ಬಿಜೆಪಿ ಕಾರ್ಯಕರ್ತನ ಹತ್ಯೆ

7
ಕಾಂಗ್ರೆಸ್‌ ಮುಖಂಡನ ಮಗ ಸೇರಿ ಇಬ್ಬರು ಬಂಧನ

ಬಿಜೆಪಿ ಕಾರ್ಯಕರ್ತನ ಹತ್ಯೆ

Published:
Updated:
ಬಿಜೆಪಿ ಕಾರ್ಯಕರ್ತನ ಹತ್ಯೆ

ಬೆಂಗಳೂರು: ಜೆ.ಸಿ.ನಗರದಲ್ಲಿ ಬಿಜೆಪಿ ಕಾರ್ಯಕರ್ತ ಸಂತೋಷ್‌ (28) ಎಂಬುವರನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಬುಧವಾರ ಹತ್ಯೆ ಮಾಡಲಾಗಿದೆ. ಈ ಸಂಬಂಧ ಕಾಂಗ್ರೆಸ್‌ನ ಜೆ.ಸಿ.ನಗರ ಬ್ಲಾಕ್‌ ಅಧ್ಯಕ್ಷ ಖಾದರ್‌ ಅವರ ಮಗ ವಾಸೀಂ ಸೇರಿ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.

ಚಿನ್ನಪ್ಪ ಗಾರ್ಡನ್‌ ನಿವಾಸಿ ಸಂತೋಷ್‌, ಸಂಜೆ 6 ಗಂಟೆಯ ಸುಮಾರಿಗೆ ಸ್ಥಳೀಯ ಬೇಕರಿಯೊಂದರ ಬಳಿ ನಿಂತುಕೊಂಡಿದ್ದರು. ಅಲ್ಲಿಗೆ ಬಂದಿದ್ದ ವಾಸೀಂ, ಫಿಲಿಪ್ಸ್‌, ಇರ್ಫಾನ್‌ ಹಾಗೂ ಉಮ್ಮರ್‌ ಅವರ ಜತೆ ಜಗಳ ತೆಗೆದು ಮಾರಕಾಸ್ತ್ರಗಳಿಂದ ಹೊಡೆದಿದ್ದರು.

ರಕ್ತದ ಮಡುವಿನಲ್ಲಿ ಬಿದ್ದಿದ್ದ ಸಂತೋಷ್‌ ಅವರನ್ನು ಸ್ಥಳೀಯರು ಜೈನ್‌ ಆಸ್ಪತ್ರೆಗೆ ಕರೆದೊಯ್ದರು. ತಪಾಸಣೆ ನಡೆಸಿದ ವೈದ್ಯರು, ಮಾರ್ಗಮಧ್ಯೆಯೇ ಅವರು ಮೃತಪಟ್ಟಿರುವುದಾಗಿ ತಿಳಿಸಿದರು.

‘ಕೊಲೆ ಸಂಬಂಧ ವಾಸೀಂ ಹಾಗೂ ಫಿಲಿಪ್ಸ್‌ನನ್ನು ಬಂಧಿಸಿದ್ದೇವೆ. ಇರ್ಫಾನ್‌ ಹಾಗೂ ಉಮ್ಮರ್‌ ತಲೆಮರೆಸಿಕೊಂಡಿದ್ದಾರೆ. ಅವರ ಪತ್ತೆಗೆ ವಿಶೇಷ ತಂಡ ರಚಿಸಿದ್ದೇವೆ’ ಎಂದು ಡಿಸಿಪಿ ಚೇತನ್‌ಸಿಂಗ್‌ ರಾಥೋಡ್‌ ತಿಳಿಸಿದರು.

ಗಾಂಜಾ ಮಾರಾಟ ತಡೆದಿದ್ದಕ್ಕೆ ಕೃತ್ಯ:

‘ಚಿನ್ನಪ್ಪ ಗಾರ್ಡನ್‌ನಲ್ಲಿ ಜ. 29ರಂದು ಕೆಲವರು ಗಾಂಜಾ ಮಾರಾಟ ಮಾಡುತ್ತಿದ್ದರು. ಅವರನ್ನು ತರಾಟೆಗೆ ತೆಗೆದುಕೊಂಡಿದ್ದ ಸಂತೋಷ್‌, ಗಾಂಜಾ ಮಾರಾಟ ಮಾಡದಂತೆ ಎಚ್ಚರಿಕೆ ನೀಡಿ ಕಳುಹಿಸಿದ್ದರು. ಅದೇ ಕಾರಣಕ್ಕೆ ವಾಸೀಂ ಗುಂಪು ಕಟ್ಟಿಕೊಂಡು ಬಂದು ಹತ್ಯೆ ಮಾಡಿದ್ದಾನೆ’ ಎಂದು ಸಂತೋಷ್‌ ಸ್ನೇಹಿತ ಅಶೋಕ ದೂರಿದರು.

‘ಮಂಗಳವಾರವಷ್ಟೇ (ಜ. 30) ಸಂತೋಷ್‌ ಹುಟ್ಟುಹಬ್ಬ ಆಚರಿಸಿಕೊಂಡಿದ್ದರು. ಅದೇ ದಿನ ಅಕ್ಕನಿಗೂ ಮಗು ಹುಟ್ಟಿತ್ತು. ಜತೆಗೆ 9 ತಿಂಗಳ ಹಿಂದಷ್ಟೇ ಅವರಿಗೆ ಮದುವೆ ಆಗಿತ್ತು.  ಅವರನ್ನು ಈಗ ಕೊಲೆ ಮಾಡಿರುವುದರಿಂದ ಕುಟುಂಬದವರಿಗೆ ದಿಕ್ಕು ತೋಚದಂತಾಗಿದೆ’ ಎಂದು ಹೇಳಿದರು.

ಠಾಣೆ ಎದುರು ಪ್ರತಿಭಟನೆ:

ಮೃತನ ಸಂಬಂಧಿಕರು ಹಾಗೂ ಸ್ಥಳೀಯರು, ಜೆ.ಸಿ.ನಗರ ಠಾಣೆ ಎದುರು ಬುಧವಾರ ರಾತ್ರಿ ಸೇರಿ ಪ್ರತಿಭಟನೆ ನಡೆಸಿದರು.

‘ಕಾಂಗ್ರೆಸ್‌ ಮುಖಂಡನ ಮಗನೆಂಬ ಕಾರಣಕ್ಕೆ ವಾಸೀಂ, ಹಲವು ಕ್ರಿಮಿನಲ್‌ ಚಟುವಟಿಕೆ ನಡೆಸುತ್ತಿದ್ದಾನೆ. ಯುವಕರ ತಂಡ ಕಟ್ಟಿಕೊಂಡು ಗಾಂಜಾ ಮಾರಾಟ ಮಾಡಿಸುತ್ತಿದ್ದಾನೆ. ಈತನ ಹಾವಳಿಯಿಂದ ಚಿನ್ನಪ್ಪ ಗಾರ್ಡನ್‌ ನಿವಾಸಿಗಳಿಗೆ ನೆಮ್ಮದಿ ಇಲ್ಲದಂತಾಗಿದೆ’ ಎಂದು ಸ್ಥಳೀಯರು ಆರೋಪಿಸಿದರು.

ಸಂತೋಷ್‌ ಭಾವ ಶಿವು, ‘ಕೊಲೆ ಪ್ರಕರಣದಲ್ಲಿ ವಾಸೀಂ ಹಾಗೂ ಆತನ ಸಹಚರರಿಗೆ ಕಠಿಣ ಶಿಕ್ಷೆಯಾಗಬೇಕು. ಕುಟುಂಬಕ್ಕೆ ನ್ಯಾಯ ಒದಗಿಸಬೇಕು’ ಎಂದು ಒತ್ತಾಯಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry