ಗುರುವಾರ, 25 ಏಪ್ರಿಲ್ 2024
ADVERTISEMENT
ಈ ಕ್ಷಣ :
ADVERTISEMENT
ADVERTISEMENT
ಅವಳೊಲುಮೆಯ ‘ಅವ್ಯಕ್ತ’ ಹಾದಿಯಲ್ಲಿ
Last Updated 1 ಫೆಬ್ರುವರಿ 2018, 4:40 IST
ಅಕ್ಷರ ಗಾತ್ರ
ವಯಸ್ಸು ನಲ್ವತ್ತಾದರೂ ಮದುವೆಯಾಗದ ರಾಜಶೇಖರ್‌ ವೃತ್ತಿಯಲ್ಲೇ ಜೀವನದ ಸಾಫಲ್ಯ ಕಂಡುಕೊಂಡವನು. ಲೋಕ ಆಧುನಿಕತೆಗೆ ತೆರೆದುಕೊಂಡಿದ್ದರೂ ಅವನದ್ದು ಇನ್ನೂ ಲ್ಯಾಂಡ್‌ಲೈನ್‌ (ಸ್ಥಿರ ದೂರವಾಣಿ) ಅಭಿರುಚಿ. ಇಂತಿಪ್ಪ ರಾಜಶೇಖರ್‌ಗೆ ಬರುವ ಅನಾಮಿಕ ಪತ್ರವೊಂದು ಹೆಣ್ಣಿನ ಬಗ್ಗೆ ಅವ್ಯಕ್ತ ಭಾವನೆಗಳನ್ನು ಪುಟಿದೇಳಿಸುತ್ತವೆ.
ಅವಿವಾಹಿತನೊಬ್ಬನ ಮನದ ಕೊಳದೊಳಗೆ ಹೆಣ್ಣೊಬ್ಬಳು ಎಬ್ಬಿಸುವ ಭಾವತರಂಗಗಳು ಏನಿರಬಹುದು, ಅವನೊಳಗಿನ ಅವಳು ಹೇಗಿರಬಹುದು ಎಂಬ ಕುತೂಹಲ ಕಥನವನ್ನು ಕಟ್ಟಿಕೊಡುತ್ತದೆ ಡಾ.ಸಾಸ್ವೆಹಳ್ಳಿ ಸತೀಶ್ ನಿರ್ದೇಶನದ ‘ಅವ್ಯಕ್ತ’ ಕಿರುಚಿತ್ರ.
ರಾಷ್ಟ್ರಪ್ರಶಸ್ತಿ ಪುರಸ್ಕೃತ ನಟ ‘ಸಂಚಾರಿ’ ವಿಜಯ್ ನಾಯಕನಾಗಿ ನಟಿಸಿರುವ ಈ ಕಿರುಚಿತ್ರ ಕೊನೆಯವರೆಗೂ ಕುತೂಹಲ ಕಾಯ್ದುಕೊಂಡಿದೆ. ಛಾಯಾಗ್ರಹಣ, ಹಿನ್ನೆಲೆ ಸಂಗೀತ, ಕಲಾವಿದರ ಮನಸೆಳೆಯುವ ಅಭಿನಯದಿಂದಲೂ ‘ಅವ್ಯಕ್ತ’ ಪ್ರೇಕ್ಷಕರನ್ನು ಹಿಡಿದಿಡುತ್ತದೆ.
ಮೊಬೈಲ್, ಫೇಸ್‌ಬುಕ್, ವಾಟ್ಸ್‌ಆ್ಯಪ್ ಕಾಲದಲ್ಲಿಯೂ ಪತ್ರದ ಮೂಲಕ ಹೆಣ್ಣೊಬ್ಬಳು ಅವಿವಾಹಿತ ಗಂಡಿನ ಜತೆ ತನ್ನ ಭಾವನೆಗಳನ್ನು ಹಂಚಿಕೊಳ್ಳಲು ಹವಣಿಸುತ್ತಾಳೆ. ‘ಮಾಳವಿಕ’ ಎನ್ನುವ ಹೆಸರಿನಲ್ಲೇ ನಶೆ ಏರಿಸಿಕೊಳ್ಳುವ ಅವನು ಅವಳ ದೂರವಾಣಿ ಸಂಖ್ಯೆ ಪತ್ತೆ ಹಚ್ಚಲು ಒದ್ದಾಡುತ್ತಾನೆ. ಫೋನ್‌ನಲ್ಲಿ ದನಿ ಕೇಳಿಯೇ ಅವಳ ಬಗ್ಗೆ ರಾತ್ರಿಯಿಡೀ ಕನವರಿಸುವ ಪಾತ್ರಕ್ಕೆ ‘ಸಂಚಾರಿ’ ವಿಜಯ್ ಜೀವತುಂಬಿದ್ದಾರೆ. ಹೋರಾಟಗಾರ್ತಿ ಮಾಳವಿಕ ಪಾತ್ರದಲ್ಲಿ ಡಾ.ಜಾನ್ವಿ ಜ್ಯೋತಿ ಇಷ್ಟವಾಗುತ್ತಾರೆ.
‘ಮಾಳವಿಕ’ ಹೆಸರಿನ ಮೂರು ಪಾತ್ರಗಳು ಕಿರುಚಿತ್ರದಲ್ಲಿ ತೆರೆದುಕೊಳ್ಳುತ್ತವೆ. ನಿಗದಿತ ಸ್ಥಳದಲ್ಲಿ ಮಾಳವಿಕ ಎನ್ನುವ ಹೋರಾಟಗಾರ್ತಿಯನ್ನು ಭೇಟಿ ಮಾಡುವ ನಾಯಕ, ಅವಳ ಕಥೆಯನ್ನು ಕೇಳಿಸಿಕೊಳ್ಳುತ್ತಲೇ ಆಕೆಯ ಬಗ್ಗೆ ತಾನು ಹೊಂದಿದ್ದ ಕನಸಿನ ಗುಳ್ಳೆ ಒಡೆದರೂ ಮತ್ತೆ ಅವಳಲ್ಲಿ ಅನುರಕ್ತನಾಗುವ ಬಯಕೆಯನ್ನು ತೋರುತ್ತಾನೆ. ರಾಜಶೇಖರನ ಸಾಂಗತ್ಯಕ್ಕೆ ಹಂಬಲಿಸುವ ಮಾಳವಿಕ ತನ್ನ ಹೋರಾಟದ ಬದುಕಿನ ಫ್ಲಾಷ್‌ಬ್ಯಾಕ್ ತೆರೆದಿಡುತ್ತಾಳೆ.
ಕ್ರಾಂತಿಕಾರಿ ನಾಯಕನ ಮಾತಿಗೆ ಮರುಳಾಗಿ ಹೋರಾಟಗಳಲ್ಲಿ ಧುಮುಕುವ ಮಾಳವಿಕ, ಪ್ರೀತಿಯ ಹೆಸರಲ್ಲಿ ಅವನಿಂದಲೇ ಮೋಸ ಹೋಗುತ್ತಾಳೆ. ತಾನು ಕಂಡುಕೊಂಡಿದ್ದ ಹೋರಾಟ ಇದಲ್ಲ ಎಂದು ಮನವರಿಕೆಯಾಗಿ ಅಲ್ಲಿಂದ ನಾಗರಿಕ ಜಗತ್ತಿಗೆ ಮರಳುವ ಆಕೆ, ಹೋರಾಟದ ಮುಖವಾಡ ತೊಟ್ಟ ಹೋರಾಟಗಾರರು, ಬಡ್ಡಿ ವ್ಯವಹಾರ, ಮಹಲುಗಳಲ್ಲಿ ಬದುಕು ಕಟ್ಟಿಕೊಳ್ಳುವುದನ್ನು, ಬಡಮಕ್ಕಳನ್ನು ಹೋರಾಟಕ್ಕೆ ಪ್ರೇರೇಪಿಸುವ ವಾಸ್ತವಾಂಶಗಳನ್ನು ತೆರೆದಿಡುತ್ತಾಳೆ.
ಕ್ರಾಂತಿಕಾರಿ ನಾಯಕನ ಪ್ರೀತಿಯ ಸುಳಿಯಲ್ಲಿ ಸಿಲುಕಿದಾಗ ‘ಅವನಷ್ಟೇ ಸುಖಪಟ್ಟ ಅಂತ ಹೇಳಿದ್ರೆ ಆತ್ಮವಂಚನೆ ಆಗುತ್ತೆ. ಅವನೊಂದಿಗೆ ನಾನೂ ಸುಖಪಟ್ಟೆ’ ಎನ್ನುವ ನಾಯಕಿಯ ಬೋಲ್ಡ್‌ ಮಾತುಗಳು ಹೆಣ್ಣಿನ ಬದಲಾದ ಮನಸ್ಥಿತಿಗೆ ಕನ್ನಡಿ ಹಿಡಿಯುವಂತಿವೆ.
ಹೋರಾಟದಿಂದ ವಿಮುಖಳಾಗಿ ಬದುಕು ಕಟ್ಟಿಕೊಳ್ಳುವ ಮಾಳವಿಕ ತನಗೆ ಗಂಡಿನ ಸಾಂಗತ್ಯದ ಅಗತ್ಯವಿದೆ ಎನ್ನುವುದನ್ನು  ಬೋಲ್ಡಾಗಿ ಹೇಳುತ್ತಲೇ, ಇಷ್ಟಪಟ್ಟವನೊಂದಿಗೆ ಒಂದೇ ಸಾರಿ ಮಲಗಿದ್ದು ಎಂದು ಹೇಳುವಲ್ಲಿ ಹೆಣ್ಣಿನ ದೇಹಪಾವಿತ್ರ್ಯದ ನಿಬಂಧನೆ ಗೋಚರಿಸುತ್ತದೆ. ಇದನ್ನು ಸಾರಾಸಗಟಾಗಿ ಅಲ್ಲಗಳೆಯುವ ರಾಜಶೇಖರ್, ಹೆಣ್ಣೊಬ್ಬಳು ಎರಡನೇ ಮದುವೆಯಾಗುವಾಗ ಎದುರಾಗುವ ಸಂದೇಹಗಳು ಗಂಡಸೊಬ್ಬ ಎರಡನೇ ಮದುವೆಯಾಗುವಾಗ ಯಾಕೆ ನಗಣ್ಯವಾಗುತ್ತವೆ? ನಾವು ಮನಸಿನ ಶುದ್ಧತೆ ಬಗ್ಗೆ ಯಾಕೆ ಯೋಚಿಸುವುದಿಲ್ಲ ಎನ್ನುವ ಪ್ರಶ್ನೆಯನ್ನೂ ಮುಂದಿಡುತ್ತಾನೆ.
ಮಾಳವಿಕಾಳ ಮಾತು, ನಗು, ಸೌಂದರ್ಯಕ್ಕೆ ಮರುಳಾಗುವ ರಾಜಶೇಖರ್ ಅವಳನ್ನು ಮದುವೆಯಾಗುವ ಇಂಗಿತ ವ್ಯಕ್ತಪಡಿಸಿದಾಗ, ‘ದೇಹ, ಆತ್ಮ, ಮನಸು ಒಂದಾಗಬೇಕಿದೆ. ಅದಕ್ಕಾಗಿ ಮತ್ತೊಂದು ಭೇಟಿಗೆ ಕಾಯೋಣ’ ಎನ್ನುತ್ತಾಳೆ ಮಾಳವಿಕ.
ಗಂಡು–ಹೆಣ್ಣಿನ ಸಂಬಂಧದ ನಡುವಿನ ಸಂಕೀರ್ಣತೆಯನ್ನು ಹೇಳುವ ‘ಅವ್ಯಕ್ತ’, ಗಂಡಸಿನ ಮನದಾಳದಲ್ಲಿ ಹೆಣ್ಣಿನ ಬಗ್ಗೆ ಇರಬಹುದಾದ ಸಾಮಾನ್ಯ ಕುತೂಹಲವನ್ನು ಕೆದಕುತ್ತಲೇ, ಆಕೆಯನ್ನು ಭಿನ್ನ ನೆಲೆಯಲ್ಲಿ ನೋಡುವ ಅಗತ್ಯವನ್ನೂ ಪ್ರತಿಪಾದಿಸುತ್ತದೆ.
‘ಪತ್ರ ಬರೆದಾಕೆ ಮನೆ–ಮನಕೆ ಬರುವ ದಿನ ದೂರವಿಲ್ಲ’ ಎಂದು ಸಂಭ್ರಮಿಸುವ ರಾಜಶೇಖರ್‌ಗೆ ಮನೆಗೆ ಬಂದಾಗ ಮತ್ತೊಂದು ಪತ್ರ ಶಾಕ್ ನೀಡುತ್ತದೆ. ತನಗೆ ಪತ್ರ ಬರೆದ ಮಾಳವಿಕ, ತನ್ನೊಂದಿಗೆ ಫೋನ್‌ನಲ್ಲಿ ಮಾತನಾಡಿದ ಮಾಳವಿಕ, ಭೇಟಿ ಮಾಡಿದ ಮಾಳವಿಕ– ಈ ಮೂವರೂ ಒಂದೇ ಅಲ್ಲ ಎಂದು ತಿಳಿದಾಗ ಗೊಂದಲಕ್ಕೊಳಗಾಗುವ ಆತ, ಇವರ ಸಹವಾಸವೇ ಬೇಡ, ಮೊದಲಿನಂತೆ ಇದ್ದುಬಿಡೋಣ ಅಂದುಕೊಳ್ಳುತ್ತಾನೆ.
ಯಾರಲ್ಲೂ ಹೇಳಿಕೊಳ್ಳಲಾಗದ ಅವ್ಯಕ್ತ ಭಾವನೆಗಳ ಮನೋ ತಾಕಲಾಟದಲ್ಲಿಯೇ ಜೀಕುವ ನಾಯಕ, ವೇಶ್ಯೆಯೊಬ್ಬಳ ಬಳಿಗೆ ತೆರಳುತ್ತಾನೆ. ಅಲ್ಲಾದರೂ ತನ್ನನ್ನು ಕಂಡುಕೊಳ್ಳುವ ತನ್ನ ಭಾವನೆಗಳನ್ನು ವ್ಯಕ್ತಪಡಿಸಿಕೊಳ್ಳುವ ಬಯಕೆಯಲ್ಲಿರುವ ನಾಯಕನಿಗೆ ವೇಶ್ಯೆಯ ಹೆಸರು ಮತ್ತೊಮ್ಮೆ ‘ಅವ್ಯಕ್ತ’ ಭಾವನೆಗಳ ಜಾಲದೊಳಗೆ ಸಿಲುಕುವಂತೆ ಮಾಡುತ್ತದೆ. ಹೆಣ್ಣಿನೊಲುವೆಯ ಹಾದಿ ಹಿಡಿವ ನಾಯಕನಿಗೆ ಅವಳ ಕಣ್ಣಿನೊಳಗೆ ಕಾವು ಸಿಗುವುದೇ ಎನ್ನುವುದನ್ನು ‘ಅವ್ಯಕ್ತ’ ಕಿರುಚಿತ್ರ ನೋಡಿಯೇ ತಿಳಿಯಬೇಕು.
ರಾಜಧಾನಿ ಸೇರಿದಂತೆ ರಾಜ್ಯದ ಇತರೆಡೆ ಪ್ರದರ್ಶನ ಕಂಡಿರುವ ‘ಅವ್ಯಕ್ತ’ಕ್ಕೆ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಯೂಟ್ಯೂಬ್‌ನಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಜನ ವೀಕ್ಷಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT