ಹಾರುವ ವಿಮಾನದಲ್ಲಿ ಇಂಟರ್‌ನೆಟ್‌

7

ಹಾರುವ ವಿಮಾನದಲ್ಲಿ ಇಂಟರ್‌ನೆಟ್‌

Published:
Updated:
ಹಾರುವ ವಿಮಾನದಲ್ಲಿ ಇಂಟರ್‌ನೆಟ್‌

ಇಂಟರ್‌ನೆಟ್‌ ಇಂದು ಸರ್ವವ್ಯಾಪಿಯಾಗಿ ಅಗತ್ಯ ಸೌಲಭ್ಯವಾಗಿದೆ. ಕೆಲವು ವರ್ಷಗಳ ಹಿಂದೆ ಹಳ್ಳಿಗಳಿಗೆ ಮೊಬೈಲ್ ನೆಟ್‌ವರ್ಕ್‌ ಸಿಗುತ್ತದೆಯೇ ಎಂದು ಜನ ಕೇಳುತ್ತಿದ್ದರು. ಆದರೆ ಈಗ ಡಾಟಾ ಕನೆಕ್ಷನ್‌ ಸಿಗುತ್ತದೆಯೇ ಎಂದು ಪ್ರಶ್ನಿಸುತ್ತಾರೆ.

ಹೀಗೆಲ್ಲ ಇರುವಾಗ  ಇಂಟರ್‌ನೆಟ್‌ ಸಂಪರ್ಕ ವಿಮಾನದಲ್ಲಿ ಸಿಗದಿದ್ದರೆ ಹೇಗೆ? ಇದು ಹಲವು ವರ್ಷಗಳಿಂದ ವಿಮಾನ ಪ್ರಯಾಣಿಕರ ಬೇಡಿಕೆಯೂ ಆಗಿತ್ತು. ಕೆಲವು ವಿಮಾನಯಾನ ಸಂಸ್ಥೆಗಳು ಈಗಾಗಲೇ ದೂರದೂರದ ಸ್ಥಳಗಳಿಗೆ ವಿಮಾನ ಸೌಲಭ್ಯ ಕಲ್ಪಿಸಿವೆ. ಹತ್ತಾರು ಗಂಟೆ ವಿಮಾನದಲ್ಲಿ ಕುಳಿತು‌ಕೊಳ್ಳುವ ಪ್ರಯಾಣಿಕ ರಿಗೆ ಮನರಂಜನೆ ಮತ್ತು ಮಾಹಿತಿ ಒದಗಿ ಸಲು, ವ್ಯವಹಾರದ ಉದ್ದೇಶಗಳಿಗೆ ಬಳಸಲು ಇಂಟರ್‌ನೆಟ್‌ ಸೌಲಭ್ಯ ಒದಗಿಸಿವೆ.

ಸದ್ಯ ಭಾರತದ ವಾಯುಪ್ರದೇಶ ವ್ಯಾಪ್ತಿಯಲ್ಲಿ ಹಾರಾಟ ನಡೆಸುತ್ತಿರುವ ವಿಮಾನದೊಳಗೆ ಭದ್ರತಾ ಕಾರಣಗಳಿಂದಾಗಿ ಮೊಬೈಲ್‌ ಫೋನ್‌ ಅಥವಾ ಇಂಟರ್‌ನೆಟ್‌ ಬಳಕೆ ಮಾಡುವಂತಿಲ್ಲ. ವಿಮಾನ ಪ್ರಯಾಣಿಕರು ವಾಟ್ಸ್‌ಆ್ಯಪ್ ಸಂದೇಶಗಳನ್ನು ಕಳುಹಿಸಬಹುದು, ಸಾಮಾಜಿಕ ಜಾಲತಾಣಗಳನ್ನು ನೋಡಬಹುದು, ಇಮೇಲ್‌ಗಳನ್ನು ಪರಿಶೀಲನೆ ಮಾಡಬಹುದು ಎಂದು ಟ್ರಾಯ್‌ ಕೂಡ ಶಿಫಾರಸು ಮಾಡಿದೆ.

ಅಂದರೆ ಇಂತಹ ಸೌಲಭ್ಯ ಪಡೆಯುವ ದಿನಗಳು ಹತ್ತಿರ ಬಂದಿವೆ. ಇಂಟರ್‌ನೆಟ್‌ ಸೌಲಭ್ಯ ಒದಗಿಸಲು ಸರ್ಕಾರವೇ ಆಸಕ್ತಿ ತೋರಿದೆ. ಇದರ ಸಾಧ್ಯಾಸಾಧ್ಯತೆಗಳೇನು ಎಂಬ ಕಿರುಪರಿಚಯ ಇಲ್ಲಿದೆ. ವಿಮಾನವೊಂದು 3000 ಮೀಟರ್‌ಗಿಂತ ಮೇಲಕ್ಕೆ ಹಾರಲು ಆರಂಭಿಸಿದ ನಂತರ ಇಂಟರ್‌ನೆಟ್‌ ಸಂಪರ್ಕ ಒದಗಿಸಬಹುದು ಎಂಬುದು ದೂರ ಸಂಪರ್ಕ ನಿಯಂತ್ರಣ ಪ್ರಾಧಿಕಾರ (ಟ್ರಾಯ್‌) ಸಲಹೆ. ಸಾಮಾನ್ಯವಾಗಿ ವಿಮಾನಗಳು ಟೇಕಾಫ್‌ ಆಗಿ ನಾಲ್ಕೈದು ನಿಮಿಷಗಳಲ್ಲೇ 3000 ಮೀಟರ್‌ಗಿಂತ ಹೆಚ್ಚಿನ ಎತ್ತರ ತಲುಪುತ್ತವೆ.

ಸ್ಯಾಟಲೈಟ್‌ ಮತ್ತು ಟೆರೆಸ್ಟ್ರಿಯಲ್‌ (ಭೂಮಿ ಆಧಾರದ) ಜಾಲದ ಮೂಲಕ ಇಂಟರ್‌ನೆಟ್‌ ಬಳಕೆಗೆ ಅವಕಾಶ ನೀಡಬಹುದು ಎಂಬುದು ಟ್ರಾಯ್‌ ಅಭಿಪ್ರಾಯ. ಭೂಮಿಯಿಂದ 35 ಸಾವಿರ ಅಡಿ ಎತ್ತರದಲ್ಲಿ ಹಾರಾಡುತ್ತಿರುವ ವಿಮಾನದಲ್ಲಿ ಎರಡು ರೀತಿಯಲ್ಲಿ ಇಂಟರ್‌ನೆಟ್‌ ಸೌಲಭ್ಯ ಒದಗಿಸಬಹುದು.

1. ಭೂಮಿಯಿಂದ ಆಕಾಶಕ್ಕೆ: ಇದು ಭೂಮಿಯನ್ನು ಆಧಾರವಾಗಿಟ್ಟುಕೊಂಡು ಮೊಬೈಲ್‌ ಬ್ರಾಡ್‌ ಬ್ಯಾಂಡ್‌ ಟವರ್‌ಗಳ ಮೂಲಕ ಒದಗಿಸುವ ಇಂಟರ್‌ನೆಟ್‌. ಇದು ವಿಮಾನದ ಆ್ಯಂಟೆನಾಗಳಿಗೆ ಸಿಗ್ನಲ್‌ಗಳನ್ನು ಕಳುಹಿಸುತ್ತದೆ. ಆದರೆ ಈ ತಂತ್ರಜ್ಞಾನ, ವಿಮಾನಗಳು ಸಾಗರ ಮುಂತಾದ ಬೃಹತ್ತಾಗಿ ವ್ಯಾಪಿಸಿದ ನೀರಿನ ಪ್ರದೇಶಗಳ ಮೇಲೆ ಹಾರಾಟ ಮಾಡುವ ವೇಳೆ ಅಷ್ಟೊಂದು ಸರಿಯಾಗಿ ಕಾರ್ಯನಿರ್ವಹಿಸುವುದಿಲ್ಲ.

2. ಉಪಗ್ರಹಗಳ ಮೂಲಕ: ಈ ವಿಧಾನ ಭವಿಷ್ಯದಲ್ಲಿ ಹೆಚ್ಚು ಬಳಕೆಯಾಗುವ ಸಾಧ್ಯತೆ ಇದೆ. ಸಾಗರದ ಮೇಲೆ ವಿಮಾನ ಹಾರಾಟ ಮಾಡುವಾಗ ಸಿಗ್ನಲ್‌ಗಳನ್ನು ಪಡೆಯುವಲ್ಲಿ ಎದುರಿಸುವ ಅಡಚಣೆಯನ್ನು ಇದರಲ್ಲಿ ತಪ್ಪಿಸಬಹುದಾಗಿದೆ. ವಿಮಾನದ ಆ್ಯಂಟೆನಾ ಭೂಸ್ಥಾಯಿ ಕಕ್ಷೆಯಲ್ಲಿ ಉಪಗ್ರಹವನ್ನು ಸಂಪರ್ಕಿಸುತ್ತದೆ. ಇದಕ್ಕಾಗಿ ರಿಸೀವರ್ ಮತ್ತು ಟ್ರಾನ್ಸ್‌ಮಿಟರ್‌ಗಳ ಬಳಕೆ ಮಾಡಲಾಗುತ್ತದೆ. ನೆಲದಿಂದ ವಿಮಾನಕ್ಕೆ ಎಲ್ಲ ಮಾಹಿತಿಗಳು ಉಪಗ್ರಹದ ಮೂಲಕವೇ ರವಾನೆಯಾಗುತ್ತವೆ. ಒಮ್ಮೆ ವಿಮಾನದ ಆ್ಯಂಟೆನಾ ಸಿಗ್ನಲ್‌ಗಳನ್ನು ಪಡೆಯಲಾರಂಭಿಸಿದರೆ  ವಿಮಾನದಲ್ಲಿನ ರೋಟರ್‌ಗಳು ಎಲ್ಲ ಪ್ರಯಾಣಿಕರಿಗೆ ವೈಫೈ ಸಿಗ್ನಲ್‌ಗಳನ್ನು ಹಂಚಲಾರಂಭಿಸುತ್ತವೆ. ಉಪಗ್ರಹವು 12 ಎಂಬಿಪಿಎಸ್ ವೇಗದಲ್ಲಿ ಇಂಟರ್‌ನೆಟ್‌ ಸೌಲಭ್ಯವನ್ನು ಒದಗಿಸಬಲ್ಲವು.

ವಿಮಾನವೊಂದು ವಿಭಿನ್ನ ವಾಯುವಲಯದಲ್ಲಿ ಹಾರಾಟ ನಡೆಸುತ್ತಿರುವಾಗ ಅದು ಸಮೀಪದ ಟವರ್‌ಗಳ ಸಿಗ್ನಲ್‌ಗಳಿಂದ ಸಂಪರ್ಕ ಪಡೆಯುತ್ತದೆ. ಇದರಿಂದ ಬ್ರೌಸಿಂಗ್‌ಗೆ ಯಾವುದೇ ತಡೆಯಾಗುವುದಿಲ್ಲ. ಆದರೆ ಸಾಗರದ ಮೇಲೆ ಹಾರಾಟ ನಡೆಸುತ್ತಿರುವಾಗಿನ ಸಂಪರ್ಕವೇ ದೊಡ್ಡ ಸಮಸ್ಯೆಯಾಗುತ್ತದೆ.

ಉಪಗ್ರಹದ ಸಂಪರ್ಕ ಪಡೆಯುವ ವಿಮಾನದಲ್ಲಿನ ಆ್ಯಂಟೆನಾ ಸ್ಮಾರ್ಟ್‌ಫೋನ್‌ಗಳಿಂದ ಮಾಹಿತಿಯನ್ನು ಸ್ವೀಕರಿಸುತ್ತದೆ. ಈ ಮೇಲಿನ ಎರಡೂ ಸೌಲಭ್ಯಗಳನ್ನು ವಿಮಾನದಲ್ಲಿ ಒದಗಿಸುವಲ್ಲಿ ವಿಶ್ವದ ಇತರ ದೇಶಗಳಿಗಿಂತ ಅಮೆರಿಕವೇ ಹೆಚ್ಚಿನ ಮೂಲಸೌಕರ್ಯಗಳನ್ನು ಹೊಂದಿದೆ. ಕಡಿಮೆ ವೆಚ್ಚದಲ್ಲಿ ಇಂಟರ್‌ನೆಟ್‌ ಸೌಲಭ್ಯ ನೀಡುತ್ತಿದೆ.

ಭವಿಷ್ಯವೇನು?

ಬ್ರಿಟಿಷ್‌ ಸ್ಯಾಟಲೈಟ್‌ ಟೆಲಿಕಮ್ಯೂನಿಕೇಷನ್ ಕಂಪನಿ ಇನ್‌ಮಾರ್‌ಸ್ಯಾಟ್‌ ಪ್ರಕಾರ, ಮುಂದಿನ ಆರು ವರ್ಷಗಳಲ್ಲಿ ವಿಶ್ವದ ಅರ್ಧದಷ್ಟು ವಿಮಾನಯಾನ ಕಂಪನಿಗಳು ವೈಫೈ ಸಾಧನಗಳನ್ನು ವಿಮಾನದಲ್ಲಿ ಅಳವಡಿಸಿಕೊಳ್ಳಲು ಮುಂದಾಗಲಿವೆ. 2020ರ ಹೊತ್ತಿಗೆ ಇದು ವಿಮಾನಯಾನ ಕಂಪನಿಗಳಿಗೆ ದೊಡ್ಡ ಆದಾಯ ತಂದುಕೊಡಬಲ್ಲ ಮೂಲವಾಗಲಿದೆ.

ಅಮೆರಿಕದ ಬಹುರಾಷ್ಟ್ರೀಯ ಕಂಪನಿ ಹನಿವೆಲ್‌ ಇಂಟರ್‌ನ್ಯಾಷನಲ್‌ ಹೇಳುವಂತೆ, 2025ರ ಹೊತ್ತಿಗೆ ಸರಿಸುಮಾರು 25 ಸಾವಿರ ವಿಮಾನಗಳು ವೈಫೈ ಸೌಲಭ್ಯವನ್ನು ಒದಗಿಸಲು ಮುಂದಾಗಲಿವೆಯಂತೆ.

ಸಾಧ್ಯತೆಗಳೇನು?

ಭೂಮಿಯ ಮೇಲೆ ಇಂಟರ್‌ನೆಟ್‌ ಸೌಲಭ್ಯಕ್ಕಿಂತ ಹಾರಾಟ ನಡೆಸುವ ವಿಮಾನದಲ್ಲಿ ಇಂಟರ್‌ನೆಟ್‌ ಕಲ್ಪಿಸುವುದು ಹೆಚ್ಚಿನ ವೆಚ್ಚದಾಯಕ. ಮೊಬೈಲ್‌, ಲ್ಯಾಪ್‌ಟಾಪ್‌ಗಳಲ್ಲಿ ವೈಫೈ ಬಳಸಲಾಗುತ್ತಿದೆಯೇ ಇಲ್ಲವೇ ಎಂಬುದರ ಆಧಾರದ ಮೇಲೆಯೇ ಪ್ರಯಾಣಿಕರಿಂದ ವೆಚ್ಚ ಭರಿಸುತ್ತವೆ.

ವಿಮಾನಗಳಲ್ಲಿ ಬ್ರಾಡ್‌ ಬ್ಯಾಂಡ್‌ ಇಂಟರ್‌ನೆಟ್‌ ಹಾಗೂ ಇತರ ಸಂಬಂಧಿತ ಸೌಲಭ್ಯ ಒದಗಿಸುತ್ತಿರುವ ಗೋಗೊ (Gogo) 17 ವಿಮಾನಯಾನ ಕಂಪನಿಗಳಿಗೆ ಇಂಟರ್‌ನೆಟ್‌ ಸೌಲಭ್ಯವನ್ನು ‘ತಿಂಗಳ ವಿಮಾನಯಾನ ಯೋಜನೆ’ ಮೂಲಕ ನೀಡುತ್ತಿದೆ. ಆದರೆ ಈ ಸೌಲಭ್ಯ ಅಮೆರಿಕ, ಕೆನಡಾ ಮತ್ತು ಮೆಕ್ಸಿಕೊಗಳ ದೇಶಿ ವಿಮಾನಗಳಿಗೆ ಮಾತ್ರ ಸಂಬಂಧಿಸಿದೆ.

ಯಾವ್ಯಾವ ವಿಮಾನದಲ್ಲಿ ಹೇಗಿದೆ ವೇಗ: ಈಗಾಗಲೇ ಇಂಟರ್‌ನೆಟ್‌ ಒದಗಿಸಿರುವ ಒಂದೊಂದು ವಿಮಾನಗಳಲ್ಲಿ ಒಂದೊಂದು ರೀತಿಯ ವೇಗ ಇದೆ. ಇದು ಸೇವಾದಾರರ ಮೇಲೆ ಅವಲಂಬಿತವಾಗಿದೆ. ಗೋಗೊ ಕಂಪನಿಯ ಇಂಟರ್‌ನೆಟ್‌ ಸೇವೆಯಲ್ಲಿ ಸೆಲ್‌ ಟವರ್‌ಗಳನ್ನು ಬಳಸಿಕೊಂಡು ಎಲ್ಲಾ ಪ್ರಯಾಣಿಕರಿಗೆ 9 ಎಂಬಿಪಿಎಸ್‌ರಷ್ಟು ವೇಗ ನೀಡುತ್ತಿದೆ. ಆದರೆ ಉಪಗ್ರಹ ಬಳಸಿಕೊಂಡಲ್ಲಿ 15 ಎಂಬಿಪಿಎಸ್‌ ವೇಗದಲ್ಲಿದೆ. ಜೆಟ್‌ಬ್ಲೂನ ಫ್ಲೈಫಿಯಲ್ಲಿ 12 ರಿಂದ 20 ಎಂಬಿಪಿಎಸ್‌ ವೇಗವಿದೆ.

ಯಾವ ವಿಮಾನಗಳಲ್ಲಿ ಈ ಸೌಲಭ್ಯವಿದೆ?

ಸದ್ಯ ಎಂಟು ವಿಮಾನಯಾನ ಕಂಪನಿಗಳು ವಿಮಾನದಲ್ಲಿ ವೈಫೈ ಸೌಲಭ್ಯವನ್ನು ಒದಗಿಸುತ್ತಿವೆ. ಅವುಗಳೆಂದರೆ ಎಮಿರೇಟ್ಸ್‌, ಜೆಟ್‌ಬ್ಲೂ, ನಾರ್ವೆಯನ್‌, ಟರ್ಕಿಸ್‌ ಏರ್‌ಲೈನ್ಸ್‌, ಏರ್‌ ಚೀನಾ, ಫಿಲಿಪ್ಪೀನ್ಸ್‌ ಏರ್‌ಲೈನ್ಸ್‌, ಹಾಂಕಾಂಗ್‌ ಏರ್‌ಲೈನ್ಸ್‌ ಮತ್ತು ನೋಕ್‌ ಏರ್‌.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry