ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಸ್‌ಐಟಿ ಅವಧಿ ಒಂದು ವರ್ಷ ವಿಸ್ತರಣೆ

ಸಿಬಿಐ ಕೈಬಿಟ್ಟ ಅದಿರು ಅಕ್ರಮ ಸಾಗಣೆ ಪ್ರಕರಣ ವರ್ಗಾವಣೆ
Last Updated 31 ಜನವರಿ 2018, 19:30 IST
ಅಕ್ಷರ ಗಾತ್ರ

ಬೆಂಗಳೂರು: ಅಕ್ರಮ ಗಣಿಗಾರಿಕೆ ಪ್ರಕರಣಗಳ ತನಿಖೆ ನಡೆಸುತ್ತಿರುವ ಲೋಕಾಯುಕ್ತ ವಿಶೇಷ ತನಿಖಾ ತಂಡದ (ಎಸ್‌ಐಟಿ) ಅವಧಿಯನ್ನು ರಾಜ್ಯ ಸರ್ಕಾರ ಒಂದು ವರ್ಷ ವಿಸ್ತರಿಸಿದೆ.

ಜನವರಿ 24ಕ್ಕೆ ಎಸ್‌ಐಟಿ ಅವಧಿ ಮುಗಿದಿದೆ. ಅದನ್ನು ವಿಸ್ತರಿಸುವ ಪ್ರಸ್ತಾವಕ್ಕೆ ಬುಧವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಒಪ್ಪಿಗೆ ನೀಡಲಾಗಿದೆ ಎಂದು ಸಂಸದೀಯ ಸಚಿವ ಟಿ.ಬಿ. ಜಯಚಂದ್ರ ತಿಳಿಸಿದರು.

ಸಿಬಿಐ ಅಗತ್ಯ ಸಾಕ್ಷ್ಯಾಧಾರ ಲಭ್ಯ ಇಲ್ಲ ಎಂಬ ಕಾರಣ ನೀಡಿ ಪ್ರಾಥಮಿಕ ಹಂತದಲ್ಲೇ ಕೈಬಿಟ್ಟ ಅದಿರು ಅಕ್ರಮ ಸಾಗಣೆ ಪ್ರಕರಣಗಳನ್ನು ಮರು ತನಿಖೆಗೆ ಎಸ್‌ಐಟಿಗೆ ವರ್ಗಾಯಿಸಲಾಗಿದೆ. ಕಾರವಾರ ಮತ್ತು ನವಮಂಗಳೂರು ಬಂದರು ಮೂಲಕ ಅಕ್ರಮವಾಗಿ ಸಾಗಿಸಿದ ಒಟ್ಟು 76 ಪ್ರಕರಣಗಳು ಅದರಲ್ಲಿ ಸೇರಿವೆ. ಈ ಬಂದರುಗಳ ಮೂಲಕ 1,028 ಹಡಗುಗಳಲ್ಲಿ 2,85,98,975 ಟನ್‌ ಅದಿರು ಸಾಗಿಸಲಾಗಿದೆ ಎಂದು ಅವರು ವಿವರಿಸಿದರು.

ಗೋವಾ, ಪಣಜಿ ಮತ್ತು ಮರ್ಮಗೋವಾ ಬಂದರಿನಲ್ಲಿ ನಡೆದಿದೆ ಎನ್ನಲಾದ ಪ್ರಕರಣಗಳ ತನಿಖೆಯನ್ನು ಸಿಬಿಐ ಈಗಾಗಲೇ ಮುಕ್ತಾಯಗೊಳಿಸಿದೆ. ತಮಿಳುನಾಡಿನ ಎರಡು ಬಂದರಿನಲ್ಲಿ ನಡೆದಿದೆ ಎನ್ನಲಾದ ಪ್ರಕರಣಗಳಿಗೆ ಸಂಬಂಧಿಸಿದಂತೆ ಪ್ರಾಥಮಿಕ ತನಿಖೆ ನಡೆಸಲು ಸಿಬಿಐಗೆ ಇನ್ನೂ ಅನುಮತಿ ಸಿಕ್ಕಿಲ್ಲ. ಆಂಧ್ರದ ಮೂರು ಬಂದರುಗಳಲ್ಲಿ ನಡೆದ ಪ್ರಕರಣಗಳನ್ನು ಸಿಬಿಐ ತನಿಖೆ ನಡೆಸುತ್ತಿದೆ ಎಂದೂ ಅವರು ವಿವರಿಸಿದರು.

ಅಕ್ರಮ ಗಣಿಗಾರಿಕೆಯ 73 ಪ್ರಕರಣಗಳು ಈ ಹಿಂದೆಯೇ ಎಸ್‌ಐಟಿಯಲ್ಲಿ ದಾಖಲಾಗಿತ್ತು. ಈ ಪೈಕಿ, 28ರಲ್ಲಿ ದೋಷಾರೋಪ ಪಟ್ಟಿ ಸಲ್ಲಿಕೆಯಾಗಿದೆ. 20 ಪ್ರಕರಣಗಳ ವಿಚಾರಣೆಗೆ ನ್ಯಾಯಾಲಯ ತಡೆಯಾಜ್ಞೆ ನೀಡಿದೆ. ಒಂದು ಪ್ರಕರಣ ವಜಾಗೊಂಡಿದ್ದು, ಏಳು ಪ್ರಕರಣಗಳು ವಿಚಾರಣಾ ಹಂತದಲ್ಲಿವೆ. ಎರಡು ತನಿಖಾ ಹಂತದಲ್ಲಿದೆ. 19ರಲ್ಲಿ ಬಿ ರಿಪೋರ್ಟ್‌ ಸಲ್ಲಿಕೆಯಾಗಿದೆ ಎಂದೂ ಅವರು ವಿವರಿಸಿದರು.

ತಿದ್ದುಪಡಿಗೆ ಅನುಮೋದನೆ: ಈಗಾಗಲೇ ಮೀನುಗಾರಿಗೆಯನ್ನು ಕುಲಕಸುಬು ಮಾಡಿಕೊಂಡವರಿಗೆ ಆದ್ಯತೆ ನೀಡುವ ಉದ್ದೇಶದಿಂದ ‘ಕರ್ನಾಟಕ ಒಳನಾಡು ಮೀನುಗಾರಿಕೆ ಕಾರ್ಯ ನೀತಿ–2014’ಕ್ಕೆ ತಂದಿರುವ ತಿದ್ದುಪಡಿಗಳಿಗೆ ಸಂಪುಟ ಅನುಮೋದನೆ ನೀಡಿದೆ ಎಂದೂ ಜಯಚಂದ್ರ ತಿಳಿಸಿದರು.

ಬೆಸ್ತ, ಅಂಬಿಗ, ಬೆಸ್ತರ್‌, ಬೋಯಿ, ರಾಜಬೋಯಿ ಸಮುದಾಯಗಳ ಜನರು ಈ ವೃತ್ತಿಯಲ್ಲೆ ತೊಡಗಿಸಿಕೊಂಡಿದ್ದಾರೆ. ಅವರಿಗೆ ಆದ್ಯತೆ ನೀಡಲು ಕೆಲವು ತಿದ್ದುಪಡಿಗಳನ್ನು ತರಲಾಗಿದೆ ಎಂದರು.

ಇತರ ನಿರ್ಣಯಗಳು

* ಭಾರತೀಯ ವಾಯುಸೇನೆಗೆ ರಾಡಾರ್ ಘಟಕಕ್ಕಾಗಿ ಬೆಳಗಾವಿಯ ಸೂಳೆಬಾವಿ ಗ್ರಾಮದಲ್ಲಿ 250 ಎಕರೆ ಮಂಜೂರು ಮಾಡಲು ಒಪ್ಪಿಗೆ

* ಮೈಸೂರಿನ ಪೊಲೀಸ್ ಪಬ್ಲಿಕ್ ಶಾಲೆಯ ಹೆಚ್ಚುವರಿ ಕಾಮಗಾರಿಗೆ ₹12 ಕೋಟಿ ಮಂಜೂರು

* ಚಾಮರಾಜನಗರ ಜಿಲ್ಲೆ ಕೊಳ್ಳೇಗಾಲ ತಾಲ್ಲೂಕಿನ ಸರಗೂರು ಗ್ರಾಮದ ಎರಡು ಕೆರೆ ತುಂಬಿಸಲು ₹ 129 ಕೋಟಿ ಮೊತ್ತದ ಯೋಜನಾ ವರದಿಗೆ ಅನುಮೋದನೆ

* ಕಲಬುರ್ಗಿ ಜಿಲ್ಲೆ ಕಲ್ಲೂರ ಬಿ ಬ್ಯಾರೇಜ್‌ನ ಗೇಟುಗಳ ಬದಲಾವಣೆಗೆ ₹ 40 ಕೋಟಿ ಆಡಳಿತಾತ್ಮಕ ಒಪ್ಪಿಗೆ

* ಗದಗ, ಕೊಪ್ಪಳ, ಚಾಮರಾಜನಗರದ ವೈದ್ಯಕೀಯ ಕಾಲೇಜುಗಳಲ್ಲಿ 450 ಹಾಸಿಗೆಗಳ ಆಸ್ಪತ್ರೆ ಹಾಗೂ ಕೊಡಗು, ಕೊಪ್ಪಳ, ಗದಗದಲ್ಲಿ ವೈದ್ಯಕೀಯ ಕಾಲೇಜುಗಳಲ್ಲಿ ಹೆಚ್ಚುವರಿ ಹಾಸ್ಟೆಲ್ ನಿರ್ಮಿಸಲು ಒಟ್ಟು ₹359.38 ಕೋಟಿ ಮೊತ್ತದ ಯೋಜನೆಗೆ ಅನುಮೋದನೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT