ಎಂಟು ಮೂಲಸೌಕರ್ಯ ವಲಯ ಪ್ರಗತಿ ಕುಂಠಿತ

7

ಎಂಟು ಮೂಲಸೌಕರ್ಯ ವಲಯ ಪ್ರಗತಿ ಕುಂಠಿತ

Published:
Updated:

ನವದೆಹಲಿ : ಎಂಟು ಮೂಲಸೌಕರ್ಯ ವಲಯಗಳ ಪ್ರಗತಿಯು ಡಿಸೆಂಬರ್‌ ತಿಂಗಳಲ್ಲಿ ಶೇ 4ಕ್ಕೆ ಕುಸಿದಿದ್ದು, ಐದು ತಿಂಗಳ ಹಿಂದಿನ ಮಟ್ಟಕ್ಕೆ ತಲುಪಿದೆ. ಕಲ್ಲಿದ್ದಲು ಮತ್ತು ಕಚ್ಚಾ ತೈಲ ವಲಯದಲ್ಲಿನ  ಉತ್ಪಾದನೆ ಕುಸಿತವೇ ಇದಕ್ಕೆ ಕಾರಣವಾಗಿದೆ. ಡಿಸೆಂಬರ್‌ ತಿಂಗಳಲ್ಲಿನ ಈ ವಲಯಗಳ ಉತ್ಪಾದನಾ ಬೆಳವಣಿಗೆಯು 2017ರ ಜುಲೈ ತಿಂಗಳ ನಂತರದ ಅತ್ಯಂತ ಕಡಿಮೆ ಮಟ್ಟದ್ದಾಗಿದೆ. ಜುಲೈನಲ್ಲಿ ಈ ವಲಯಗಳ ಪ್ರಗತಿ ಶೇ 2.9ರಷ್ಟಿತ್ತು.

ಎಂಟು ಪ್ರಮುಖ ವಲಯಗಳಾದ ಕಲ್ಲಿದ್ದಲು, ಕಚ್ಚಾ ತೈಲ, ನೈಸರ್ಗಿಕ ಅನಿಲ, ತೈಲಾಗಾರ ಉತ್ಪನ್ನ, ರಸಗೊಬ್ಬರ, ಉಕ್ಕು, ಸಿಮೆಂಟ್‌ ಮತ್ತು  ವಿದ್ಯುತ್ ಉತ್ಪಾದನೆಯು  ವರ್ಷದ ಹಿಂದೆ ಶೇ 5.6 ಮತ್ತು ನವೆಂಬರ್‌ ತಿಂಗಳಲ್ಲಿ  ಶೇ 7.4ರಷ್ಟು ಬೆಳವಣಿಗೆ ಕಂಡಿತ್ತು.

ಕಲ್ಲಿದ್ದಲು ಮತ್ತು ಕಚ್ಚಾ ತೈಲ ವಲಯಗಳ ಉತ್ಪಾದನೆಯು ಡಿಸೆಂಬರ್‌ನಲ್ಲಿ ಕ್ರಮವಾಗಿ ಶೇ 0.1 ಮತ್ತು ಶೇ 2.1ರಷ್ಟು ಕುಸಿತ ದಾಖಲಿಸಿದೆ. ಉಕ್ಕು ಮತ್ತು ವಿದ್ಯುತ್ ಉತ್ಪಾದನೆಯು ಕ್ರಮವಾಗಿ ಶೇ 2.6 ಮತ್ತು ಶೇ 3.3ರಷ್ಟು ನಿಧಾನಗೊಂಡಿದೆ. 2016ರಲ್ಲಿ ಈ ಎರಡೂ ವಲಯಗಳು ಕ್ರಮವಾಗಿ ಶೇ 15.9 ಮತ್ತು ಶೇ 6.4ರಷ್ಟು ಪ್ರಗತಿ ಕಂಡಿದ್ದವು.  ತೈಲಾಗಾರ ಉತ್ಪನ್ನಗಳು, ನೈಸರ್ಗಿಕ ಅನಿಲ, ರಸಗೊಬ್ಬರ ಮತ್ತು ಸಿಮೆಂಟ್‌ ವಲಯಗಳಲ್ಲಿ ಮಾತ್ರ ಉತ್ತಮ ಬೆಳವಣಿಗೆ ದಾಖಲಾಗಿದೆ.

ಈ ಪ್ರಮುಖ ವಲಯಗಳಲ್ಲಿನ ಬೆಳವಣಿಗೆಯು ಕೈಗಾರಿಕಾ ಉತ್ಪಾದನಾ ಸೂಚ್ಯಂಕದ (ಐಐಪಿ) ಮೇಲೆ ಪ್ರಭಾವ ಬೀರಲಿದೆ. ಎಂಟು ವಲಯಗಳ ಉತ್ಪಾದನೆ ಪ್ರಮಾಣವು ಒಟ್ಟಾರೆ ಕಾರ್ಖಾನೆಗಳ ಉತ್ಪಾದನೆಯಲ್ಲಿ ಶೇ 41ರಷ್ಟು ಪಾಲು ಹೊಂದಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry