ಸಮಾಜ ಸೇವೆ, ಹಳ್ಳಿ, ಕೃಷಿಕರ ಕಲ್ಯಾಣಕ್ಕಾಗಿ ಜೀವನ ಮುಡಿಪು

5

ಸಮಾಜ ಸೇವೆ, ಹಳ್ಳಿ, ಕೃಷಿಕರ ಕಲ್ಯಾಣಕ್ಕಾಗಿ ಜೀವನ ಮುಡಿಪು

Published:
Updated:
ಸಮಾಜ ಸೇವೆ, ಹಳ್ಳಿ, ಕೃಷಿಕರ ಕಲ್ಯಾಣಕ್ಕಾಗಿ ಜೀವನ ಮುಡಿಪು

ಚಿತ್ರದುರ್ಗ: ಕಮ್ಯುನಿಟಿ ಕಲ್ಯಾಣ ಮಹೋತ್ಸವ್ ಕೈಸಾ ಚಲ್ ರಹಾ ಹೇ ಸ್ವಾಮೀಜಿ...? ಆಪ್ ಸಮಾಜ್ ಸೇವಾ ಕೈಸಾ ಹೈ.. ಓಹೋ.. ಆರಾಮ್ಸೆ ಹೇ ನಾ... ಅಚ್ಚಾ... ಅಚ್ಚಾ ..

ಶ್ವೇತ ವರ್ಣದ ಬಟ್ಟೆ ತೊಟ್ಟು, ನಗುಮೊಗದೊಂದಿಗೆ ಹೆಜ್ಜೆ ಹಾಕುತ್ತಾ ಮುರುಘಾಮಠದ ಅಂಗಳ ಪ್ರವೇಶಿಸಿದ ಹಿರಿಯ ಗಾಂಧಿವಾದಿ ಅಣ್ಣಾ ಹಜಾರೆ   ಅವರು ಶಿವಮೂರ್ತಿ ಶರಣರ ಪಕ್ಕದಲ್ಲಿ ಕುಳಿತು ಶ್ರೀಮಠದ ಸಾಮೂಹಿಕ ಕಲ್ಯಾಣ ಮಹೋತ್ಸವದ ಬಗ್ಗೆ ಆಸಕ್ತಿಯಿಂದ ಕೇಳಿದರು. ತುಮಕೂರಿನಿಂದ ಪುಣೆಯತ್ತ ತೆರಳುವಾಗ ಮಾರ್ಗ ಮಧ್ಯೆ ಮಂಗಳವಾರ ಶ್ರೀಮಠಕ್ಕೆ ಭೇಟಿ ನೀಡಿ ಶ್ರೀಗಳಿಂದ ಸನ್ಮಾನ ಸ್ವೀಕರಿಸಿದರು.

ಅಣ್ಣಾ ಹಜಾರೆ ಅವರ ಮಾತುಗಳಿಗೆ ಪ್ರತಿಕ್ರಿಯಿಸಿದ ಮುರುಘಾ ಶರಣರು, ’ಸಾಮೂಹಿಕ ಕಲ್ಯಾಣ ಮಹೋತ್ಸವ ನಿರಂತರವಾಗಿ ನಡೆಯುತ್ತಿದೆ. ಪ್ರತಿ ತಿಂಗಳ 5ನೇ ತಾರೀಖು ತಪ್ಪದೇ ಕಾರ್ಯಕ್ರಮ ಆಯೋಜಿಸುತ್ತಿದ್ದೇವೆ. ಈ ವಿವಾಹ ಮಹೋತ್ಸವಕ್ಕೆ ಈಗ 27 ವರ್ಷ ತುಂಬಿದೆ’ ಎಂದು ಮಾಹಿತಿ ನೀಡಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅಣ್ಣಾ ಹಜಾರೆ, ‘ಶ್ರೀಮಠದ ಸ್ವಾಮೀಜಿ ಸಾಮೂಹಿಕ ಕಲ್ಯಾಣ ಮಹೋತ್ಸವ, ಶೈಕ್ಷಣಿಕ ಸೇವೆಯಂತಹ ಜನೋಪಯೋಗಿ ಕಾರ್ಯಗಳನ್ನು ಮಾಡುತ್ತಿದ್ದಾರೆ. ಹಾಗೆಯೇ ನಾನೂ ನನ್ನ ಜೀವನವನ್ನು ಜನಸೇವೆಗೆ ಮುಡುಪಾಗಿಟ್ಟಿದ್ದೇನೆ. 25 ನೇ ವಯಸ್ಸಿನಿಂದಲೇ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿದ್ದೇನೆ. ಜನ ಸೇವೆ ಎನ್ನುವುದು ಜನಾರ್ದನನ ಸೇವೆ ಎಂಬ ನಂಬಿಕೆ ನನ್ನದು’ ಎಂದರು.

‘ಜನ ಸೇವೆಗಾಗಿ ದೇಶದಾದ್ಯಂತ ಆಂದೋಲನ ರೂಪಿಸಿದ್ದೆ. ನನ್ನ ಆಂದೋಲ ವ್ಯಕ್ತಿ, ಪಕ್ಷದ ವಿರುದ್ಧ ಅಲ್ಲ. ನನ್ನದು ಜನಪರ ಹೋರಾಟ. ಎಂಟು ವರ್ಷಗಳ ಹಿಂದೆ ಮಾಹಿತಿ ಹಕ್ಕು ಕಾಯ್ದೆಗಾಗಿ ಹೋರಾಟ ನಡೆಸಿದೆ. ಜನಲೋಕಪಾಲ್, ಲೋಕಾಯುಕ್ತಕ್ಕಾಗಿ ಚಳವಳಿ ನಡೆಸಿದೆ. ಇದೆಲ್ಲ ಜನರಿಗಾಗಿ ನಡೆಸಿದ ಹೋರಾಟ’ ಎಂದು ವಿವರಣೆ ನೀಡಿದರು.

ದೇಶದ ಕೃಷಿ ಕ್ಷೇತ್ರ ಬಿಕ್ಕಟ್ಟಿನಲ್ಲಿದೆ. ಜೀವನ ಪೂರ್ತಿ ದೇಶಕ್ಕೆ ಅನ್ನ ನೀಡುತ್ತಿರುವ ಅನ್ನದಾತರು ಸಂಕಷ್ಟದಲ್ಲಿದ್ದಾರೆ. ಕೃಷಿಯಲ್ಲಿ ನಷ್ಟ ಉಂಟಾದ ಕಾರಣ 15 ಲಕ್ಷಕ್ಕೂ ಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆಳುವ ಸರ್ಕಾರಗಳಿಗೆ ರೈತರ ಬಗ್ಗೆ ಕಾಳಜಿಯಿಲ್ಲ. ಅವರ ಸಂಕಷ್ಟಕ್ಕೂ ಸ್ಪಂದಿಸುತ್ತಿಲ್ಲ’ ಎಂದು ಸರ್ಕಾರಗಳ ವಿರುದ್ಧ ಹರಿ ಹಾಯ್ದರು.

’ರೈತರ ಸಂಕಷ್ಟ ನಿವಾರಿಸಲು, ಕೃಷಿ ಉತ್ಪನ್ನಗಳಿಗೆ ಉತ್ತಮ ಬೆಲೆ ನೀಡಬೇಕು. ಕೃಷಿಕರು ವ್ಯವಸಾಯಕ್ಕೆ ಖರ್ಚು ಮಾಡುವ ಹಣಕ್ಕಿಂತ ಒಂದೂವರೆ ಪಟ್ಟು ಹೆಚ್ಚು ಬೆಲೆ ನೀಡಬೇಕು. ಆಗಷ್ಟೇ ರೈತರು ತಮ್ಮ ನಷ್ಟವನ್ನು ಸರಿದೂಗಿಸಿಕೊಂಡು ಜೀವನ ನಡೆಸಲು ಸಾಧ್ಯವಾಗುತ್ತದೆ. ಆತ್ಮಹತ್ಯೆ ಪ್ರಕರಣಗಳು ತಗ್ಗುತ್ತವೆ. ರೈತರ ಇಂಥ ಹಲವು ಬೇಡಿಕೆಗಳನ್ನು ಇಟ್ಟುಕೊಂಡು, ಮಾರ್ಚ್ 23ರಿಂದ ದೆಹಲಿಯ ರಾಮ್ ಲೀಲಾ ಮೈದಾನದಲ್ಲಿ ಬೃಹತ್ ಆಂದೋಲನ ನಡೆಸುತ್ತಿದ್ದೇನೆ’ ಎಂದು ತಿಳಿಸಿದರು.

ಎಸಿ ಕೊಠಡಿಯಲ್ಲಿರುವವರಿಗೆ ರೈತರ ಕಷ್ಟ ಹೇಗೆ ಗೊತ್ತಾಗಬೇಕು: ಅಣ್ಣಾ ಪ್ರಶ್ನೆ

ಪ್ರತಿ ರಾಜ್ಯದ ಕೃಷಿಯ ಖರ್ಚು ವೆಚ್ಚಗಳನ್ನು ಆಯಾ ಕೃಷಿ ವಿಶ್ವವಿದ್ಯಾಲಯದ ವಿಜ್ಞಾನಿಗಳುದೆಹಲಿಯ ಕೃಷಿ ಮಂಡಳಿ ಆಯೋಗಕ್ಕೆ ಕಳಿಸುತ್ತಾರೆ. ಮಂಡಳಿಯ ಹವಾನಿಯಂತ್ರಿತ ಕೊಠಡಿಯಲ್ಲಿ ಕುಳಿತಿರುವವರು, ಈ ಖರ್ಚು ವೆಚ್ಚವನ್ನು ಶೇ 50ರಷ್ಟು ಕಡಿತಗೊಳಿಸುತ್ತಾರೆ. ಅವರೇಕೆ ಖರ್ಚು ಕಡಿಮೆ ಮಾಡಬೇಕು. ಕೃಷಿಕರ ಕಷ್ಟ ಎಸಿ ರೂಮ್‌ನಲ್ಲಿರುವವರಿಗೆ ಹೇಗೆ ಗೊತ್ತಾಗುತ್ತದೆ ? ಎಂದು ಅಣ್ಣಾ ಹಜಾರೆ ಪ್ರಶ್ನಿಸಿದರು.

‘60 ವರ್ಷದ ರೈತರಿಗೆ ಪಿಂಚಣಿ ಕೊಡಬೇಕು’

ಇಡೀ ಜೀವನವನ್ನೇ ದೇಶಕ್ಕೆ ಅನ್ನ ನೀಡಲು ಮೀಸಲಿಟ್ಟ ಕೃಷಿಕರ ಮನೆಗಳಲ್ಲಿ ಯಾರೂ ವೇತನ ತರುವ ಉದ್ಯೋಗದಲ್ಲಿರುವುದಿಲ್ಲ. ಹಾಗಾಗಿ 60 ವರ್ಷದ ನಂತರ ಅವರನ್ನು ಯಾರು ನೋಡಿಕೊಳ್ಳುತ್ತಾರೆ. ದೇಶ ಸೇವೆಗೆ ನಿಲ್ಲುವ ರೈತರ ಹಿತ ಕಾಯುವುದು ಸರ್ಕಾರದ ಜವಾಬ್ದಾರಿ. ಹಾಗೆಂದು ಸಂವಿಧಾನದಲ್ಲಿ ಹೇಳಿದೆ. ಹಾಗಾಗಿ 60 ವರ್ಷ ದಾಟಿದ ರೈತರಿಗೆ ಸರ್ಕಾರ ₹5ಸಾವಿರ ಪಿಂಚಣಿ ಕೊಡಬೇಕು ಎಂದು ಆಂದೋಲನದ ವೇಳೆ ಒತ್ತಾಯಿಸುತ್ತಿದ್ದೇವೆ’ ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry