ತಮಿಳುನಾಡಿಗೆ ಎರಡು ಚಿನ್ನದ ಪದಕ

7
ಖೇಲೋ ಇಂಡಿಯಾ ಶಾಲಾ ವಿದ್ಯಾರ್ಥಿಗಳ ಕ್ರೀಡಾಕೂಟ ಆರಂಭ

ತಮಿಳುನಾಡಿಗೆ ಎರಡು ಚಿನ್ನದ ಪದಕ

Published:
Updated:
ತಮಿಳುನಾಡಿಗೆ ಎರಡು ಚಿನ್ನದ ಪದಕ

ನವದೆಹಲಿ: ಉತ್ತರಾಖಂಡದ ಅನು ಕುಮಾರ್‌ ಇಲ್ಲಿ ಬುಧವಾರ ಆರಂಭಗೊಂಡ ಸ್ಕೂಲ್ ಗೇಮ್ಸ್ ಫೆಡರೇಷನ್ ಆಫ್ ಇಂಡಿಯಾ ಆಶ್ರಯದ ಶಾಲಾ ವಿದ್ಯಾರ್ಥಿಗಳ ಕ್ರೀಡಾಕೂಟ ‘ಖೇಲೋ ಇಂಡಿಯಾ’ದ ಮೊದಲ ಚಿನ್ನದ ಪದಕ ಗೆದ್ದರು. ತಮಿಳುನಾಡು ರಾಜ್ಯದ ಕ್ರೀಡಾಪಟುಗಳು ಮೊದಲ ದಿನ ಎರಡು ಚಿನ್ನ ಗೆದ್ದು ಮಿಂಚಿದರು.

ಇಲ್ಲಿನ ಜವಾಹರಲಾಲ್‌ ನೆಹರು ಕ್ರೀಡಾಂಗಣದಲ್ಲಿ ವೈಭವದ ಸಮಾರಂಭದಲ್ಲಿ ಕೂಟಕ್ಕೆ ಚಾಲನೆ ನೀಡಲಾಯಿತು. ನಂತರ ನಡೆದ ಸ್ಪರ್ಧೆಗಳಲ್ಲಿ ಉತ್ತರಾಖಂಡ, ಕೇರಳ, ಉತ್ತರಪ್ರದೇಶ ಮತ್ತು ಹರಿಯಾಣ ರಾಜ್ಯದವರು ತಲಾ ಒಂದೊಂದು ಚಿನ್ನದ ಪದಕ ತಮ್ಮದಾಗಿಸಿಕೊಂಡರು.

ಫ್ರಾನ್ಸ್‌ನಲ್ಲಿ ನಡೆದ ವಿಶ್ವ ಶಾಲಾ ಕ್ರೀಡಾಕೂಟದಲ್ಲಿ 800 ಮೀಟರ್ಸ್ ಓಟದಲ್ಲಿ ಬೆಳ್ಳಿ ಗೆದ್ದಿದ್ದ ಅನುಕುಮಾರ್‌ ಇಲ್ಲಿ 1,500 ಮೀಟರ್ಸ್ ಓಟದ ಸ್ಪರ್ಧೆಯ ಫೈನಲ್‌ನಲ್ಲಿ ಮಿಂಚು ಹರಿಸಿದರು.

4:04.77 ನಿಮಿಷಗಳಲ್ಲಿ ಗುರಿ ಮುಟ್ಟಿದ ಅವರು ಉತ್ತರಾಖಂಡ ಪಾಳಯದಲ್ಲಿ ಸಂಭ್ರ ಮದ ಅಲೆ ಎಬ್ಬಿಸಿದರು. ತಮಿಳುನಾಡಿನ ಬಿ.ಮಾತೇಶ್‌ ಮತ್ತು ಉತ್ತರಪ್ರದೇಶದ ಸಂದೀಪ್‌ ಕುಮಾರ್ ಅವರನ್ನು ಹಿಂದಿಕ್ಕಿ ಅವರು ಚಿನ್ನಕ್ಕೆ ಮುತ್ತಿಕ್ಕಿದರು.

