ಕಸದ ಸಮಸ್ಯೆಗೆ ಸಿಕ್ಕಿಲ್ಲ ಪರಿಹಾರ

7

ಕಸದ ಸಮಸ್ಯೆಗೆ ಸಿಕ್ಕಿಲ್ಲ ಪರಿಹಾರ

Published:
Updated:
ಕಸದ ಸಮಸ್ಯೆಗೆ ಸಿಕ್ಕಿಲ್ಲ ಪರಿಹಾರ

ಕಡೂರು: ರಸ್ತೆ ಬದಿಯೇ ಕಸದ ರಾಶಿ.. ಅದರ ತುಂಬಾ ಪ್ಲಾಸ್ಟಿಕ್ ಕವರ್‌ಗಳು. ಅದನ್ನು ತಿನ್ನುತ್ತಿರುವ ಬೀಡಾಡಿ ದನಗಳು, ಅದರ ಪಕ್ಕ ಹೋದರೆ ದುರ್ವಾಸನೆಯಿಂದ ಮೂಗು ಮುಚ್ಚಿಕೊಳ್ಳುವಂತಹ ಪರಿಸ್ಥಿತಿ.

ಇವು ಕಡೂರಿನಲ್ಲಿ ಎಲ್ಲೆಡೆಯಲ್ಲಿಯೂ ಕಂಡು ಬರುವ ದೃಶ್ಯಗಳು. ಎಲ್ಲೆಲ್ಲೂ ಕಸದ ರಾಶಿಯೇ ಕಂಡು ಬಂದರೂ ಪುರಸಭೆ ಅದರತ್ತ ಗಮನ ಹರಿಸಿಲ್ಲ ಎಂಬುದು ಸಾರ್ವಜನಿಕರ ಅಸಮಾಧಾನಕ್ಕೆ ಕಾರಣವಾಗಿದೆ.

ಪಟ್ಟಣದಲ್ಲಿ ಪ್ರತಿದಿನವೂ ಸಂಗ್ರಹವಾಗುವ ತ್ಯಾಜ್ಯವನ್ನು ಪುರಸಭೆ ಸಮರ್ಪಕವಾಗಿ ವಿಲೇವಾರಿ ಮಾಡುತ್ತಿಲ್ಲ ಎಂಬುದಕ್ಕೆ ಹತ್ತಾರು ಕಡೆ ಉದಾಹರಣೆಗಳು ಸಿಗುತ್ತವೆ.  ಪ್ರವಾಸಿ ಮಂದಿರದ ರಸ್ತೆಯಲ್ಲಿ ನರ್ಸಿಂಗ್ ಹೋಂ ಮುಂಭಾಗ, ಸರ್ಕಲ್‌ ಇನ್‌ಸ್ಪೆಕ್ಟರ್‌ ಕಚೇರಿಯ ಪಕ್ಕ, ಶನಿದೇವರ ದೇವಸ್ಥಾನಕ್ಕೆ ಹೋಗುವ ರಸ್ತೆ ಸೇರಿದಂತೆ ಹಲವು ಕಡೆ ತ್ಯಾಜ್ಯದ ರಾಶಿ ಹಾಗೆಯೇ ಬಿದ್ದಿರುವುದು ನಿತ್ಯನೋಟವಾಗಿದೆ.

ಆದರೆ ಕಡೂರಿಗೆ ಯಾರೇ ಮಂತ್ರಿ ಮಹೋದಯರು ಬಂದರೂ ಅವರು ಸಂಚರಿಸುವ ಮಾರ್ಗದಲ್ಲಿ ಪವಾಡವೆಂಬಂತೆ ಶುಚಿಯಾಗಿರುತ್ತದೆ. ಇದಕ್ಕೆ ಕಾರಣ ಕಡೂರು ಪುರಸಭೆಯಲ್ಲಿ ಪೌರಕಾರ್ಮಿಕರ ಕೊರತೆ ತೀವ್ರವಾಗಿದೆ. ಕೆಲವೇ ಮಂದಿ ಕಾಯಂ ನೌಕರರು ಇದ್ದಾರೆ. ಉಳಿದವರನ್ನು ಗುತ್ತಿಗೆ ಆಧಾರದಲ್ಲಿ ನೇಮಿಸಿಕೊಳ್ಳಲಾಗಿದೆ.

‘ದೊಡ್ಡಮಟ್ಟದ ಕಾರ್ಯಕ್ರಮಗಳು, ಹಬ್ಬ ಹರಿದಿನಗಳು ನಿರಂತರವಾಗಿ ನಡೆಯುತ್ತಿವೆ. ಇದರಿಂದ ಕಸದ ಸಮಸ್ಯೆ ಹೆಚ್ಚಾಗಿ ಸಮರ್ಪಕ ವಿಲೇ ಸಾಧ್ಯವಾಗುತ್ತಿಲ್ಲ. ಪಟ್ಟಣ ಬೆಳೆಯುತ್ತಿದೆ. ಅದಕ್ಕೆ ತಕ್ಕಂತೆ ಸಿಬ್ಬಂದಿ ಹಾಗೂ ಪೌರ ಕಾರ್ಮಿಕರು ಇಲ್ಲ. ಇರುವವರನ್ನು ಮುಕ್ತಿವಾಹಿನಿ ಮತ್ತು ಪುರಸಭೆಯ ವಾಹನ ಚಾಲಕರನ್ನಾಗಿಯೂ ಬಳಸಿಕೊಳ್ಳಲಾಗುತ್ತಿದೆ. ಈ ಕುರಿತು ಹೆಚ್ಚಿನ ಸಿಬ್ಬಂದಿ ನೇಮಕಾತಿಗಾಗಿ ಜಿಲ್ಲಾಧಿಕಾರಿಗಳಿಗೂ ಪ್ರಸ್ತಾವನೆ ಕಳುಹಿಸಲಾಗಿದೆ’ ಎನ್ನುತ್ತಾರೆ ಪುರಸಭಾ ಸದಸ್ಯ ಎಂ.ಸೋಮಶೇಖರ್.

‘ಬೀರೂರು ಪುರಸಭೆಯಲ್ಲಿ ಪ್ರತಿನಿತ್ಯದ ತ್ಯಾಜ್ಯವನ್ನು ಸಂಗ್ರಹಿಸಲು ಗಾಡಿಗಳ ವ್ಯವಸ್ಥೆ ಮಾಡಲಾಗಿದ್ದು, ನಿರ್ವಹಣೆ ಸಮರ್ಪಕವಾಗಿದೆ. ಕಡೂರು ಪಟ್ಟಣದಲ್ಲಿ ಪ್ರತಿನಿತ್ಯದ ತ್ಯಾಜ್ಯವನ್ನು ಸಂಗ್ರಹಿಸಿ ಹಸಿ ಮತ್ತು ಒಣತ್ಯಾಜ್ಯಗಳನ್ನು ವಿಂಗಡಿಸಿ ಅದನ್ನು ಸಾವಯವ ಗೊಬ್ಬರವನ್ನಾಗಿ ಪರಿವರ್ತಿಸುವ ಯೋಜನೆಯೊಂದನ್ನು ಪುರಸಭೆ ಹಾಕಿಕೊಂಡಿದೆ. ಬಹುಶಃ ಇದು ರಚನಾತ್ಮಕವಾದ ಕ್ರಮವಾಗಿದ್ದು, ಇದು ಅನುಷ್ಠಾನವಾಗಲು ಸಾರ್ವಜನಿಕರ ಸಹಕಾರವೂ ಅತ್ಯಂತ ಅಗತ್ಯ ಎಂಬುದು’ ಅವರ ಅಭಿಪ್ರಾಯ

ಪಟ್ಟಣದಲ್ಲಿ ಕಸದ ಸಮಸ್ಯೆಯನ್ನು ಪುರಸಭೆ ಶೀಘ್ರವೇ ಪರಿಹರಿಸಲು ಮುಂದಾಗಬೇಕು ಎಂಬುದು ಸಾರ್ವಜನಿಕರ ಆಶಯವಾಗಿದೆ.

ಬಾಲುಮಚ್ಚೇರಿ,ಕಡೂರು

ಅಂಕಿ ಅಂಶ

32 ಪೌರ ಕಾರ್ಮಿಕರು

17 ಮಂದಿ ಕಾಯಂ ನೌಕರರು

* * 

ಕಸವನ್ನು ಸಂಗ್ರಹಿಸಿ ವಿಲೇವಾರಿ ಮಾಡಲು ಕ್ರಿಯಾಯೋಜನೆ ತಯಾರಿಸಿ ಅನುಮೋದನೆಗಾಗಿ ಜಿಲ್ಲಾಧಿಕಾರಿಗಳಿಗೆ ಕಳುಹಿಸಲಾಗಿದೆ. ಬಂದ ಕೂಡಲೇ ಕಸದ ಸಮಸ್ಯೆಗೆ ಶಾಶ್ವತ ಪರಿಹಾರ ದೊರೆಯಲಿದೆ.

ಎಂ.ಮಾದಪ್ಪ, ಅಧ್ಯಕ್ಷ, ಕಡೂರು ಪುರಸಭೆ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry