ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪರೀಕ್ಷಾ ಪದ್ಧತಿ: ಸುಧಾರಣೆ ತರಲು ‘ಪ್ರಗತಿ’ ಯೋಜನೆ

Last Updated 31 ಜನವರಿ 2018, 19:30 IST
ಅಕ್ಷರ ಗಾತ್ರ

ಬೆಂಗಳೂರು: ಎಸ್‌ಎಸ್‌ಎಲ್‌ಸಿ ಹಾಗೂ ಪಿಯು ಪರೀಕ್ಷಾ ಪದ್ಧತಿಯಲ್ಲಿ ಸುಧಾರಣೆ ತರಲು ₹80 ಕೋಟಿ ವೆಚ್ಚದಲ್ಲಿ ತಂತ್ರಜ್ಞಾನ ಆಧಾರಿತ ‘ಪ್ರಗತಿ’ ಯೋಜನೆ ಜಾರಿಗೊಳಿಸಲು ಸರ್ಕಾರ ಮುಂದಾಗಿದೆ.

ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ಹಾಗೂ ಪದವಿ ಪೂರ್ವ ಶಿಕ್ಷಣ ಇಲಾಖೆ ನಡೆಸುವ ಪರೀಕ್ಷೆಗಳಿಗೆ ಏಕ ನಿರ್ವಹಣಾ ವ್ಯವಸ್ಥೆಯನ್ನು ಅಸ್ತಿತ್ವಕ್ಕೆ ತರುವುದು ಈ ಯೋಜನೆಯ ಉದ್ದೇಶ. ಲೋಪಗಳಾಗದಂತೆ ತಡೆಯುವುದು ಹಾಗೂ ದೋಷ ರಹಿತ ದಾಖಲೆಗಳನ್ನು ನೀಡಲು ಈ ನೂತನ ವ್ಯವಸ್ಥೆ ಅನುಕೂಲಕಾರಿಯಾಗಲಿದೆ ಎಂಬ ಉದ್ದೇಶದಿಂದ ಸಚಿವ ಸಂಪುಟ ಸಭೆಯಲ್ಲಿ ಯೋಜನೆಗೆ ಒಪ್ಪಿಗೆ ನೀಡಲಾಗಿದೆ ಎಂದು ಸಂಸದೀಯ ಸಚಿವ ಟಿ.ಬಿ. ಜಯಚಂದ್ರ ಮಾಧ್ಯಮ ಪ್ರತಿನಿಧಿಗಳಿಗೆ ತಿಳಿಸಿದರು.

‍ಸಮಗ್ರ ಮಾಹಿತಿಯನ್ನು ವಿದ್ಯಾರ್ಥಿಗಳಿಂದ ಆನ್‌ಲೈನ್ ಮೂಲಕವೇ ಪಡೆದರೆ ಲೋಪ ತಪ್ಪಿಸಬಹುದು ಹಾಗೂ ತ್ವರಿತವಾಗಿ ಸಂಗ್ರಹ ಸಾಧ್ಯ. ಪರೀಕ್ಷೆಗೆ ಒಂದು ತಿಂಗಳ ಮೊದಲು ಇ–ಪ್ರಶ್ನೆಗಳ ಬ್ಯಾಂಕ್‌ ಮಾಡುವುದರಿಂದ ಪ್ರಶ್ನೆ ಪತ್ರಿಕೆ ತಯಾರಿಸಲು ಭಂಡಾರ ಸಿಗುತ್ತದೆ. ಅದನ್ನು ಆಧರಿಸಿ ಹೊಸ ಪ್ರಶ್ನೆ ಪತ್ರಿಕೆ ರೂಪಿಸುವುದು ಸುಲಭವಾಗಲಿದೆ ಎಂಬ ಕಾರಣಕ್ಕೆ ಯೋಜನೆ ಅನುಷ್ಠಾನ ಮಾಡಲಾಗುತ್ತಿದೆ ಎಂದೂ ಅವರು ಹೇಳಿದರು.

ಪರೀಕ್ಷಾ ಕೇಂದ್ರಗಳ ನಿಗದಿ ಮತ್ತು ಮಂಜೂರಾತಿ ನೀಡುವ ಸರಳೀಕೃತ ಮತ್ತು ಗೋಪ್ಯ ವ್ಯವಸ್ಥೆ ಮಾಡುವುದು ಯೋಜನೆಯ ಭಾಗ.

ಮೌಲ್ಯಮಾಪಕರ ಆಧಾರ್ ಸಂಖ್ಯೆ: ಮೌಲ್ಯಮಾಪಕರನ್ನು ಆಧಾರ್ ಸಂಖ್ಯೆ ಮೂಲಕವೇ ಪರಿಶೀಲಿಸಿ ದೃಢೀಕರಿಸಲು ಉದ್ದೇಶಿಸಲಾಗಿದೆ. ಇದರಿಂದ ಮೌಲ್ಯಮಾಪನ ಕೇಂದ್ರಗಳ ಮಾಹಿತಿಯ ಭದ್ರತೆಯನ್ನು ಕಾಪಾಡಬಹುದು. ಮೌಲ್ಯಮಾಪನಕ್ಕೆ ಉತ್ತರ ಪತ್ರಿಕೆಗಳನ್ನು ನೀಡುವಾಗ ಗಣಕಾಧಾರಿತ ಹಂಚಿಕೆ ಮಾಡುವುದರಿಂದ ಯಾವ ಉತ್ತರ ಪತ್ರಿಕೆ ಯಾವ ಮೌಲ್ಯಮಾಪಕರಿಗೆ ಹೋಗಿದೆ ಎಂಬುದು ರಹಸ್ಯವಾಗಿರುತ್ತದೆ. ಇದರಿಂದ, ಸಾಕಷ್ಟು ಸುಧಾರಣೆಯಾಗಲಿದೆ ಎಂಬ ಕಾರಣಕ್ಕೆ ಯೋಜನೆ ಜಾರಿಗೊಳಿಸಲಾಗುತ್ತಿದೆ.

ಫಲಿತಾಂಶಗಳ ಸಂಕಲನ ಮತ್ತು ಪ್ರಕಟಣೆಗೆ ಇದರಿಂದ ಅನುಕೂಲವಾಗಲಿದೆ. ಮೌಲ್ಯ ಮಾಪನ ಕೇಂದ್ರಗಳಲ್ಲಿ ನೀಡಿದ ಅಂಕಗಳನ್ನು ಆನ್‌ಲೈನ್‌ನಲ್ಲಿ ಅಪ್‌ಲೋಡ್ ಮಾಡುವುದರಿಂದ ದೋಷ ರಹಿತ ಮಾಹಿತಿ ಸಿಗಲಿದೆ. ಮೌಲ್ಯಮಾಪಕರಿಗೆ ಇ–ಪಾವತಿ ಮೂಲಕ ಸಂಭಾವನೆ ನೀಡುವ ಪದ್ಧತಿ ಜಾರಿಗೊಳಿಸುವುದರಿಂದ ವಿಳಂಬ ಹಾಗೂ ಶಿಕ್ಷಕರು ಅಲೆದಾಡುವುದನ್ನು ತಪ್ಪಿಸಲು ಯೋಜನೆ ನೆರವಾಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT