ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳಿಗ್ಗೆಯೇ ಹರಡುತ್ತದೆ ಮದ್ಯದ ಘಮಲು

Last Updated 31 ಜನವರಿ 2018, 9:30 IST
ಅಕ್ಷರ ಗಾತ್ರ

ಗುಂಡ್ಲುಪೇಟೆ: ತಾಲ್ಲೂಕಿನ ಹಂಗಳ ಹೋಬಳಿ ವ್ಯಾಪ್ತಿಯ ಅನೇಕ ಗ್ರಾಮಗಳಲ್ಲಿ ಬೆಳ್ಳಂಬೆಳಗ್ಗೆಯಿಂದಲೇ ಮದ್ಯ ಮಾರಾಟ ಅವ್ಯಾಹತವಾಗಿ ನಡೆಯುತ್ತಿದ್ದು, ಇದರ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾಗಿದೆ.

ಕುಡಿತದ ಚಟ ಇರುವವರಿಗೆ ವರದಾನವೆಂಬಂತೆ ಇಲ್ಲಿನ ಮದ್ಯದಂಗಡಿಗಳು ಮುಂಜಾನೆ ಯಿಂದಲೇ ತೆರೆಯುತ್ತಿವೆ. ಇದರಿಂದ ಹೊತ್ತೇರುವ ವೇಳೆಗೇ ಮದ್ಯದಂಗಡಿಗಳತ್ತ ದೌಡಾಯಿಸುವ ಗಂಡಸರು, ಕುಡಿಯುತ್ತಾ ಕೂರುತ್ತಾರೆ. ಕೂಲಿ ಕೆಲಸಕ್ಕೂ ಹೋಗುವುದಿಲ್ಲ. ಇದರಿಂದ ಜೀವನ ನಿರ್ವಹಣೆಗೆ ಕಷ್ಟವಾಗಿದೆ ಎಂದು ಇಲ್ಲಿನ ಮಹಿಳೆಯರು ಆರೋಪಿಸುತ್ತಾರೆ.

ಹಂಗಳ ಗ್ರಾಮದಲ್ಲಿ ಇರುವ ವೆಂಕಟೇಶ್ವರ ವೈನ್ ಸ್ಟೋರ್ ಬೆಳಿಗ್ಗೆ 8 ಗಂಟೆಗೂ ಮೊದಲೇ ಬಾಗಿಲು ತೆರೆಯುತ್ತದೆ. ಇದರಿಂದ ಅಕ್ಕಪಕ್ಕದ ಗ್ರಾಮಗಳಾದ ಮೇಲುಕಾಮನಹಳ್ಳಿ, ಮಗುವಿನಹಳ್ಳಿ, ಕಾಡಂಚಿನ ಪ್ರದೇಶವಾದ ಮಂಗಲ, ಬುಡಕಟ್ಟು ಜನಾಂಗದ ಕಾಲೊನಿಗಳಾದ ಕಾರೆಮಾಳ, ಚೆನ್ನಂಜನಹುಂಡಿಗಳ ಅನೇಕ ಗ್ರಾಮಸ್ಥರು ಬೆಳಗ್ಗೆ 6.30ಕ್ಕೆ ಹೊರಡುವ ಬಸ್‍ನಲ್ಲಿ ಬಂದು ಮದ್ಯಕ್ಕಾಗಿ ಕಾಯುತ್ತಾರೆ. ಕೆಲವರು ರಾತ್ರಿಯವರೆಗೂ ಅಲ್ಲಿಯೇ ಹರಟುತ್ತಾ, ಕುಡಿಯುತ್ತಾರೆ ಕೂರುತ್ತಾರೆ. ಕುಡಿದ ಅಮಲಿನಲ್ಲಿ ಗಲಾಟೆ ಮಾಡಿದ ಅನೇಕ ಪ್ರಕರಣಗಳು ನಡೆದಿವೆ ಎನ್ನುತ್ತಾರೆ ಸ್ಥಳೀಯರು.

ಮನೆಗಳಲ್ಲಿ ಸಂಕಷ್ಟ: ಕುಡಿಯುವ ಚಟಕ್ಕೆ ಬಿದ್ದವರು ಯಾವ ಕೆಲಸಕ್ಕೂ ಹೋಗುವುದಿಲ್ಲ. ತಾವು ಕಷ್ಟಪಟ್ಟು ದುಡಿದು ಮನೆ ನಿರ್ವಹಣೆಗೆ ಬಳಸಲು ಇಟ್ಟುಕೊಂಡ ಹಣವನ್ನು ಕಿತ್ತುಕೊಂಡು ಹೋಗುತ್ತಾರೆ ಎನ್ನುವುದು ಮಹಿಳೆಯರ ಅಳಲು. ಬೆಳಿಗ್ಗೆಯೇ ಮದ್ಯದಂಗಡಿ ಬಾಗಿಲು ತೆರೆಯುವುದರಿಂದ ನಮಗೆ ತೀವ್ರ ತೊಂದರೆಯಾಗುತ್ತಿದೆ. ಸಾಂಸಾರಿಕ ಬದುಕು ಹಾಳಾಗುತ್ತಿದೆ. ಕಡೇಪಕ್ಷ 11 ಗಂಟೆಯ ಮೇಲೆ ಮದ್ಯ ಮಾರಾಟ ಶುರುಮಾಡುವಂತಾಗಬೇಕು ಎಂದು ಒತ್ತಾಯಿಸಿದರು.

ಅಬಕಾರಿ ಕಾನೂನಿನ ಪ್ರಕಾರ ಬೆಳಿಗ್ಗೆ 10 ಗಂಟೆಯ ಮೇಲೆಯೇ ಮದ್ಯದ ಅಂಗಡಿಗಳನ್ನು ತೆರೆಯಬೇಕು. ಆದರೆ ಈ ನಿಯಮವನ್ನು ಗಾಳಿಗೆ ತೂರಿರುವ ಅಂಗಡಿ ಮಾಲೀಕರು ತಮಗಿಷ್ಟ ಬಂದ ವೇಳೆಗೆ ಬಾಗಿಲು ತೆಗೆದು ವಹಿವಾಟು ಪ್ರಾರಂಭಿಸುತ್ತಾರೆ ಎಂದು ಆರೋಪಿಸಿದರು.

ಹಂಗಳದಲ್ಲಿರುವ ಮದ್ಯದ ಅಂಗಡಿ ರಾಷ್ಟ್ರೀಯ ಹೆದ್ದಾರಿಯ ತಿರುವಿನ ಸಮೀಪದಲ್ಲಿಯೇ ಇದೆ. ಊಟಿ, ಕೇರಳದ ಕಡೆಗೆ ವೇಗವಾಗಿ ಸಂಚರಿಸುವ ವಾಹನಗಳಿಗೆ ಅಡ್ಡಲಾಗಿ ಬರುವ ಕುಡುಕರ ದಿಸೆಯಿಂದ ಅನೇಕ ಸಲ ಅಪಘಾತಗಳು ಸಂಭವಿಸಿವೆ.

‘ಹೊಲಗಳಿಗೆ ಕೂಲಿ ಕೆಲಸಕ್ಕೆ ತೆರಳುವ ಮಹಿಳೆಯರು ವೈನ್‍ಸ್ಟೋರಿನ ದಾರಿಯಲ್ಲೇ ಸಾಗಬೇಕು. ಇಲ್ಲಿ ಕುಡುಕರ ಹಾವಳಿ ಇದ್ದರೂ, ಪರ್ಯಾಯ ಮಾರ್ಗವಿಲ್ಲದ ಕಾರಣ ಈ ರಸ್ತೆಯಲ್ಲಿಯೇ ಹೋಗುತ್ತಾರೆ. ಈ ಸಮಸ್ಯೆಗಳ ಕುರಿತು ಅಬಕಾರಿ ಇಲಾಖೆ ಅಧಿಕಾರಿಗಳಿಗೆ ತಿಳಿದಿದೆ. ಆದರೂ, ಜಾಣ ಕುರುಡುತನ ಪ್ರದರ್ಶಿಸುತ್ತಿದ್ದಾರೆ. ನಾವು ದುಡಿದ ಹಣವನ್ನು ನಮ್ಮ ಮನೆಯ ಗಂಡಸರು ಕುಡಿತಕ್ಕೆ ಬಳಸುತ್ತಾರೆ. ಇದರಿಂದ ಜೀವನ ನಿರ್ವಹಣೆ ತುಂಬಾ ಕಷ್ಟವಾಗುತ್ತಿದೆ’ ಎಂದು ಬುಡಕಟ್ಟು ಜನಾಂಗದ ಮಾರಮ್ಮ ನೋವು ಹಂಚಿಕೊಂಡರು.

ವೈನ್‍ಸ್ಟೋರ್ ವಿಚಾರವಾಗಿ ಹಲವು ಬಾರಿ ಅಬಕಾರಿ ನಿರೀಕ್ಷಕರಿಗೆ ತಿಳಿಸಿದ್ದರೂ ಯಾವುದೇ ಪ್ರಯೋಜನ ವಾಗಿಲ್ಲ. ತಕ್ಷಣ ಕ್ರಮಕೊಳ್ಳಬೇಕು.ಇಲ್ಲದಿದ್ದರೆ ಮಹಿಳೆಯರು, ಸಂಘಟನೆಗಳ ಜತೆ ಸೇರಿಕೊಂಡು ಉಗ್ರ ಪ್ರತಿಭಟನೆ ನಡೆಸಲಾಗುತ್ತದೆ ಎಂದು ವಕೀಲ ರಾಜೇಶ್ ಮತ್ತು ಆರ್‌ಟಿಐ ಕಾರ್ಯಕರ್ತ ಸಿದ್ದರಾಜು ತಿಳಿಸಿದರು

ಮಲ್ಲೇಶ ಎಂ.

* * 

ಬೆಳಿಗ್ಗೆಯೇ ಅಂಗಡಿ ತೆರೆಯುತ್ತಿರುವ ಬಗ್ಗೆ ವೈನ್‍ಸ್ಟೋರ್ ಮಾಲೀಕರಿಗೆ ಎಚ್ಚರಿಕೆ ನೀಡಿದ್ದರೂ ಅದೇ ಚಾಳಿ ಮುಂದುವರಿಸುತ್ತಿದ್ದಾರೆ. ಈ ಬಗ್ಗೆ ಪ್ರಕರಣ ದಾಖಲು ಮಾಡಿದ್ದೇವೆ
ಸುನಂದಾ, ಅಬಕಾರಿ ಇನ್‌ಸ್ಪೆಕ್ಟರ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT