ಬೆಂಗಳೂರಿನ ವೈದ್ಯ ದಂಪತಿ ದುರ್ಮರಣ

7
ತಮಿಳುನಾಡಿನ ಕೃಷ್ಣಗಿರಿ ಬಳಿ ಅಪಘಾತ * ದೇವಸ್ಥಾನಕ್ಕೆ ಹೋಗಿ ವಾಪಸ್‌ ಬರುತ್ತಿದ್ದಾಗ ಅವಘಡ

ಬೆಂಗಳೂರಿನ ವೈದ್ಯ ದಂಪತಿ ದುರ್ಮರಣ

Published:
Updated:

ಬೆಂಗಳೂರು: ತಮಿಳುನಾಡಿನ ಕೃಷ್ಣಗಿರಿ ಬಳಿಯ ಶೂಲಗಿರಿಯಲ್ಲಿ ಸಂಭವಿಸಿದ ಅಪಘಾತದಲ್ಲಿ ನಗರದ ವೈದ್ಯ ಡಾ. ರಾಮಚಂದ್ರನ್‌ (70), ಪತ್ನಿ ಡಾ. ಅಂಬುಜಂ (65) ಹಾಗೂ ಕಾರು ಚಾಲಕ ಫೈಸನ್‌ (37) ದುರ್ಮರಣಕ್ಕೀಡಾಗಿದ್ದಾರೆ.

ಆರ್‌.ಟಿ.ನಗರದಲ್ಲಿರುವ ಲಕ್ಷ್ಮಿ ಆಸ್ಪತ್ರೆಯ ಮಾಲೀಕರಾಗಿದ್ದ ದಂಪತಿಯು ಕೇರಳದ ಗುರುವಾಯೂರಿನಲ್ಲಿರುವ ಕೃಷ್ಣ ದೇವಸ್ಥಾನಕ್ಕೆ ಹೋಗಿದ್ದರು. ಅಲ್ಲಿಂದ ನಗರಕ್ಕೆ ಮಂಗಳವಾರ ಸಂಜೆ ವಾಪಸ್‌ ಬರುತ್ತಿದ್ದಾಗ ಈ ಅವಘಡ ಸಂಭವಿಸಿದೆ.

ಕೃಷ್ಣಗಿರಿ– ಹೊಸೂರು ಹೆದ್ದಾರಿ ಮೂಲಕ ಕಾರಿನಲ್ಲಿ ದಂಪತಿಯು ನಗರಕ್ಕೆ ಬರುತ್ತಿದ್ದರು. ಫೈಸನ್‌ ಕಾರು ಚಲಾಯಿಸುತ್ತಿದ್ದರೆ, ಹಿಂಬದಿ ಸೀಟಿನಲ್ಲಿ ದಂಪತಿ ಕುಳಿತುಕೊಂಡಿದ್ದರು. ಕರ್ನಾಟಕದಿಂದ ತಮಿಳುನಾಡಿನ ನಮಕ್ಕಲ್‌ಗೆ ಹೊರಟಿದ್ದ ಲಾರಿಯು ಕಾರಿಗೆ ಡಿಕ್ಕಿ ಹೊಡೆದಿತ್ತು. 100 ಮೀಟರ್‌ನಷ್ಟು ಕಾರನ್ನು ಉಜ್ಜಿಕೊಂಡು ಹೋಗಿತ್ತು. ಅದರಿಂದ ಕಾರು ಸಂಪೂರ್ಣ ಜಖಂಗೊಂಡು ಮೂವರೂ ಸ್ಥಳದಲ್ಲೇ ಅಸುನೀಗಿದರು.

ಸ್ಥಳಕ್ಕೆ ಬಂದ ಶೂಲಗಿರಿ ಠಾಣೆ ಪೊಲೀಸರು, ಶವಗಳನ್ನು ಮರಣೋತ್ತರ ಪರೀಕ್ಷೆಗಾಗಿ ಹೊಸೂರು ಸರ್ಕಾರಿ ಆಸ್ಪತ್ರೆಗೆ ಸಾಗಿಸಿದರು. ಅಪಘಾತದ ಬಳಿಕ ಲಾರಿ ಚಾಲಕ ಪರಾರಿಯಾಗಿದ್ದು, ಆತನ ವಿರುದ್ಧ ಎಫ್‌ಐಆರ್‌ ದಾಖಲಿಸಿಕೊಳ್ಳಲಾಗಿದೆ.

ದಂಪತಿಯ ಶವಗಳನ್ನು ನಗರದ ಲಕ್ಷ್ಮಿ ಆಸ್ಪತ್ರೆಗೆ ಬುಧವಾರ ಬೆಳಿಗ್ಗೆ ತರಲಾಗಿತ್ತು. ಆಸ್ಪತ್ರೆ ಎದುರು ಹೆಚ್ಚಿನ ಸಂಖ್ಯೆಯಲ್ಲಿ  ಜಮಾಯಿಸಿದ್ದ ಜನ, ವೈದ್ಯರ ಕೆಲಸಗಳನ್ನು ನೆನೆದು ಕಣ್ಣೀರಿಟ್ಟರು. ಹೆಬ್ಬಾಳದ ವಿದ್ಯುತ್‌ ಚಿತಾಗಾರದಲ್ಲಿ ಬೆಳಿಗ್ಗೆ ಅಂತ್ಯಕ್ರಿಯೆ ನಡೆಯಿತು.

‘ರಾಮಚಂದ್ರನ್‌ ಹಾಗೂ ಅಂಬುಜಂ ಸ್ತ್ರೀ ರೋಗ ತಜ್ಞರು. ಅವರ ಇಬ್ಬರು ಗಂಡು ಮಕ್ಕಳು ಸಹ ವೈದ್ಯರು.1991ರಲ್ಲಿ ದಂಪತಿಯು ಈ ಆಸ್ಪತ್ರೆ ತೆರೆದಿದ್ದರು. ಆರಂಭದಲ್ಲಿ ಸ್ತ್ರೀರೋಗ ವಿಭಾಗ ಮಾತ್ರ ಇಲ್ಲಿತ್ತು. ಈಗ ತುರ್ತು ನಿಗಾ ಘಟಕ ಸೇರಿದಂತೆ 20 ವಿಭಾಗಗಳು ಕಾರ್ಯನಿರ್ವಹಿಸುತ್ತಿವೆ’ ಎಂದು ಸಿಬ್ಬಂದಿ ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry