ರಾಹುಲ್ ಜಾಕೆಟ್‌ : ಬಿಜೆಪಿ ಕಣ್ಣು

7
ಮೇಘಾಲಯದ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಕಾಂಗ್ರೆಸ್‌ ಅಧ್ಯಕ್ಷ

ರಾಹುಲ್ ಜಾಕೆಟ್‌ : ಬಿಜೆಪಿ ಕಣ್ಣು

Published:
Updated:
ರಾಹುಲ್ ಜಾಕೆಟ್‌ : ಬಿಜೆಪಿ ಕಣ್ಣು

ಶಿಲ್ಲಾಂಗ್‌/ನವದೆಹಲಿ: ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವನ್ನು ‘ಸೂಟ್‌ ಬೂಟ್‌’ ಸರ್ಕಾರ ಎಂದು ಆರೋಪಿಸಿದ್ದ ಎಐಸಿಸಿ ಅಧ್ಯಕ್ಷ ರಾಹುಲ್‌ ಗಾಂಧಿ ಅವರನ್ನು ಇದೀಗ ಬಿಜೆಪಿ ‘ಸೂಟ್‌ ಬೂಟ್‌’ ರಾಜಕೀಯ ಮಾಡುತ್ತಿದ್ದಾರೆ ಎಂದು ವ್ಯಂಗ್ಯವಾಡಿದೆ.

ಇಲ್ಲಿ ಮಂಗಳವಾರ ನಡೆದ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದ ರಾಹುಲ್‌ ಗಾಂಧಿ, ಅಧಿಕ ಬೆಲೆಯ ಕಪ್ಪು ಬಣ್ಣದ ಜಾಕೆಟ್‌ ಧರಿಸಿದ್ದರು. ಬ್ರಿಟಿಷ್‌ ಐಷಾರಾಮಿ ಫ್ಯಾಷನ್‌ ಬ್ರ್ಯಾಂಡ್‌ ಬರ್ಬೆರಿಯಾ ಜಾಕೆಟ್‌ ಇದಾಗಿದೆ. ಇದರ ಬೆಲೆ ಸುಮಾರು ₹63 ಸಾವಿರ (995 ಡಾಲರ್‌) ಆಗಿದೆ. ಆದ್ದರಿಂದ ಬಿಜೆಪಿ ರಾಹುಲ್‌ ಗಾಂಧಿ ಬಗ್ಗೆ ವ್ಯಂಗ್ಯವಾಡಿದೆ.

‘ಮೇಘಾಲಯದ ಸೂಟ್‌ ಬೂಟ್‌ ಸರ್ಕಾರ, ಕಪ್ಪುಹಣದ ಚಲಾವಣೆ ಮಾಡುವ ಮೂಲಕ ಸರ್ಕಾರದ ಬೊಕ್ಕಸಕ್ಕೆ ನಷ್ಟ ಉಂಟು ಮಾಡಿದೆ. ಈ ಕುರಿತು ಸರ್ಕಾರ ವರದಿಯನ್ನು ಸಲ್ಲಿಸಿ’ ಎಂದು ಮೇಘಾಲಯದ ಬಿಜೆಪಿ ಘಟಕ ಟ್ವೀಟ್‌ ಮಾಡಿದೆ.

2015ರಲ್ಲಿ ಅಂದಿನ ಅಮೆರಿಕ ಅಧ್ಯಕ್ಷ ಬರಾಕ್‌ ಒಬಾಮ ಅವರನ್ನು ಭೇಟಿ ಮಾಡುವ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ದುಬಾರಿ ಬೆಲೆಯ ಸೂಟ್‌ ಧರಿಸಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ್ದ ರಾಹುಲ್‌ ಗಾಂಧಿ, ‘ಸೂಟ್‌ ಬೂಟ್‌ ಪ್ರಧಾನಿ’, ‘ದುರ್ಬಲ ಪ್ರಧಾನಿ’ ಎಂದು ವೈಯಕ್ತಿಕ ನಿಂದನೆ ಮಾಡಿದ್ದರು.

ಇನ್ನೊಂದೆಡೆ, ಬಿಜೆಪಿಯ ವಾಗ್ದಾಳಿಗೆ ರಾಹುಲ್‌ ಗಾಂಧಿ ಪುನಃ ಕಿಡಿ ಕಾರಿದ್ದಾರೆ. ‘ಪ್ರಧಾನಿ ಸದಾ ಸೂಟ್‌ ಧರಿಸಿರುವ ವ್ಯಕ್ತಿಗಳ ಜೊತೆಯೇ ಇರುತ್ತಾರೆ ವಿನಾ ಬಡವರ ಜೊತೆ ಮಾತುಕತೆ ನಡೆಸುವುದಿಲ್ಲ. ಬಡವರಿಂದ ಸದಾ ದೂರವಿರಲು ಇಚ್ಛೆ ಪಡುತ್ತಾರೆ’ ಎಂದಿದ್ದಾರೆ.

ಶಿಲ್ಲಾಂಗ್‌ನ 60ಸದಸ್ಯರ ವಿಧಾನಸಭೆಗೆ ನಡೆಯುತ್ತಿರುವ ಚುನಾವಣೆಯ ಕುರಿತು ಚರ್ಚಿಸಲು ಭೇಟಿ ನೀಡಿದ್ದ ರಾಹುಲ್‌ ಅವರು ಪತ್ರಕರ್ತರು ಕೇಳಿದ ಪ್ರಶ್ನೆಗಳಿಗೆ ಉತ್ತರಿಸಿದರು. ’ಮೋದಿ ಅವರು ಒಂದು ವರ್ಷದಲ್ಲಿ ಎರಡು ಕೋಟಿ ಉದ್ಯೋಗ ಸೃಷ್ಟಿಸುವುದಾಗಿ ಹೇಳಿದ್ದರು. ಆದರೆ ಅವರ ವಾಗ್ದಾನ ಎಲ್ಲಿ ಹೋಯಿತು’ ಎಂದು ವ್ಯಂಗ್ಯ ಮಾಡಿದರು.

***

ಮಹಿಳೆಯರನ್ನು ಕಂಡಿದ್ದೀರಾ?

‘ಗಾಂಧೀಜಿಯ ಚಿತ್ರವನ್ನು ನೀವು ಗಮನಿಸಿದರೆ ಅವರ ಸುತ್ತಲೂ ಮಹಿಳೆಯರು ಇರುವುದನ್ನು ನೀವು ಕಾಣಬಹುದು. ಆದರೆ ಆರ್‌ಎಸ್‌ಎಸ್‌ ಮುಖಂಡ ಮೋಹನ ಭಾಗವತ್‌ ಅವರ ಚಿತ್ರದಲ್ಲಿ ನೀವು ಎಂದಾದರೂ ಮಹಿಳೆಯರನ್ನು ಕಂಡಿದ್ದೀರಾ? ಎಂದು ರಾಹುಲ್‌ ಗಾಂಧಿ ಇಲ್ಲಿ ಪ್ರಶ್ನಿಸಿದರು.

ಆರ್‌ಎಸ್‌ಎಸ್‌ನಲ್ಲಿ ಮಹಿಳೆಯರಿಗೆ ಪ್ರಾತಿನಿಧ್ಯ ನೀಡುತ್ತಿಲ್ಲ. ಈ ಸಂಘಟನೆಯಲ್ಲಿ ಒಬ್ಬರೇ ಒಬ್ಬರು ಮಹಿಳೆಯರು ಇಲ್ಲ ಎಂದು ರಾಹುಲ್‌ ಈ ಮಾತನ್ನು ಹೇಳಿದರು. ಸೇಂಟ್‌ ಎಡ್‌ಮುಂಡ್ಸ್‌ ಕಾಲೇಜಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಫೆ.27ರಂದು ವಿಧಾನಸಭೆ ಚುನಾವಣೆ ನಡೆಯಲಿರುವ ಕಾರಣ, ರಾಹುಲ್‌ ಇಲ್ಲಿ ಪ್ರಚಾರ ಕಾರ್ಯ

ಕೈಗೊಳ್ಳುತ್ತಿದ್ದಾರೆ. ಕಳೆದ 15ವರ್ಷಗಳಿಂದ ಇಲ್ಲಿ ಕಾಂಗ್ರೆಸ್‌ ಸರ್ಕಾರ ಇಲ್ಲಿ ಅಧಿಕಾರದಲ್ಲಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry