‘ನಾಡಿಗಾಗಿ ವಿಸ್ಮೃತಿಯಿಂದ ಹೊರಬನ್ನಿ’

7
ದ.ರಾ.ಬೇಂದ್ರೆ ಕಾವ್ಯಕೂಟದಿಂದ 122ನೇ ಜನ್ಮದಿನ ಆಚರಣೆ

‘ನಾಡಿಗಾಗಿ ವಿಸ್ಮೃತಿಯಿಂದ ಹೊರಬನ್ನಿ’

Published:
Updated:
‘ನಾಡಿಗಾಗಿ ವಿಸ್ಮೃತಿಯಿಂದ ಹೊರಬನ್ನಿ’

ಬೆಂಗಳೂರು: ‘ನಾವು ಗಾಢವಾದ ವಿಸ್ಮೃತಿಗೆ ಒಳಗಾಗಿದ್ದೇವೆ. ಇದರಿಂದ ಆದಷ್ಟು ಬೇಗ ಹೊರಬಂದರೆ ಮಾತ್ರ ನಾಡು, ನುಡಿಗೆ ಕ್ಷೇಮ’ ಎಂದು ಮೈಸೂರು ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಸಂಸ್ಥೆಯ ಪ್ರಾಧ್ಯಾಪಕ ಪ್ರೊ.ನೀಲಗಿರಿ ತಳವಾರ ಅಭಿಪ್ರಾಯಪಟ್ಟರು.

ವರಕವಿ ದ.ರಾ.ಬೇಂದ್ರೆ ಅವರ 122ನೇ ಹುಟ್ಟುಹಬ್ಬದ ಪ್ರಯುಕ್ತ ದ.ರಾ.ಬೇಂದ್ರೆ ಕಾವ್ಯಕೂಟ ನಗರದಲ್ಲಿ ಬುಧವಾರ ಆಯೋಜಿಸಿದ್ದ ಬೇಂದ್ರೆ ಗೀತಗಾಯನ, ಸನ್ಮಾನ ಹಾಗೂ ಬಹುಮಾನ ವಿತರಣೆ ಸಮಾರಂಭದಲ್ಲಿ ಅವರು ಮಾತನಾಡಿದರು.

‘ಸಾಹಿತ್ಯ ಕ್ಷೇತ್ರ ರೈತರ ಸಮಸ್ಯೆಗಳಿಗೆ, ನೋವುಗಳಿಗೆ ಸ್ಪಂದಿಸದೆ ಸಂಪೂರ್ಣ ಜಡಗೊಂಡಿದೆ. ಕುವೆಂಪು ಮತ್ತು ಬೇಂದ್ರೆಯವರು ಪದ್ಯ, ಗದ್ಯದ ಮೂಲಕ ರೈತರಿಗೆ ಧ್ವನಿಯಾಗಿದ್ದರು’ ಎಂದರು.

ಕವಿ ಮೂಡ್ನಾಕೂಡು ಚಿನ್ನಸ್ವಾಮಿ, ‘ಇಂದಿನ ಶಿಕ್ಷಣ ವ್ಯವಸ್ಥೆ ಕೆಟ್ಟು ಹೋಗಿದೆ. ಸಂಸ್ಕೃತಿ ಮತ್ತು ಮಾನವೀಯತೆ ಕಲಿಸುತ್ತಿಲ್ಲ. ಇದರಿಂದ ಸಮಾಜದ ಸ್ವಾಸ್ಥ್ಯ ಹದಗೆಡುತ್ತಿದೆ. ಮನುಷ್ಯ ಧರ್ಮವನ್ನು ಪುನಃ ಕಟ್ಟಬೇಕಿದೆ. ಇದಕ್ಕೆ ಕಾವ್ಯ ಧರ್ಮವೇ ಬುನಾದಿ. ಕಾವ್ಯದ ಮೂಲಕ ಮಾನವೀಯತೆ ಬಿತ್ತಬೇಕಿದೆ’ ಎಂದರು.

ಉದ್ಘಾಟಿಸಿ ಮಾತನಾಡಿದ ವಿಮರ್ಶಕ ಪ್ರೊ.ಎಚ್.ಎಸ್‌.ರಾಘವೇಂದ್ರ ರಾವ್‌, ‘ಡಾ.ಜಿ.ಕೃಷ್ಣಪ್ಪ ಅವರು ಸರ್ಕಾರದ ನೆರವು ಪಡೆಯದೇ ದ.ರಾ.ಬೇಂದ್ರೆ ಕಾವ್ಯ ಕೂಟದ ಮೂಲಕ ಸಾಹಿತ್ಯ ಮತ್ತು ಸಂಸ್ಕೃತಿ ಪೋಷಿಸುತ್ತಿದ್ದಾರೆ. ಇದು ಬೆಲೆ ಕಟ್ಟಲಾಗದ ಸೇವೆ’ ಎಂದರು.

ವೈದ್ಯ ಡಾ.ಕೆ.ಕೆ.ಜಯಚಂದ್ರ ಗುಪ್ತ ಅವರನ್ನು ಸನ್ಮಾನಿಸಲಾಯಿತು.

ಬೇಂದ್ರೆ ಸ್ಮೃತಿ ಕವನ ರಚನಾ ಸ್ಪರ್ಧೆಯಲ್ಲಿ ವಿಜೇತರಾದ ತುಮಕೂರು ವಿಶ್ವವಿದ್ಯಾಲಯದ ಕನ್ನಡ ಎಂ.ಎ ದ್ವಿತೀಯ ವರ್ಷದ ವಿದ್ಯಾರ್ಥಿ ಕೆ.ಎಂ.ಗೋವಿಂದರಾಜುಗೆ ₹4,000, ಮೈಸೂರು ವಿಶ್ವವಿದ್ಯಾಲಯದ ಹಾಸನ ಹೇಮಗಂಗೋತ್ರಿ ಸ್ನಾತಕೋತ್ತರ ಕೇಂದ್ರದ ಕನ್ನಡ ಎಂ.ಎ. ಪ್ರಥಮ ವರ್ಷದ ವಿದ್ಯಾರ್ಥಿ ಡಿ.ಆರ್‌.ಪ್ರದೀಪ್‌ಗೆ ₹3,000 ಹಾಗೂ ಮುಂಬೈ ವಿಶ್ವವಿದ್ಯಾಲಯದ ಕನ್ನಡ ಎಂ.ಎ.ಪ್ರಥಮ ವರ್ಷದ ವಿದ್ಯಾರ್ಥಿನಿ ಅನಿತಾ ಪಿ. ಪೂಜಾರಿ ತಾಕೊಡೆಗೆ ₹3,000 ಬಹುಮಾನ ನೀಡಲಾಯಿತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry