3

ಸುಪ್ರೀಂ ಕೋರ್ಟ್ ಆದೇಶ ಇದ್ದರೂ ಸ್ಪಂದಿಸದ ಅಧಿಕಾರಿಗಳು: ರವೀಂದ್ರನಾಥ್ ಶಾನುಭಾಗ್

Published:
Updated:

ಉಡುಪಿ: ಸುಪ್ರೀಂ ಕೋರ್ಟ್‌ ಆದೇಶ ಇದ್ದರೂ ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯ 9 ಮಂದಿ ಕಂದಾಯ ಇಲಾಖೆಯ ದಿನಗೂಲಿ ನೌಕರರನ್ನು ಈ ವರೆಗೆ ಕಾಯಂಗೊಳಿಸಿಲ್ಲ ಎಂದು ಮಾನವ ಹಕ್ಕುಗಳ ರಕ್ಷಣಾ ಪ್ರತಿಷ್ಠಾನದ ಅಧ್ಯಕ್ಷ ಡಾ. ರವೀಂದ್ರನಾಥ್ ಶಾನುಭಾಗ್ ಹೇಳಿದರು.

ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸರ್ಕಾರದಿಂದ ಮಂಜೂರಾದ ಹುದ್ದೆಗಳಿಗೆ ನೇಮಕವಾದ, ಅಗತ್ಯ ವಿದ್ಯಾರ್ಹತೆ ಹೊಂದಿರುವ, ಹತ್ತು ವರ್ಷಗಳ ಕಾಲ ಸೇವೆ ಸಲ್ಲಿಸಿರುವ ಹಾಗೂ ನ್ಯಾಯಾಲಯದ ತಡೆಯಾಜ್ಞೆ ಇಲ್ಲದ ದಿನಗೂಲಿ ನೌಕರರನ್ನು ಕಾಯಂಗೊಳಿಸಬಹುದು ಎಂದು ಸುಪ್ರೀಂ ಕೋರ್ಟ್‌ ಸ್ಪಷ್ಟವಾಗಿ ಹೇಳಿದೆ. ಅದಕ್ಕೆ ಸಂಬಂಧಿಸಿದಂತೆ ಮುಖ್ಯ ಕಾರ್ಯದರ್ಶಿ ಅವರ ಸುತ್ತೋಲೆ ಸಹ ಇದೆ. ಆದರೂ ಅಲ್ಲದೆ ರಾಜ್ಯದಲ್ಲಿಯೇ ವಿವಿಧ ಇಲಾಖೆಗಳಲ್ಲಿ ಕೆಲಸ ಮಾಡುತ್ತಿದ್ದ 248 ನೌಕರರನ್ನು ಕಾಯಂಗೊಳಿಸಲಾಗಿದೆ. ಅದರ ದಾಖಲೆಯೂ ಇದೆ.

ಆದರೂ ಉಭಯ ಜಿಲ್ಲೆಗಳ ನೌಕರರಿಗೆ ಇದು ಅನ್ವಯಿಸುತ್ತಿಲ್ಲ. ಗುಲಾಬಿ, ಸುಮತಿ ಬಾಯಿ, ವಿಜಯ ಕುಮಾರಿ, ಸತ್ಯಶಂಕರಿ, ಅನಿತಾ, ಯೋಗಿನಿ, ರಂಜನಿ ಹಾಗೂ ನೇತ್ರಾಕ್ಷಿ ಆಳ್ವ ಅವರು ಈಗಲೂ ನೌಕರಿ ಕಾಯಂ ಆಗಲಿದೆ ಎಂದು ಕಾಯುತ್ತಿದ್ದಾರೆ. ನಿರಂಜನ್ ಆಚಾರ್ಯ ಎಂಬುವರು ನಿವೃತ್ತಿಯಾಗಿದ್ದಾರೆ. ಈ ಬಗ್ಗೆ ಜಿಲ್ಲಾಡಳಿತವನ್ನು ಪ್ರಶ್ನಿಸಿದರೆ, ಪ್ರಕ್ರಿಯೆ ಪೂರ್ಣಗೊಳಿಸಿ ಕಡತವನ್ನು ಸಚಿವಾಲಯಕ್ಕೆ ಕಳುಹಿಸಲಾಗಿದೆ ಎಂಬ ಉತ್ತರ ನೀಡಿದ್ದಾರೆ. ಆದರೆ ಜಿಲ್ಲಾಡಳಿತವೇ ಅದನ್ನು ಮಾಡಬಹುದು ಎಂಬುದು ಸಚಿವಾಲಯದ ಉತ್ತರವಾಗಿದೆ ಎಂದರು.

ಅಕ್ಕು– ಲೀಲಾ ಅವರ ಪ್ರಕರಣದಲ್ಲಿ ಸುದೀರ್ಘ ಹೋರಾಟ ಮಾಡಿ ನ್ಯಾಯ ಪಡೆಯಲಾಯಿತು. ಈ ಒಂಬತ್ತು ಮಂದಿಗೆ ಸಹ ನ್ಯಾಯ ಕೊಡಿಸಲು ಪ್ರತಿಷ್ಠಾನ ಬದ್ಧವಾಗಿದ್ದು ಕರ್ನಾಟಕ ಆಡಳಿತಾತ್ಮಕ ನ್ಯಾಯ ಮಂಡಳಿಯಲ್ಲಿ ಮೊಕದ್ದಮೆ ಹೂಡಲಾಗುವುದು. ಕಾಯಂ ಆಗದಿದ್ದರೆ ಎಲ್ಲ ರೀತಿಯ ಸೌಲಭ್ಯಗಳಿಂದ ನೌಕರರು ವಂಚಿತರಾಗುವುರು. ಈಗ ಅವರು ಪಡೆಯುತ್ತಿರುವ ಸಂಬಳ ಸಹ ಬಹಳ ಕಡಿಮೆ ಇದೆ ಎಂದರು.

* * 

ಜಿಲ್ಲಾಡಳಿತವೇ ಕಾಯಂಗೊಳಿಸಲು ಅವಕಾಶ ಇದ್ದರೂ ಸಚಿವಾಲಯದ ಕಡೆ ಬೊಟ್ಟು ಮಾಡುತ್ತಿದೆ. ನಿಯಮಗಳ ಪರಿಜ್ಞಾನವೂ ಅಧಿಕಾರಿಗಳಿಗೆ ಇಲ್ಲದಾಗಿದೆ.

ಡಾ. ರವೀಂದ್ರನಾಥ್ ಶಾನುಭಾಗ್

ಅಧ್ಯಕ್ಷ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry