ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಅರ್ಹತೆ ಆಧಾರದ ವಲಸೆ’ಗೆ ಡೊನಾಲ್ಡ್‌ ಟ್ರಂಪ್‌ ಒಲವು

ಉಭಯ ಸದನವನ್ನುದ್ದೇಶಿಸಿ ಮೊದಲ ಬಾರಿ ಮಾತನಾಡಿದ ಅಮೆರಿಕದ ಅಧ್ಯಕ್ಷ
Last Updated 31 ಜನವರಿ 2018, 19:30 IST
ಅಕ್ಷರ ಗಾತ್ರ

ವಾಷಿಂಗ್ಟನ್: ಅರ್ಹತೆ ಆಧಾರದಲ್ಲಿ ವಲಸೆ ಸೌಲಭ್ಯ ನೀಡುವ ಯೋಜನೆಯನ್ನು ಬೆಂಬಲಿಸುವಂತೆ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕಾಂಗ್ರೆಸ್‌ಗೆ ಮನವಿ ಮಾಡಿದ್ದಾರೆ.

ಅಧ್ಯಕ್ಷರಾದ ನಂತರ ಇದೇ ಮೊದಲ ಬಾರಿ ಉಭಯ ಸದನವನ್ನುದ್ದೇಶಿಸಿ ಅವರು ಬುಧವಾರ ಮಾತನಾಡಿದರು. ಪ್ರತಿ ವರ್ಷ ಈ ರೀತಿ ಅಧ್ಯಕ್ಷರು ಭಾಷಣ ಮಾಡುತ್ತಾರೆ.

ಬಾಲ್ಯದಲ್ಲೇ ಪೋಷಕರೊಂದಿಗೆ ಅಮೆರಿಕಕ್ಕೆ ವಲಸೆ ಬಂದಿರುವ (ಇವರನ್ನು ಕನಸುಗಾರರು ಎಂದು ಕರೆಯಲಾಗುತ್ತದೆ) 18 ಲಕ್ಷ ಜನರಿಗೆ ನಾಗರಿಕತ್ವ ನೀಡುವ ಆಶಯ ಈ ಯೋಜನೆಯ ಹಿಂದಿದೆ. ಇದು ಜಾರಿಗೆ ಬಂದರೆ ಲಕ್ಷಾಂತರ ಭಾರತೀಯರಿಗೂ ಲಾಭವಾಗುವ ನಿರೀಕ್ಷೆ ಇದೆ.

‘ಅಮೆರಿಕವನ್ನು ಗೌರವಿಸುವ ಹಾಗೂ ಪ್ರೀತಿಸುವ, ಈ ದೇಶದ ಅಭಿವೃದ್ಧಿಗೆ ಕೊಡುಗೆ ನೀಡಲು ಬಯಸುವ ಕುಶಲಿಗರಿಗೆ ಅರ್ಹತೆ ಆಧಾರದಲ್ಲಿ ವಲಸೆ ಸೌಲಭ್ಯ ನೀಡುವ ಸಮಯ ಬಂದಿದೆ’ ಎಂದು ಟ್ರಂಪ್‌ ಹೇಳಿದ್ದಾರೆ.

ವಲಸೆ ನೀತಿ ಸುಧಾರಣೆಗೆ ಟ್ರಂಪ್ ಅವರು ಮುಂದಿಟ್ಟ ನಾಲ್ಕು ಪ್ರಮುಖ ಕಾರ್ಯಸೂಚಿಗಳಲ್ಲಿ ಸರಣಿ ವಲಸೆ ತಡೆ, ವೈವಿಧ್ಯದ ಆಧಾರದಲ್ಲಿ ವೀಸಾ ನೀಡುವುದಕ್ಕೆ ಕೊನೆ ಹಾಡುವುದು ಮತ್ತು ಅಕ್ರಮ ವಲಸೆ ನಿಯಂತ್ರಣಕ್ಕೆ ಮೆಕ್ಸಿಕೊ ಗಡಿಯಲ್ಲಿ ತಡೆಗೋಡೆ ನಿರ್ಮಿಸುವುದು ಸೇರಿವೆ.

‘ಸರಣಿ ವಲಸೆ ಹಾಗೂ ವೈವಿಧ್ಯ ಆಧಾರದ ವೀಸಾ ನೀಡುವ ವ್ಯವಸ್ಥೆಯಿಂದಾಗಿಯೇ ಅಮೆರಿಕದ ಮೇಲೆ ಎರಡು ಬಾರಿ ಉಗ್ರರ ದಾಳಿ ನಡೆದಿದೆ’ ಎಂದು ಇತ್ತೀಚೆಗಷ್ಟೇ ಟ್ರಂಪ್ ಹೇಳಿದ್ದರು.

ಚೀನಾ, ರಷ್ಯಾ ಸವಾಲು
‘ಚೀನಾ, ರಷ್ಯಾದಂಥ ಎದುರಾಳಿಗಳು ಅಮೆರಿಕದ ಹಿತಾಸಕ್ತಿ, ಆರ್ಥಿಕತೆ ಮತ್ತು ಮೌಲ್ಯಗಳಿಗೆ ಸವಾಲೊಡ್ಡುತ್ತಿವೆ’ ಎಂದು ಟ್ರಂಪ್ ಆರೋಪಿಸಿದ್ದಾರೆ. ಈ ಪಟ್ಟಿಗೆ ಅವರು ಭಯೋತ್ಪಾದನೆ ಮತ್ತು ದುಷ್ಟಕೂಟಗಳನ್ನೂ ಸೇರಿಸಿದ್ದಾರೆ.

‘ಈ ಸವಾಲುಗಳನ್ನು ಎದುರಿಸಲು ಅಮೆರಿಕ ಅಭೂತಪೂರ್ವ ಶಕ್ತಿಯನ್ನು ಹೊಂದಬೇಕು. ಇದರ ಭಾಗವಾಗಿ ಅಣ್ವಸ್ತ್ರ ಸಂಗ್ರಹವನ್ನು ಬಲಪಡಿಸಿಕೊಳ್ಳಬೇಕು. ಆದರೆ ಅದನ್ನು ಉಪಯೋಗಿಸುವ ಸಂದರ್ಭ ಬರದೇ ಇರಲಿ’ ಎಂದು ಹೇಳಿದ್ದಾರೆ.

‘ವಿಶ್ವದ ಎಲ್ಲಾ ರಾಷ್ಟ್ರಗಳು ಅಣ್ವಸ್ತ್ರ ನಿಷೇಧಿಸಲು ಕೈ ಜೋಡಿಸಿದಾಗ ಜಾದುವೇ ಸಂಭವಿಸಲಿದೆ. ದುರದೃಷ್ಟವೆಂದರೆ ನಾವಿನ್ನೂ ಆ ಹಂತವನ್ನು ತಲುಪಿಲ್ಲ’ ಎಂದಿದ್ದಾರೆ.

ಕಾರಾಗೃಹ ಮುಚ್ಚದಿರಿ:
ಕ್ಯೂಬಾದಲ್ಲಿರುವ ಗ್ವಾಂಟನಾಮೊ ಕೊಲ್ಲಿಯಲ್ಲಿನ ಕಾರಾಗೃಹವನ್ನು ಮುಚ್ಚದಿರಲು ಟ್ರಂಪ್ ಆದೇಶಿಸಿದ್ದಾರೆ. ಹೊಸದಾಗಿ ಬಂಧಿಸಿದ ಉಗ್ರರನ್ನು ಇಲ್ಲಿಗೆ ವರ್ಗಾಯಿಸಲಾಗುತ್ತದೆ.

ಬಂಧಿತರನ್ನು ಕ್ರೂರವಾಗಿ ನಡೆಸಿಕೊಳ್ಳುವ ಕಾರಣಕ್ಕೆ ಈ ಕಾರಾಗೃಹ ಸಾಕಷ್ಟು ಟೀಕೆಗೆ ಗುರಿಯಾಗಿತ್ತು. ಆದಷ್ಟು ಬೇಗ ಇದನ್ನು ಮುಚ್ಚಬೇಕು ಎಂದು ಹಿಂದಿನ ಅಧ್ಯಕ್ಷ ಬರಾಕ್ ಒಬಾಮ ಹೇಳಿದ್ದರು.

ಭಾಷಣ ಕೇಳಿದ ಸುನಯನಾ

ಕಳೆದ ವರ್ಷ ಅಮೆರಿಕದಲ್ಲಿ ನಡೆದ ದ್ವೇಷಪೂರಿತ ಗುಂಡಿನ ದಾಳಿಯಲ್ಲಿ ಮೃತಪಟ್ಟ ಭಾರತ ಸಂಜಾತ ಎಂಜಿನಿಯರ್ ಶ್ರೀನಿವಾಸ್ ಕೂಚಿಬೊಟ್ಲ ಅವರ ಪತ್ನಿ ಸುನಯನಾ ದುಮಲಾ (32) ಅವರು ಟ್ರಂಪ್ ಭಾಷಣದ ವೇಳೆ ಹಾಜರಿದ್ದರು.

ಸಂಸದ ಕೆವಿನ್ ಯೋಡರ್ ಅವರು ಸುನಯನಾ ಅವರನ್ನು ಆಹ್ವಾನಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT