ಮಂಗಳವಾರ, ಡಿಸೆಂಬರ್ 10, 2019
18 °C

ಅಧಿಕಾರಿಗಳಿಗೆ ತರಾಟೆ, ತನಿಖೆಗೆ ಕ್ರಮ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಅಧಿಕಾರಿಗಳಿಗೆ ತರಾಟೆ, ತನಿಖೆಗೆ ಕ್ರಮ

ರಾಯಚೂರು: ವಿವಿಧ ಇಲಾಖೆಗಳಡಿ ನಡೆಯುವ ನಗರದ ಹಾಸ್ಟೇಲ್‌ಗಳು ಹಾಗೂ ಅಂಗನವಾಡಿ ಕೇಂದ್ರಗಳಿಗೆ ರಾಜ್ಯ ಉಪಲೋಕಾಯುಕ್ತ ಎನ್‌.ಆನಂದ ಅವರು ಬುಧವಾರ ದಿಢೀರ್‌ ಭೇಟಿ ನೀಡಿದರು. ಅಲ್ಲಿನ ಅವ್ಯವಸ್ಥೆ ಕಂಡು ವಾರ್ಡನ್‌ಗಳನ್ನು ತರಾಟೆಗೆ ತೆಗೆದುಕೊಂಡರು.

ಪ್ರಮುಖವಾಗಿ ಅಜಾದ್‌ನಗರದಲ್ಲಿರುವ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಮೆಟ್ರಿಕ್‌ ನಂತರದ ಬಾಲಕರ ವಸತಿ ನಿಲಯದ ಅವ್ಯವಸ್ಥೆ ನೋಡಿದ ಉಪಲೋಕಾಯುಕ್ತರು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ವಿದ್ಯಾರ್ಥಿಗಳು ವಾಸಿಸುವ ಕೋಣೆಗಳು ಕಿಷ್ಕಿಂಧೆಯಂತಿದ್ದವು. ಅಲ್ಲದೆ, ಎಲ್ಲಿ ನೋಡಿದರೂ ಪರಿಕರಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದವು.

ಅಡುಗೆ ಕೋಣೆಯಲ್ಲೆ ವಾರ್ಡನ್‌ ಕಚೇರಿ ಮಾಡಿಕೊಂಡಿರುವುದಕ್ಕೆ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಮ್ಯಾನೇಜರ್‌ ಹಾಗೂ ತಾಲ್ಲೂಕು ಅಧಿಕಾರಿಯನ್ನು ತರಾಟೆಗೆ ತೆಗೆದುಕೊಂಡರು. ‘ಹಾಸ್ಟೆಲ್‌ ತುಂಬಾ ಅವ್ಯವಸ್ಥೆಯಿಂದ ಕೂಡಿದೆ. ಈ ಬಗ್ಗೆ ತನಿಖೆ ಮಾಡುವುದಕ್ಕೆ ಶಿಫಾರಸು ಮಾಡುತ್ತೇನೆ’ ಎಂದು ಉಪಲೋಕಾಯುಕ್ತರು ತಿಳಿಸಿದರು.

‘ವಿದ್ಯಾರ್ಥಿಗಳು ಓದುವುದಕ್ಕೆ ಬಂದಿದ್ದಾರೆ. ಅವರಿಗೆ ಸೂಕ್ತ ವ್ಯವಸ್ಥೆ ಮಾಡುವುದನ್ನು ಬಿಟ್ಟು, ಇಷ್ಟು ಸಣ್ಣ ಕೋಣೆಗಳಲ್ಲಿ ಇಟ್ಟಿದ್ದೀರಿ. ಸೂಕ್ತ ಕಟ್ಟಡ ನಿಮಗೆ ಸಿಗುವುದಿಲ್ಲವೆ’ ಎಂದು ಅವರು ಪ್ರಶ್ನಿಸಿದರು.

‘ಬಾಡಿಗೆ ಕಟ್ಟಡವಾಗಿದ್ದರೂ ಯೋಗ್ಯ ವ್ಯವಸ್ಥೆ ಇರುವುದನ್ನು ನೋಡಬೇಕಿತ್ತು. ಕಟ್ಟಡಕ್ಕೆ ಇನ್ನೂ ಬಾಡಿಗೆಯನ್ನೆ ನಿಗದಿ ಮಾಡಿಲ್ಲ ಎಂದು ಹೇಳುತ್ತಿದ್ದೀರಿ. ಬಾಡಿಗೆ ನಿಗದಿಗೆ ಲೋಕೋಪಯೋಗಿ ಇಲಾಖೆಯ ಎಂಜಿನಿಯರುಗಳನ್ನು ನಂಬಿಕೊಂಡು ಕುಳಿತುಕೊಳ್ಳಬೇಡಿ. ಲೋಕೋಪಯೋಗಿ ಇಲಾಖೆಯಲ್ಲಿ ಎಂಜಿನಿಯರುಗಳು ಹೇಗೆ ಕೆಲಸ ಮಾಡುತ್ತಾರೆ ಎಂಬುದು ನನಗೆ ಚೆನ್ನಾಗಿ ಗೊತ್ತಿದೆ’ ಎಂದರು.

ಹಾಸ್ಟೇಲ್‌ ವಾರ್ಡನ್‌ ನರಸಿಂಹರೆಡ್ಡಿ ಆನಂತರ ಹಾಸ್ಟೆಲ್‌ನತ್ತ ಧಾವಿಸಿ ಬಂದರೂ ಉಪಲೋಕಾಯುಕ್ತರ ಕಣ್ಣಿಗೆ ಬೀಳದಂತೆ ಉಳಿದಿರುವುದು ಕಂಡು ಬಂತು. ಹಾಸ್ಟೇಲ್‌ ಅವ್ಯವಸ್ಥೆ ಕುರಿತ ಪ್ರಶ್ನೆಗಳಿಗೆಲ್ಲ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಅಧಿಕಾರಿಗಳೆ ಉತ್ತರ ನೀಡಿದರು.

ವಿದ್ಯಾರ್ಥಿನಿಯರಿಗೆ ರಕ್ಷಣೆ: ದೇವರ ಕಾಲೊನಿಯಲ್ಲಿರುವ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯ ಬಾಲಕಿಯರ ಮೆಟ್ರಿಕ್‌ ನಂತರದ ಹಾಸ್ಟೇಲ್‌ಗೆ ಉಪಲೋಕಾಯುಕ್ತರು ಭೇಟಿ ನೀಡಿದರು.

ಹಾಸ್ಟೆಲ್‌ನಲ್ಲಿ ಸ್ವಚ್ಚತೆ, ಊಟ ಹಾಗೂ ಇನ್ನಿತರ ವ್ಯವಸ್ಥೆಗಳೆಲ್ಲವೂ ಸಮರ್ಪಕವಾಗಿತ್ತು. ಸಮಸ್ಯೆಗಳ ಬಗ್ಗೆ ಉಪಲೋಕಾಯುಕ್ತರು ವಿದ್ಯಾರ್ಥಿನಿಯರನ್ನು ವಿಚಾರಿಸಿದರು. ಯಾವುದೇ ಸಮಸ್ಯೆಗಳಿಲ್ಲ ಎನ್ನುವ ಉತ್ತರ ಅವರಿಂದ ಬಂತು. ಹಾಜರಿ ಪುಸ್ತಕ ಹಾಗೂ ಇನ್ನಿತರೆ ಕಡತಗಳನ್ನು ಉಪಲೋಕಾಯುಕ್ತರು ಪರಿಶೀಲಿಸಿದರು. ‘ಪುಸ್ತಕದಲ್ಲಿ ನಮೂದಿಸಿದಂತೆ ಉತ್ತಮ ಗುಣಮಟ್ಟದ ಬೇಳೆ, ಕಾಳು ಹಾಗೂ ಇನ್ನಿತರ ಸಾಮಗ್ರಿಗಳನ್ನು ಕೊಡಬೇಕು’ ಎಂದು ವಾರ್ಡನ್‌ಗೆ ಸೂಚಿಸಿದರು.

ವಿದ್ಯಾರ್ಥಿನಿಯರ ಪಾಲಕರ ಭಾವಚಿತ್ರ ಹಾಗೂ ವಿವರಗಳಿಲ್ಲ ಎನ್ನುವ ಮಾಹಿತಿಗೆ ಅಸಮಾಧಾನ ವ್ಯಕ್ತಪಡಿಸಿದ ಉಪಲೋಕಾಯುಕ್ತರು, ‘ಬಾಲಕಿಯರ ವಿಷಯದಲ್ಲಿ ಸುರಕ್ಷತಾ ಕ್ರಮಗಳನ್ನು ಗಂಭೀರವಾಗಿ ಅಳವಡಿಸಿಕೊಳ್ಳಬೇಕು. ಈಚೆಗೆ ನಡೆಯುತ್ತಿರುವ ಘಟನೆಗಳನ್ನು ನೋಡಿದರೆ, ಇದು ಗೊತ್ತಾಗುತ್ತದೆ. ಊರಿಗೆ ಹೋಗುತ್ತೇನೆ ಎಂದು ಹಾಸ್ಟೆಲ್‌ನಿಂದ ಹೊರಗೆ ಹೋಗುವವರನ್ನು ಹಾಗೇ ಬಿಟ್ಟು ಕಳುಹಿಸಬಾರದು. ಅವರ ಬಾಲಕರು ಬಂದಾಗಲೆ ಅವರನ್ನು ಊರಿಗೆ ಕಳುಹಿಸಬೇಕು’ ಎಂದರು.

‘ಪಾಲಕರು ಕೂಡಾ ನಕಲಿ ಬರಬಹುದು. ಅದಕ್ಕಾಗಿ ನಿಜವಾದ ಪಾಲಕರ ಸೂಕ್ತ ಮಾಹಿತಿಯನ್ನು ಸಂಗ್ರಹಿಸಿ ಇಟ್ಟುಕೊಳ್ಳಬೇಕು’ ಎಂದು ತಿಳಿಸಿದರು. ಗಮನಾರ್ಹವೆಂದರೆ, ದಿಢೀರ್‌ ಭೇಟಿಯಿಂದ ವಾರ್ಡನ್‌ ಅಚ್ಚರಿ ಪಡಬಹುದು ಎಂಬುದು ಸುಳ್ಳಾಯಿತು. ಉಪಲೋಕಾಯುಕ್ತರ ಬರುವಿಕೆಯನ್ನು ವಾರ್ಡನ್‌ ಮಂಜುಳಾ ಅವರು ಮೊದಲೇತಿಳಿದುಕೊಂಡಿದ್ದರು.

‘ಉಪಲೋಕಾಯುಕ್ತರು ರಾಯಚೂರಿಗೆ ಬಂದಿದ್ದಾರೆ ಎನ್ನುವ ಮಾಹಿತಿ ಮಾತ್ರ ಬೆಳಿಗ್ಗೆ ಗೊತ್ತಾಗಿತ್ತು. ನಮ್ಮ ಹಾಸ್ಟೆಲ್‌ಗೆ ಬರುತ್ತಾರೆ ಎಂಬುದು ಗೊತ್ತಿರಲಿಲ್ಲ’ ಎಂದು ಮಂಜುಳಾ ‘ಪ್ರಜಾವಾಣಿ’ಗೆ ತಿಳಿಸಿದರು.

* * 

ಹಾಸ್ಟೆಲ್‌ಗಳು ಅವ್ಯವಸ್ಥೆಯಿಂದ ಕೂಡಿವೆ. ನಿಯಮಗಳನ್ನು ಸರಿಯಾಗಿ ಪಾಲಿಸಲಾಗುತ್ತಿಲ್ಲ. ಇಲ್ಲಿನ ಅವ್ಯವಸ್ಥೆ ಬಗ್ಗೆ ತನಿಖೆ ನಡೆಸಬೇಕಾದ ಅಗತ್ಯವಿದೆ.

ಎನ್‌.ಆನಂದ ಉಪ ಲೋಕಾಯುಕ್ತ

ಪ್ರತಿಕ್ರಿಯಿಸಿ (+)