ಮಾರ್ಚ್ 23ರಂದು ದೆಹಲಿಯಲ್ಲಿ ಉಪವಾಸ: ಅಣ್ಣಾ ಹಜಾರೆ

7

ಮಾರ್ಚ್ 23ರಂದು ದೆಹಲಿಯಲ್ಲಿ ಉಪವಾಸ: ಅಣ್ಣಾ ಹಜಾರೆ

Published:
Updated:
ಮಾರ್ಚ್ 23ರಂದು ದೆಹಲಿಯಲ್ಲಿ ಉಪವಾಸ: ಅಣ್ಣಾ ಹಜಾರೆ

ಬೆಂಗಳೂರು: ಮಾರ್ಚ್ 23ರಂದು ದೆಹಲಿಯ ರಾಮ್ ಲೀಲಾ‌ ಮೈದಾನದಲ್ಲಿ ಉಪವಾಸ ಸತ್ಯಾಗ್ರಹ ನಡೆಸುವುದಾಗಿ ಸಾಮಾಜಿಕ ಹೋರಾಟಗಾರ ಅಣ್ಣಾ ಹಜಾರೆ ತಿಳಿಸಿದರು.

ನಗರದ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಬುಧವಾರ ಆಯೋಜಿಸಿದ್ದ ರೈತರ ಬೃಹತ್ ಸಮಾವೇಶ ಉದ್ಘಾಟಿಸಿ ಅಣ್ಣಾ ಹಜಾರೆ ಮಾತನಾಡಿದರು.

‘ಡಾ. ಸ್ವಾಮಿನಾಥನ್ ವರದಿ ಜಾರಿಗೆ ಆಗ್ರಹಿಸಿ ಉಪವಾಸ ಸತ್ಯಾಗ್ರಹ ನಡೆಸಲಿದ್ದೇನೆ. ಎಲ್ಲ ರೈತರು ಬನ್ನಿ, ದೇಶದ ಜೈಲುಗಳು ಭರ್ತಿಯಾಗುವಂತೆ ಹೋರಾಟ ಮಾಡೋಣ’ ಎಂದು ಅವರು ಕರೆ ನೀಡಿದರು.

ಕೇಂದ್ರದ ವಿರುದ್ಧ ವಾಗ್ದಾಳಿ: ಕೇಂದ್ರ ಸರ್ಕಾರ ಉದ್ಯಮಿಗಳ ಬಗ್ಗೆ ಮಾತ್ರ ಚಿಂತೆ ಮಾಡುತ್ತಿದೆ. ರೈತರ ಬಗ್ಗೆ ಸರ್ಕಾರಕ್ಕೆ ಚಿಂತೆ ಇಲ್ಲ. ಅಧಿಕಾರಕ್ಕೆ ಬರುವ ಮೊದಲು ನೀಡಿದ್ದ ಯಾವುದೇ ಭರವಸೆ ಈಡೇರಿಸಿಲ್ಲ. ಈಗ ನಮ್ಮ ಮಾತನ್ನೂ ಕೇಳುತ್ತಿಲ್ಲ ಎಂದು ಹಜಾರೆ ವಾಗ್ದಾಳಿ ನಡೆಸಿದರು.

ಉಪವಾಸ ಕೂರುವುದು ಖಚಿತ. ನನಗೆ 80 ವರ್ಷ ವಯಸ್ಸು. ಬಹಳಷ್ಟು ಜನರು ಹೃದಯಾಘಾತದಿಂದ ಸಾಯುತ್ತಾರೆ.  ಉಪವಾಸದಿಂದ ನನ್ನ ಪ್ರಾಣ ಅಂದು ಹೋದರೂ ಚಿಂತೆ ಇಲ್ಲ. ರೈತರಿಗಾಗಿ ನೆಮ್ಮದಿಯಿಂದ ಸಾಯುತ್ತೇನೆ ಎಂದು ಅಣ್ಣಾ ಹೇಳಿದರು.

ಉದ್ಯಮಿಗಳು ಉದ್ಯಮದಲ್ಲಿ  ನಷ್ಟವಾಗಿ ಆತ್ಮಹತ್ಯೆ ಮಾಡಿಕೊಂಡ ಉದಾಹರಣೆ ಜಗತ್ತಿನಲ್ಲಿ ಇಲ್ಲ. ದೇಶದಲ್ಲಿ 12 ಲಕ್ಷ ರೈತರು ಆತ್ಮಹತ್ಯೆ ಮಾಡಿಕೊಂಡಿರುವ ಪಟ್ಟಿ ಇದೆ. ರೈತರು ಕೃಷಿಗೆ ಮಾಡಿದ ಖರ್ಚಿಗೆ ತಕ್ಕ ಆದಾಯ ಸಿಗಬೇಕು‌. ಎಲ್ಲ ರಾಜ್ಯಗಳಲ್ಲಿ ಬೆಂಬಲ ಬೆಲೆ ಆಯೋಗ ಇದೆ. ಕೇಂದ್ರದಲ್ಲೂ ಕೃಷಿ ಆಯೋಗ ಇದೆ. ಆದರೆ, ರಾಜ್ಯ ಆಯೋಗಗಳು ಕಳುಹಿಸುವ ವರದಿಯಲ್ಲಿ ಬೆಂಬಲ ಬೆಲೆಗೆ ಕೇಂದ್ರದ ಅಧಿಕಾರಿಗಳು ಶೇ‌ 50ರಷ್ಟು ಕತ್ತರಿ ಹಾಕುತ್ತಾರೆ ಎಂದು ಹಜಾರೆ ಕಿಡಿಕಾರಿದರು.

ನ್ಯಾಷನಲ್ ಕಾಲೇಜು ಮೈದಾನದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಬುಧವಾರ ಆಯೋಜಿಸಿದ್ದ ರೈತರ ಬೃಹತ್ ಸಮಾವೇಶವನ್ನು ಅಣ್ಣಾ ಹಜಾರೆ ಉದ್ಘಾಟಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry