ಶುಕ್ರವಾರ, ಡಿಸೆಂಬರ್ 13, 2019
27 °C

ರಾಜನಾಥ್‌ ಸಿಂಗ್‌ ಜತೆಗಿನ ಫೋಟೋಗಾಗಿ ಅಂಗವಿಕಲ ಮಕ್ಕಳನ್ನು 3 ಗಂಟೆ ಕಾಯಿಸಿದ ಸ್ವಯಂ ಸೇವಾ ಸಂಸ್ಥೆ

ಏಜೆನ್ಸಿಸ್‌ Updated:

ಅಕ್ಷರ ಗಾತ್ರ : | |

ರಾಜನಾಥ್‌ ಸಿಂಗ್‌ ಜತೆಗಿನ ಫೋಟೋಗಾಗಿ ಅಂಗವಿಕಲ ಮಕ್ಕಳನ್ನು 3 ಗಂಟೆ ಕಾಯಿಸಿದ ಸ್ವಯಂ ಸೇವಾ ಸಂಸ್ಥೆ

ಚಂಡೀಗಡ: ಅಂಗವಿಕಲರಿಗೆ ಉಚಿತವಾಗಿ ವ್ಹೀಲ್‌ ಚೇರ್‌ ವಿತರಿಸಲು ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಕೇಂದ್ರ ಗೃಹ ಸಚಿವ ರಾಜನಾಥ್‌ ಸಿಂಗ್‌ ಅವರ ಜತೆ ಫೋಟೋ ಕ್ಲಿಕ್ಕಿಸಿಕೊಳ್ಳುವ ಸಲುವಾಗಿ ಅಂಗವಿಕಲ ಮಕ್ಕಳನ್ನು ಮೂರು ಗಂಟೆಗಳ ಕಾಲ ಕಾಯಿಸಿರುವುದು ವರದಿಯಾಗಿದೆ.

ಇಂಡಿಯನ್‌ ರೆಡ್‌ ಕ್ರಾಸ್‌ ಸೊಸೈಟಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಈ ಪ್ರಕರಣ ವರದಿಯಾಗಿದೆ.

ಸ್ನಾತಕೋತ್ತರ ಪದವಿ ವೈದ್ಯಕೀಯ ಶಿಕ್ಷಣ ಮತ್ತು ಸಂಶೋಧನಾ ಸಂಸ್ಥೆಯಲ್ಲಿ (ಪಿಜಿಐಎಂಇಆರ್‌) ಅಂಗವಿಕಲರು ಹಾಗೂ ಮಕ್ಕಳಿಗಾಗಿ 300 ಹಾಸಿಗೆ ಸಾಮರ್ಥ್ಯದ ಕೇಂದ್ರವನ್ನು ರಾಜನಾಥ್‌ ಸಿಂಗ್‌ ಉದ್ಘಾಟಿಸಿದರು. ಇದರ ನಂತರ ರೆಡ್‌ ಕ್ರಾಸ್‌ ಸೊಸೈಟಿ ಆಯೋಜಿಸಿದ್ದ ಕಾರ್ಯಕ್ರಮಕ್ಕೆ ಬೆಳಗ್ಗೆ 11 ಗಂಟೆಗೆ ಆಗಮಿಸಬೇಕಿದ್ದ ಸಚಿವರು 11.30ಕ್ಕೆ ಸ್ಥಳಕ್ಕೆ ಆಗಮಿಸಿದರು. ಬಳಿಕ ಕಾರ್ಯಕ್ರಮಕ್ಕೆ ಆಗಮಿಸಿದ್ದ ಇತರ ಗಣ್ಯರನ್ನು ಭೇಟಿ ಮಾಡಿ ಮಾತನಾಡಿದ ಅವರು ಸಸಿ ನೆಡುವ ಕಾರ್ಯಕ್ರಮದಲ್ಲಿ ಪಾಲ್ಗೊಂಡರು.

ಸಚಿವರ ಆಗಮನದ ನಿರೀಕ್ಷೆಯಲ್ಲಿದ್ದ ಅಂಗವಿಕಲರು ಬಿಸಿಲಿನಿಂದ ಬಳಲಿದರು. ಹೆಚ್ಚು ಬಿಸಿಲು ಇದ್ದ ಕಾರಣ ಅಂಗವಿಕಲರು ಅಲ್ಲಿಂದ ನಿರ್ಗಮಿಸಲು ಮುಂದಾದಾಗ ಸಚಿವರ ಭೇಟಿ ಸಮಯ ಮುಗಿಯುವವರೆಗೂ ಅಲ್ಲಿಂದ ನಿರ್ಗಮಿಸಲು ಅವಕಾಶ ನೀರಾಕರಿಸಲಾಗಿತ್ತು.

ಈ ಬಗ್ಗೆ ಮಾತನಾಡಿದ 2 ವರ್ಷದ ಮಗುವಿನ ತಾಯಿ ಅನಿತಾ ಕುಮಾರಿ ಅವರು, ‘ಬೆಳಗ್ಗೆ 9 ಗಂಟೆಯಿಂದಲೂ ಸಚಿವರ ಆಗಮನಕ್ಕಾಗಿ ಕಾಯುತ್ತಿದ್ದೇವೆ. ಮಗು ಹಸಿವಿನಿಂದ ಅಳುತ್ತಿದೆ. ನಾವು ಎಷ್ಟು ಸಮಯ ಕಾಯಬೇಕು ಎನ್ನುವುದನ್ನು ಅಧಿಕಾರಿಗಳು ತಿಳಿಸಿದ್ದರೆ, ನನ್ನ ಮಗುವಿಗೆ ತಿನ್ನಲು ಏನನ್ನಾದರೂ ತರುತ್ತಿದ್ದೆ’ ಎಂದು ಹೇಳಿದರು.

‘ನನ್ನ ಮಗಳು ಇನ್ನೂ ಚಿಕ್ಕವಳು. ಅವಳು ವೀಲ್‌ ಚೇರ್‌ ಬಳಸಿ ಮಾಡುವುದಾದರೂ ಏನು?’ ಎಂದು ಬೇಸರ ವ್ಯಕ್ತಪಡಿಸಿದರು.

‘ನನ್ನ ಮಗನಿಗೆ ನಾಲ್ಕು ವರ್ಷ. ಅವನು ಹೆಚ್ಚು ಹೊತ್ತು ಕುಳಿತು ಕೊಂಡಿರಲು ಸಾಧ್ಯವಿಲ್ಲ. ನೋವಿನಿಂದ ಬಳಲುತ್ತಿದ್ದಾನೆ. ಇಲ್ಲಿಂದ ತೆರಳುವುದಕ್ಕೂ ಸಾಧ್ಯವಾಗುತ್ತಿಲ್ಲ. ಅಧಿಕಾರಿಗಳು ಸಚಿವರಿಗಾಗಿ ಕಾಯಬಾರದಿತ್ತು’ ಎಂದು ಮತ್ತೊಬ್ಬ ಅಂಗವಿಕಲನ ತಂದೆ ಮಹೇಶ್‌ ಶರ್ಮಾ ಅಳಲು ತೋಡಿಕೊಂಡರು.

ನರ ಸಂಬಂಧಿ ಕಾಯಿಲೆಯಿಂದ ಬಳಲುತ್ತಿರುವ 23 ವರ್ಷದ ಮಹಿಳೆಯ ತಾಯಿಯೊಬ್ಬರು, ‘ವ್ಹೀಲ್‌ ಚೇರ್‌ ಪಡೆದು ಏನು ಮಾಡಲಿ? ನನ್ನ ಮಗಳು ಇದರ ಮೇಲೆ ಕುಳಿತುಕೊಳ್ಳಲಾರಳು. ಇದರ ಬದಲು ಒಂದು ಟ್ರಾಲಿ ಅಥವಾ ಬೇರೆಯೇನನ್ನಾದರೂ ನೀಡಿದರೆ ಸಹಾಯವಾಗುತ್ತದೆ’ ಎಂದು ಕೇಳಿಕೊಂಡರು.

ಮತ್ತೆ ಕೆಲವರು ರೆಡ್‌ ಕ್ರಾಸ್‌ ಸೊಸೈಟಿ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ‘ನನ್ನ ವ್ಹೀಲ್‌ ಚೇರ್‌ ಮುರಿದಿತ್ತು. ಮತ್ತೊಂದನ್ನು ಕೊಂಡುಕೊಳ್ಳುವುದು ಹೇಗೆ ಎಂದು ಯೋಚಿಸುತ್ತಿದ್ದೆ. ಹಾಗಾಗಿ ನಾನು ರೆಡ್‌ ಕ್ರಾಸ್‌ಗೆ ಧನ್ಯವಾದಗಳನ್ನು ತಿಳಿಸುತ್ತೇನೆ’ ಎಂದು ಪೊಲಿಯೋ ಕಾಯಿಲೆಯಿಂದ ಬಳಲುತ್ತಿರುವ ನಿಶಾ ಕುಮಾರಿ ಸಂತಸ ವ್ಯಕ್ತಪಡಿಸಿದ್ದಾರೆ.

ಪ್ರತಿಕ್ರಿಯಿಸಿ (+)