ಸೋಂಪುರ ಕೆರೆ ಮಧ್ಯೆ ರಸ್ತೆ ನಿರ್ಮಾಣ

7

ಸೋಂಪುರ ಕೆರೆ ಮಧ್ಯೆ ರಸ್ತೆ ನಿರ್ಮಾಣ

Published:
Updated:
ಸೋಂಪುರ ಕೆರೆ ಮಧ್ಯೆ ರಸ್ತೆ ನಿರ್ಮಾಣ

ಬೆಂಗಳೂರು: ಸರ್ಜಾಪುರ ಮುಖ್ಯ ರಸ್ತೆ ಬಳಿಯ ಸೋಂಪುರ ಕೆರೆಯ ಮಧ್ಯೆಯೇ ರಸ್ತೆ ನಿರ್ಮಾಣವಾಗುತ್ತಿದೆ.

ಜಲಮೂಲದ ದಡದಲ್ಲಿ ತಲೆ ಎತ್ತಲಿರುವ ಅಪಾರ್ಟ್‌ಮೆಂಟ್‌ ಸಮುಚ್ಚಯಕ್ಕೆ ಸಂಪರ್ಕ ಕಲ್ಪಿಸಲು ಬಿಲ್ಡರ್‌ ಪಾಪರೆಡ್ಡಿ ಇದನ್ನು ನಿರ್ಮಿಸುತ್ತಿದ್ದಾರೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಪಾಪರೆಡ್ಡಿ ಅವರನ್ನು ಸಂಪರ್ಕಿಸಲು ಸಾಕಷ್ಟು ಬಾರಿ ಪ್ರಯತ್ನಿಸಲಾಯಿತು. ಆದರೆ, ಅವರು ಸಂಪರ್ಕಕ್ಕೆ ಸಿಗಲಿಲ್ಲ.

‘ರಸ್ತೆ ನಿರ್ಮಾಣ ತಡೆಯಲು ಪ್ರಯತ್ನಿಸಿದ್ದೇವೆ. ಅದಕ್ಕಾಗಿ ಕೆರೆಯ ಎರಡೂ ಕಡೆಗಳಲ್ಲಿ ಕಂದಕಗಳನ್ನು ಕೊರೆದಿದ್ದೆವು. ಆದರೆ, ಸುತ್ತಲಿನ ಜನರ ಬೇಡಿಕೆ ಮೇರೆಗೆ ಗ್ರಾಮ ಪಂಚಾಯಿತಿ ಅಧಿಕಾರಿಗಳು ರಸ್ತೆ ನಿರ್ಮಾಣಕ್ಕೆ ಅನುಮತಿ ನೀಡಿದ್ದಾರೆ’ ಎಂದು ಆನೇಕಲ್‌ ಉಪತಹಶೀಲ್ದಾರ್‌ ರಮೇಶ್‌ಬಾಬು ತಿಳಿಸಿದರು.

ಈ ಕೆರೆ ಗ್ರೇ ಹಾರ್ನ್‌ಬಿಲ್‌ ಪಕ್ಷಿಯ ಆವಾಸಸ್ಥಾನವಾಗಿದೆ. ಇಲ್ಲಿನ ಪಕ್ಷಿಗಳ ಬಗ್ಗೆ ಪರಿಸರ ಹೋರಾಟಗಾರ ವಿಜಯ್‌ ನಿಶಾಂತ್‌ ಅಧ್ಯಯನ ನಡೆಸುತ್ತಿದ್ದಾರೆ. ‘ಕಾಮಗಾರಿ ಪ್ರಾರಂಭವಾದ ದಿನದಿಂದ ಇಲ್ಲಿ ಪಕ್ಷಿಗಳ ಸಂಖ್ಯೆ ಗಣನೀಯವಾಗಿ ಕಡಿಮೆಯಾಗಿದೆ’ ಎಂದು ತಿಳಿಸಿದ್ದಾರೆ.

‘‌ಮುಂಗಾರಿನಲ್ಲಿ ಸುರಿದ ಭಾರಿ ಮಳೆಗೆ ಕೆರೆ ತುಂಬಿತ್ತು. ಈಗ ಕೆಸರನ್ನಷ್ಟೇ ಕಾಣುತ್ತಿದ್ದೇವೆ’ ಎಂದು ಸ್ಥಳೀಯ ನಿವಾಸಿ ದೀಪಾಂಜಲಿ ನಾಯ್ಕ್‌ ಮಾಹಿತಿ ನೀಡಿದರು.

‘ಈ ಭಾಗದಲ್ಲಿರುವ 26 ಜಲಮೂಲಗಳಿಗೂ ಇದೇ ಪರಿಸ್ಥಿತಿ ಉಂಟಾಗಿದ್ದು, ಅವುಗಳ ಪುನರುಜ್ಜೀವನ ಆಗಬೇಕಿದೆ. ನಗರದ ಜಲಮೂಲಗಳನ್ನು ಸಂರಕ್ಷಿಸುವಲ್ಲಿ ವಿಫಲರಾಗಿದ್ದೇವೆ’ ಎಂದು ಸರ್ಜಾಪುರ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘದ ಕಾರ್ಯದರ್ಶಿ ವಿ.ಆರ್. ಜಾಯ್‌ ತಿಳಿಸಿದರು.

ಬೆಂಗಳೂರು ನಗರ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಂ.ಎಸ್‌. ಅರ್ಚನಾ, ‘ರಸ್ತೆ ನಿರ್ಮಾಣವಾಗುತ್ತಿರುವ ಬಗ್ಗೆ ಮಾಹಿತಿ ಇಲ್ಲ. ಪರಿಶೀಲಿಸಿ ಕ್ರಮ ಕೈಗೊಳ್ಳುತ್ತೇನೆ’ ಎಂದು ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry