ಅವಧಿಗೆ ಮುನ್ನ ಚುನಾವಣೆ ಬೇಡ

7

ಅವಧಿಗೆ ಮುನ್ನ ಚುನಾವಣೆ ಬೇಡ

Published:
Updated:
ಅವಧಿಗೆ ಮುನ್ನ ಚುನಾವಣೆ ಬೇಡ

ಬೆಂಗಳೂರು: ರಾಜ್ಯ ವಿಧಾನಸಭೆಗೆ ನಿಗದಿತ ಸಮಯದಲ್ಲೇ ಚುನಾವಣೆ ನಡೆಸಬೇಕು. ತರಾತುರಿಯಲ್ಲಿ ದಿನಾಂಕ ಪ್ರಕಟಿಸಬಾರದು ಎಂದು ಕೇಂದ್ರ ಚುನಾವಣಾ ಆಯೋಗಕ್ಕೆ ರಾಜ್ಯ ಕಾಂಗ್ರೆಸ್‌ ಮನವಿ ಮಾಡಿದೆ.

ಮುಖ್ಯ ಚುನಾವಣಾ ಆಯುಕ್ತ ಓ.ಪಿ.ರಾವತ್‌ ಅವರಿಗೆ ಬುಧವಾರ ಮನವಿ ಸಲ್ಲಿಸಿದ ಕಾಂಗ್ರೆಸ್‌ ಉಪಾಧ್ಯಕ್ಷ ಬಿ.ಎಲ್‌.ಶಂಕರ್, ಒಂದೇ ಹಂತದಲ್ಲಿ ಮತದಾನ ನಡೆಸುವಂತೆಯೂ ಒತ್ತಾಯಿಸಿದರು. ಆನಂತರ ಶಂಕರ್‌ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿ ವಿವರ ನೀಡಿದರು.

‘ಮೇ 29 ಕ್ಕೆ ಸರ್ಕಾರದ ಅವಧಿ ಮುಗಿಯುತ್ತದೆ. ಅದಕ್ಕೆ ಮೊದಲು ಹೊಸ ಸರ್ಕಾರ ರಚನೆಯಾಗಬೇಕು. ಅವಧಿಗೆ ಮೊದಲೇ ಚುನಾವಣೆ ನಡೆಸಲು ಸಿದ್ಧತೆ ನಡೆದಿದೆ ಎಂಬ ವದಂತಿ ಇದೆ. ಮುಂಚಿತವಾಗಿ ದಿನಾಂಕ ಪ್ರಕಟಿಸಿ, ನೀತಿ ಸಂಹಿತೆ ಹೆಸರಿನಲ್ಲಿ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಬಾರದು. ನಿಯಮಾವಳಿಗಳಿಗೆ ಅನುಗುಣವಾಗಿ ಚುನಾವಣೆ ನಡೆಸಬೇಕೆಂದು ಮನವಿ ಮಾಡಿದ್ದೇವೆ’ ಎಂದರು.

ಮತದಾರರ ಪಟ್ಟಿಯಲ್ಲಿ ದೋಷವಿಲ್ಲದಂತೆ ನೋಡಿಕೊಳ್ಳಬೇಕು. ವಿವಿಪ್ಯಾಟ್‌ ಅಳವಡಿಸಿದ ವಿದ್ಯುನ್ಮಾನ ಮತಯಂತ್ರಗಳ ಪರೀಕ್ಷೆಗೆ ಅವಕಾಶ ನೀಡಬೇಕು. ಯಾವ ಕ್ಷೇತ್ರ ಅಥವಾ ಮತಗಟ್ಟೆಗಳಲ್ಲಿ ಸಂಶಯಗಳು ಮೂಡುತ್ತವೆಯೋ ಅಲ್ಲಿ ಅಣುಕು ಮತದಾನಕ್ಕೆ ಅವಕಾಶ ಕಲ್ಪಿಸಬೇಕು. ಇದಕ್ಕೆ ಯಾವುದೇ ನಿರ್ಬಂಧ ವಿಧಿಸಬಾರದು. ಈ ಹಿಂದೆ ಚುನಾವಣೆಗಳಲ್ಲಿ ಬಳಸಿದ ಮತ ಯಂತ್ರಗಳಲ್ಲಿರುವ ಎಲ್ಲ ದತ್ತಾಂಶಗಳನ್ನು ಅಳಿಸಿ ಹಾಕುವ ಮೂಲಕ ಪಾರದರ್ಶಕವಾಗಿ ಚುನಾವಣೆ ನಡೆಸಬೇಕೆಂದು ಮನವಿ ಮಾಡಲಾಗಿದೆ ಎಂದು ಶಂಕರ್‌ ತಿಳಿಸಿದರು.

ಮತಪಟ್ಟಿಯಲ್ಲಿ ಅಕ್ರಮ– ಬಿಜೆಪಿ ದೂರು:

ಕೆ.ಆರ್‌.ಪುರ, ಬಿ.ಟಿ.ಎಂ.ಲೇಔಟ್‌, ಶಾಂತಿನಗರ ವಿಧಾನಸಭಾ ಕ್ಷೇತ್ರಗಳಲ್ಲಿ ಮತದಾರರ ಪಟ್ಟಿಗೆ ಅಕ್ರಮವಾಗಿ ಹೆಸರು ಸೇರಿಸುತ್ತಿರುವ ವಿಷಯವನ್ನು ಮುಖ್ಯ ಚುನಾವಣಾ ಆಯುಕ್ತರ ಗಮನಕ್ಕೆ ತರಲಾಗಿದೆ ಎಂದು ಬಿಜೆಪಿ ವಕ್ತಾರ ವಿವೇಕ ರೆಡ್ಡಿ ತಿಳಿಸಿದರು.

ಈ ಕ್ಷೇತ್ರಗಳಲ್ಲಿ ಬಿಜೆಪಿ ಕಾರ್ಯಕರ್ತರಿಗೆ ಪೊಲೀಸರು ಕಿರುಕುಳ ನೀಡುತ್ತಿದ್ದಾರೆ. ಮತಗಟ್ಟೆ ಕಾರ್ಯಕರ್ತರನ್ನು ಪೊಲೀಸ್‌ ಠಾಣೆಗಳಿಗೆ ಕರೆಸಿಕೊಂಡು ಬೆದರಿಕೆ ಹಾಕುತ್ತಿದ್ದಾರೆ. ಕೆ.ಆರ್‌.ಪುರ ವಿಧಾನಸಭಾ ಕ್ಷೇತ್ರದಲ್ಲಿ 50 ಕಾರ್ಯಕರ್ತರ ಮೇಲೆ ಎಫ್‌ಐಆರ್‌ ದಾಖಲಿಸಿರುವ  ಸಂಗತಿಯನ್ನು ಆಯೋಗದ ಗಮನಕ್ಕೆ ತಂದಿರುವುದಾಗಿ ಹೇಳಿದರು.

ವಾಸಕ್ಕೆ ಸಂಬಂಧಿಸಿದಂತೆ ಯಾವುದೇ ದಾಖಲೆಗಳನ್ನು ನೀಡದೇ, ಕೇವಲ ಅಫಿಡವಿಟ್‌ ಮೂಲಕ  ಮತದಾರರ ಪಟ್ಟಿಗೆ ಹೆಸರುಗಳನ್ನು ಸೇರಿಸುವ ಕೆಲಸ ಕೆ.ಆರ್‌.ಪುರದಲ್ಲಿ ನಡೆದಿದೆ. ಇದರ ಬಗ್ಗೆ ವಿಚಾರಣೆ ಆಗಬೇಕು. ಸೂಕ್ಷ್ಮ ಮತಗಟ್ಟೆಗಳಲ್ಲಿ ವೀಕ್ಷಕರನ್ನು ನೇಮಿಸಬೇಕು ಎಂದರು.

ನೋಟಾ ಬೇಡ:

‘ಯಾರಿಗೂ ಮತವಿಲ್ಲ’ (ನೋಟಾ) ಆಯ್ಕೆಯನ್ನು ಕೈ ಬಿಡುವುದು ಸೂಕ್ತ. ಭಾರಿ ಪ್ರಮಾಣದಲ್ಲಿ ನೋಟಾ ಗುಂಡಿಯನ್ನು ಒತ್ತುವುದರಿಂದ ಫಲಿತಾಂಶದಲ್ಲಿ ಏರುಪೇರಾಗುತ್ತಿದೆ. ಇದನ್ನು ತಪ್ಪಿಸಬೇಕು ಎಂದು ಆಯೋಗಕ್ಕೆ ಮನವಿ ಮಾಡಿದ್ದಾಗಿ ಸಿಪಿಐ ಕಾರ್ಯದರ್ಶಿ ಸಾತಿ ಸುಂದರೇಶ್‌ ತಿಳಿಸಿದರು.

ಆಧುನಿಕ ಮತ ಯಂತ್ರ ಬಳಕೆ ಸಾಧ್ಯತೆ:

‘ಹೊಸ ತಲೆಮಾರಿನ ‘ಎಂ3’ ಮಾದರಿಯ ವಿದ್ಯುನ್ಮಾನ ಮತ ಯಂತ್ರ ತಯಾರಿಕೆ ಆಗಿಲ್ಲ. ಒಂದು ವೇಳೆ ಚುನಾವಣೆಗೆ ಮುನ್ನ ಅಗತ್ಯ ಪ್ರಮಾಣದಲ್ಲಿ ತಯಾರಿಸಲು ಸಾಧ್ಯವಾದರೆ ಅವುಗಳ ಬಳಕೆ ಬಗ್ಗೆ ಪರಿಶೀಲನೆ ನಡೆಸುತ್ತೇವೆ. ಇಲ್ಲವಾದರೆ, ಈಗ ಬಳಸುತ್ತಿರುವ ಎಂ2 ಮಾದರಿಯ ಇವಿಎಂ ಬಳಸಲಾಗುವುದು’ ಎಂದು ಚುನಾವಣಾ ಆಯೋಗ ರಾಜಕೀಯ ಪಕ್ಷಗಳಿಗೆ ತಿಳಿಸಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry