ದಟ್ಟಡವಿಯ‌ಲ್ಲಿ ದಣಿವರಿಯದೆ...

7

ದಟ್ಟಡವಿಯ‌ಲ್ಲಿ ದಣಿವರಿಯದೆ...

Published:
Updated:
ದಟ್ಟಡವಿಯ‌ಲ್ಲಿ ದಣಿವರಿಯದೆ...

1) ಎಲ್ಲೋ ದಾರಿ ತಪ್ತಿದ್ದೀವಿ ಅನ್ಸುತ್ತೆ...

‘ಶ್... ಕೇಳಿ, ನೀರು ಬೀಳ್ತಿರೋ ಸದ್ದು ಕೇಳ್ತಿದೆ’ ಹೀಗೆಂದು ತುಟಿಗಳ ಮೇಲೆ ಬೆರಳಿಟ್ಟು ಸುಮ್ಮನಿರುವಂತೆ ಸೂಚಿಸಿದೆ. ಅನೂಷಾಗೆ ಈಗ ತಾಳ್ಮೆಗೆಟ್ಟಿತು. ‘ಇದು ಮೂರನೇ ಸಲ ಹೀಗೆ ಹೇಳ್ತಿರೋದು... ಬರೀ ಸುಳ್ಳು... ನೀರೂ ಇಲ್ಲ, ಏನೂ ಇಲ್ಲ... ಎಲ್ಲೋ ದಾರಿ ತಪ್ಪಿದೀವಿ ಅನ್ಸತ್ತೆ... ನನ್ನಿಂದ ಇನ್ನೊಂದು ಹೆಜ್ಜೆನೂ ಮುಂದಿಡಕ್ಕಾಗಲ್ಲ... ನೀವು ಏನಾದ್ರೂ ಮಾಡ್ಕೊಳ್ಳಿ’ ಹೀಗೆ ಹೇಳಿ ಆತು ನಿಂತಿದ್ದ ಮರದ ಬೇರಿನ ಮೇಲೆಯೇ ಕುಳಿತುಬಿಟ್ಟಳು. ಹಣೆ ಮೇಲಿನ ಬೆವರ ಹನಿಯೊಂದು ಮೆಲ್ಲನಿಳಿದು ಕಣ್ಣಂಚಿಗೆ ಸರಿದುನಿಂತಿತ್ತು. ದೊಡ್ಡ ಮರಗಳ ಹಸಿರೆಲೆಗಳ ನಡುವೆ ದಾರಿಮಾಡಿಕೊಂಡು ಬಂದ ಸೂರ್ಯರಶ್ಮಿಯೊಂದು ಸರೀ ಅದರ ಮೇಲೆ ಬಿದ್ದು ಹೊಳೆಯಿಸುತ್ತಿತ್ತು. ಅವಳ ಮುಖದ ಮೇಲಿನ ನಿರಾಸೆಯೂ ಜತೆಗೆ ಸೇರಿ ಅದು ಬೆವರೋ, ಕಣ್ಣಿಂದ ಒಸರಿದ ಕಣ್ಣೀರೋ ಎಂಬ ಗೊಂದಲದಲ್ಲಿಯೇ ನಾವೂ ಸುಮ್ಮನೆ ನಿಂತಿದ್ದೆವು.

ನಮ್ಮ ಮೈ ಹಿಂಡಿ ಹಿಪ್ಪೆ ಮಾಡಿರುವ ದಣಿವಿನೊಟ್ಟಿಗೆ ಮನಸ್ಸಿನ ನಿರಾಸೆಯೂ ಸೇರಿತ್ತು. ಮೌನದ ಪೊರೆಯನ್ನು ಸರಕ್ಕನೆ ಹರಿದು ‘ಹಾ...’ ಎಂದು ಉದ್ಗರಿಸಿ ಅನೂಷಾ ಎದ್ದು ನಿಂತಳು. ಒಂಚೂರು ಗಾಬರಿಯಿಂದಲೇ ಅವಳತ್ತ ನೋಡುತ್ತಿರುವ ಹಾಗೆಯೇ ನಮ್ಮ ಬಲಭಾಗಕ್ಕೆ ಕೈತೋರಿಸಿ ‘ಅಲ್ಲಿ... ಆ ಕಡೆಯಿಂದ.. ನೀರು ಬೀಳ್ತಿರೋ ಸದ್ದು ಕೇಳಿಸ್ತಿದೆ...’ ಎಂದಳು!

ಈ ಸಲ ನಿಜಕ್ಕೂ ನೀರು ಬೀಳುತ್ತಿರುವ ಸದ್ದು ಹತ್ತಿರದಲ್ಲಿಯೇ ಕೇಳಿಸುತ್ತಿತ್ತು. ಅಷ್ಟೊತ್ತಿಗೆ ನಮಗಿಂತ ಕೊಂಚ ಮುಂದೆ ಹೋಗಿದ್ದ ಆದಿತ್ಯ, ಅಶ್ವಿನಿ ಕುಮಾರ್‌ ಮತ್ತು ಗೈಡ್‌ ಧರ್ಮಣ್ಣ ಈ ಮೂವರಲ್ಲಿ ಯಾರೋ ಒಬ್ಬರು ಕೂಗು ಹಾಕಿದ್ದು ಕೇಳಿಸಿತು. ಆ ಕೂಗಿನಲ್ಲಿಯೇ ಜಲಪಾತ ದರ್ಶನವಾದ ಉತ್ಸಾಹ ಎದ್ದು ಕಾಣುತ್ತಿತ್ತು. ಎಲ್ಲರಲ್ಲೂ ಒಮ್ಮೆಲೇ ಉತ್ಸಾಹ ಸಂಚಾರವಾಯ್ತು. ‘ಇನ್ನೊಂದು ಹೆಜ್ಜೆ ಮುಂದಿಡಕ್ಕಾಗಲ್ಲ’ ಎಂದಿದ್ದ ಅನೂಷಾಳೇ ಎಲ್ಲರಿಗಿಂತ ಮುಂದೆ ಕಣಿವೆಯಲ್ಲಿ ಇಳಿಯಲಾರಂಭಿಸಿದಳು...

ಇಲ್ಲೇ ಹತ್ತಿರದಲ್ಲೆಲ್ಲೋ ಅನಿಸಿದರೂ ಜಲಪಾತದ ಬುಡ ತಲುಪಲು ಮತ್ತರ್ಧ ಗಂಟೆಯೇ ಬೇಕಾಯ್ತು. ಆಕಾಶ ಮುರಿದು ಬೀಳದ ಹಾಗೆ ಚಪ್ಪರ ಹಾಕಿ ನಿಂತಿದ್ದ ಎಷ್ಟೆಷ್ಟೋ ಎತ್ತರದ ಮರಗಳ ಹಿಂದಿಂದ ಮೊದಲು ಕಂಡಿದ್ದು ಗಗನಚುಂಬಿ ಪರ್ವತವನ್ನು ಸರೀ ಅರ್ಧಕ್ಕೆ ಸೀಳಿದಂಥ ಸಪಾಟು ಕಲ್ಲುಭಾಗ. ಆ ಕಲ್ಲ ನಡುವೆಯೇ ಬೇರುಗಳೂರಿ ಅಲ್ಲಲ್ಲಿ ತನ್ನ ಬೇರುಗಳನ್ನೇ ಕೈಗಳನ್ನಾಗಿಸಿ ಬಂಡೆಯೊತ್ತಿ ಆಕಾಶಕ್ಕೆ ತಲೆಯೆತ್ತಿ ತ್ರಿಶಂಕು ಸ್ವರ್ಗದಲ್ಲಿ ನಿಂತಿರುವ ಪುಟ್ಟ ಪುಟ್ಟ ಗಿಡಗಂಟಿಗಳು. ಅವುಗಳ ಮೇಲಿಂದ ಹತ್ತಿಯನ್ನು ಹಿಂಜಿ ಪಾರದರ್ಶಕಗೊಳಿಸಿ ಮೇಲಿಂದ ಯಾರೋ ಹರವಿ ಎಸೆಯುತ್ತಿದ್ದಾರೇನೋ ಅನಿಸುವಂಥ ಜಲಧಾರೆ.

ಹಾಲುಬಿಳುಪಿನ ಸಪೂರ ಸಹಸ್ರ ಧಾರೆಗಳು ಮೇಲಿಂದ ಜಿಗಿದು, ಕೆಳಗೆ ಇನ್ನೊಂದು ಕಲ್ಲ ಮೇಲೆ ಮುಗ್ಗರಿಸಿ ಇನ್ನೊಂದಿಷ್ಟು ಅಗಲಗೊಂಡು ಆ ಕಗ್ಗಲ್ಲನ್ನು ಉಜ್ಜಿಕೊಂಡೇ ಮತ್ತೆ ಕೆಳಗಿಳಿದು ಸಾಗುವ ಸನ್ನಿವೇಶ ಪ್ರಕೃತಿಯೇ ಬಿಡಿಸಿದ ಸ್ಲೋಮೋಷನ್‌ನ ಜೀವಂತ ಚಿತ್ರದಂತೆ ಕಾಣುತ್ತಿತ್ತು. ಚೆಲ್ಲುತ್ತಲೇ ಇದ್ದರೂ ಚೆಲ್ಲು ಚೆಲ್ಲು ಅನಿಸದ, ಹಗುರಗೊಂಡಷ್ಟೂ ಗಾಂಭೀರ್ಯವೂ ತುಂಬಿರುವ, ಕಣ್ಣು ನೆಟ್ಟುಕೊಂಡೇ ಇದ್ದರೆ ನೀರು ಕೇಳಗಿಂದ ಮೇಲೆ ಹೋಗುತ್ತಿದೆಯೋ ಹೇಗೆ ಎಂಬ ಭ್ರಮೆ ಹುಟ್ಟಿಸುವ ಆ ಜಲಮಾತೆಯ ಪದತಲದಲ್ಲಿ ನಿಂತ ನಮಗೆ ಕುಣಿಯಬೇಕೆನಿಸಲಿಲ್ಲ, ಕೂಗಬೇಕೆನಿಸ ಲಿಲ್ಲ. ನೀರೆರೆಚಿ, ಕಲ್ಲೆಸೆದು ಆಡಬೇಕೆನಿಸಲಿಲ್ಲ... ಖುಷಿಯೋ, ನೆಮ್ಮದಿಯೋ, ಭಾವುಕತೆಯೋ ತಿಳಿಯದ ಸ್ಥಿತಿಯಲ್ಲಿ ಉಕ್ಕುತ್ತಿರುವ ನೀರಸೆರಗನ್ನು ಕಣ್ಣೊಳಗಿಂದಲೇ ಮನಸೊಳಗೆ ಇಳಿಬಿಟ್ಟು ಕೊಳ್ಳುತ್ತ ನಿಂತೇ ಇದ್ದೆವು ಎಷ್ಟೋ ಹೊತ್ತು...

2) ಅದು ಬೆಳ್ಳಿಗುಂಡಿ ಜಲಪಾತ

ಹೊರಜಗತ್ತಿಗೆ ಅಪರಿಚಿತವೇ ಆಗಿರುವ ದುರ್ಗಮ ದಾರಿಯ ಈ ಜಲಪಾತ ದರ್ಶನ ಚಾರಣದ ನೀಲನಕ್ಷೆ ಹಾಕಿದ್ದು ಆದಿತ್ಯ. ಚಾರಣಕ್ಕೆ ಹೊರಟಿದ್ದು ನಾವು ಆರು ಜನ. ಅಶ್ವಿನಿ ಕುಮಾರ್‌ ಭಟ್‌ ಮತ್ತು ಸಹನಾ ಬಾಳ್ಕಲ್‌ ದಂಪತಿಗೆ ಚಾರಣ ಹೊಸದೇನಲ್ಲ. ನಾನು ಮತ್ತು ಶ್ರುತಿ ಕೂಡ ಈ ಸಲದ ಸಂಕ್ರಾಂತಿಯನ್ನು ಕಾಡಿನ ಮಧ್ಯ ಆಚರಿಸಲು ನಿರ್ಧರಿಸಿ ಅವರ ಗುಂಪು ಸೇರಿಕೊಂಡಿದ್ದೆವು.

ನಮ್ಮ ಪ್ರಯಾಣ ಆರಂಭವಾಗಿದ್ದು ಶಿವಮೊಗ್ಗ ಮತ್ತು ಕೊಲ್ಲೂರು ಹೆದ್ದಾರಿಯಲ್ಲಿ ಹೊಸನಗರ ಸಮೀಪದ ಮಡೋಡಿಯಲ್ಲಿನ ಆದಿತ್ಯನ ‘ಸಿಂಹ ಫಾರ್ಮ್‌ ಹೌಸ್‌’ನಿಂದ. ಸ್ಥಳೀಯನಾಗಿದ್ದರಿಂದ ಮತ್ತು ಇಂಥ ಚಾರಣಗಳನ್ನು ಏರ್ಪಡಿಸಿ ಅನುಭವ ಇದ್ದುದರಿಂದ ಅವನೇ ಈ ಚಾರಣದ ನೇತೃತ್ವ ವಹಿಸಿದ್ದ. ಜತೆಗೆ ಅವನ ಹೆಂಡತಿ ಅನೂಷಾ ಕೂಡ ನಮ್ಮ ಒತ್ತಾಯಕ್ಕೆ ಎಷ್ಟೋ ವರ್ಷಗಳ ನಂತರ ಚಾರಣದಲ್ಲಿ ಪಾಲ್ಗೊಳ್ಳಲು ಸಿದ್ಧಳಾಗಿದ್ದಳು.

ಅಂದು ಬೆಳಿಗ್ಗೆ ಆರು ಗಂಟೆಗೇ ಕುದಿಯುವ ಹಂಡೆನೀರಿನ ಸ್ನಾನ ಮಾಡಿ ವಾಸು ಮತ್ತು ಶೀನು ಭಟ್ಟರು ಮಾಡಿಕೊಟ್ಟ ಪುಳಿಯೋಗರೆ, ಚಿತ್ರಾನ್ನ ಪಾರ್ಸೆಲ್‌ ತೆಗೆದುಕೊಂಡು ಜೀಪೇರಿ ಕೂತೆವು. ನಿಟ್ಟೂರಿನಲ್ಲಿ ಉಪಾಹಾರ ಮುಗಿಸಿಕೊಂಡು ಅಲ್ಲಿಂದ ಐವತ್ತು ಕೀ.ಮಿ. ದೂರದ ಕಟ್ಟಿನಕಾರು ಎಂಬ ಊರಿಗೆ ತಲುಪುವಷ್ಟರಲ್ಲಿ ರವಿಕಿರಣಗಳೊಟ್ಟಿಗೆ ಹೋರಾಡಲಾಗದೆ ಮಂಜಿನ ಹನಿಗಳು ಹಸಿರೆಲೆಗಳ ಮೇಲೆ ಹನಿಗೂಡಿ ಕೂತಿದ್ದವು. ಕೆಲವು ಅಲ್ಲಿಂದ ಜಾರಿ ನೆಲದ ಮೇಲೆ ಬಿದ್ದು ದೂಳಿನಲ್ಲಿ ಕ್ಷಣಿಕ ಗುರುತು ಮೂಡಿಸಿ ಮರೆಯಾಗಿದ್ದವು. ಅದುವರೆಗೆ ನಡುಗುತ್ತಲೇ ಕೂತಿದ್ದ ನಾವು ಈಗ ಬಿಸಿಲ ಸೆರಗು ಸೋಕಿ ಕೊಂಚ ಸಡಿಲಾದೆವು.

ಕಟ್ಟಿನಕಾರಿನಲ್ಲಿ ನಮ್ಮ ಜತೆ ಮಂಜು ಮತ್ತು ಧರ್ಮಣ್ಣ ಸೇರಿಕೊಂಡರು. ಧರ್ಮಣ್ಣ ನಮ್ಮ ಗೈಡ್‌. ಆದರೆ ಈ ಜಲಪಾತದ ದಾರಿ ಅವರಿಗೆ ಕೊಂಚ ಅಪರಿಚಿತ. ನಮ್ಮ ಜತೆಗೂಡುವುದರೊಟ್ಟಿಗೆ ದಾರಿಯನ್ನು ತಿಳಿದುಕೊಳ್ಳುವುದೂ ಅವರ ಉದ್ದೇಶವಾಗಿತ್ತು. ಮಣ್ಣಿನ ರಸ್ತೆಯಲ್ಲಿ ದೂಳಿನ ಅಭಿಷೇಕ ಮಾಡಿಸುತ್ತ ಸಾಗಿದ ಜೀಪು ಒಂದು ಹುಲ್ಲುಗಾವಲು ಪ್ರದೇಶದಲ್ಲಿ ನಿಂತಿತು. ಜೀಪಿನಿಂದ ಇಳಿದು ಸುತ್ತಮುತ್ತ ನೋಡುತ್ತಿರುವಾಗಲೇ ಧರ್ಮಣ್ಣ ಕೈಯಲ್ಲಿ ಕತ್ತಿ ಹಿಡಿದುಕೊಂಡು ಮುಂದೆ ಸಾಗಿದ. ನಾವೂ ಅವರ ಹಿಂದೆ ಹೆಜ್ಜೆ ಹಾಕಿದೆವು.

ಕೊಂಚ ದೂರ ದಟ್ಟ ಕಾಡು ಮತ್ತೆ ಮಧ್ಯದಲ್ಲೆಲ್ಲೋ ಅಚಾನಕ್ಕಾಗಿ ಎದುರಾಗುವ ಸಣ್ಣ ಬಯಲು ಹುಲ್ಲುಗಾವಲು. ಅದನ್ನು ದಾಟಿದರೆ ಮತ್ತದೇ ಬಿಸಿಲು ನೆಲಕ್ಕೆ ತಾಗದಷ್ಟು ದಟ್ಟ ಕಾಡು...

ಜಲಪಾತದ ಬುಡದಿಂದ ಎದ್ದು ಬರುವ ಉತ್ಸಾಹ ಯಾರಿಗೂ ಇರಲಿಲ್ಲ. ಆದರೆ ಧರ್ಮಣ್ಣ ಮತ್ತು ಮಂಜು ಅವರಿಗೆ ಆದಷ್ಟೂ ಬೇಗ ಹೊರಡಿಸಬೇಕು ಎಂಬ ಗಡಿಬಿಡಿ. ಕಾಡಿನಲ್ಲಿ ಹೊರಜಗತ್ತಿಗಿಂತ ತುಂಬ ಬೇಗನೇ ಕತ್ತಲಾವರಿಸುತ್ತದೆ. ಒಮ್ಮೆ ಕತ್ತಲು ಕವಿದುಕೊಂಡಿತೆಂದರೆ ಎಂಥ ಪರಿಣತ ಚಾರಣಿಗನೂ ದಿಕ್ಕುತಪ್ಪುತ್ತಾನೆ. ಧರ್ಮಣ್ಣ ಮತ್ತು ಮಂಜು ಅವರ ಭಯವೂ ಅದೇ ಆಗಿತ್ತು.

ನಾವು ಹೊರಡುವ ಹೊತ್ತಿಗಾಗಲೇ ರವಿ ನೆತ್ತಿ ದಾಟಿ ಪಶ್ಚಿಮದತ್ತ ವಾಲತೊಡಗಿದ್ದ. ಎಷ್ಟೇ ಪ್ರಖರವಾಗಿ ಉರಿಯುತ್ತಿದ್ದರೂ ನೆಲಕ್ಕೆ ಬಿಸಿಲು ತಾಗದ್ದರಿಂದ ಬೆಳಕು ಮಸುಕಾಗುತ್ತಿರುವ ಸೂಚನೆ ನಮಗೆ ಅಷ್ಟಾಗಿ ತಿಳಿಯುತ್ತಿರಲಿಲ್ಲ. ಇಳಿಯುವಾಗ ದಣಿದುಹೋಗಿದ್ದ ಕಾಲುಗಳು ಈಗ ಅದೇ ದಾರಿಯನ್ನು ಏರುವಾಗ ಆರಂಭದಲ್ಲಿಯೇ ಹಾಡು ಹೇಳಲು ಶುರು ಮಾಡಿದ್ದವು. ಏರಿದಷ್ಟೂ ದಾರಿ ಎತ್ತರೆತ್ತರಕ್ಕೆ ಬೆಳೆಯುತ್ತಲೇ ಇತ್ತು.

ಈಗೇನು ತುದಿ ಬಂದೇ ಬಿಟ್ಟಿತು ಎಂದು ನಮಗೆ ನಾವೇ ಸಮಾಧಾನ ಮಾಡಿಕೊಳ್ಳುತ್ತಾ ಏರುತ್ತಿದ್ದೆವು. ತುದಿ ತಲುಪಿ ಅಂತೂ ಇಂತೂ ನಿಟ್ಟುಸಿರುಬಿಟ್ಟಾಗ ನಮ್ಮಲ್ಲಿನ ಶಕ್ತಿಯ ಹಾಗೆಯೇ ಸಂಜೆಯ ಕೆಂಬಿಸಿಲೂ ಉಡುಗಿಹೋಗಿತ್ತು. ಕ್ಷಣಕ್ಷಣಕ್ಕೂ ಆವರಿಸುತ್ತಿದ್ದ ಕತ್ತಲನ್ನು ದಾಟಿಕೊಳ್ಳಲು ಎಷ್ಟೇ ವೇಗವಾಗಿ ಹೆಜ್ಜೆ ಹಾಕಿದರೂ ಎದುರಿನ ದಾರಿ ಬೆಳೆಯುತ್ತಲೇ ಹೋಗುತ್ತಿತ್ತು. ‘ಈ ಕಾಡಿನಲ್ಲಿ ರಾತ್ರಿ ಕಳೆದುಹೋದರೆ ಗತಿ ಏನು?’ ನಾನು ಮಂಜುವನ್ನು ಕೇಳಿದೆ. ‘ಪ್ರಾಣಿಗಳಿವೆ. ರಾತ್ರಿಯಾದರೆ ಒಂದು ಹೆಜ್ಜೆ ಮುಂದಿಡುವುದೂ ಕಷ್ಟ. ಮುಂದಿನ ಕಥೆ ಅಷ್ಟೆ...’ ಎಂದರು ಮಂಜು. ಅವರಿಗೂ ಕೊಂಚ ಆತಂಕ ಹುಟ್ಟಿದಂತಿತ್ತು.

ಸ್ವಲ್ಪ ಹೊತ್ತಿಗೆ ಎಲ್ಲರ ಕೈಲಿನ ಮೊಬೈಲ್‌ ಟಾರ್ಚ್‌ ಬೆಳಕಿನ ಬಾಯಿ ತೆರೆಯಿತು. ಆ ಬೆಳಕಿನಲ್ಲಿಯೇ ಇನ್ನೆಷ್ಟೋ ದೂರ ಒಬ್ಬರನ್ನೊಬ್ಬರು ತಡವಿಕೊಂಡೇ ನಡೆದೆವು. ಒಂದು ಹಂತದಲ್ಲಿ ಒಮ್ಮಿಂದೊಮ್ಮೆಲೇ ಇದುವರೆಗಿನ ಕತ್ತಲೆಯೇ ಸುಳ್ಳು ಎಂಬಂತೆ ಸುತ್ತಮುತ್ತೆಲ್ಲ ಬೆಳಕು ಹರಿದಾಗ ಅಚ್ಚರಿಯಿಂದ ತಲೆಯೆತ್ತಿದೆವು. ನಾವು ಕಾಡಿನಿಂದ ಹೊರಬಿದ್ದು ಜೀಪು ನಿಲ್ಲಿಸಿದ್ದ ಹುಲ್ಲುಗಾವಲಿಗೆ ಬಂದಿದ್ದೆವು! ಒಮ್ಮೆಲೇ ಎಲ್ಲರ ಮುಖದಲ್ಲಿ ಆತಂಕ ಕಳೆದು ನಗು ಆವರಿಸಿತು.

ಕೊನೆಯ ಬಾರಿಗೆ ಕತ್ತಲೆಯನ್ನೇ ಜಗಿಯುತ್ತಿರುವ ಕಾಡಿನ ಬಾಯಿಯನ್ನೊಮ್ಮೆ ನೋಡಿದೆ. ನಮ್ಮನ್ನು ಸುರಕ್ಷಿತವಾಗಿ ಹೊರಕ್ಕೆ ಉಗುಳಿ ಅದು ಆಕಳಿಸುತ್ತಿರುವಂತೆ ಭಾಸವಾಯ್ತ. ‘ಮಂಜು, ಆ ಕಾಡನ್ನು ನೋಡಿ... ನಾವೀಗ ಅಲ್ಲಿಂದಲೇ ಬಂದೆವಾ ಅಂತ ಅನುಮಾನ ಆಗುತ್ತೆ ಅಲ್ವಾ?’ಎಂದೆ. ಮಂಜು ಹೂಂಗುಟ್ಟಿದರೆ ವಿನಾ ಕಾಡಿನತ್ತ ತಿರುಗಿ ನೋಡಲಿಲ್ಲ.

3) ಕ್ಯಾಮೆರಾ ಮಸೂರದಲ್ಲಿ ಕಾಡು

ಅಶ್ವಿನಿ, ಸಹನಾ, ಆದಿತ್ಯ ಮೂವರೂ ಛಾಯಾಗ್ರಾಹಕರು. ಸುತ್ತಲಿನ ಕಾಡನ್ನು ಬರಿಗಣ್ಣಿಗಿಂತ ಕ್ಯಾಮೆರಾ ಮಸೂರದಲ್ಲಿಯೇ ನೋಡುತ್ತಿದ್ದುದೇ ಹೆಚ್ಚು. ಶ್ರುತಿ ಕತ್ತಿನಲ್ಲಿಯೂ ಒಂದು ಕ್ಯಾಮೆರಾ ನೇತಾಡುತ್ತಿತ್ತು.

ಬೆಳಗಿನ ಚಳಿ ಕಳೆದು ನಿಧಾನಕ್ಕೆ ಮೈಯೊಳಗೆ ಬೆವರ ಸೆಲೆ ಒಡೆಯುವುದಕ್ಕೆ ಶುರುವಾಗಿತ್ತು. ಸೂರ್ಯ ನೆತ್ತಿಯತ್ತ ಸರಿಯುತ್ತಿದ್ದರೂ ಅವನ ಪ್ರಖರ ಕಿರಣಗಳು ಹಸಿರ ಚಪ್ಪರ ದಾಟಿ ನಮ್ಮ ತಲುಪುತ್ತಿರಲಿಲ್ಲ. ಕೊಂಚವೇ ಇಳಿಜಾರಿನಲ್ಲಿ ಇಳಿದು ಇಳಿದು ಕಾಲು ನೋಯಲು ಶುರುವಾಗಿತ್ತು. ಬಾಟಲಿಗಳಲ್ಲಿ ತುಂಬಿಕೊಂಡಿದ್ದ ನೀರೂ ಬಹುತೇಕ ಖಾಲಿಯಾಗಿತ್ತು. ಧರ್ಮಣ್ಣ ಮತ್ತು ಮಂಜು ಇದ್ಯಾವುದರ ಪರಿವೇ ಇಲ್ಲದಂತೆ ನಡೆಯುತ್ತಲೇ ಇದ್ದರು.

ಇಳಿಜಾರು ಮುಗಿದು ಈಗ ಏರುದಾರಿ ಶುರುವಾಗಿತ್ತು. ಸೂಕ್ಷ್ಮವಾಗಿ ನೋಡಿದರೆ ಕಾಣದ ಹಾಗೆ ದಾರಿಯಲ್ಲದ ದಾರಿಯಲ್ಲೆ ಅಡ್ಡಲಾಗಿ ಚಾಚಿಕೊಂಡಿರುತ್ತಿದ್ದ ಬೆತ್ತದ ಮುಳ್ಳುಕೈಗಳನ್ನು ಗಮನಿಸಿಕೊಂಡು ಸಾಗುತ್ತಿರುವ ಹಾಗೆಯೇ ಘಮಘಮ ಪರಿಮಳ ಮೂಗಿಗೆ ಅಡರಿತು. ಅದೇನು ಎಂದು ಯೋಚಿಸುವಷ್ಟರಲ್ಲಿಯೇ ನಾವು ದೂಪದ ಮರದೆದುರು ನಿಂತಿದ್ದೆವು. ಯಾರೋ ಕತ್ತಿಯಲ್ಲಿ ಕೆತ್ತಿಹೋದ ಗಾಯದ ಗುಂಟ ಪರಿಮಳದ ದೂಪವನ್ನು ಸ್ರವಿಸಿ ನಿಂತಿರುವ ಆ ಬೃಹತ್‌ ಮರವನ್ನು ನೋಡುತ್ತಲೇ ಕೆಲಹೊತ್ತು ಮೈಮರೆತೆವು. ಮತ್ತೆ ಮಂಜು ಎಚ್ಚರಿಸಿ ನಡಿಗೆಗೆ ಹಚ್ಚಿದರು.

ಸ್ವಲ್ಪ ದೂರ ಸಾಗಿದಂತೆ ಇನ್ನೊಂದು ಸಣ್ಣ ಹಳ್ಳ ಎದುರಾಯ್ತು. ಇನ್ನು ಸಾಗಲಾರೆವು ಎಂದುಕೊಂಡು ಅಲ್ಲಿಯೇ ಕುಳಿತು ಸ್ವಲ್ಪ ಸ್ವಲ್ಪ ಪುಳಿಯೋಗರೆ ತಿಂದೆವು. ತಾಕಿದರೆ ಕೈಕೊರೆಯುವಷ್ಟು ತಣ್ಣಗಿನ ನೀರಿನಲ್ಲಿ ಮುಖವನ್ನೂ ತೊಳೆದುಕೊಂಡು ಬಾಟಲಿಗಳ ಕತ್ತಿಗಷ್ಟು ಸುರುವಿಕೊಂಡು ಮತ್ತೆ ನಡೆಯಲಾರಂಭಿಸಿದೆವು.

ಎಷ್ಟು ಹೆಜ್ಜೆಯಿಕ್ಕಿದರೂ ತೆರೆದುಕೊಳ್ಳುತ್ತಲೇ ಹೋಗುವ ಕಾಡು, ದಕ್ಕನೆ ದಾರಿಗಟ್ಟವಾಗಿ ಬಿದ್ದಿರುವ ಬೃಹತ್‌ ಮರ, ನಾವು ಬಂದ ಸುದ್ದಿಯನ್ನು ಮತ್ತೆಲ್ಲೋ ಮುಟ್ಟಿಸಲೆಂಬಂತೆ ಕೂಗುತ್ತ ಹಾರುವ ಹಕ್ಕಿಗಳು, ಅಶ್ವಿನಿ ವಿವರಣೆ, ಮಧ್ಯೆ ಮಧ್ಯೆ ಸಹನಾ ಮೊಬೈಲ್‌ನಲ್ಲಿ ಬಂದಿಯಾಗುವ ಸೆಲ್ಫೀ ಸಂಭ್ರಮ. ಎಲ್ಲವೂ ಮನಸ್ಸಿನ ಉತ್ಸಾಹ ತುಂಬುತ್ತಿದ್ದಾದರೂ ದೇಹ ಆಗಲೇ ದಣಿದು ಹೈರಾಣಾಗಿತ್ತು.

ಅನೂಷಾ ಮೆಲ್ಲನೇ ಮಗಳ ನೆನಪನ್ನು ಕನವರಿಸತೊಡಗಿದ್ದಳು, ಶ್ರುತಿ ಭಾರವಾದ ಹೆಜ್ಜೆ ಎತ್ತೆತ್ತಿ ಹಾಕುತ್ತಿದ್ದಳು. ಆದಿತ್ಯನ ಕ್ಯಾಮೆರಾ ಕೂಡ ದಣಿದಂತಿತ್ತು. ಕೆಲವರು ಬಾಯಿಬಿಟ್ಟು ‘ಇನ್ನೂ ಎಷ್ಟು ದೂರ?’ ಎಂದು ಕೇಳುತ್ತಿದ್ದರು. ಉಳಿದವರ ಮನಸ್ಸಿನಲ್ಲಿಯೂ ಅದೇ ಪ್ರಶ್ನೆ ಎದ್ದು ಕುಣಿಯುತ್ತಿದ್ದುದನ್ನು ಮುಖಭಾವವೇ ಹೇಳುತ್ತಿತ್ತು.

‘ಆಯ್ತು. ಈ ಬೆಟ್ಟ ಇಳಿದರೆ ಫಾಲ್ಸಿನ ಬುಡದಲ್ಲಿಯೇ ಇರ್ತೇವೆ’ ಎಂದು ನಕ್ಕರು ಧರ್ಮಣ್ಣ. ನಾವೂ ಅವರು ನಿಂತಿದ್ದ ಜಾಗದಲ್ಲಿ ಹೋಗಿ ಕೆಳನೋಡಿದೆವು. ಒಮ್ಮೆ ತಲೆಯೊಳಗೆ ನೂರುಚಕ್ರಗಳು ತಿರುಗುತ್ತಿರುವ ಹಾಗೆ ಅನಿಸಿತು. ಅದು ಅಕ್ಷರಶಃ ಪ್ರಪಾತ. ಇಳಿಯುವುದು ಅಂದರೆ ನಡೆಯುವುದಲ್ಲ, ಒಂದು ಗಿಡದಿಂದ ಇನ್ನೊಂದು ಗಿಡಕ್ಕೆ ಧುಮುಕುತ್ತಾ ಸಾಗಬೇಕು. ಮಂಜು ಕಾಲಿನ ಬಳಿಯಲ್ಲಿದ್ದ ಒಂದು ಕಲ್ಲನ್ನು ನೂಕಿದರು. ಕಣ್ಣೆದುರೇ ಸದ್ದು ಮಾಡಿ ಉರುಳುತ್ತಾ ಹೋದ ಕಲ್ಲು ಎಲ್ಲಿಯೂ ನಿಲ್ಲದೇ ಇನ್ನಷ್ಟು ಪುಟ್ಟ ಕಲ್ಲುಗಳನ್ನು ಜತೆಮಾಡಿಕೊಂಡು ಕಣಿವೆಯಲ್ಲಿ ಮಾಯವಾಯ್ತು. ಕೊಂಚ ಆಯತಪ್ಪಿದರೆ ನಮಗೂ ಅದೇ ಗತಿ ಎಂಬಂತೆ ಮಂಜು ನಮ್ಮನ್ನೆಲ್ಲ ಒಮ್ಮೆ ನೋಡಿದರು.

ಅನೂಷಾ ಅದನ್ನು ನೋಡಿ ಸುಮ್ಮನೇ ಕೂತುಬಿಟ್ಟಳು. ಆಗಲೇ ಹೈರಾಣಾಗಿದ್ದ ಅವಳಿಗೆ ಈ ಕಣಿವೆಯನ್ನು ಇಳಿಯುವ ಯಾವ ಉತ್ಸಾಹವೂ ಉಳಿದಿರಲಿಲ್ಲ. ನಮ್ಮ ಮುಖ ನೋಡಿಯೇ ಮನಸ್ಸನ್ನು ಗ್ರಹಿಸಿದ ಅಶ್ವಿನಿ ‘ಇದು ತುಂಬ ಜಾಸ್ತಿ ದೂರ ಏನಿಲ್ಲ. ಇಲ್ಲೇ ಬಾಟಂ ಕಾಣ್ತಿದೆ ನೋಡಿ’ ಎಂದು ಕೈತೋರಿಸಿ ಉತ್ಸಾಹ ಹೆಚ್ಚಿಸುವ ಪ್ರಯತ್ನ ಮಾಡಿದ. ಇಳಿಯುವುದು ಅಷ್ಟೊಂದು ಕಷ್ಟವೂ ಅಲ್ಲ ಎಂಬುದನ್ನು ತೋರಿಸಲು ಒಂದಿಷ್ಟು ದೂರ ಇಳಿದು ತೋರಿಸಿದ.

ಸರಿ, ಇಲ್ಲಿವರೆಗೆ ಬಂದಿದ್ದೇವೆ. ಇನ್ನೊಂಚೂರು ಇಳಿದರಾಯ್ತು ಎಂದುಕೊಂಡು ನಾವು ಇಳಿಯಲು ಪ್ರಾರಂಭಿಸಿದೆವು. ಅನೂಷಾ ಮುಖದಲ್ಲಿ ಭಯ ತುಂಬಿಕೊಂಡೇ ಹಿಂದೆ ಮುಂದೆ ಒಬ್ಬೊಬ್ಬರ ಕೈ ಹಿಡಿದುಕೊಂಡು ಒಂದೊಂದೇ ಹೆಜ್ಜೆಗಳನ್ನು ಇರಿಸಿಕೊಂಡು ಇಳಿಯಲಾರಂಭಿಸಿದಳು.

ಎಷ್ಟೊತ್ತು ಇಳಿದರೂ ಬುಡ ಕಾಣುತ್ತಿಲ್ಲ. ಅಶ್ವಿನಿ ಮತ್ತೆರಡು ಬಾರಿ ‘ಇಲ್ಲೇ ಬಾಟಂ ಕಾಣ್ತಿದೆ ನೋಡಿ’ ಎಂಬ ಡೈಲಾಗ್‌ ಮತ್ತೆರಡು ಸಲ ಹೇಳಿ ನಮ್ಮನ್ನು ನಂಬಿಸಿದ. ಆದಿತ್ಯ, ಧರ್ಮಣ್ಣ ಆಗಲೇ ಕೊಂಚ ಮುಂದೆ ಹೋಗಿದ್ದರು. ಅನೂಷಾ ಹೆಜ್ಜೆಯಿಂದ ಹೆಜ್ಜೆಗೆ ಇನ್ನಷ್ಟು ದಣಿಯುತ್ತಿದ್ದಳು. ನಾನು ಮತ್ತು ಶ್ರುತಿ ಒಂದೊಂದು ಕೈ ಹಿಡಿದುಕೊಂಡು ನಿಧಾನಕ್ಕೆ ಇಳಿಸುತ್ತಿದ್ದೆವು. ಹಿಡಿದುಕೊಂಡ ಹಸ್ತ ಕ್ಷಣಾರ್ಧದಲ್ಲಿ ಬೆವರಿನಿಂದ ಒದ್ದೆಯಾಗುತ್ತಿತ್ತು.

ಕಲ್ಲಮೇಲೆ ಇಟ್ಟ ಹೆಜ್ಜೆ ಕೊಂಚ ಜಾರಿ ಸರ‍್ರನೇ ಅರ್ಧ ಅಡಿ ಜಾರಿ ನಿಂತಿದ್ದೇ ಅನೂಷಾ ‘ನನ್ನಿಂದ ಇನ್ನು ಒಂದು ಹೆಜ್ಜೆ ಇಡುವುದೂ ಸಾಧ್ಯವಿಲ್ಲ’ ಎಂದು ಹೇಳಿ ಮರಕ್ಕೊರಗಿ ನಿಂತುಬಿಟ್ಟಳು. ಆಗಲೇ ನನಗೆ ನೀರು ಬೀಳುತ್ತಿರುವ ಸದ್ದು ಕೇಳಿದ್ದು. ‘ಶ್... ಕೇಳಿ, ನೀರು ಬೀಳ್ತಿರೋ ಸದ್ದು ಕೇಳ್ತಿದೆ’ ಎಂದೆ. ಈ ಸಲ ಕೇಳಿದ್ದು ಭ್ರಮೆ ಆಗಿರಲಿಲ್ಲ. ಮತ್ತರ್ಧ ಗಂಟೆಯಲ್ಲಿ ನಾವು ಬೆಳ್ಳಿಗುಂಡಿ ಜಲಪಾತದ ಬುಡದಲ್ಲಿದ್ದೆವು.

4) ರಾತ್ರಿಯಾದರೆ ಗತಿಯೇನು?

ಜಲಪಾತದ ಬುಡದಿಂದ ಎದ್ದು ಬರುವ ಉತ್ಸಾಹ ಯಾರಿಗೂ ಇರಲಿಲ್ಲ. ಆದರೆ ಧರ್ಮಣ್ಣ ಮತ್ತು ಮಂಜು ಅವರಿಗೆ ಆದಷ್ಟೂ ಬೇಗ ಹೊರಡಿಸಬೇಕು ಎಂಬ ಗಡಿಬಿಡಿ. ಕಾಡಿನಲ್ಲಿ ಹೊರಜಗತ್ತಿಗಿಂತ ತುಂಬ ಬೇಗನೇ ಕತ್ತಲಾವರಿಸುತ್ತದೆ. ಒಮ್ಮೆ ಕತ್ತಲು ಕವಿದುಕೊಂಡಿತೆಂದರೆ ಎಂಥ ಪರಿಣತ ಚಾರಣಿಗನೂ ದಿಕ್ಕುತಪ್ಪುತ್ತಾನೆ. ಧರ್ಮಣ್ಣ ಮತ್ತು ಮಂಜು ಅವರ ಭಯವೂ ಅದೇ ಆಗಿತ್ತು.

ನಾವು ಹೊರಡುವ ಹೊತ್ತಿಗಾಗಲೇ ರವಿ ನೆತ್ತಿ ದಾಟಿ ಪಶ್ಚಿಮದತ್ತ ವಾಲತೊಡಗಿದ್ದ. ಎಷ್ಟೇ ಪ್ರಖರವಾಗಿ ಉರಿಯುತ್ತಿದ್ದರೂ ನೆಲಕ್ಕೆ ಬಿಸಿಲು ತಾಗದ್ದರಿಂದ ಬೆಳಕು ಮಸುಕಾಗುತ್ತಿರುವ ಸೂಚನೆ ನಮಗೆ ಅಷ್ಟಾಗಿ ತಿಳಿಯುತ್ತಿರಲಿಲ್ಲ. ಇಳಿಯುವಾಗ ದಣಿದುಹೋಗಿದ್ದ ಕಾಲುಗಳು ಈಗ ಅದೇ ದಾರಿಯನ್ನು ಏರುವಾಗ ಆರಂಭದಲ್ಲಿಯೇ ಹಾಡು ಹೇಳಲು ಶುರು ಮಾಡಿದ್ದವು. ಏರಿದಷ್ಟೂ ದಾರಿ ಎತ್ತರೆತ್ತರಕ್ಕೆ ಬೆಳೆಯುತ್ತಲೇ ಇತ್ತು. ಈಗೇನು ತುದಿ ಬಂದೇ ಬಿಟ್ಟಿತು ಎಂದು ನಮಗೆ ನಾವೇ ಸಮಾಧಾನ ಮಾಡಿಕೊಳ್ಳುತ್ತಾ ಏರುತ್ತಿದ್ದೆವು. ತುದಿ ತಲುಪಿ ಅಂತೂ ಇಂತೂ ನಿಟ್ಟುಸಿರುಬಿಟ್ಟಾಗ ನಮ್ಮಲ್ಲಿನ ಶಕ್ತಿಯ ಹಾಗೆಯೇ ಸಂಜೆಯ ಕೆಂಬಿಸಿಲೂ ಉಡುಗಿಹೋಗಿತ್ತು. ಕ್ಷಣಕ್ಷಣಕ್ಕೂ ಆವರಿಸುತ್ತಿದ್ದ ಕತ್ತಲನ್ನು ದಾಟಿಕೊಳ್ಳಲು ಎಷ್ಟೇ ವೇಗವಾಗಿ ಹೆಜ್ಜೆ ಹಾಕಿದರೂ ಎದುರಿನ ದಾರಿ ಬೆಳೆಯುತ್ತಲೇ ಹೋಗುತ್ತಿತ್ತು. ‘ಈ ಕಾಡಿನಲ್ಲಿ ರಾತ್ರಿ ಕಳೆದುಹೋದರೆ ಗತಿ ಏನು?’ ನಾನು

ಮಂಜುವನ್ನು ಕೇಳಿದೆ. ‘ಪ್ರಾಣಿಗಳಿವೆ. ರಾತ್ರಿಯಾದರೆ ಒಂದು ಹೆಜ್ಜೆ ಮುಂದಿಡುವುದೂ ಕಷ್ಟ. ಮುಂದಿನ ಕಥೆ ಅಷ್ಟೆ...’ ಎಂದರು ಮಂಜು. ಅವರಿಗೂ ಕೊಂಚ ಆತಂಕ ಹುಟ್ಟಿದಂತಿತ್ತು.

ಸ್ವಲ್ಪ ಹೊತ್ತಿಗೆ ಎಲ್ಲರ ಕೈಲಿನ ಮೊಬೈಲ್‌ ಟಾರ್ಚ್‌ ಬೆಳಕಿನ ಬಾಯಿ ತೆರೆಯಿತು. ಆ ಬೆಳಕಿನಲ್ಲಿಯೇ ಇನ್ನೆಷ್ಟೋ ದೂರ ಒಬ್ಬರನ್ನೊಬ್ಬರು ತಡವಿಕೊಂಡೇ ನಡೆದೆವು. ಒಂದು ಹಂತದಲ್ಲಿ ಒಮ್ಮಿಂದೊಮ್ಮೆಲೇ ಇದುವರೆಗಿನ ಕತ್ತಲೆಯೇ ಸುಳ್ಳು ಎಂಬಂತೆ ಸುತ್ತಮುತ್ತೆಲ್ಲ ಬೆಳಕು ಹರಿದಾಗ ಅಚ್ಚರಿಯಿಂದ ತಲೆಯೆತ್ತಿದೆವು. ನಾವು ಕಾಡಿನಿಂದ ಹೊರಬಿದ್ದು ಜೀಪು ನಿಲ್ಲಿಸಿದ್ದ ಹುಲ್ಲುಗಾವಲಿಗೆ ಬಂದಿದ್ದೆವು! ಒಮ್ಮೆಲೇ ಎಲ್ಲರ ಮುಖದಲ್ಲಿ ಆತಂಕ ಕಳೆದು ನಗು ಆವರಿಸಿತು.

ಕೊನೆಯ ಬಾರಿಗೆ ಕತ್ತಲೆಯನ್ನೇ ಜಗಿಯುತ್ತಿರುವ ಕಾಡಿನ ಬಾಯಿಯನ್ನೊಮ್ಮೆ ನೋಡಿದೆ. ನಮ್ಮನ್ನು ಸುರಕ್ಷಿತವಾಗಿ ಹೊರಕ್ಕೆ ಉಗುಳಿ ಅದು ಆಕಳಿಸುತ್ತಿರುವಂತೆ ಭಾಸವಾಯ್ತ. ‘ಮಂಜು,ಆ ಕಾಡನ್ನು ನೋಡಿ... ನಾವೀಗ ಅಲ್ಲಿಂದಲೇ ಬಂದೆವಾ ಅಂತ ಅನುಮಾನ ಆಗುತ್ತೆ ಅಲ್ವಾ?’ ಎಂದೆ. ಮಂಜು ಹೂಂಗುಟ್ಟಿದರೆ ವಿನಾ ಕಾಡಿನತ್ತ ತಿರುಗಿ ನೋಡಲಿಲ್ಲ.

ತಲುಪುವುದು ಹೇಗೆ? 

* ಬೆಳ್ಳಿಗುಂಡಿ ಜಲಪಾತದ ಚಾರಣದ ದಾರಿ ದುರ್ಗಮವಾದದ್ದು. ತಲುಪಲು ಸುಮಾರು ಹನ್ನೆರಡು ಕಿ.ಮೀ ದಟ್ಟ ಕಾಡಿನಲ್ಲಿ ನಡೆಯಬೇಕು. ಎರಡು ಕಿ.ಮೀ ಅಕ್ಷರಶಃ ಪ್ರಪಾತವನ್ನು ಇಳಿಯಬೇಕು. ಮತ್ತೆ ವಾಪಸ್‌ ಬರಲು ಮತ್ತಷ್ಟೇ ನಡೆಯಬೇಕು. ಒಂದು ದಿನದಲ್ಲಿ ಕನಿಷ್ಠ ಎಂಟು ಗಂಟೆಗಳ ಪ್ರಯಾಸದ ದಾರಿಯನ್ನು ನಡೆಯಲು ಶಕ್ತರಾಗಿದ್ದವರು ಮಾತ್ರ ಈ ಚಾರಣದ ಭಾಗವಾಗಬಹುದು.

ಹೀಗೆ ಪ್ಲ್ಯಾನ್‌ ಮಾಡಬಹುದು

ಶಿವಮೊಗ್ಗ ಮತ್ತು ಕೊಲ್ಲೂರು ಹೆದ್ದಾರಿಯ ನಡುವೆ ಮುಡೋಡಿ ಎಂಬ ಪುಟ್ಟ ಊರಿದೆ. ಅಲ್ಲಿ ಸುತ್ತಮುತ್ತ ಕೊಡಚಾದ್ರಿ ಬೆಟ್ಟ, ಪಾಂಡವರತಳಿ, ಶರಾವತಿ ಹಿನ್ನೀರಿನ ಪ್ರದೇಶಗಳು ಹೀಗೆ ಒಂದು ದಿನದಲ್ಲಿ ಸುತ್ತಾಡಬಹುದಾದ ಹಲವು ಸ್ಥಳಗಳಿವೆ. ಚಾರಣಕ್ಕೂ ಹಲವು ಸ್ಥಳಗಳಿವೆ. ಇಲ್ಲೇ ಕೆಲವು ಹೋಂ ಸ್ಟೇಗಳು ಇವೆ. ಮೊದಲೇ ಸಂಪರ್ಕಿಸಿದರೆ ಅರಣ್ಯ ಇಲಾಖೆಯ ಅನುಮತಿಯನ್ನು ಅವರೇ ಪಡೆದುಕೊಳ್ಳುತ್ತಾರೆ.

ಮಾಹಿತಿಗೆ: 9449652173/ 08185253738

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry