7

ಭಾರತ–ದಕ್ಷಿಣ ಆಫ್ರಿಕಾ ಏಕದಿನ ಪಂದ್ಯ ಇಂದು; ಜಯದ ಭರವಸೆಯಲ್ಲಿ ಕೊಹ್ಲಿ ಬಳಗ

Published:
Updated:
ಭಾರತ–ದಕ್ಷಿಣ ಆಫ್ರಿಕಾ ಏಕದಿನ ಪಂದ್ಯ ಇಂದು; ಜಯದ ಭರವಸೆಯಲ್ಲಿ ಕೊಹ್ಲಿ ಬಳಗ

ಕಿಂಗ್ಸ್‌ ಮೇಡ್‌: ಟೆಸ್ಟ್ ಸರಣಿಯ ಎರಡು ಪಂದ್ಯಗಳಲ್ಲಿ ಪರದಾಡಿ ಕೊನೆಗೆ ಜಯ ಗಳಿಸಿದ್ದ ಭಾರತ ತಂಡ ಈಗ ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಸರಣಿಗೆ ಸಜ್ಜಾಗಿದೆ.

ಸರಣಿಯ ಮೊದಲ ಪಂದ್ಯ ಫೆಬ್ರುವರಿ ಒಂದರಂದು ಇಲ್ಲಿ ನಡೆಯಲಿದೆ. ಆರು ಪಂದ್ಯಗಳ ಈ ಸರಣಿಯಲ್ಲಿ ಗೆದ್ದು ಐಸಿಸಿ ರ‍್ಯಾಂಕಿಂಗ್‌ನಲ್ಲಿ ಆಗ್ರಸ್ಥಾನಕ್ಕೇರುವ ಛಲದೊಂದಿಗೆ ವಿರಾಟ್ ಕೊಹ್ಲಿ ಬಳಗ ಅಂಗಳಕ್ಕೆ ಇಳಿಯಲಿದೆ. ಹರಿಣಗಳ ನಾಡಿನಲ್ಲಿ ಮೊತ್ತಮೊದಲ ಬಾರಿ ಸರಣಿ ಗೆದ್ದ ದಾಖಲೆಯೂ ಭಾರತ ತಂಡದ ಹೆಸರಿಗೆ ಸೇರಲಿದೆ.

ಭಾರತ ಮುಂದಿನ ದಿನಗಳಲ್ಲಿ ಎಡೆಬಿಡದೆ ಏಕದಿನ ಮತ್ತು ಟ್ವೆಂಟಿ–20 ಸರಣಿಗಳನ್ನು ಆಡಲಿದೆ. ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಮತ್ತು ಟ್ವೆಂಟಿ–20 ಸರಣಿಯ ನಂತರ ಶ್ರೀಲಂಕಾದಲ್ಲಿ ತ್ರಿಕೋನ ಟ್ವೆಂಟಿ–20 ಸರಣಿಯಲ್ಲಿ ಪಾಲ್ಗೊಳ್ಳುವ ತಂಡ ಇಂಗ್ಲೆಂಡ್‌ ಹಾಗೂ ಐರ್ಲೆಂಡ್‌ನಲ್ಲಿ ತಲಾ ಮೂರು ಏಕದಿನ ಮತ್ತು ಟ್ವೆಂಟಿ–20 ಪಂದ್ಯಗಳನ್ನು ಆಡಲಿದೆ. ಹೀಗಾಗಿ ವರ್ಷದ ಮೊದಲ ಏಕದಿನ ಸರಣಿಯಲ್ಲಿ ಉತ್ತಮ ಸಾಧನೆ ಮಾಡಿ ಮುಂದಿನ ನಾಗಾಲೋಟಕ್ಕೆ ಸಿದ್ಧವಾಗುವ ಉದ್ದೇಶದೊಂದಿಗೆ ಭಾರತ ಕಣಕ್ಕೆ ಇಳಿಯಲಿದೆ.

ನಿರಾಸೆ ತಂದ ಸರಣಿಗಳು: ದಕ್ಷಿಣ ಆಫ್ರಿಕಾದಲ್ಲಿ ಒಮ್ಮೆಯೂ ಭಾರತ ಸರಣಿ ಗೆದ್ದಿಲ್ಲ.  ಡರ್ಬನ್‌ನಲ್ಲೂ ದಕ್ಷಿಣ ಆಫ್ರಿಕಾ ವಿರುದ್ಧ ನಿರಂತರ ಸೋಲು ಕಂಡಿದೆ. ಟೆಸ್ಟ್‌ ಸರಣಿಯಲ್ಲಿ ಆತಿಥೇಯ ತಂಡದ ವೇಗಿಗಳ ದಾಳಿಗೆ ಕಂಗೆಟ್ಟ ಭಾರತದ ಬ್ಯಾಟ್ಸ್‌ಮನ್‌ಗಳು ಏಕದಿನ ಸರಣಿಯಲ್ಲಿ ಪುಟಿದೇಳುವ ನಿರೀಕ್ಷೆಯಲ್ಲಿದ್ದಾರೆ.

ಐಸಿಸಿ ಏಕದಿನ ರ‍್ಯಾಂಕಿಂಗ್‌ನಲ್ಲಿ ಮೊದಲ ಸ್ಥಾನಕ್ಕೇರಲು ಭಾರತಕ್ಕೆ ಎರಡು ಪಾಯಿಂಟ್‌ಗಳ ಅಗತ್ಯವಿದ್ದು ಈ ಸರಣಿಯಲ್ಲಿ 4–2ರ ಜಯ ಸಾಧಿಸಿದರೆ ದಕ್ಷಿಣ ಆಫ್ರಿಕಾವನ್ನು ಹಿಂದಿಕ್ಕಿ ಅಗ್ರಸ್ಥಾನದಲ್ಲಿ ಮೆರೆಯಬಹುದಾಗಿದೆ. ಈ ದೃಷ್ಟಿಯಿಂದಲೂ ಭಾರತ ಹಳೆಯ ತಪ್ಪುಗಳನ್ನು ತಿದ್ದಿಕೊಂಡು ಮುಂದಡಿ ಇಡಬೇಕಾದ ಅಗತ್ಯವಿದೆ.

ಇತ್ತೀಚೆಗೆ ಏಕದಿನ ಕ್ರಿಕೆಟ್‌ನಲ್ಲಿ ಉತ್ತಮ ಸಾಧನೆ ಮಾಡುತ್ತಿರುವುದು ಭಾರತ ತಂಡದ ಭರವಸೆಯನ್ನು ಹೆಚ್ಚಿಸಿದೆ. 2016ರಲ್ಲಿ ಆಸ್ಟ್ರೇಲಿಯಾ ವಿರುದ್ಧದ ಸರಣಿಯನ್ನು 1–4ರಿಂದ ಸೋತ ನಂತರ ಭಾರತ ಈವರೆಗೆ ಯಾವುದೇ ಏಕದಿನ ಸರಣಿಯಲ್ಲಿ ಸೋತಿಲ್ಲ.  ಒಟ್ಟು 32 ಪಂದ್ಯಗಳ ಪೈಕಿ 24 ಪಂದ್ಯಗಳಲ್ಲಿ ಗೆದ್ದಿದೆ.

ಮಧ್ಯಕ್ರಮಾಂಕಕ್ಕೆ ಕೊಹ್ಲಿ ಬಲ: ಡಿಸೆಂಬರ್‌ನಲ್ಲಿ ನಡೆದ ಶ್ರೀಲಂಕಾ ವಿರುದ್ಧದ ಏಕದಿನ ಮತ್ತು ಟ್ವೆಂಟಿ–20 ಸರಣಿಯಿಂದ ವಿರಾಟ್ ಕೊಹ್ಲಿ ವಿಶ್ರಾಂತಿ ಪಡೆದಿದ್ದರು. ಈ ಏಕದಿನ ಸರಣಿಯಲ್ಲಿ ಅವರು ಆಡುತ್ತಿರುವುದು ತಂಡದ ಬಲ ಹೆಚ್ಚಿಸಿದೆ. ಅವರು ಟೆಸ್ಟ್ ಸರಣಿಯಲ್ಲಿ ಶತಕ ಬಾರಿಸಿದ್ದರು. ಶ್ರೇಯಸ್ ಅಯ್ಯರ್‌, ದಿನೇಶ್ ಕಾರ್ತಿಕ್‌ ಅಥವಾ ಮನೀಶ್ ಪಾಂಡೆ ಅವರ ಪೈಕಿ ಮಧ್ಯಮ ಕ್ರಮಾಂಕದಲ್ಲಿ ಸ್ಥಾನ ಪಡೆಯುವ ಮತ್ತೊಬ್ಬ ಆಟಗಾರ ಯಾರು ಎಂಬುದು ಈಗ ಉಳಿದಿರುವ ಕುತೂಹಲ.

ಸ್ಪಿನ್‌ ವಿಭಾಗದಲ್ಲಿ ಕುಲದೀಪ್ ಯಾದವ್, ಅಕ್ಷರ್ ಪಟೇಲ್ ಅಥವಾ ಯಜುವೇಂದ್ರ ಚಾಹಲ್ ಅವರ ಪೈಕಿ ಯಾರು ಸ್ಥಾನ ಪಡೆಯುವರು ಎಂಬುದನ್ನು ಕಾದು ನೋಡಬೇಕಿದೆ. ಆಲ್‌ರೌಂಡರ್‌ ಕೇದಾರ್ ಜಾಧವ್ ಅವರಿಗೂ ಅವಕಾಶ ಸಿಗುವ ಸಾಧ್ಯತೆ ಹೆಚ್ಚಿದೆ.

ಮುಂದಿನ ವಿಶ್ವಕಪ್‌ ಟೂರ್ನಿಯನ್ನು ಗಮನದಲ್ಲಿರಿಸಿಕೊಂಡು ದಕ್ಷಿಣ ಆಫ್ರಿಕಾ ಕೂಡ ಕಣಕ್ಕೆ ಇಳಿಯಲಿದೆ. ಗಾಯದ ಸಮಸ್ಯೆಯಿಂದ ಮೊದಲ ಮೂರು ಪಂದ್ಯಗಳಲ್ಲಿ ಎಬಿ ಡಿವಿಲಿಯರ್ಸ್ ಆಡುತ್ತಿಲ್ಲ. ಇಂಥ ಸಂದರ್ಭದಲ್ಲಿ ಫರ್ಹಾನ್ ಬೆಹ್ರದೀನ್ ಅವರಿಗೆ ಅವಕಾಶ ನೀಡುವ ದಕ್ಷಿಣ ಆಫ್ರಿಕಾ ಈ ಬಾರಿ ಅವರನ್ನು ಕರೆಸಿಕೊಂಡಿಲ್ಲ.

ಹೀಗಾಗಿ ಡಿವಿಲಿಯರ್ಸ್ ಸ್ಥಾನ ತುಂಬುವ ಬ್ಯಾಟ್ಸ್‌ಮನ್‌ ಯಾರು ಎಂಬ ಕುತೂಹಲ ಇನ್ನೂ ಉಳಿದಿದೆ. ಹಾಶೀಂ ಆಮ್ಲಾ ಮತ್ತು ಕ್ವಿಂಟನ್ ಡಿ ಕಾಕ್ ಅವರಿಗೆ ಇನಿಂಗ್ಸ್ ಆರಂಭಿಸುವ ಹೊಣೆ ನೀಡುವ ಸಾಧ್ಯತೆಯೂ ಇದೆ. ತಂಡ ಈ ಪ್ರಯೋಗಕ್ಕೆ ಮುಂದಾದರೆ ಏಡನ್ ಮರ್ಕರಮ್‌ ಮಧ್ಯಮ ಕ್ರಮಾಂಕದಲ್ಲಿ ಆಡಬೇದೀತು. ಡರ್ಬನ್‌ನಲ್ಲಿ ಹುಟ್ಟಿ ಬೆಳೆದ ಕೈಲಿಲೆ ಜೊಂಡೊ ಇಲ್ಲಿ ಏಕದಿನ ಕ್ರಿಕೆಟ್‌ಗೆ ಪದಾರ್ಪಣೆ ಮಾಡುವ ಸಾಧ್ಯತೆ ಇದೆ.

ಡಿವಿಲಿಯರ್ಸ್‌ ಮೂರು ಪಂದ್ಯಗಳಿಗೆ ಅಲಭ್ಯ

ಬೆರಳಿಗೆ ಗಾಯಗೊಂಡಿರುವ ಸ್ಫೋಟಕ ಬ್ಯಾಟ್ಸ್‌ಮನ್ ಎಬಿ ಡಿವಿಲಿಯರ್ಸ್ ಅವರನ್ನು ಮೊದಲ ಮೂರು ಏಕದಿನ ಪಂದ್ಯಗಳಿಂದ ದಕ್ಷಿಣ ಆಫ್ರಿಕಾ ಕೈಬಿಟ್ಟಿದೆ. ಅವರ ಬದಲಿಗೆ ಯಾರ ಹೆಸರನ್ನು ಕೂಡ ತಂಡದ ಆಡಳಿತ ಪ್ರಕಟಿಸಲಿಲ್ಲ.

ಭಾರತ ವಿರುದ್ಧದ ಮೂರನೇ ಟೆಸ್ಟ್ ಪಂದ್ಯದಲ್ಲಿ ಡಿವಿಲಿಯರ್ಸ್‌ ಗಾಯಗೊಂಡಿದ್ದರು. ಅವರಿಗೆ ಎರಡು ವಾರಗಳ ವಿಶ್ರಾಂತಿ ಅಗತ್ಯವಿದೆ ಎಂದು ತಂಡದ ಆಡಳಿತ ತಿಳಿಸಿದೆ.

ಎರಡು ‘ಶತಕ’ಗಳ ಸನಿಹ ಕೊಹ್ಲಿ

ವಿಶ್ವ ಕ್ರಿಕೆಟ್‌ನ ಮಿಂಚು, ವಿರಾಟ್ ಕೊಹ್ಲಿ ಮತ್ತೆ ಎರಡು ಸಾಧನೆಗಳ ಮೈಲಿಗಲ್ಲು ದಾಟಲು ಸಜ್ಜಾಗಿದ್ದಾರೆ. ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಯ ಆರು ಪಂದ್ಯಗಳಲ್ಲಿ ಸಿಕ್ಸರ್‌ ಮತ್ತು ಕ್ಯಾಚಿಂಗ್‌ನಲ್ಲಿ ನೂರರ ಗಡಿ ದಾಟುವ ಅವಕಾಶ ಅವರಿಗಿದೆ. ಅವರ ಖಾತೆಯಲ್ಲಿ ಈಗ 98 ಸಿಕ್ಸರ್‌ಗಳು ಮತ್ತು 94 ಕ್ಯಾಚ್‌ಗಳು ಇವೆ. ಈ ವರೆಗೆ ಕೊಹ್ಲಿ 839 ಬೌಂಡರಿಗಳನ್ನು ಕೂಡ ಸಿಡಿಸಿದ್ದಾರೆ

ತಂಡಗಳು

ಭಾರತ: ವಿರಾಟ್ ಕೊಹ್ಲಿ (ನಾಯಕ), ಶಿಖರ್ ಧವನ್‌, ರೋಹಿತ್ ಶರ್ಮಾ, ಅಜಿಂಕ್ಯ ರಹಾನೆ, ಶ್ರೇಯಸ್ ಅಯ್ಯರ್‌, ಮನೀಶ್ ಪಾಂಡೆ, ದಿನೇಶ್ ಕಾರ್ತಿಕ್‌, ಕೇದಾರ್ ಜಾಧವ್‌, ಮಹೇಂದ್ರ ಸಿಂಗ್ ದೋನಿ (ವಿಕೆಟ್‌ ಕೀಪರ್‌), ಹಾರ್ದಿಕ್ ಪಾಂಡ್ಯ, ಯಜುವೇಂದ್ರ ಚಾಹಲ್‌, ಕುಲದೀಪ್‌ ಯಾದವ್‌, ಅಕ್ಷರ ಪಟೇಲ್‌, ಭುವನೇಶ್ವರ್ ಕುಮಾರ್‌, ಜಸ್‌ಪ್ರೀತ್ ಬೂಮ್ರಾ, ಮಹಮ್ಮದ್ ಶಮಿ, ಶಾರ್ದೂಲ್ ಠಾಕೂರ್‌.

ದಕ್ಷಿಣ ಆಫ್ರಿಕಾ: ಫಾಫ್‌ ಡುಪ್ಲೆಸಿ (ನಾಯಕ), ಹಾಶೀಂ ಆಮ್ಲಾ, ಕ್ವಿಂಟನ್‌ ಡಿ ಕಾಕ್‌ (ವಿಕೆಟ್ ಕೀಪರ್), ಜೆ.ಪಿ.ಡುಮಿನಿ, ಇಮ್ರಾನ್ ತಾಹಿರ್‌. ಏಡನ್ ಮರ್ಕರಮ್‌, ಡೇವಿಡ್‌ ಮಿಲ್ಲರ್‌, ಮಾರ್ನೆ ಮಾರ್ಕೆಲ್‌, ಕ್ರಿಸ್ ಮಾರಿಸ್‌, ಲುಂಗಿಸಾನಿ ಗಿಡಿ, ಆ್ಯಂಡಿಲೆ ಪಿಶುವಾಯೊ, ಕಗಿಸೊ ರಬಾಡ, ತಬ್ರೈಸ್‌ ಶಂಸಿ, ಕೈಲಿಲೆ ಜೊಂಡೊ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry