4

ರಾಜಕೀಯ ಪಕ್ಷಗಳಿಂದ ಪ್ರಜಾಪ್ರಭುತ್ವಕ್ಕೆ ಧಕ್ಕೆ

Published:
Updated:
ರಾಜಕೀಯ ಪಕ್ಷಗಳಿಂದ ಪ್ರಜಾಪ್ರಭುತ್ವಕ್ಕೆ ಧಕ್ಕೆ

ಕೋಲಾರ: ‘ಸಮಾಜದಲ್ಲಿ ಶಾಂತಿ ಕಾಪಾಡಬೇಕಾದ ರಾಜಕೀಯ ಪಕ್ಷಗಳೇ ಕೋಮುಗಲಭೆ ಸೃಷ್ಟಿಸುವ ಮೂಲಕ ಪ್ರಜಾಪ್ರಭುತ್ವ ವ್ಯವಸ್ಥೆಗೆ ಧಕ್ಕೆ ಉಂಟು ಮಾಡುತ್ತಿವೆ’ ಎಂದು ಸುಪ್ರೀಂ ಕೋರ್ಟ್‌ ನಿವೃತ್ತ ನ್ಯಾಯಮೂರ್ತಿ ವಿ.ಗೋಪಾಲಗೌಡ ಕಳವಳ ವ್ಯಕ್ತಪಡಿಸಿದರು.

ಸೌಹಾರ್ದತೆಗಾಗಿ ಕರ್ನಾಟಕ ಸಂಘಟನೆಯು ನಗರದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಮಾನವ ಸರಪಳಿ ಆಂದೋಲನದಲ್ಲಿ ಮಾತನಾಡಿ, ಕೇಂದ್ರ ಮತ್ತು ರಾಜ್ಯ ಸರ್ಕಾರ ಶಾಸನಬದ್ಧ ಅಧಿಕಾರವನ್ನು ದುರ್ಬಳಕೆ ಮಾಡಿಕೊಂಡು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಅಶಾಂತಿ ಸೃಷ್ಟಿಸುತ್ತಿವೆ ಎಂದು ಬೇಸರ ವ್ಯಕ್ತಪಡಿಸಿದರು.

ಸಂವಿಧಾನದ ತಾತ್ಪರ್ಯ ಅರ್ಥ ಮಾಡಿಕೊಳ್ಳದ ಕೆಲವರು ಅದರ ವಿರುದ್ಧವಾಗಿ ಮಾತನಾಡುತ್ತಿದ್ದಾರೆ. ದೇಶದ ಆಗುಹೋಗುಗಳನ್ನು ಗಮನಿಸಿದರೆ ಪ್ರಜಾಪ್ರಭುತ್ವ ವ್ಯವಸ್ಥೆಗೆ ಅಪಾಯ ಎದುರಾಗಿದೆ ಎನಿಸುತ್ತಿದೆ ಎಂದು ಪರೋಕ್ಷವಾಗಿ ಕೇಂದ್ರ ಸಚಿವ ಅನಂತಕುಮಾರ್‌ ಹೆಗಡೆ ವಿರುದ್ಧ ವಾಗ್ದಾಳಿ ನಡೆಸಿದರು.

ಸಂವಿಧಾನ ಮತ್ತು ಸಮಾಜದಲ್ಲಿ ಅಲ್ಪಸಂಖ್ಯಾತ ಸಮುದಾಯಗಳಿಗೆ ರಕ್ಷಣೆಯಿದೆ. ಹೀಗಾಗಿ ಈ ಸಮುದಾಯಗಳನ್ನು ಕಡೆಗಣಿಸುವ ಪ್ರಮೇಯವೇ ಬರುವುದಿಲ್ಲ. ಕೆಲ ಮಂದಿ ಜನರನ್ನು ದಿಕ್ಕು ತಪ್ಪಿಸುವುದರ ಜತೆಗೆ ದ್ವಂದ್ವ ಹೇಳಿಕೆ ನೀಡುತ್ತಾ ಕೋಮುಗಲಭೆ ಸೃಷ್ಟಿಸುತ್ತಿದ್ದಾರೆ. ಆ ಕೋಮುವಾದಿಗಳ ಬಗ್ಗೆ ಜನರನ್ನು ಜಾಗೃತಗೊಳಿಸಬೇಕು ಎಂದು ಕರೆ ನೀಡಿದರು.

ಅಶಾಂತಿಯ ಹುನ್ನಾರ: ಚುನಾವಣೆ ಮೂಲಕ ಅಧಿಕಾರ ಗಿಟ್ಟಿಸಿಕೊಂಡ ನಂತರ ಸಮಾಜಕ್ಕೆ ಧಕ್ಕೆ ಉಂಟಾಗುವಂತಹ ಅಶಾಂತಿ ಸೃಷ್ಟಿಸುವ ಹುನ್ನಾರ ರಾಜಕೀಯ ಪಕ್ಷಗಳಿಂದಲೇ ಆಗುತ್ತಿದೆ. ರಾಜಕೀಯ ಪಕ್ಷಗಳು ಶಾಸನಬದ್ಧ ಆಳ್ವಿಕೆಯಲ್ಲಿ ಗಲಭೆ ಎಬ್ಬಿಸಿ ಅಲ್ಪಸಂಖ್ಯಾತರಲ್ಲಿ ಭಯ ಮೂಡಿಸಲು ಮುಂದಾಗಿವೆ ಎಂದು ಮಾರ್ಮಿಕವಾಗಿ ನುಡಿದರು.

ಜನಪರ ಕಾಳಜಿ ಇಲ್ಲದೆ ಮನುಷ್ಯರ ಹಕ್ಕುಗಳನ್ನು ಕಸಿದುಕೊಳ್ಳವಂತಹ ಕೋಮುಗಲಭೆ ನಿರ್ಮಾಣ ಮಾಡುವ ಜನರಿಗೆ ಬುದ್ಧಿ ಹೇಳಬೇಕು ಎಂದು ಸಲಹೆ ನೀಡಿದರು.

ವಿಷ ಬೀಜ: ‘ಶಾಂತಿ, ಸಹಬಾಳ್ವೆಗೆ ವಿಶ್ವಕ್ಕೆ ಮಾದರಿಯಾಗಿರುವ ಭಾರತದಲ್ಲಿ ಹಿಂದೂ ಮತ್ತು ಮುಸ್ಲಿಂ ಸಮುದಾಯಗಳು ನೆಮ್ಮದಿಯ ಜೀವನ ನಡೆಸುತ್ತಿವೆ. ಆದರೆ, ಪಕ್ಷಗಳು ಹಾಗೂ ದುಷ್ಟ ಶಕ್ತಿಗಳು ರಾಜಕೀಯ ಲಾಭಕ್ಕಾಗಿ ಧರ್ಮ ಪರಂಪರೆಯನ್ನು ಛಿದ್ರಗೊಳಿಸಿ ಜಾತಿ ಮತ್ತು ಧರ್ಮಗಳ ಮಧ್ಯೆ ವಿಷ ಬೀಜ ಬಿತ್ತುತ್ತಿವೆ’ ಎಂದು ನಿಡುಮಾಮಿಡಿ ಮಠದ ವೀರಭದ್ರ ಚನ್ನಮಲ್ಲ ಸ್ವಾಮೀಜಿ ಅಸಮಾಧಾನ ವ್ಯಕ್ತಪಡಿಸಿದರು.

ಸಮಾಜದಲ್ಲಿ ಅಲ್ಪಸಂಖ್ಯಾತರನ್ನು ಕಡೆಗಣಿಸುವ ಮೂಲಕ ಅವರಲ್ಲಿ ಭಯದ ವಾತಾವರಣ ಸೃಷ್ಟಿಸುವ ಪ್ರಯತ್ನ ಸರ್ಕಾರಗಳಿಂದಲೇ ಆಗುತ್ತಿದೆ. ಸಂವಿಧಾನವನ್ನು ಬುಡಮೇಲು ಮಾಡಿ ರಾಜಕೀಯ ಪಕ್ಷಗಳು ಅಧಿಕಾರಕ್ಕೆ ಬರಲು ಸಾಧ್ಯವಿಲ್ಲ. ಶ್ರೀರಾಮ ರಾಜ್ಯ ಮಾಡಲು ಹೋಗಿ ಇಂದು ಅರಾಮ ರಾಜ್ಯವಾಗಿ ಮಾಡಲಾಗುತ್ತಿದೆ. ಇದರ ವಿರುದ್ಧ ಧ್ವನಿ ಎತ್ತದಿದ್ದರೆ ಭವಿಷ್ಯದಲ್ಲಿ ದೊಡ್ಡ ಗಂಡಾಂತರ ಕಾದಿದೆ ಎಂದು ಆತಂಕ ವ್ಯಕ್ತಪಡಿಸಿದರು.

ಸೌಹಾರ್ದ ಕರ್ನಾಟಕಕ್ಕಾಗಿ ರಾಜ್ಯದೆಲ್ಲೆಡೆ ನಡೆಯುತ್ತಿರುವ ಮಾನವ ಸರಪಳಿ ಆಂದೋಲನದಲ್ಲಿ ಹಿಂದೂ, ಮುಸ್ಲಿಂ, ಕ್ರೈಸ್ತ ಸಮುದಾಯದ ಮುಖಂಡರು ಹಾಗೂ ವಿವಿಧ ಸಂಘ ಸಂಸ್ಥೆಗಳ ಸದಸ್ಯರು ಮತ್ತು ವಿದ್ಯಾರ್ಥಿಗಳು ಪಾಲ್ಗೊಂಡು ಯಶಸ್ವಿಗೊಳಿಸಿದ್ದಾರೆ ಎಂದು ಸಂತಸ ವ್ಯಕ್ತಪಡಿಸಿದರು.

ಮಾನವ ಸರಪಳಿ: ನಗರದ ಡೂಂಲೈಟ್ ವೃತ್ತದಿಂದ ಕ್ಲಾಕ್‌ ಟವರ್, ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ ವೃತ್ತ, ಅಮ್ಮವಾರಿಪೇಟೆ ವೃತ್ತದ ಮಾರ್ಗವಾಗಿ ಮೆಕ್ಕೆ ವೃತ್ತದವರೆಗೆ ವಿದ್ಯಾರ್ಥಿಗಳು ಮಾನವ ಸರಪಳಿ ರಚಿಸಿದ್ದರು. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷ ನಾಗಾನಂದ ಕೆಂಪರಾಜ್, ರಾಜ್ಯ ಜಾನಪದ ಅಕಾಡೆಮಿ ಮಾಜಿ ಅಧ್ಯಕ್ಷ ಪಿಚ್ಚಳ್ಳಿ ಶ್ರೀನಿವಾಸ್, ದಲಿತ ಮುಖಂಡ ಸಿ.ಎಂ.ಮುನಿಯಪ್ಪ, ಸಾಹಿತಿಗಳಾದ ಲಕ್ಷ್ಮೀಪತಿ ಕೋಲಾರ, ಚಂದ್ರಶೇಖರ್‌ ನಂಗಲಿ, ಜನವಾದಿ ಮಹಿಳಾ ಸಂಘಟನೆ ರಾಜ್ಯ ಘಟಕದ ಅಧ್ಯಕ್ಷೆ ವಿ.ಗೀತಾ, ನಗರಸಭಾ ಸದಸ್ಯರಾದ ಅಫ್ರೋಜ್‌ ಪಾಷಾ, ಸಾದಿಕ್‌, ನದೀಮ್ ಪಾಲ್ಗೊಂಡಿದ್ದರು.

ಧರ್ಮದ ಹೆಸರಲ್ಲಿ ವಿಷ ಬೀಜ ಬಿತ್ತನೆ

‘ಶಾಂತಿ, ಸಹಬಾಳ್ವೆಗೆ ವಿಶ್ವಕ್ಕೆ ಮಾದರಿಯಾಗಿರುವ ಭಾರತದಲ್ಲಿ ಹಿಂದೂ ಮತ್ತು ಮುಸ್ಲಿಂ ಸಮುದಾಯಗಳು ನೆಮ್ಮದಿಯ ಜೀವನ ನಡೆಸುತ್ತಿವೆ. ಆದರೆ, ಪಕ್ಷಗಳು ಹಾಗೂ ದುಷ್ಟ ಶಕ್ತಿಗಳು ರಾಜಕೀಯ ಲಾಭಕ್ಕಾಗಿ ಧರ್ಮ ಪರಂಪರೆಯನ್ನು ಛಿದ್ರಗೊಳಿಸಿ ಜಾತಿ ಮತ್ತು ಧರ್ಮಗಳ ಮಧ್ಯೆ ವಿಷ ಬೀಜ ಬಿತ್ತುತ್ತಿವೆ’ ಎಂದು ನಿಡುಮಾಮಿಡಿ ಮಠದ ವೀರಭದ್ರ ಚನ್ನಮಲ್ಲ ಸ್ವಾಮೀಜಿ ಅಸಮಾಧಾನ ವ್ಯಕ್ತಪಡಿಸಿದರು.

ಸಮಾಜದಲ್ಲಿ ಅಲ್ಪಸಂಖ್ಯಾತರನ್ನು ಕಡೆಗಣಿಸುವ ಮೂಲಕ ಅವರಲ್ಲಿ ಭಯದ ವಾತಾವರಣ ಸೃಷ್ಟಿಸುವ ಪ್ರಯತ್ನ ಸರ್ಕಾರಗಳಿಂದಲೇ ಆಗುತ್ತಿದೆ. ಸಂವಿಧಾನವನ್ನು ಬುಡಮೇಲು ಮಾಡಿ ರಾಜಕೀಯ ಪಕ್ಷಗಳು ಅಧಿಕಾರಕ್ಕೆ ಬರಲು ಸಾಧ್ಯವಿಲ್ಲ. ಶ್ರೀರಾಮ ರಾಜ್ಯ ಮಾಡಲು ಹೋಗಿ ಇಂದು ಅರಾಮ ರಾಜ್ಯವಾಗಿ ಮಾಡಲಾಗುತ್ತಿದೆ. ಇದರ ವಿರುದ್ಧ ಧ್ವನಿ ಎತ್ತದಿದ್ದರೆ ಭವಿಷ್ಯದಲ್ಲಿ ದೊಡ್ಡ ಗಂಡಾಂತರ ಕಾದಿದೆ ಎಂದು ಆತಂಕ ವ್ಯಕ್ತಪಡಿಸಿದರು.

* * 

ದೇಶದ ಸಂವಿಧಾನವು ಜಾತ್ಯಾತೀತ ಮೂಲತತ್ವದ ಮೇಲೆ ರೂಪುಗೊಂಡಿದೆ. ಸಂವಿಧಾನ ಬದಲಾವಣೆ ಹೇಳಿಕೆ ಒಪ್ಪಲು ಸಾಧ್ಯವಿಲ್ಲ. ರಾಜಕೀಯ ಲಾಭಕ್ಕೆ ಇದು ತಕ್ಕುದಲ್ಲ

ವಿ.ಗೋಪಾಲಗೌಡ

ಸುಪ್ರೀಂ ಕೋರ್ಟ್‌ ನಿವೃತ್ತ ನ್ಯಾಯಮೂರ್ತಿ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry