೆಯುವ ಉರುಸಿನಲ್ಲಿ ಜನರು ಸಂಭ್ರಮದಿಂದ ಪಾಲ್ಗೊಳ್ಳುತ್ತಾರೆ. ದರ್ಗಾದ ಬಯಲಿನಲ್ಲಿ ನಿತ್ಯ ಬಳಕೆ ವಸ್ತುಗಳು, ಆಟದ ಸಾಮಾಗ್ರಿಗಳು, ಕೃಷಿ ಉಪಕರಣಗಳು, ಆಲಂಕಾರಿಕ ವಸ್ತುಗಳು ಹಾಗೂ ಬಳೆಗಳನ್ನು ಮಾರುವ ಅಂಗಡಿಗಳು ಗಮನ ಸೆಳೆಯುತ್ತವೆ. ಎತ್ತರಲ್ಲಿ ವೃತ್ತಾಕಾರ ತೂಗುವ ತೊಟ್ಟಿಲುಗಳು ಸೇರಿದಂತೆ ಮಕ್ಕಳ ಮನೋಲ್ಲಾಸದ ವಿವಿಧ ಆಟಗಳು, ಮಿರ್ಚಿ ಭಜಿ, ಜಿಲೇಬಿ, ಗೋಬಿ ಮಂಚೂರಿಯಂತಹ ತಿನಿಸುಗಳನ್ನು ಮಾರುವ ಅಂಗಡಿಗಳು ಆಕರ್ಷಿಸುತ್ತವೆ.

ಎಚ್‌ಡಿಕೆಗೆ ಭಾವೈಕ್ಯ ಪ್ರಶಸ್ತಿ

31 ರಂದು ಉರುಸ್‌, ಫೆ.1ರಂದು ಜಿಯಾರತ್‌ ನಡೆಯಲಿದೆ. ಈ ಎಲ್ಲ ಕಾರ್ಯಕ್ರಮಗಳು ದರ್ಗಾದ ನೂತನ ಸಜ್ಜಾದ ನಸೀನ್‌ (ಗುರುಗಳು) ಆಗಿರುವ ಸೈಯ್ಯದ್‌ ಶಹಾ ಮುರ್ತುಜಾ ಹುಸೇನಿ ಉಲ್‌ ಖಾದ್ರಿ ಉರ್ಫ ಫೈಸಲ್‌ ಪಾಷಾ ಅವರ ಸಾನ್ನಿಧ್ಯದಲ್ಲಿ ನಡೆಯಲಿವೆ. ದರ್ಗಾ ಕಮೀಟಿ ಅಧ್ಯಕ್ಷ ಉಸ್ಮಾನಗಣಿ ಹುಮನಾಬಾದ್ ಹಾಗೂ ಕಾರ್ಯದರ್ಶಿ ಅಬ್ದುಲ್‌ ಹಕೀಂ ನೇತೃತ್ವದಲ್ಲಿ ಕಾರ್ಯಕ್ರಮ ನಡೆಯುವವು.

ದರ್ಗಾ ಕಮೀಟಿಯು 31ರಂದು ಮಧ್ಯಾಹ್ನ 11ಗಂಟೆಗೆ ಸರ್ವಧರ್ಮ ಸಾಮೂಹಿಕ ವಿವಾಹ ಮಹೋತ್ಸವ ಆಯೋಜಿಸಲಾಗಿದೆ. ಸಂಜೆ ರಾಷ್ಟ್ರೀಯ ಭಾವೈಕ್ಯತಾ ಸಮಾವೇಶ ನಡೆಯಲಿದೆ. ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷ ಕುಮಾರಸ್ವಾಮಿ ಅವರಿಗೆ ರಾಷ್ಟ್ರೀಯ ಭಾವೈಕ್ಯ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ ಎಂದು ದರ್ಗಾ ಸಮಿತಿ ಪ್ರಕಟಣೆಯಲ್ಲಿ ತಿಳಿಸಿದೆ.

ಬಸವರಾಜ ಅ. ನಾಡಗೌಡ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT