ಮಂಗಳವಾರ, ಡಿಸೆಂಬರ್ 10, 2019
21 °C

ಕಾರು ಅಪಘಾತ: ಮೂವರು ವಿದ್ಯಾರ್ಥಿಗಳ ಸಾವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಾರು ಅಪಘಾತ: ಮೂವರು ವಿದ್ಯಾರ್ಥಿಗಳ ಸಾವು

ಮೈಸೂರು: ನಗರದ ಹೊರವಲಯದ ದಟ್ಟಗಳ್ಳಿ ರಿಂಗ್‌ ರಸ್ತೆಯಲ್ಲಿ ಬುಧವಾರ ಚಾಲಕನ ನಿಯಂತ್ರಣ ಕಳೆದುಕೊಂಡ ಕಾರು ವಿದ್ಯುತ್‌ ಕಂಬಕ್ಕೆ ಡಿಕ್ಕಿ ಹೊಡೆದು ನಾಲ್ಕು ಪಲ್ಟಿಯಾದ ಪರಿಣಾಮ ಮೂವರು ವಿದ್ಯಾರ್ಥಿಗಳು ಮೃತಪಟ್ಟಿದ್ದು, ಇಬ್ಬರು ಗಾಯಗೊಂಡಿದ್ದಾರೆ.

ಎನ್‌.ಆರ್‌.ಮೊಹಲ್ಲಾದ ಎಸ್‌.ಎಂ.ಸಜ್ಜಾದ್‌ ಎಂಬುವರ ಪುತ್ರ ಸೈಯದ್‌ ಆಸಿಂ (21), ಹುಣಸೂರಿನ ನಸ್ರುಲ್ಲಾ ಅವರ ಪುತ್ರ ಮೊಹಮ್ಮದ್‌ ಫರಾನ್‌ (21) ಹಾಗೂ ಟಿ.ಕೆ.ಬಡಾವಣೆ ವೀರೇಶ್‌ ಎಂಬುವರ ಪುತ್ರಿ ದಿವ್ಯಾ (20) ಮೃತಪಟ್ಟವರು. ಹುಣಸೂರಿನ ರೆಯಾನ್ ಉಲ್‌ ರೆಹಮಾನ್‌ (22) ಹಾಗೂ ಕುವೆಂಪುನಗರದ ಸ್ಫೂರ್ತಿ (21) ಗಾಯಗೊಂಡಿದ್ದು, ಅಪೋಲೊ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

‘ಹೋಟೆಲೊಂದರಲ್ಲಿ ಮಧ್ಯಾಹ್ನದ ಊಟ ಮುಗಿಸಿ ಬೋಗಾದಿ ಕಡೆಯಿಂದ ದಟ್ಟಗಳ್ಳಿಯತ್ತ ರಿಂಗ್‌ರಸ್ತೆಯಲ್ಲಿ ಸಾಗುತ್ತಿದ್ದರು. ಅತಿ ವೇಗವಾಗಿ ಸಾಗುತ್ತಿದ್ದ ಕಾರು ದಟ್ಟಗಳ್ಳಿಯ ವಿದ್ಯುತ್ ಪ್ರಸರಣ ನಿಗಮದ ಕಚೇರಿಯ ಸಮೀಪದ ತಿರುವಿನಲ್ಲಿ ಚಾಲಕನ ನಿಯಂತ್ರಣ ಕಳೆದುಕೊಂಡಿದೆ. ಎಡಬದಿಯ ಚರಂಡಿಯ ಡಕ್ ಮೇಲೇರಿ ಸುಮಾರು 10 ಮೀಟರ್‌ ಸಾಗಿ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದಿದೆ’ ಎಂದು ಕುವೆಂಪುನಗರ ಸಂಚಾರ ಠಾಣೆಯ ಪೊಲೀಸರು ಮಾಹಿತಿ ನೀಡಿದ್ದಾರೆ.

ಡಿಕ್ಕಿ ಹೊಡೆದ ರಭಸಕ್ಕೆ ಕಾರು ನಾಲ್ಕು ಪಲ್ಟಿಯಾಗಿದೆ. ಪರಿಣಾಮ ಕಾರಿನ ಬಾಗಿಲುಗಳು ತೆರೆದುಕೊಂಡು ಮೂವರು ಕಾರಿನಿಂದ ತೂರಿ ಬಿದ್ದಿದ್ದಾರೆ. ತಲೆಗೆ ಬಲವಾದ ಪೆಟ್ಟು ಬಿದ್ದು ತೀವ್ರ ರಕ್ತಸ್ರಾವದಿಂದ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದ ಮೃತದೇಹಗಳು ಅಪಘಾತದ ಭೀಕರತೆಯನ್ನು ಹೇಳುತ್ತಿದ್ದವು. ಕಾರು ಸಂಪೂರ್ಣ ನಜ್ಜುಗುಜ್ಜಾಗಿದೆ. ಕೆ.ಆರ್‌.ಆಸ್ಪತ್ರೆಯ ಶವಾಗಾರದಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ ವಾರಸುದಾರರಿಗೆ ಮೃತದೇಹಗಳನ್ನು ಹಸ್ತಾಂತರಿಸಲಾಯಿತು.

ಪ್ರತಿಕ್ರಿಯಿಸಿ (+)