ಕಲಿಕೆಯ ಗುಟ್ಟು

7

ಕಲಿಕೆಯ ಗುಟ್ಟು

Published:
Updated:
ಕಲಿಕೆಯ ಗುಟ್ಟು

‘ಜೀವನದ ಚಲನಶೀಲತೆಯೇ ಕಲಿಕೆ’ (The whole movement of life is learning). ಹೀಗೆಂದು ತಮ್ಮ ಪತ್ರವೊಂದನ್ನು ಆರಂಭಿಸಿದ್ದಾರೆ ಜೆ. ಕೃಷ್ಣಮೂರ್ತಿ. ಕಲಿಕೆಯಿಂದ ವಂಚಿತವಾಗಿರುವ ಒಂದೇ ಒಂದು ಕ್ಷಣವೂ ಜೀವನದಲ್ಲಿ ಇರದು; ಒಂದೊಂದು ಸಂಬಂಧವೂ ಕಲಿಕೆಯ ಭಾಗವೇ ಹೌದು – ಎಂದಿದ್ದಾರೆ ಅವರು. ಆದರೆ ವಿದ್ಯೆ – Knowledge - ಎನ್ನುವುದು ಬೇರೆ, ಕಲಿಕೆ ಎನ್ನುವುದು ಬೇರೆ.

ಈ ಎರಡು ವ್ಯತ್ಯಾಸಗಳನ್ನು ಗಮನಿಸುವುದು ಮುಖ್ಯ ಎನ್ನುತ್ತಾರೆ ಅವರು. ವಿದ್ಯೆಯನ್ನೇ ನಾವು ಕಲಿಕೆ ಎಂದು ಭಾವಿಸಿಕೊಂಡಿದ್ದೇವೆ. ವಿದ್ಯೆಗೆ ಒಂದು ಹಂತದಲ್ಲಿ ಮಿತಿ ಇದೆ; ಆದರೆ ಕಲಿಕೆಗೆ ಅಂಥ ಮಿತಿ ಇಲ್ಲ. ಪ್ರತಿ ಕ್ಷಣವೂ ಕಲಿಕೆಗೆ ತೆರೆದುಕೊಂಡ ಅವಕಾಶವೇ ಸರಿ ಎನ್ನುವುದು ಅವರ ಸಿದ್ಧಾಂತ. ವಿದ್ಯೆಗೆ ನೆನಪು ಬೇಕು; ಆದರೆ ಕಲಿಕೆಯಲ್ಲಿ ಅವಲೋಕನ, ಎಂದರೆ ವೀಕ್ಷಣೆಯೇ ಪ್ರಧಾನವಾಗಿರುವುದರಿಂದ ಅಲ್ಲಿ ನೆನಪಿನ ಅನಿವಾರ್ಯ ಕಡಿಮೆ. ಈಗ ನಮ್ಮ ಮುಂದೆ ಏನು ನಡೆಯುತ್ತಿದೆಯೋ ಅದನ್ನು ಏಕಾಗ್ರವಾಗಿ ಅವಲೋಕಿಸುವುದೇ ಕಲಿಕೆಗೆ ತೆರೆದುಕೊಂಡ ಬುದ್ಧಿ; ಹೀಗಾಗಿ ಅಲ್ಲಿ ನಮ್ಮ ಜ್ಞಾಪಕಶಕ್ತಿಗಿಂತಲೂ ಗ್ರಹಣಶಕ್ತಿಯೇ ಮುಖ್ಯ. ಅದನ್ನು ‘ಇಂತಿಷ್ಟು’ – ಎಂದು ಅಳೆಯಲು ಆಗದು. ಆದರೆ ವಿದ್ಯೆಗೆ ಮೂಲವೇ ಜ್ಞಾಪಕಶಕ್ತಿ. ಅದನ್ನು ‘ಇಂತಿಷ್ಟು’ – ಎಂದು ಅಳೆಯಬಹುದು.

ನಾವು ವಿದ್ಯೆಯನ್ನು ಹೇಗೆ ಪಡೆಯುತ್ತೇವೆ? ನಮ್ಮ ಉಪಾಧ್ಯಾಯರಿಂದ ಸಂಪಾದಿಸುತ್ತೇವೆ; ಪುಸ್ತಕಗಳಿಂದ ಸಂಪಾದಿಸುತ್ತೇವೆ. ನಮ್ಮ ಮೆದುಳನ್ನು ಮಾಹಿತಿಯಿಂದ ತುಂಬಿಸಿಕೊಳ್ಳುವುದನ್ನೇ ತಾನೆ ನಾವು ಇಂದು ‘ವಿದ್ಯೆ’ ಎಂದು ಕರೆಯುತ್ತಿರುವುದು? ಈ ವಿದ್ಯೆಯ ಅವಾಂತರ ಎಲ್ಲಿಯ ತನಕ ಹಬ್ಬಿದೆ ಎಂದರೆ ‘ನಾವು ಯಾರು?’ ಎಂದು ತಿಳಿದುಕೊಳ್ಳಲು ಕೂಡ ನಾವು ಪುಸ್ತಕವನ್ನೋ ಅಥವಾ ಮತ್ತೊಂದು ಬಾಹ್ಯಮೂಲದಿಂದ ಮಾಹಿತಿಯನ್ನು ಸಂಪಾದಿಸುತ್ತವೆ! ಇಂಥ ವಿದ್ಯೆ ನಮ್ಮನ್ನು ಎರಡನೆಯ ದರ್ಜೆಯ ಮನುಷ್ಯನನ್ನಾಗಿಸಬಲ್ಲದು ಅಷ್ಟೆ, ಎನ್ನುತ್ತಾರೆ ಕೃಷ್ಣಮೂರ್ತಿ.

ಕಲಿಕೆ ಎಂಬುದು ಪೂರ್ಣವಾಗಿ ಅವಲೋಕವನ್ನು ಅವಲಂಬಿಸಿದೆ. ಈ ಅವಲೋಕಶಕ್ತಿಯು ಜ್ಞಾಪಕಶಕ್ತಿಗೆ ಅತೀತವಾಗಿರುವಂಥದ್ದು. ಇಂದು ನಮ್ಮ ವಿದ್ಯೆಯನ್ನು ಏಕಾದರೂ ಸಂಪಾದಿಸಲು ಉತ್ಸುಕರಾಗಿದ್ದೇವೆ? ಜೀವನೋಪಾಯಕ್ಕೆ ಒಂದು ದಾರಿ ಒದಗಲಿ – ಎಂಬ ಕಾರಣದಿಂದಲೇ ಅಲ್ಲವೆ? ಆದರೆ ಬದುಕಿಗಾಗಿ ನಾವು ವಿದ್ಯಾವಂತರಾಗುತ್ತಿಲ್ಲ. ಹೀಗಾಗಿ ಜೀವನನಿರ್ವಹಣೆಗೆ ಬೇಕಾದುದನ್ನು ಹೊಂದಿಸಿಕೊಳ್ಳುವುದರಲ್ಲಿಯೇ ನಮ್ಮ ಆಯುಸ್ಸಿನ ಬಹುಪಾಲು ಸಮಯವನ್ನು ಮೀಸಲಿಡುತ್ತಿದ್ದೇವೆಯಾದ ಕಾರಣ ಬೇರೆ ಏನನ್ನೂ ಮಾಡಲು ನಮಗೆ ಬಿಡುವೇ ಸಿಗದಂತೆ ಆಗಿದೆ. ಇದರ ನಡುವೆಯೇ ನಮಗೆ ಗಾಸಿಪ್‌ಗಳಿಗೆ ಸಮಯ ಸಿಗುತ್ತಿದೆ; ಮಜಾ ಮಾಡಲು ಸಮಯ ಸಿಗುತ್ತಿದೆ; ಆಟ ಆಡಲು ಸಮಯ ಸಿಗುತ್ತಿದೆ. ಇವನ್ನೇ ಜೀವನ ಎಂದುಕೊಳ್ಳುತ್ತಿದ್ದೇವೆ. ಅದೇ ಸಮಸ್ಯೆ! ಆದರೆ ನಾವು ನಿಜವಾದ ‘ಜೀವನ’ವನ್ನೇ ಕಳೆದುಕೊಳ್ಳುತ್ತಿದ್ದೇವೆ ಎಂಬ ಅರಿವೇ ಇಲ್ಲವಾಗಿದೆ.

ಜೀವನಕಲೆಯನ್ನು ಕಲಿಯಲು ನಮಗೆ ‘ಬಿಡುವು’ (Leisure) ಬೇಕು. ಆದರೆ ‘ಬಿಡುವು’ ಎಂಬ ಪರಿಕಲ್ಪನೆಯನ್ನು ಜಗತ್ತು ತಪ್ಪಾಗಿ ಅರ್ಥೈಸಿಕೊಂಡಿದೆ ಎನ್ನುವುದು ಸ್ಪಷ್ಟ. ನಾವು ರೂಢಿಯಿಂದ ಮಾಡುವ ಕೆಲಸಗಳನ್ನು ಮಾಡದೆ ಇರುವುದನ್ನು ಬಿಡುವು, ವಿಶ್ರಾಂತಿ ಎಂದುಕೊಳ್ಳುತ್ತಿದ್ದೇವೆ. ಎಂದರೆ ಕೆಲಸಕ್ಕೆ ಹೋಗುವುದು, ಸಂಪಾದಿಸು ವುದು, ಕಾಲೇಜಿಗೆ ಹೋಗುವುದು – ಇಂಥವನ್ನು ಮಾಡದೆ ಇದ್ದಾಗ ಬಿಡುವಾಗಿದ್ದೇವೆ ಎಂದು ಅಂದುಕೊಳ್ಳುತ್ತೇವೆ. ಇಂಥ ಕೆಲಸಗಳನ್ನು ಮಾಡದೆ ಹರಟೆ ಹೊಡೆಯುವುದು, ಸಿನೆಮಾ ನೋಡುವುದು, ಪ್ರವಾಸ ಹೊರಡುವುದು – ಇಂಥವು ಬಿಡುವಿನಲ್ಲಿ ನಮ್ಮ ಸಂತೋಷಕ್ಕಾಗಿ ಮಾಡುವಂಥವು ಎಂದು ವಿಭಾಗಿಸಿಕೊಂಡಿದ್ದೇವೆ. ನಮ್ಮ ಜೀವನದ ಸಂಘರ್ಷ ಏರ್ಪಡುವುದೇ ಇಂಥ ಪ್ರತ್ಯೇಕತೆಯಲ್ಲಿ. ಈ ಸಂಘರ್ಷವೇ ಒತ್ತಡಗಳನ್ನು ಒಡ್ಡುತ್ತದೆ. ಈ ಒತ್ತಡಗಳ ಕಾರಣದಿಂದಾಗಿಯೇ ನೆಮ್ಮದಿ ಮಾಯವಾಗುತ್ತದೆ. ನೆಮ್ಮದಿ ಇಲ್ಲ ಎಂದಾದಲ್ಲಿ ಜೀವನವೇ ಬೇಡ ಎಂದೆನಿಸುವುದು ಸಹಜವೇ ಹೌದು.

ಹೀಗಾಗಿ ನಮ್ಮ ಜೀವನ ನಮಗೇ ಭಾರ ಎಂದು ಅನಿಸಲು ಕಾರಣ ನಮ್ಮ ಮನೋಧರ್ಮವಲ್ಲದೆ, ಮತ್ತೇನೂ ಅಲ್ಲ! ನಾವು ಯಾವ ಕೆಲಸವನ್ನು ಮಾಡಿದರೂ ಅದನ್ನು ಸಂತೋಷದಿಂದ ಮಾಡಬೇಕು; ಜೀವನವನ್ನು ಕಲಿಯಲು ಒದಗಿರುವ ಅಭ್ಯಾಸ–ಪಾಠ ಎಂದು ತಿಳಿದು ಅದರಲ್ಲಿ ತಾದಾತ್ಮ್ಯವನ್ನು ಹೊಂದಬೇಕು. ಆಗ ಒಂದೊಂದು ಕ್ಷಣವೂ ಜೀವನಕಲೆಯ ಆನಂದದ ಹೆಜ್ಜೆಗಳೇ ಆಗುತ್ತವೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry