ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಕ್ತಚಂದಿರನ ಅಚ್ಚರಿಯ ಸೊಬಗು

Last Updated 31 ಜನವರಿ 2018, 19:30 IST
ಅಕ್ಷರ ಗಾತ್ರ

ಬೆಂಗಳೂರು: ನಭೋಮಂಡಲದಲ್ಲಿ ಬುಧವಾರ ಘಟಿಸಿದ ವಿಶೇಷ ಚಂದ್ರಗ್ರಹಣವನ್ನು ಸಾವಿರಾರು ಜನರು ಕಣ್ತುಂಬಿಕೊಂಡರು. ಮೂರು ವೈವಿಧ್ಯಗಳನ್ನು ಒಳಗೊಂಡ ಚಂದಮಾಮನ ವೀಕ್ಷಣೆಗಾಗಿ ಜವಾಹರ್‌ಲಾಲ್‌ ನೆಹರೂ ತಾರಾಲಯಕ್ಕೆ ಸಾಗರೋಪಾದಿಯಲ್ಲಿ ಜನ ಹರಿದು ಬಂದಿದ್ದರು.

ತಾರಾಲಯಕ್ಕೆ ಮಧ್ಯಾಹ್ನ 3 ಗಂಟೆಯಿಂದಲೇ ಜನ ಬರಲು ಪ್ರಾರಂಭಿಸಿದರು. ಸಂಜೆ 6 ಗಂಟೆ ಆಗುವಷ್ಟರಲ್ಲಿ ಹನುಮಂತನ ಬಾಲದಂತೆ ಸರತಿ ಸಾಲು ಬೆಳೆದಿತ್ತು. ಚಂದ್ರನ ಉದಯಕ್ಕಾಗಿಯೇ ಕಾಯುತ್ತಿದ್ದ ಅನೇಕರು ಆಗಸದತ್ತಲೇ ದೃಷ್ಟಿ ನೆಟ್ಟಿದ್ದರು. ‘ಅಲ್ಲಿ ಕಾಣುತ್ತಿದ್ದಾನೆ, ಇಲ್ಲಿ ಕಾಣುತ್ತಿದ್ದಾನೆ’ ಎಂಬ ಉದ್ಗಾರ ಕೇಳಿ ಬರುತ್ತಿತ್ತು.

ಸಂಜೆ 6.30ಕ್ಕೆ ನಿಧಾನವಾಗಿ ಕತ್ತಲು ಆವರಿಸುತ್ತಿದ್ದಂತೆ ಚಂದ್ರನ ಹುಡುಕಾಟವೂ ಹೆಚ್ಚಾಯಿತು. ದೂರದ ಆಕಾಶದಲ್ಲಿ ಒಂದು ಕೆಂಪು ಬೆಳಕು ಕಂಡರೂ ‘ಅದು ಚಂದಿರನೇ ಇರಬೇಕು’ ಎನ್ನುವ ಊಹೆಗಳು ಅಲ್ಲಿ ಹುಟ್ಟುತ್ತಿದ್ದವು. ಸಂಜೆ 7.03ಕ್ಕೆ ಆಕಾಶದಲ್ಲಿ ತಿಳಿ ಕೆಂಪು ಬಣ್ಣದ ಕಾಯವನ್ನು ಕಂಡು ನೆರೆದಿದ್ದವರೆಲ್ಲರೂ ‘ಓಹೋ’ ಕೂಗಿ ಸಂಭ್ರಮಿಸಿದರು.

ತಾರಾಲಯದಲ್ಲಿ ಐದು ಟೆಲಿಸ್ಕೋಪ್‌ ಮತ್ತು ಎರಡು ಬೈನಾಕುಲರ್‌ಗಳ ಮೂಲಕ ವೀಕ್ಷಣೆಗೆ ಅನುಕೂಲ ಕಲ್ಪಿಸಲಾಗಿತ್ತು. ಸಾವಿರಾರು ಸಂಖ್ಯೆಯಲ್ಲಿ ಜನ ಬಂದಿದ್ದರಿಂದ ಹೆಚ್ಚಿನವರಿಗೆ ಅವುಗಳ ಮೂಲಕ ನೋಡುವ ಅವಕಾಶ ಸಿಗಲಿಲ್ಲ. ಟೆಲಿಸ್ಕೋಪಿನ ಮೂಲಕ ವಿಶಿಷ್ಟ ಚಂದ್ರನನ್ನು ನೋಡಬೇಕೆಂದು ಆಸೆ ಕಂಗಳಿಂದ ಬಂದಿದ್ದವರು ಬರಿಗಣ್ಣಿನಲ್ಲಿಯೇ ನೋಡಿ ಸಂತೃಪ್ತಿ ಪಟ್ಟುಕೊಳ್ಳಬೇಕಾಯಿತು. ‘ಚಂದ್ರ ದೊಡ್ಡದಾಗಿ ಕಾಣಲೇ ಇಲ್ಲ ಅಪ್ಪ’ ಎಂದು ಬೇಸರಿಸಿಕೊಂಡ ಮಗುವಿಗೆ ಬೈನಾಕುಲರ್‌ ಮೂಲಕ ಶಶಿಯನ್ನು ತೋರಿಸಿ ಖುಷಿ ಪಡಿಸುತ್ತಿದ್ದ ದೃಶ್ಯಗಳು ಇಲ್ಲಿ ಕಂಡು ಬಂದವು.

ಗ್ರಹಣ ಎಂದರೇನು? ಚಂದ್ರಗ್ರಹಣ ಯಾವಾಗ ಆಗುತ್ತದೆ? ಚಂದ್ರ ಏಕೆ ಕೆಂಪಾಗಿ ಕಾಣುತ್ತಿದ್ದಾನೆ ಎಂದು ಮಕ್ಕಳು ಕೇಳುತ್ತಿದ್ದ ಸಾಲು ಸಾಲು ಪ್ರಶ್ನೆಗಳಿಗೆ ಪೋಷಕರು ಸಮಾಧಾನದಿಂದ ಉತ್ತರಿಸುತ್ತಿದ್ದರು. ಟೆಲಿಸ್ಕೋಪ್‌ ಮೂಲಕ ಮೊದಲ ಬಾರಿಗೆ ಆಕಾಶದ ಅಂದವನ್ನು ನೋಡಿದ ಮಕ್ಕಳು, ಮತ್ತೆ ಮತ್ತೆ ನೋಡಬೇಕೆಂದು ಹಟ ಹಿಡಿಯುತ್ತಿದ್ದವು.

‘ಆಗಸದಲ್ಲಿ ವಿಸ್ಮಯವೇ ಕಂಡಿತು. ಅದರಲ್ಲಿ ಶಶಿಯನ್ನು ನೋಡಲು ಆಗಲಿಲ್ಲ. ಇನ್ನು ಮುಂದೆ ಪ್ರತಿ ಗ್ರಹಣವನ್ನು ನೋಡಲು ಅಪ್ಪನೊಂದಿಗೆ ಇಲ್ಲಿಗೆ ಬರುವೆ’ ಎಂದು ಪೂರ್ಣಪ್ರಜ್ಞ ಶಾಲೆಯ ಮೂರನೇ ತರಗತಿ ವಿದ್ಯಾರ್ಥಿನಿ ರಕ್ಷಾ ತಿಳಿಸಿದಳು.

‘ದೊಡ್ಡ ಚಂದಮಾಮನನ್ನು ತೋರಿಸುತ್ತೇನೆ ಎಂದು ಅಜ್ಜಿ ಇಲ್ಲಿಗೆ ಕರೆದುಕೊಂಡು ಬಂದರು. ಕೆಂಪು ಚಂದಿರನ ನೋಡಿದೆ’ ಎಂದು ಯುಕೆಜಿ ಓದುತ್ತಿರುವ ಅರ್ಜುನ್‌ ಕೃಷ್ಣಂ ತೊದಲು ನುಡಿಗಳಲ್ಲಿ ಹೇಳಿದ.

‘ಈ ವಿಶಿಷ್ಟ ವಿದ್ಯಮಾನವನ್ನು ನೋಡಬೇಕೆಂಬ ಕುತೂಹಲ ಉಂಟಾಗಿತ್ತು. ಮಕ್ಕಳಿಗೂ ಗ್ರಹಣದ ಬಗ್ಗೆ ಪರಿಚಯಿಸಬೇಕೆಂದು ಕರೆದುಕೊಂಡು ಬಂದಿದ್ದೇನೆ. ಜನ ಹೆಚ್ಚಾಗಿದ್ದರಿಂದ ಮುಕ್ತವಾಗಿ ವೀಕ್ಷಣೆ ಸಾಧ್ಯವಾಗಲಿಲ್ಲ’ ಎಂದು ಶೇಷಾದ್ರಿಪುರದ ಉಮಾಶಂಕರ್‌ ಅಭಿಪ್ರಾಯ ವ್ಯಕ್ತಪಡಿಸಿದರು.

ನಗರದ ವಿವಿಧ ಕಡೆಗಳಲ್ಲೂ ಗ್ರಹಣ ವೀಕ್ಷಣೆ: ಬ್ರೇಕ್‌ಥ್ರೂ ಸಂಸ್ಥೆ ವಿಜಯನಗರ, ಮತ್ತಿಕೆರೆ, ಆರ್‌.ಟಿ.ನಗರ... ಹೀಗೆ ಒಂಬತ್ತು ಕಡೆಗಳಲ್ಲಿ ಚಂದ್ರಗ್ರಹಣ ವೀಕ್ಷಣೆಗೆ ಅವಕಾಶ ಕಲ್ಪಿಸಿತ್ತು. ‘ಕೆಂಗೇರಿಯಲ್ಲಿ 800ಕ್ಕೂ ಹೆಚ್ಚು ಮಂದಿ ಗ್ರಹಣ ವೀಕ್ಷಿಸಿದರು. ವಿವಿಧ ಕಡೆಗಳಲ್ಲೂ ಜನರ ಪ್ರತಿಕ್ರಿಯೆ ಚೆನ್ನಾಗಿತ್ತು’ ಎಂದು ಸಂಸ್ಥೆಯ ಸದಸ್ಯ ಭರತ್‌ ಕುಮಾರ್‌ ತಿಳಿಸಿದರು.

ದೇವಸ್ಥಾನಗಳಲ್ಲಿ ವಿಶೇಷ ಪೂಜೆ

ಚಂದ್ರಗ್ರಹಣ ಹಿನ್ನೆಲೆಯಲ್ಲಿ ನಗರದ ದೇವಸ್ಥಾನಗಳಲ್ಲಿ ವಿಶೇಷ ಪೂಜೆಗಳು ಹಾಗೂ ಅಭಿಷೇಕಗಳನ್ನು ನಡೆಸಲಾಯಿತು. ಗ್ರಹಣ ಕಾಲದಲ್ಲಿ ಬಹಳಷ್ಟು ದೇವಾಲಯಗಳಿಗೆ ಬೀಗ ಹಾಕಲಾಗಿತ್ತು.

***

ವರ್ಷಗಳ ಹಿಂದೆ ನಡೆದಿದ್ದ ಕಂಕಣ ಸೂರ್ಯಗ್ರಹಣ ವೀಕ್ಷಿಸಲು ನೂರಾರು ಜನ ಬಂದಿದ್ದರು. ಆ ನಂತರ ಇಷ್ಟು ಜನ ಸೇರಿರುವುದು ಈಗಲೇ.
–ಲಕ್ಷ್ಮಿ, ನೆಹರೂ ತಾರಾಲಯದ ವೈಜ್ಞಾನಿಕ ಅಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT