ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಕಲಿ ದಾಖಲೆ ಸಲ್ಲಿಸಿ 13 ವರ್ಷ ನೌಕರಿ!

Last Updated 31 ಜನವರಿ 2018, 19:30 IST
ಅಕ್ಷರ ಗಾತ್ರ

ಬೆಂಗಳೂರು: ನಕಲಿ ಅಂಕಪಟ್ಟಿ ಸಲ್ಲಿಸಿ ಸರ್ಕಾರಿ ಕೆಲಸ ಗಿಟ್ಟಿಸಿಕೊಂಡಿದ್ದ ಕಮಲಾ (55) ಎಂಬುವರ ವಿರುದ್ಧ ವಿಧಾನಸೌಧ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.

ಅವರ ವಿರುದ್ಧ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ (ಆಡಳಿತ) ಸಿ.ವೆಂಕಟೇಶಯ್ಯ ಸೋಮವಾರ ದೂರು ಕೊಟ್ಟಿದ್ದಾರೆ. ವಂಚನೆ (ಐಪಿಸಿ 420) ಹಾಗೂ ನಕಲಿ ದಾಖಲೆ ಸೃಷ್ಟಿ (468) ಆರೋಪಗಳಡಿ ಪ್ರಕರಣ ದಾಖಲಿಸಿಕೊಂಡಿದ್ದೇವೆ. ಕಮಲಾ ತಿಂಗಳ ರಜೆ ಮೇಲೆ ಸಂಬಂಧಿಕರ ಊರಿಗೆ ತೆರಳಿದ್ದು, ಸಂಪರ್ಕಕ್ಕೆ ಸಿಗುತ್ತಿಲ್ಲ ಎಂದು ಪೊಲೀಸರು ಹೇಳಿದ್ದಾರೆ.

13 ವರ್ಷದ ಬಳಿಕ ಗೊತ್ತಾಯ್ತು: ‘ಕೋಲಾರದ ಕಮಲಾ, ಮಧುರೈನ ಕಾಮರಾಜ ವಿಶ್ವವಿದ್ಯಾಲಯದ ಅಂಕಪಟ್ಟಿ ಸಲ್ಲಿಸಿ 2004ರಲ್ಲಿ ಸಮಗ್ರ ಶಿಶು ಅಭಿವೃದ್ಧಿ ಯೋಜನೆಯ ಮೇಲ್ವಿಚಾರಕರಾಗಿ ಕೆಲಸಕ್ಕೆ ನೇಮಕವಾದರು. ಸದ್ಯ ಅವರು ಶ್ರೀನಿವಾಸಪುರದಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ’ ಎಂದು ವೆಂಕಟೇಶಯ್ಯ ದೂರಿನಲ್ಲಿ ಹೇಳಿದ್ದಾರೆ.

‘ಕಮಲಾ ನಕಲಿ ಅಂಕಪಟ್ಟಿ ಕೊಟ್ಟಿರುವ ಬಗ್ಗೆ ಇತ್ತೀಚೆಗೆ ಸಚಿವೆ ಉಮಾಶ್ರೀ ಅವರಿಗೆ ಯಾರೋ ದೂರು ನೀಡಿದ್ದರು. ಈ ಬಗ್ಗೆ ಇಲಾಖಾ ತನಿಖೆ ನಡೆಸಿ ವರದಿ ಕೊಡುವಂತೆ ಸಚಿವರು ಸೂಚಿಸಿದ್ದರು.’

‘ಅಂತೆಯೇ ಅವರ ದಾಖಲೆಗಳನ್ನು ಪರಿಶೀಲಿಸಿ, ನಂತರ ಮಧುರೈ ವಿವಿಯ ಅಧಿಕಾರಿಗಳನ್ನು ದೂರವಾಣಿ ಮೂಲಕ ಸಂಪರ್ಕಿಸಿದೆವು. ಅವರಿಗೆ ಅಂಕಪಟ್ಟಿಯ ಪ್ರತಿಯನ್ನು ಮೇಲ್ ಮೂಲಕ ಕಳುಹಿಸಿದಾಗ, ಅದು ನಕಲಿ ಎಂಬುದನ್ನು ಖಚಿತಪಡಿಸಿದರು. ಹೀಗೆ, ನೌಕರಿ ಆಸೆಗೆ ಸರ್ಕಾರಕ್ಕೇ ಮೋಸ ಮಾಡಿರುವ ಕಮಲಾ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು’ ಎಂದು ಕೋರಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT