ಬುಧವಾರ, ಡಿಸೆಂಬರ್ 11, 2019
22 °C

ಅಮಾನಿಕೆರೆ ನೆನಪುಗಳ ಸುತ್ತ....

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಅಮಾನಿಕೆರೆ ನೆನಪುಗಳ ಸುತ್ತ....

ತುಮಕೂರಿನ ಬೀದಿ, ಬೀದಿಗಳಲ್ಲಿ ಆ ಹುಡುಗರು ನಾಟಕ ಆಡಿದ್ರು. ಯಾವ, ಯಾವ ಊರಿನಿಂದಲೂ ಇಲ್ಲಿ ಕಲಿಯಲು ಬಂದಿದ್ದರೊ ಗೊತ್ತಿಲ್ಲ... ಆದರೆ ಈ ಕೆರೆಗಾಗಿ ನಗರದ ಬೀದಿ ಬೀದಿ ಸುತ್ತಿದರು. ನಾಲ್ಕು ಜನ ನಿಂತಿದ್ದರೆ ಸಾಕು ಅಲ್ಲೇ ಬೀದಿ ನಾಟಕ ಶುರು. ’ಕೆರೆ ಬೇಕು, ನಮಗೆ ಕೆರೆ ಬೇಕು’ ಎಂಬುದೇ ಆ ಹುಡಗರ ಮಂತ್ರವಾಗಿತ್ತು.

`ತುಮಕೂರಿನ ಹೆಮ್ಮೆ' ಎಂದೇ ಬಿಂಬಿತವಾಗಿರುವ ಅಮಾನಿಕೆರೆ ಉಳಿದ ಬಗ್ಗೆ ಈ  ಹುಡುಗರ ಶ್ರಮವಿದೆ. ಹೋರಾಟ ಮಾಡಿ ಕೆರೆ ಉಳಿಸಿದ ಕಥೆ ರೋಚಕ ಅಷ್ಟೇ ಅಲ್ಲ, ರಾಜ್ಯಕ್ಕೆ ಮಾದರಿಯೂ ಹೌದು. ಜನತಾ ಚಳವಳಿಗೆ ಸಿಕ್ಕ ಗೆಲವೂ ಹೌದು.

ತುಮಕೂರಿನ ಕರ್ನಾಟಕ ಸ್ಟೇಟ್ ಎಜುಕೇಷನ್ ಫೆಡರೇಷನ್‌ನ ಬಿ.ಇಡಿ ಕಾಲೇಜಿನ ವಿದ್ಯಾರ್ಥಿಗಳ ಹೋರಾಟದ ಹೆಜ್ಜೆ ಗೆಜ್ಜೆ ಕಟ್ಟಿದವರು. ಈ ಹೆಜ್ಜೆ ಗೆಜ್ಜೆಗೆ ಹೆಜ್ಜೆ ಹಾಕಿದವರು ಸಾವಿರಾರು ಜನ. ಇವೆಲ್ಲವೂ ದಶಕದ ಹಿಂದಿನ ಮಾತುಗಳು.

ಈಗ ದೋಣಿಯಾನದಲ್ಲಿ  ತೇಲುತ್ತಿರುವ ಅಮಾನಿಕೆರೆಯಲ್ಲಿ ಒಂದಿಷ್ಟು  ನೀರಿದೆ. ಸರಿಯಾಗಿ ಇಂದಿಗೆ ಇನ್ನೂರು ವರ್ಷಗಳ ಹಿಂದೆ ಪ್ರವಾಸಿಗ ಫ್ರಾನ್ಸಿಸ್ ಬುಖಾನನ್ ಮಧುಗಿರಿ ಬಳಿಸಿ ತುಮಕೂರಿಗೆ ಕಾಲಿಟ್ಟಾಗ ಮೊದಲು ಕಂಡಿದ್ದು ಇದೇ ಅಮಾನಿಕೆರೆ.

ಆಗಲೂ ಬರ ಬರುತ್ತಿತ್ತು. ಆದರೆ ಕೆರೆ ಅಪರೂಪಕ್ಕೊಮ್ಮೆ ಬರಿದಾಗುತ್ತಿತ್ತು. ಮಳೆಯಿಂದಲೇ ಅರ್ಧ ಕೆರೆಯಾದರೂ ತುಂಬುತ್ತಿತ್ತು. ಕೆರೆಯ ನೀರನ್ನು ತುಮಕೂರಿನ ಜನರು ಹಂಚಿಕೊಳ್ಳುತ್ತಿದ್ದ ಅಪರೂಪದ ಬಗೆಯನ್ನು ಬುಖಾನನ್ ಬರಹದಲ್ಲಿ ಕಾಣಬಹುದು. ಗ್ರಾಮದ ಮುಖಂಡರು ಸೇರಿ ಕೆರೆ ನೀರನ್ನು ಹಂಚಿಕೆ ಮಾಡುತ್ತಿದ್ದ ಬಗೆಯೇ ಒಂದು ರೋಚಕ ಅನುಭವ ಎನ್ನುತ್ತಾನೆ ಬುಖಾನನ್.

ಅಮಾನಿಕೆರೆ ಕೋಡಿ  ನೀರು ಕೊಳ್ಳಗಳ ಮೂಲಕ ಕಾವೇದಿ ನೀರಿನೊಂದಿಗೆ ಬೆರೆತುಹೋಗುವಂತ ಸಾಹಸದಷ್ಟೇ ಸಾಹಸ ಮಾಡಿ ಅಮಾನಿಕೆರೆಯನ್ನು ತುಮಕೂರಿನ ಜನರು ಉಳಿಸಿಕೊಂಡರು. 1999ರಲ್ಲಿ ಅಮಾನಿಕೆರೆಯನ್ನು ಹೊಡೆದು ಹಾಕಿ  ಖಾಸಗಿ ಬಸ್ ನಿಲ್ದಾಣ, ತೋಟಗಾರಿಕೆ ಕಚೇರಿ ಸೇರಿದಂತೆ ವಿವಿಧ ಸರ್ಕಾರಿ ಕಚೇರಿಗಳು, ಆದಾಯಕ್ಕಾಗಿ ವಾಣಿಜ್ಯ ಮಳಿಗೆ ಕಟ್ಟಲು ನಮ್ಮ ಜನಪ್ರತಿನಿಧಿಗಳು ಮುಂದಾಗಿದ್ದರು.

ಅಮಾನಿಕೆರೆ ಕಬಳಿಸುವ ಸುದ್ದಿ ಸಿಕ್ಕ ಕ್ಷಣ ಅದನ್ನು ಉಳಿಸಲು ಹೆಜ್ಜೆ ಇಟ್ಟವರು ಬಿ.ಇಡಿ ಕಾಲೇಜಿನ ವಿದ್ಯಾರ್ಥಿಗಳು.  ತೊ.ಗ. ಅಡವೀಶಪ್ಪ, ಪ್ರಾಂತರೈತರ ಸಂಘದ ಬಿ. ಉಮೇಶ್. ಆರ್.ಎಸ್.ಅಯ್ಯರ್,  ಮಾಹಿತಿ ಹಕ್ಕು ಹೋರಾಟಗಾರ ನಾರಾಯಣಾಚಾರ್ ಇವರೆಲ್ಲದ ಹೋರಾಟದ ಫಲ ಅಮಾನಿಕೆರೆ ಉಳಿಯಿತು. ಕೆರೆ ಉಳಿಸಿಕೊಳ್ಳಲು ಹೈಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಕೂಡ ಹಾಕಿದರು.

ತುಮಕೂರು ವಿಜ್ಞಾನ ಕೇಂದ್ರ ಹೋರಾಟದ ನೇತೃತ್ವ ವಹಿಸಿತು. ಖ್ಯಾತ ಪರಿಸರವಾದಿ ಅ.ನ.ಯಲ್ಲಪ್ಪರೆಡ್ಡಿ ತುಮಕೂರಿಗೆ ಧಾವಿಸಿ ಬಂದರು.  ಸಿ. ಯತಿರಾಜು, ಎಚ್.ಎಸ್. ನಿರಂಜನರಾಧ್ಯ, ಎಚ್.ಸಿ. ಶ್ರೀಕಂಠಸ್ವಾಮಿ, ಅಮರ್ ಹಪೀಜ್, ಕೆ.ಆರ್.ನಾಯಕ್, ಟಿ.ವಿ.ಎನ್.ಮೂರ್ತಿ, ಕುಂದರನಹಳ್ಳಿ ರಮೇಶ್ ಇವರೆಲ್ಲ ಕೆರೆ ಉಳಿವಿಗಾಗಿ ಕೈ ಜೋಡಿದರು.

ಎಲ್ಲ ಹೋರಾಟಗಾರರು ಸೇರಿಕೊಂಡು ಜನತಾ ವರದಿ ಸಿದ್ಧಪಡಿಸಿದರು.  ಕೆರೆ ಕುರಿತ ದೇಶದ ಮೊದಲ ಜನತಾ ವರದಿ ಇದೊಂದೆ ಇರಬೇಕು. ಜನರ ಚಳವಳಿ ಹೆಚ್ಚುತ್ತಿದ್ದಂತೆ ಕೆರೆ ಒಡೆದು ಮಹಲು ಕಟ್ಟುವ ಕನಸು ಕಂಡಿದ್ದ ಜನಪ್ರತಿನಿಧಿಗಳು, ಅಧಿಕಾರವರ್ಗ ಬೇರೆ ದಾರಿ ಕಾಣದೇ ಮೌನಕ್ಕೆ ಶರಣಾಯಿತು.

ನಗರದಲ್ಲಿ ಆಗ ಎಲ್ಲಿ ನೋಡಿದರೂ ಒಂದು ಕಡೆ ಬಿಇಡಿ ವಿದ್ಯಾರ್ಥಿಗಳ ಬೀದಿ ನಾಟಕ. ಇನ್ನೊಂದೆಡೆ ವಿಜ್ಞಾನ ಕೇಂದ್ರ, ಕಮ್ಯೂನಿಷ್ಟ್ ಚಳವಳಿಕಾರರು, ವಿವಿದ ಪರಿಸರ ಸಂಘ ಸಂಸ್ಥೆಗಳ ಹೋರಾಟ. ಆಗಲೇ  ಇವರೆಲ್ಲ ಸೇರಿ ’ತುಮಕೂರಿನಲ್ಲಿ ಕೆರೆಗಳು ಕಳೆದು ಹೋಗಿವೆ ಹುಡುಕಿಕೊಡಿ’ ಎಂದು ಪೊಲೀಸರಿಗೆ ದೂರು ನೀಡಿದ್ದು ರಾಜ್ಯದಲ್ಲೇ ಸಂಚಲನ ಉಂಟು ಮಾಡಿತು. ಅಮಾನಿಕೆರೆಯ ಅಣಕು ಶವಯಾತ್ರೆಯ ಮೂಲಕ ರಾಜಕಾರಣಿಗಳಿಗೆ ಚಾಟಿ ಬೀಸಿದರು.

ಕೆರೆ ಉಳಿಸಿಕೊಂಡ ಬಳಿಕ ಆಗಿನ ಜಿಲ್ಲಾಧಿಕಾರಿ ಜಯರಾಮ ಅರಸ್ ಅವರು ಶಾಲಾ ಮಕ್ಕಳು, ಸಾರ್ವಜನಿಕರನ್ನು ಕರೆದು ಅಮಾನಿಕೆರೆಯಲ್ಲಿದ್ದ ಅಂತರಗಂಗೆ ಕೀಳುವ ಯತ್ನ ನಡೆಸಿದರು. ಮತ್ತೊಬ್ಬ ಜಿಲ್ಲಾಧಿಕಾರಿ ಉಮಾಶಂಕರ್  ಕೆರೆ ಅಭಿವೃದ್ಧಿ ನೀಲ ನಕ್ಷೆ ಸಿದ್ಧಪಡಿಸಿ ಅದನ್ನು ಕೆರೆ ಅಭಿವೃದ್ಧಿ ಪ್ರಾಧಿಕಾರಕ್ಕೆ ಸಲ್ಲಿಸಿದರು.

ರಾಜ್ಯದಲ್ಲಿ ಕೆರೆ ಅಭಿವೃದ್ಧಿ ಪ್ರಾಧಿಕಾರ ಅಭಿವೃದ್ಧಿಗೆ ಕೈಗೆತ್ತಿಗೊಂಡ ಮೊದಲ ಕೆರೆಗಳು ಹುಬ್ಬಳಿಯ ಉಣಕಲ್ ಹಾಗೂ ತುಮಕೂರು ಅಮಾನಿಕೆ ಕೆರೆ. ಅಮಾನಿಕೆರೆ ಈಗ ಪ್ರವಾಸೋದ್ಯಮ ಸ್ಥಳವಾಗಿದೆ. ಗಾಜಿನ ಮನೆ ಬಂದಿದೆ.

`ಆ' ನೀರು ಬೇಕು...

ಹೇಮಾವತಿ ನೀರಿನಿಂದ ಅಮಾನಿಕೆರೆ ತುಂಬಿಸುವ ಪ್ರಯತ್ನ ಬಿಡಬೇಕು. ಕೃಷಿ, ಕುಡಿಯಲು ಬಳಸದ ಅಮಾನಿಕೆರೆಯನ್ನು ಹೇಮಾವತಿ ನೀರಿನಿಂದ ತುಂಬಿಸಬಾರದು. ಬದಲಿಗೆ ಸಿದ್ಧಗಂಗಾಬೆಟ್ಟ, ದೇವರಾಯದುರ್ಗದಿಂದ ಬರುವ ಜಲಾನಯದ ಪ್ರದೇಶ ಒತ್ತುವರಿಯಾಗಿದ್ದು ಅದನ್ನು ತೆರವುಗೊಳಿಸಬೇಕು. ಮಳೆ ನೀರಿನಿಂದಲೇ ಕೆರೆ ತುಂಬಿಸುವ ಯತ್ನಕ್ಕೆ ಎಲ್ಲರೂ ಕೈ ಜೋಡಿಸಬೇಕು.

ಅಮಾನಿಕೆರೆಗೆ ಬಿಡುವ ಹೇಮಾವತಿ ನೀರನ್ನು ಯಾವುದಾದರೂ ಹಳ್ಳಿಯ ಕೆರೆಗೆ ಬಿಟ್ಟರೆ ರೈತರ ಬದುಕು ಅರಳಲಿದೆ.ಅಮಾನಿಕೆರೆಯನ್ನು ಉಳಿಸಿಕೊಟ್ಟಿದ್ದು ಬಿ.ಇಡಿ ಕಲಿಯಲು ಬಂದಿದ್ದ ಎಷ್ಟೋ ಹಳ್ಳಿಗಳ ಹುಡುಗರು ಎಂಬದನ್ನು ಮಾತ್ರ ನಾವು ಮರೆಯಬಾರದು.

ಇದು  ರಾಜೇಂದ್ರ ಚೋಳನ ಕೆರೆ

ಅಮಾನಿಕೆರೆ ಪುರಾತನ ಇತಿಹಾಸ ಹೊಂದಿರುವ ಅಪರೂಪದ ಕೆರೆ. ಚೋಳರ ರಾಜೇಂದ್ರ ಚೋಳ 948 ಎಕರೆ ಪ್ರದೇಶದಲ್ಲಿ ಈ ಕೆರೆ ಕಟ್ಟಿಸಿದ. ಟಿ. ಬೇಗೂರಿನ ಚಂದ್ರ ಮೌಳೇಶ್ವರ ದೇವಾಲಯದಲ್ಲಿರುವ ಶಿಲಾ ಶಾಸನದಲ್ಲಿ ಈ ಕೆರೆಯ ವಿವರವಿದೆ. ಅಮಾನಿಕೆರೆ ಎಂದರೆ ಯಾವ ಗ್ರಾಮದ ದಾಖಲೆಗೂ ಸೇರದೆ ಸರ್ಕಾರದ ವಶದಲ್ಲಿರುವ ಕೆರೆ ಎಂದು ಅರ್ಥ.

ನಗರದ ಸೋಮೇಶ್ವರ ದೇವಾಲಯದ ಆವರಣದಲ್ಲಿರುವ ಕ್ರಿ.ಶ.955ನೇ ಇಸವಿ ಶಾಸನದಲ್ಲೂ ಅಮಾನಿಕೆರೆ ಉಲ್ಲೇಖವಿದೆ. ಕೆರೆ ಉಸ್ತುವಾರಿಗೆ 8 ಜನ ಮುಖಂಡರು ಇದ್ದರು. ಅತ್ತಿಯಣ್ಣ ಕೆರೆ ಉಸ್ತುವಾರಿ ನೋಡುತ್ತಿದ್ದರು. ಈತನಿಗೆ ವರ್ಷಕ್ಕೆ 12 ಖಂಡುಗ ಬೆಳೆ ಬೆಳಯುವ ಭೂಮಿ ನೀಡಲಾಗಿತ್ತು. `ಬ್ರಹ್ಮಪುತ್ರ' ಬಿರುದು ನೀಡಲಾಗಿತ್ತು ಎಂಬ ವಿವರ ಶಾಸನದಲ್ಲಿ ಸಿಗುತ್ತದೆ. ಈ ಕೆರೆ ಗಂಗರ ಕಾಲದಲ್ಲಿ ನಿರ್ಮಾಣವಾಗಿತ್ತು ಎಂಬ ವಾದವೂ ಇದೆ. ಶಾಸನದಲ್ಲಿ ಕೆರೆಯನ್ನು `ದೊಳ್ತುಮ್ಮೆಗೂರ ಕೆರೆ' ಎಂದು ಕರೆಯಲಾಗಿದೆ. ಮೆಕಂಜೆ ಕೂಡ ಕೆರೆ ಕುರಿತು ದಾಖಲಿಸಿದ್ದಾನೆ.

ಗುಬ್ಬಿ ಹೊಸಹಳ್ಳಿ ಪಾಳೇಗಾರರು ಕೆರೆ ಜೀಣೋದ್ಧಾರ ಮಾಡಿದ್ದರು. 1906ರಿಂದ ಈಚೆಗಿನ ದಾಖಲೆ ಮಾತ್ರ ನೀರಾವರಿ ಇಲಾಖೆ ಬಳಿ ಇದೆ. 1930ರ ಮೈಸೂರು ಗೆಜೆಟಿಯರ್‌ನಲ್ಲಿ ತುಮಕೂರು ಅಮಾನಿಕೆರೆ, ಬುಗುಡನಹಳ್ಳಿ ಅಮಾನಿಕೆರೆ, ಮೈದಾಳ ಕೆರೆಯ ಪ್ರಸ್ತಾಪವಿದೆ. ಗೆಜೆಟಿಯರ್‌ ಪ್ರಕಾರ ಕೆರೆಯ ವಿಸ್ತೀರ್ಣ 835 ಎಕರೆ. ಸಣ್ಣ ನೀರಾವರಿ ಇಲಾಖೆಯ ದಾಖಲೆಗಳ ಪ್ರಕಾರ 508 ಎಕರೆ. ಏರಿಯಾ ಉದ್ದ 1800 ಮೀಟರ್. ನೀರಿನ ಸಾಮರ್ಥ್ಯ 165.44 ಮಿಲಿಯನ್ ಘನ ಅಡಿ. ಬಲ ಮತ್ತು ಎಡ ದಂಡೆಯ ತೂಬು ಕಾಲುವೆಗಳಿಂದ 750 ಎಕರೆ ಅಚ್ಚುಕಟ್ಟು ಪ್ರದೇಶ ಇದೆ.

ಕೆರೆಯಲ್ಲಿ ಏನೆಲ್ಲ ಇದ್ದವೂ ಗೊತ್ತಾ?

4 ಕುಟುಂಬಗಳಿಗೆ ಸೇರಿದ 121 ಪ್ರಬೇಧದ ಪಕ್ಷಿಗಳಿಗೆ ಕೆರೆ ಆಶ್ರಯ ತಾಣವಾಗಿತ್ತು. 42 ಜಾತಿಗಳ ಪಕ್ಷಿಗಳು ಸಂತಾನೋತ್ಪತ್ತಿ ಮಾಡುತ್ತಿದ್ದವು. 46 ಪ್ರಬೇಧದ ಪಕ್ಷಿಗಳು ದಖನ್ ಪ್ರಸ್ಥಭೂಮಿ, ಪೂರ್ವ, ಉತ್ತರ, ಮಧ್ಯಏಷ್ಯಾ, ಸೈಬಿರಿಯಾ, ಯೂರೋಪ್ ನಿಂದ ಇಲ್ಲಿಗೆ ವಲಸೆ ಬರುತ್ತಿದ್ದವು.

24 ಚಿಟ್ಟೆ ಪ್ರಬೇಧಗಳನ್ನು ಇಲ್ಲಿ ಕಾಣಬಹುದಿತ್ತು. 12 ಪ್ರಬೇಧದ ಜೇಡಗಳು, 6 ಪ್ರಬೇಧದ ಸಸ್ತಿನಿಗಳು ಇಲ್ಲಿದ್ದವು. 5 ಪ್ರಬೇಧದ ಕಪ್ಪೆಗಳು, 2 ಪ್ರಬೇಧದ ಉಭಯವಾಸಿಗಳು, 3 ಜಾತಿಯ ಆಮೆಗಳಿದ್ದವು.

ಪ್ರತಿಕ್ರಿಯಿಸಿ (+)