ಬುಧವಾರ, ಡಿಸೆಂಬರ್ 11, 2019
17 °C

ಅಕ್ರಮ ಗಣಿಗಾರಿಕೆ: ಸಿಸಿಟಿವಿ ಅಳವಡಿಸಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಅಕ್ರಮ ಗಣಿಗಾರಿಕೆ: ಸಿಸಿಟಿವಿ ಅಳವಡಿಸಿ

ರಾಮನಗರ: ಜಿಲ್ಲೆಯಲ್ಲಿ ಅಕ್ರಮ ಗಣಿಗಾರಿಕೆಯ ನಿಯಂತ್ರಣಕ್ಕೆ ಅಲ್ಲಲ್ಲಿ ಸಿ.ಸಿ. ಟಿವಿ ಕ್ಯಾಮೆರಾಗಳನ್ನು ಅಳವಡಿಸುವಂತೆ ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಸಿ.ಪಿ. ರಾಜೇಶ್ ಅಧಿಕಾರಿಗಳಿಗೆ ಸೂಚಿಸಿದರು. ಜಿಲ್ಲಾ ಪಂಚಾಯಿತಿ ಭವನದಲ್ಲಿ ಬುಧವಾರ ನಡೆದ ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮಗಳ (ಕೆಡಿಪಿ) ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು.

ಬಿಡದಿಯಿಂದ ಬೆಂಗಳೂರು ಕಡೆಗೆ ನಿತ್ಯ ನೂರಕ್ಕೂ ಹೆಚ್ಚು ಲಾರಿಗಳು ಅಕ್ರಮವಾಗಿ ಮರಳು, ಕಲ್ಲು ಹೇರಿಕೊಂಡು ಬೆಂಗಳೂರಿಗೆ ಹೋಗುತ್ತಿರುತ್ತವೆ. ಹೀಗಿದ್ದೂ ಕ್ರಮ ಕೈಗೊಳ್ಳಲು ಅಧಿಕಾರಿಗಳು ವಿಫಲವಾಗಿದ್ದೀರಿ. ಮುಖ್ಯ ವೃತ್ತಗಳಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಿದರೆ ಎಲ್ಲವೂ ಸೆರೆಯಾಗುತ್ತದೆ. ಈ ಬಗ್ಗೆ ಜಿಲ್ಲಾಧಿಕಾರಿ. ಜಿಲ್ಲಾ ಪೊಲೀಸ್‌ ವರಿಷ್ಟಾಧಿಕಾರಿಗಳ ಗಮನಕ್ಕೂ ತನ್ನಿ ಎಂದು ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಉಪನಿರ್ದೇಶಕಿ ಲಕ್ಷ್ಮಮ್ಮ ಅವರಿಗೆ ಸೂಚಿಸಿದರು.

ಲಕ್ಷ್ಮಮ್ಮ ಸಭೆಗೆ ಮಾಹಿತಿ ನೀಡಿ ‘2017ರ ಏಪ್ರಿಲ್‌ನಿಂದ ಈವರೆಗೆ ಅಕ್ರಮ ಗಣಿಗಾರಿಕೆಯಲ್ಲಿ ತೊಡಗಿದ್ದ ಒಟ್ಟು 145 ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ. ₨ 37.78 ಲಕ್ಷ ದಂಡ ವಿಧಿಸಲಾಗಿದೆ. ಫಿಲ್ಟರ್ ಮರಳುಗಾರಿಕೆ ಮಾಡುವವರ ವಿರುದ್ಧ 11 ಹಾಗೂ ಅಕ್ರಮ ಕಲ್ಲು ಗಣಿಗಾರಿಕೆ ಮಾಡುವವರ ವಿರುದ್ಧ 4 ಪ್ರಕರಣ ದಾಖಲಿಸಲಾಗಿದೆ’ ಎಂದು ಮಾಹಿತಿ ನೀಡಿದರು.

ಲೋಕಾಯುಕ್ತಕ್ಕೆ ಶಿಫಾರಸು: ಕಪ್ಪುಪಟ್ಟಿಗೆ ಸೇರಿರುವ ಗುತ್ತಿಗೆದಾರರ ಗುತ್ತಿಗೆ ಅವಧಿಯನ್ನು ಮುಂದುವರಿಸಿರುವುದು. ಕಾರ್ಮಿಕರಿಗೆ ಕನಿಷ್ಠ ವೇತನ ನೀಡದೇ ವಂಚಿಸುತ್ತಿರುವ ಏಜೆನ್ಸಿಗಳ ವಿರುದ್ಧದ ತನಿಖೆಗೆ ಲೋಕಾಯುಕ್ತ ತನಿಖೆಗೆ ಶಿಫಾರಸು ಮಾಡುವುದಾಗಿ ಅಧ್ಯಕ್ಷರು ಹೇಳಿದರು.

‘ಆರೋಗ್ಯ ಇಲಾಖೆಯಲ್ಲಿ ಹೊರಗುತ್ತಿಗೆ ಆಧಾರದ ಮೇಲೆ 114 ಕಾರ್ಮಿಕರನ್ನು ನೇಮಿಸಿಕೊಳ್ಳಲಾಗಿದೆ. ಹೀಗೆ ನೇಮಕ ಮಾಡಿಕೊಳ್ಳಲು ಸಂಬಂಧಿಸಿದ ಏಜೆನ್ಸಿಯ ಸಿಬ್ಬಂದಿ ಪ್ರತಿ ಕಾರ್ಮಿಕನಿಂದ ತಲಾ ₹20 ಸಾವಿರ ಲಂಚ ಪಡೆದ ಆರೋಪ ಇದೆ. ಅಂತಹವರಿಗೆ ಸರ್ಕಾರ ನಿಗದಿಪಡಿಸಿರುವ ಕನಿಷ್ಠ ವೇತನವನ್ನೂ ನೀಡುತ್ತಿಲ್ಲ’ ಎಂದು ಅಧ್ಯಕ್ಷರು ದೂರಿದರು.

‘ಸರ್ಕಾರದಿಂದ ಹೊರಗುತ್ತಿಗೆ ಪಡೆದಿರುವ ಇನ್ನೂ ಸಾಕಷ್ಟು ಏಜೆನ್ಸಿಗಳು ಕಾರ್ಮಿಕರಿಗೆ ಕನಿಷ್ಠ ವೇತನ ಹಾಗೂ ಸೌಲಭ್ಯಗಳನ್ನು ನೀಡುತ್ತಿಲ್ಲ’ ಎಂದು ಆಕ್ಷೇಪ ವ್ಯಕ್ತಪಡಿಸಿದರು. ‘ರಾಜ್ಯಮಟ್ಟದಲ್ಲಿ ಗುತ್ತಿಗೆ ನೀಡಿರುವ ಕಾರಣ ನಾವೇನು ಮಾಡಲಾಗದು’ ಆರೋಗ್ಯ ಇಲಾಖೆಯ ಅಧಿಕಾರಿಗಳು ಅಸಹಾಯಕತೆ ವ್ಯಕ್ತಪಡಿಸಿದರು. ಕನಿಷ್ಠ ವೇತನ ನೀಡದ ಏಜೆನ್ಸಿಗಳ ವಿರುದ್ಧ ಕ್ರಮ ಜರುಗಿಸುವುದಾಗಿ ಜಿಲ್ಲಾ ಕಾರ್ಮಿಕ ಅಧಿಕಾರಿ ಸಭೆಗೆ ತಿಳಿಸಿದರು.

‌₹23 ಕೋಟಿ ಬಾಕಿ: ಗ್ರಾಮೀಣ ಕುಡಿಯುವ ನೀರು ಪೂರೈಕೆ ಇಲಾಖೆಯು ಜಿಲ್ಲೆಯಲ್ಲಿ ₨23 ಕೋಟಿ ವಿದ್ಯುತ್‌ ಬಿಲ್ ಉಳಿಸಿಕೊಂಡಿರುವ ಕುರಿತು ಬೆಸ್ಕಾಂ ಸಿಬ್ಬಂದಿ ಸಭೆಯ ಗಮನಕ್ಕೆ ತಂದರು. ಹಣ ಪಾವತಿಗೆ ಪರ್ಯಾಯ ವ್ಯವಸ್ಥೆ ಮಾಡಿಕೊಳ್ಳುವಂತೆ ಸಭೆಯು ಸಂಬಂಧಿಸಿದ ಅಧಿಕಾರಿಗೆ ಸೂಚಿಸಿತು.

ಮುಖ್ಯ ಯೋಜನಾಧಿಕಾರಿ ಮಾಧು ರಾವ್‌, ಮುಖ್ಯ ಲೆಕ್ಕಾಧಿಕಾರಿ ಶ್ರೀನಿವಾಸ, ಉಪ ಕಾರ್ಯದರ್ಶಿ ಪುಟ್ಟಸ್ವಾಮಿ ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು.

ಏಕಾಂಗಿಯಾದ ಅಧ್ಯಕ್ಷ

ಕೇವಲ ಎರಡೇ ಗಂಟೆಯಲ್ಲಿ 20ಕ್ಕೂ ಹೆಚ್ಚು ಇಲಾಖೆಗಳ ಪ್ರಗತಿ ಪರಿಶೀಲನೆಯನ್ನು ತರಾತುರಿಯಲ್ಲಿ ಮುಗಿಸಲಾಯಿತು. ಬೆಳಿಗ್ಗೆ 11ಕ್ಕೆ ಸಭೆ ನಿಗದಿಯಾಗಿದ್ದು, 12.15ರ ಸುಮಾರಿಗೆ ಆರಂಭಗೊಂಡಿತು.

ಮಧ್ಯಾಹ್ನ 2ಕ್ಕೆಲ್ಲ ಮುಕ್ತಾಯವಾಯಿತು. ಕೆಲವು ಇಲಾಖೆಗಳ ಪ್ರಗತಿಯನ್ನು ಒಂದೇ ಸಾಲಿನಲ್ಲಿ ಕೇಳಲಾಯಿತು. ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ದಿವ್ಯಾ ಗಂಗಾಧರ್, ಸ್ಥಾಯಿ ಸಮಿತಿಗಳ ಅಧ್ಯಕ್ಷರು, ಸಿಇಒ ಆರ್. ಲತಾ ಗೈರಾಗಿದ್ದರು. ಹೀಗಾಗಿ ಅಧ್ಯಕ್ಷರೇ ಏಕಾಂಗಿಯಾಗಿ ಪ್ರಗತಿ ಪರಿಶೀಲನೆ ಮಾಡಿದರು. ಜನಪ್ರತಿನಿಧಿಗಳಿಗೆಂದು ಮೀಸಲಿಟ್ಟ ಕುರ್ಚಿಗಳು ಖಾಲಿ ಹೊಡೆಯುತ್ತಿದ್ದವು.

ಪ್ರತಿಕ್ರಿಯಿಸಿ (+)