ಕ್ರೀಡಾಪಟು ಅನರ್ಹ

ಬಾಲಕಿಯರ 1500 ಮೀಟರ್ಸ್ ಓಟದಲ್ಲಿ ಗುಜರಾತ್‌ನ ಕಾತಿರಿಯಾ ಶ್ರದ್ಧಾ ಮೊದಲು ಅಂತಿಮ ಗೆರೆಯನ್ನು ದಾಟಿದರು. ಆದರೆ ಪ್ರತಿಸ್ಪರ್ಧಿಯ ತಂಡವಾದ ಕೇರಳದ ಪ್ರತಿಭಟನೆಯ ನಂತರ ಅವರನ್ನು ಸ್ಪರ್ಧೆಯಿಂದ ಅನರ್ಹಗೊಳಿಸಲಾಯಿತು. ಅಂತಿಮ ಲ್ಯಾಪ್‌ನಲ್ಲಿ ಅವರು ಪ್ರತಿಸ್ಪರ್ಧಿಗೆ ಅಡ್ಡಿಪಡಿಸಿರುವುದನ್ನು ತೀರ್ಪುಗಾರರು ಖಚಿತಪಡಿಸಿದರು. ಕೇರಳದ ಸಿ.ಚಾಂದಿನಿ 4:50.81 ನಿಮಿಷದಲ್ಲಿ ಗುರಿ ತಲುಪಿ ಚಿನ್ನದ ಪದಕ ತಮ್ಮದಾಗಿಸಿಕೊಂಡರು.

ಬಾಲಕರ ಶಾಟ್‌ಪಟ್ ಸ್ಪರ್ಧೆಯಲ್ಲಿ ಉತ್ತರ ಪ್ರದೇಶದ ಅಭಿಷೇಕ್‌ ಸಿಂಗ್‌ ಗಮನಾರ್ಹ ಸಾಧನೆ ಮಾಡಿದರು. 18.73 ಮೀಟರ್ ದೂರ ಎಸೆದ ಅವರು ರಾಜ್ಯದ ತಂಡಕ್ಕೆ ಮೊದಲ ಚಿನ್ನ ಗಳಿಸಿಕೊಟ್ಟರು. ತಮಿಳುನಾಡಿನ ಪ್ರವೀಣ್‌ ಟ್ರಿಪಲ್‌ ಜಂಪ್‌ನಲ್ಲಿ ಒಟ್ಟು 15.22 ಮೀಟರ್ ಜಿಗಿದು ಚಿನ್ನ ಗೆದ್ದರು. ಮಧ್ಯಪ್ರದೇಶದ ಕಾರ್ತಿಕೇಯ ದೇಸ್ವಾಲ್‌ 18 ಮೀಟರ್ ದೂರ ಜಿಗಿದು ಬೆಳ್ಳಿ ತಮ್ಮದಾಗಿಸಿಕೊಂಡರು.

ಬಾಲಕಿಯರ ಶಾಟ್‌ಪಟ್‌ನಲ್ಲಿ ಹರಿ ಯಾಣದ ಅಥ್ಲೀಟ್‌ಗಳು ಎರಡು ಪದಕ ಗೆದ್ದರು. ಪೂಜಾ 13.88 ಮೀಟರ್ಸ್ ದೂರ ಎಸೆದು ಚಿನ್ನ ಗೆದ್ದರೆ ರೇಖಾ 13.20 ಮೀಟರ್ ದೂರ ಎಸೆದು ಕಂಚಿನ ಪದಕ ಕೊರಳಿಗೇರಿಸಿಕೊಂಡರು. ತಮಿಳುನಾಡಿನ ಅಜೆನ್ಸಿ ಸೂಸನ್‌ 13.39 ಮೀಟರ್‌ ಎಸೆದು ಬೆಳ್ಳಿ ಗೆದ್ದರು.

ಬಾಲಕಿಯರ ಟ್ರಿಪಲ್ ಜಂಪ್‌ನಲ್ಲಿ ಜೆ. ಕೊಲೇಷ್ಯಾ ಒಟ್ಟು 12.29 ಮೀಟರ್ಸ್ ದೂರ ಜಿಗಿದು ಚಿನ್ನ ಗೆದ್ದರು. ಕೇರಳದ ಸಾಂದ್ರಾ ಬಾಬು ಕೂದಲೆಳೆ ಅಂತರದಲ್ಲಿ (12.27 ಮೀ) ದ್ವಿತೀಯರಾದರು. ತಮಿಳುನಾಡಿನ ತಬಿತಾ (11.95 ಮೀಟರ್ಸ್‌) ಕಂಚಿನ ಪದಕ ಗೆದ್ದರು.

ಮೋದಿ ಚಾಲನೆ

ಪ್ರಧಾನಮಂತ್ರಿ ನರೇಂದ್ರ ಮೋದಿ ಕ್ರೀಡಾಕೂಟಕ್ಕೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು ‘ಭಾರತದ ಯುವ ಕ್ರೀಡಾಪಟುಗಳ ಸಾಮರ್ಥ್ಯ ಅಭಿವೃದ್ಧಿಗೆ ಕೂಟ ನೆರವಾಗಲಿದೆ’ ಎಂದರು ಅಭಿಪ್ರಾಯಪಟ್ಟರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry