ಶಾಲೆ ಕಾಂಪೌಂಡ್‌ ಮೇಲೆ ಖಾಸಗಿ ಜಾಹೀರಾತು

7

ಶಾಲೆ ಕಾಂಪೌಂಡ್‌ ಮೇಲೆ ಖಾಸಗಿ ಜಾಹೀರಾತು

Published:
Updated:

ಬೆಂಗಳೂರು: ಸರ್ಕಾರಿ ಶಾಲೆ ಕಾಂಪೌಂಡ್‌ಗಳನ್ನು ಖಾಸಗಿ ಜಾಹೀರಾತಿಗೆ ಬಳಕೆ ಮಾಡಿಕೊಳ್ಳಲು ಅವಕಾಶ ನೀಡಲಾಗುತ್ತಿದೆ ಎಂದು ಶಿಕ್ಷಣ ಸಚಿವ ತನ್ವೀರ್ ಸೇಠ್ ತಿಳಿಸಿದರು.

‘ಶಾಲೆ ಕಾಂಪೌಂಡ್‌ಗಳು ಈಗಾಗಲೇ ಅನಧಿಕೃತವಾಗಿ ಜಾಹೀರಾತಿಗೆ ಬಳಿಕೆಯಾಗುತ್ತಿವೆ. ಅದನ್ನು ಅಧಿಕೃತಗೊಳಿಸಿ ಮಕ್ಕಳ ಮನಸ್ಸಿನ ಮೇಲೆ ದುಷ್ಪರಿಣಾಮ ಬೀರದ ಜಾಹೀರಾತಿಗೆ ಮಾತ್ರ ಅವಕಾಶ ನೀಡಲಾಗುವುದು’ ಎಂದು ಬುಧವಾರ ಮಾಧ್ಯಮ ಪ್ರತಿನಿಧಿಗಳಿಗೆ ಸ್ಪಷ್ಟಪಡಿಸಿದರು.

ಜಾಹೀರಾತು ಪ್ರಕಟಿಸುವ ಕಂಪನಿಯವರಿಗೆ ಆ ಶಾಲೆಗಳಿಗೆ ಅಗತ್ಯ ಇರುವ ಬಣ್ಣ ಬಳಿಯುವ, ಶೌಚಾಲಯ ಅಥವಾ ಕಟ್ಟಡ ನಿರ್ಮಾಣ ಮಾಡಿಕೊಡುವ ಜವಾಬ್ದಾರಿ ವಹಿಸಲಾಗುವುದು. ಕಾಂಪೌಂಡ್ ಇಲ್ಲದಿದ್ದರೆ ಅವರೇ ಕಾಂಪೌಂಡ್ ನಿರ್ಮಿಸಿಕೊಂಡು ಜಾಹೀರಾತು ಪ್ರಕಟಿಸಿಕೊಳ್ಳಲು ಅವಕಾಶ ಕಲ್ಪಿಸಿಕೊಡಲಾಗುವುದು ಎಂದೂ ಹೇಳಿದರು.

ಸಿಎಸ್‌ಆರ್ ನಿಧಿ ಬಳಕೆಗೆ ಘಟಕ:

ಕಾರ್ಪೊರೇಟ್ ಸಂಸ್ಥೆಗಳ ಸಾಮಾಜಿಕ ಹೊಣೆಗಾರಿಕೆ(ಸಿಎಸ್‌ಆರ್‌) ನಿಧಿಯನ್ನು ಸರ್ಕಾರಿ ಶಾಲೆಗಳ ಗುಣಮಟ್ಟ ಸಬಲೀಕರಣಕ್ಕೆ ಬಳಕೆ ಮಾಡಿಕೊಳ್ಳಲು ಯೋಜನಾ ನಿರ್ವಹಣಾ ಘಟಕ ತೆರೆಯಲಾಗಿದೆ ಎಂದು ತನ್ವೀರ್ ಸೇಠ್ ತಿಳಿಸಿದರು.

ಉದ್ಯಮಿಗಳ ಜೊತೆ ಸಂಪರ್ಕ ಸಾಧಿಸುವ ಕೆಲಸವನ್ನು ಈ ಘಟಕ ಮಾಡಲಿದೆ. ಮೊದಲ ಹಂತದಲ್ಲಿ 150 ಕಂಪನಿಗಳು ಕೈಜೋಡಿಸಿವೆ. ಅವರೊಂದಿಗೆ ಬುಧವಾರ ಸಭೆ ನಡೆಸಲಾಗಿದೆ ಎಂದು ಸಚಿವ ತನ್ವೀರ್ ಸೇಠ್ ತಿಳಿಸಿದರು.

ಯಾವ ಶಾಲೆಯಲ್ಲಿ ಏನೇನು ಸೌಕರ್ಯ ಅಗತ್ಯವಿದೆ ಎಂಬುದನ್ನು ಆನ್‌ಲೈನ್‌ನಲ್ಲಿ ಪ್ರಕಟಿಸಲಾಗುವುದು. ಅದಕ್ಕೆ ಅನುಗುಣವಾಗಿ ಕಾರ್ಪೊರೇಟ್ ಕಂಪನಿಗಳು ತಮ್ಮ ಸಿಎಸ್‌ಆರ್‌ ನಿಧಿ ಬಳಕೆ ಮಾಡಬಹುದು ಎಂದರು.

ಖಾಸಗಿ ಸಹಭಾಗಿತ್ವಕ್ಕೆ ಅಪಸ್ವರ

ಈ ಯೋಜನೆ ನಿರ್ವಹಣೆಯನ್ನು ಖಾಸಗಿ ವ್ಯಕ್ತಿಗಳಿಗೆ ನೀಡುವುದಕ್ಕೆ ಸಭೆಯಲ್ಲಿ ಅಪಸ್ವರ ವ್ಯಕ್ತವಾಯಿತು.

ಶಿಕ್ಷಣ ತಜ್ಞ ನಿರಂಜನಾರಾಧ್ಯ ಮಾತನಾಡಿ, ಖಾಸಗಿ ವ್ಯಕ್ತಿಗಳಿಗೆ ಈ ಯೋಜನೆ ನಿರ್ವಹಣೆ ವಹಿಸುವುದು ಎಷ್ಟು ಸರಿ. ದೆಹಲಿ ಮೂಲದವರಿಗೆ ರಾಜ್ಯದ ಶಿಕ್ಷಣದ ಸ್ಥಿತಿಗತಿ ಏನು ಗೊತ್ತು ಎಂದು ಪ್ರಶ್ನಿಸಿದರು.

‘ನೆರವು ನೀಡುವ ಕಂಪನಿಗಳ ಜೊತೆ ಈ ಸಂಸ್ಥೆ ಸಮನ್ವಯ ಸಾಧಿಸಲಿದೆ. ಇದರಿಂದ ಇಲಾಖೆಗೆ ಹೆಚ್ಚು ಪ್ರಯೋಜನ’ ಎಂದು ತನ್ವೀರ್ ಸೇಠ್ ಸಭೆಯ ಬಳಿಕ ಮಾಧ್ಯಮ ಪ್ರತಿನಿಧಿಗಳ ಪ್ರಶ್ನೆಗೆ ಪ್ರತಿಕ್ರಿಯಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry