ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಕ್ರಮ ಗಣಿಗಾರಿಕೆ ವಿರುದ್ಧ ಕ್ರಮ ಕೈಗೊಳ್ಳಿ

Last Updated 31 ಜನವರಿ 2018, 9:33 IST
ಅಕ್ಷರ ಗಾತ್ರ

ಚಾಮರಾಜನಗರ: ‘ಅಕ್ರಮ ಗಣಿಗಾರಿಕೆ ತಡೆಯಲು ಅಧಿಕಾರಿಗಳು ಕ್ರಮಕೈಗೊಳ್ಳಬೇಕು’ ಎಂದು ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಎಚ್.ವಿ. ಚಂದ್ರು ಸೂಚನೆ ನೀಡಿದರು. ನಗರದ ತಾಲ್ಲೂಕು ಪಂಚಾಯಿತಿ ಕಚೇರಿಯಲ್ಲಿ ಮಂಗಳವಾರ ನಡೆದ ಸಾಮಾನ್ಯ ಸಭೆಯಲ್ಲಿ ಅವರು ಮಾತನಾಡಿದರು.

ತಾಲ್ಲೂಕು ವ್ಯಾಪ್ತಿಯಲ್ಲಿ ಗಣಿಗಾರಿಕೆ ನಡೆಯುತ್ತಿರುವ ಸ್ಥಳಗಳಿಗೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಬೇಕು. ಈ ವೇಳೆ ಅಕ್ರಮ ನಡೆಯುತ್ತಿರುವುದು ಕಂಡುಬಂದರೆ ಅವರಿಗೆ ಕೂಡಲೇ ನೋಟಿಸ್ ಜಾರಿ ಮಾಡಿ ಉನ್ನತ ಅಧಿಕಾರಿಗಳ ಗಮನಕ್ಕೆ ತರಬೇಕು ಎಂದು ನಿರ್ದೇಶಿಸಿದರು.

ಸದಸ್ಯ ಬಾಲಚಂದ್ರಮೂರ್ತಿ ಮಾತನಾಡಿ, ಕುಂಬರಗುಂಡಿ ಗ್ರಾಮದಲ್ಲಿ ಅಕ್ರಮವಾಗಿ ಕಲ್ಲುಗಣಿಗಾರಿಕೆ ಮಾಡಲಾಗುತ್ತಿದೆ. ಇದನ್ನು ಪ್ರಶ್ನಿಸಲು ಹೋದರೆ ಜೀವ ಬೆದರಿಕೆ ಹಾಕುತ್ತಿದ್ದಾರೆ. ಈ ಸಂಬಂಧ ಅಧಿಕಾರಿಗಳು ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲಿಸಿ ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಜ್ಯೋತಿಗೌಡನಪುರ, ಮಲೆಯೂರು ಗ್ರಾಮಗಳಲ್ಲಿ ಅಕ್ರಮ ಗಣಿಗಾರಿಕೆ ನಡೆಯುತ್ತಿದೆ. ಇಲಾಖೆಯಿಂದ ಪಡೆದ ಅನುಮತಿಗಿಂತಲೂ ಹೆಚ್ಚು ಸ್ಥಳದಲ್ಲಿ ಗಣಿಗಾರಿಕೆ ನಡೆಸಲಾಗುತ್ತಿದೆ. ಮಲೆಯೂರು ಗ್ರಾಮದಲ್ಲಿ ಗಣಿಗಾರಿಕೆ ವೇಳೆಯಲ್ಲಿ ದೊರೆಯುವ ಪುರಾತನ ಕಾಲದ ಶಿಲೆಗಳು, ಶಾಸನಗಳು ನಾಶವಾಗುತ್ತಿವೆ ಎಂದು ಮಹದೇವಯ್ಯ ಮತ್ತು ಇತರೆ ಸದಸ್ಯರು ದೂರಿದರು.

ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿ ಮಾತನಾಡಿ, ಅಕ್ರಮ ಗಣಿಗಾರಿಕೆ ನಡೆಯುತ್ತಿರುವುದು ಖಾತರಿಯಾದರೆ ನೋಟಿಸ್‌ ನೀಡಲಾಗುತ್ತದೆ. ಯಾರಾದರೂ ಜೀವ ಬೆದರಿಕೆ ಹಾಕಿದರೆ ಅವರ ವಿರುದ್ಧ ಪೊಲೀಸ್‌ ಠಾಣೆ ಹಾಗೂ ಇಲಾಖೆಗೆ ದೂರು ನೀಡಬೇಕು ಎಂದು ತಿಳಿಸಿದರು.

ಮಲೆಯೂರು ಗ್ರಾಮದ 2 ಕಿ.ಮೀ. ವ್ಯಾಪ್ತಿಯಲ್ಲಿ ಗಣಿಗಾರಿಕೆ ನಡೆಸಲು ನಿರ್ಬಂಧಿಸಲಾಗಿದೆ ಎಂದ ಅವರು, ಕೊಳ್ಳೇಗಾಲದಲ್ಲಿ 3 ಸ್ಥಳಗಳಲ್ಲಿ ಮರಳು ತೆಗೆಯಲು ಅವಕಾಶ ಕಲ್ಪಿಸಲಾಗಿದೆ ಎಂದರು.

ಬೆಳೆ ವಿಮೆ ಪಾವತಿಗೆ ಕ್ರಮ: ಕೃಷಿ ಇಲಾಖೆ ಅಧಿಕಾರಿ ಸುಂದರಮ್ಮ ಮಾತನಾಡಿ, ಬ್ಯಾಂಕ್‌ ಖಾತೆ ಸಂಖ್ಯೆ ಹಾಗೂ ಆಧಾರ್‌ ಕಾರ್ಡ್‌ ಸಂಖ್ಯೆ ವ್ಯತ್ಯಾಸದಿಂದ 2016–17ನೇ ಸಾಲಿನಲ್ಲಿ ತಾಲ್ಲೂಕಿನ 852 ರೈತರಿಗೆ ಬೆಳೆವಿಮೆ ಹಣ ಪಾವತಿಯಾಗಿರಲಿಲ್ಲ. ಈ ಸಂಬಂಧ ಜಿಲ್ಲಾಧಿಕಾರಿ ಅವರ ನೇತೃತ್ವದಲ್ಲಿ ಲೀಡ್‌ ಬ್ಯಾಂಕ್‌ ವ್ಯವಸ್ಥಾಪಕರು, ಜಂಟಿ ಕೃಷಿ ನಿರ್ದೇಶಕರು ಹಾಗೂ ವಿಮಾಕಂಪೆನಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಲಾಗಿದ್ದು, ಎಲ್ಲ ರೈತರಿಗೂ ವಿಮಾ ಹಣ ಪಾವತಿಸುವುದಾಗಿ ವಿಮಾ ಕಂಪೆನಿ ತಿಳಿಸಿದೆ ಎಂದರು.

ನಿರ್ಮಿತಿ ಕೇಂದ್ರದ ವಿರುದ್ಧ ದೂರು: ಜ್ಯೋತಿಗೌಡನಪುರ ಗ್ರಾಮದಲ್ಲಿ ನಿರ್ಮಿತಿ ಕೇಂದ್ರದಿಂದ ನಿರ್ಮಿಸಲಾಗಿರುವ ಶಾಲಾ ಕಟ್ಟಡ ಕಳಪೆಯಾಗಿದೆ. ಈ ಸಂಬಂಧ ತಾಲ್ಲೂಕು ಪಂಚಾಯಿತಿಯಿಂದ ಜಿಲ್ಲಾಧಿಕಾರಿಗಳಿಗೆ ದೂರು ನೀಡಿ ಕ್ರಮಕೈಗೊಳ್ಳುವಂತೆ ಸದಸ್ಯರು ಆಗ್ರಹಿಸಿದರು.

ಶಿಕ್ಷಣ ಇಲಾಖೆಯ ಅಧಿಕಾರಿ ದುಂಡು ಮಹದೇವ ಮಾತನಾಡಿ, ಶಾಲಾ ಪರಿಸರ ಉತ್ತಮವಾಗಿರಿಸುವ ಸಂಬಂಧ ತಾಲ್ಲೂಕಿನ ಎಲ್ಲ ಶಾಲೆಯ ಮುಖ್ಯಶಿಕ್ಷಕರಿಗೆ 3 ದಿನ ಹಾಗೂ ಸಹಶಿಕ್ಷಕರಿಗೆ 5 ದಿನಗಳ ತರಬೇತಿ ನೀಡಲಾಗಿದೆ. ಶಾಲಾ ಅನುದಾನವನ್ನು ಸಮರ್ಪಕವಾಗಿ ಬಳಕೆ ಮಾಡಿಕೊಳ್ಳುವ ಸಂಬಂಧ ಎಸ್‌ಡಿಎಂಸಿ ಅಧ್ಯಕ್ಷರು, ಸದಸ್ಯರಿಗೆ ತರಬೇತಿ ನೀಡಲಾಗಿದೆ. 9 ಪ್ರೌಢಶಾಲೆಗಳಲ್ಲಿ ಕೊಠಡಿ ನಿರ್ಮಾಣಕ್ಕೆ ಕೆಆರ್‌ಡಿಎಲ್‌ನಿಂದ ಅನುದಾನ ಬಿಡುಗಡೆಯಾಗಿದೆ ಎಂದು ಮಾಹಿತಿ ನೀಡಿದರು.

ಮಾಸಾಶನ ವಿತರಣೆಯಲ್ಲಿ ಅಕ್ರಮ: ಅಂಚೆ ಕಚೇರಿಯ ಮೂಲಕ ಮಾಶಾಸನ ವಿತರಿಸುತ್ತಿದ್ದ ವೇಳೆ ಯಾವುದೇ ಸಮಸ್ಯೆಗಳು ಇರಲಿಲ್ಲ. ಆದರೆ, ಪ್ರಸ್ತುತ ಸ್ಮಾರ್ಟ್‌ಕಾರ್ಡ್‌ನಿಂದ ಮಾಸಾಶನ ವಿತರಣೆಯಲ್ಲಿ ಲೋಪ ಉಂಟಾಗಿದೆ. ಏಜೆಂಟ್‌ಗಳು ಫಲಾನುಭವಿಗಳನ್ನು ವಂಚಿಸುತ್ತಿದ್ದಾರೆ. ಜತೆಗೆ, ಇಷ್ಟ ಬಂದಾಗ ವಿತರಿಸುವ ಮೂಲಕ ದಬ್ಬಾಳಿಕೆ ನಡೆಸುತ್ತಿದ್ದಾರೆ ಎಂದು ಸದಸ್ಯರು ದೂರಿದರು.

ಕಂದಾಯ ಇಲಾಖೆ ಅಧಿಕಾರಿ ಶಂಕರ್‌ ಮಾತನಾಡಿ, ಈ ಸಂಬಂಧ ಸದಸ್ಯರು ಅಕ್ರಮ ಎಸಗುತ್ತಿರುವ ಏಜೆಂಟ್‌ಗಳ ವಿರುದ್ಧ ಲಿಖಿತ ದೂರು ನೀಡಿದರೆ ಪರಿಶೀಲಿಸಿ ಅವರ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ ಎಂದರು.

ಬೇಡರಪುರ ಮತ್ತು ಮುತ್ತಿಗೆ ಗ್ರಾಮದಲ್ಲಿ ಮುಸ್ಲಿಂ ಜನಾಂಗದವರಿಗೆ ಸ್ಮಶಾನ ಭೂಮಿ ಇಲ್ಲದೆ ಪರದಾಡುವಂತಾಗಿದೆ. ಶವ ಸಂಸ್ಕಾರಕ್ಕೆ ಪಕ್ಕದ ಗ್ರಾಮಗಳಿಗೆ ಹೋಗುವಂತಾಗಿದ್ದು, ಕಂದಾಯ ಇಲಾಖೆಯಿಂದ ಅವರಿಗೆ ಸ್ಮಶಾನ ಭೂಮಿ ನೀಡಬೇಕು ಎಂದು ಸದಸ್ಯ ಬಸವಣ್ಣ ಆಗ್ರಹಿಸಿದರು.

ಸದಸ್ಯರ ನಿರ್ಲಕ್ಷ್ಯ: ಆರೋಗ್ಯ ಇಲಾಖೆ ಯಿಂದ ತಾಲ್ಲೂಕು, ಗ್ರಾಮ ಪಂಚಾಯಿತಿ ಸದಸ್ಯರನ್ನು ಕಡೆಗಣಿಸಲಾಗುತ್ತಿದೆ. ಯಾವುದೇ ಕಾರ್ಯಕ್ರಮ ರೂಪಿಸಿದರೂ ಆ ಬಗ್ಗೆ ಮಾಹಿತಿ ನೀಡುತ್ತಿಲ್ಲ. ಅಧಿಕಾರಿಗಳು ಅಸಡ್ಡೆತನದಿಂದ ವರ್ತಿಸುತ್ತಿದ್ದಾರೆ ಎಂದು ಉಪಾಧ್ಯಕ್ಷ ಪಿ.ಎನ್‌. ದಯಾನಿಧಿ ಸೇರಿದಂತೆ ಇತರೆ ಸದಸ್ಯರು ದೂರಿದರು. ಸಭೆಯಲ್ಲಿ ಇಒ ರಮೇಶ್‌ ಹಾಜರಿದ್ದರು.

ಅವೈಜ್ಞಾನಿಕ ರಸ್ತೆ ಕಾಮಗಾರಿ: ಸದಸ್ಯರ ಆಕ್ರೋಶ

ನಗರದಲ್ಲಿ ಅವೈಜ್ಞಾನಿಕವಾಗಿ ರಸ್ತೆ ಕಾಮಗಾರಿ ನಡೆಸಲಾಗುತ್ತಿದ್ದು, ಇದರಿಂದ ಸಾರ್ವಜನಿಕರಿಗೆ ಹೆಚ್ಚಿನ ತೊಂದರೆಯಾಗಿದೆ. ಈ ಸಂಬಂಧ ಜಿಲ್ಲಾಧಿಕಾರಿ ಹಾಗೂ ಸರ್ಕಾರಕ್ಕೆ ತಾಲ್ಲೂಕು ಪಂಚಾಯಿತಿ ಮನವಿ ಸಲ್ಲಿಸಬೇಕು ಎಂದು ಸದಸ್ಯರು ಆಗ್ರಹಿಸಿದರು.

ಸದಸ್ಯ ನಾಗಸುಂದರಮ್ಮ ಮಾತನಾಡಿ, ಯಾವುದೇ ರಸ್ತೆಯನ್ನು ಪೂರ್ಣ ಪ್ರಮಾಣದಲ್ಲಿ ಅಭಿವೃದ್ಧಿಪಡಿಸದೆ, ಎಲ್ಲ ರಸ್ತೆಗಳನ್ನು ಅಗೆಯಲಾಗುತ್ತಿದೆ. ಇದರಿಂದ ಸಾರ್ವಜನಿಕರು ನಿತ್ಯ ಕಿರಿಕಿರಿ ಅನುಭವಿಸುತ್ತಿದ್ದಾರೆ ಎಂದರು.

ಸದಸ್ಯ ಬಸವಣ್ಣ ಮಾತನಾಡಿ, ಅವೈಜ್ಞಾನಿಕ ರಸ್ತೆ ಕಾಮಗಾರಿಯಿಂದ ನಗರದ ಹಾಗೂ ಗ್ರಾಮೀಣ ಜನರು ಉಸಿರಾಟ ತೊಂದರೆಯಂತಹ ಕಾಯಿಲೆಯಿಂದ ಬಳಲುತ್ತಿದ್ದಾರೆ. ಸಮರ್ಪಕವಾದ ಮಾರ್ಗಸೂಚಿಯಿಲ್ಲದೆ ಓಡಾಡಲು ಪರದಾಡುತ್ತಿದ್ದಾರೆ ಎಂದು ದೂರಿದರು.

‘ಅಕ್ರಮ-ಸಕ್ರಮ ಅರ್ಜಿ ಸಲ್ಲಿಕೆಗೆ ಕಾಲಾವಕಾಶ’

ಅಕ್ರಮ -ಸಕ್ರಮ ಯೋಜನೆಯಡಿ ಅರ್ಜಿ ಸಲ್ಲಿಕೆಗೆ ಕಾಲಾವಕಾಶವಿದೆ ಎಂದು ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ರಮೇಶ್‌ ಹೇಳಿದರು. ಕಂದಾಯ ಇಲಾಖೆ ಜಾಗದಲ್ಲಿ ಅಕ್ರಮವಾಗಿ ನಿರ್ಮಿಸಿಕೊಂಡ ಮನೆಗಳನ್ನು ಸಕ್ರಮ ಮಾಡಿಸಿಕೊಳ್ಳಲು ಫೆಬ್ರವರಿ ಮೊದಲನೇ ವಾರದವರೆಗೂ ಅವಕಾಶವಿದ್ದು, ಸದಸ್ಯರು ಈ ಸಂಬಂಧ ಕ್ಷೇತ್ರದ ಜನರಿಗೆ ಮಾಹಿತಿ ನೀಡಬೇಕು ಎಂದು ತಿಳಿಸಿದರು.

* * 

ಅಧಿಕಾರಿಗಳು ತಾ.ಪಂ. ಸದಸ್ಯರನ್ನು ನಿರ್ಲಕ್ಷ್ಯ ಮಾಡುವುದನ್ನು ಸಹಿಸುವುದಿಲ್ಲ. ಮುಂದಿನ ದಿನಗಳಲ್ಲಿ ತಾಲ್ಲೂಕು ಮಟ್ಟದ ಕಾರ್ಯಕ್ರಮಗಳ ಬಗ್ಗೆ ಸದಸ್ಯರಿಗೆ ಮಾಹಿತಿ ನೀಡದಿದ್ದರೆ ಕ್ರಮವಹಿಸಲಾಗುವುದು
–ಎಚ್.ವಿ. ಚಂದ್ರು
ಅಧ್ಯಕ್ಷರು, ತಾಲ್ಲೂಕು ಪಂಚಾಯಿತಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT