ಶುಕ್ರವಾರ, ಡಿಸೆಂಬರ್ 13, 2019
27 °C

ಕಾಲಮಿತಿ ಇಲ್ಲ; ಕೆಲಸ ಮುಗಿದಿಲ್ಲ..!

ಡಿ.ಬಿ.ನಾಗರಾಜ್‌ Updated:

ಅಕ್ಷರ ಗಾತ್ರ : | |

ಕಾಲಮಿತಿ ಇಲ್ಲ; ಕೆಲಸ ಮುಗಿದಿಲ್ಲ..!

ವಿಜಯಪುರ: ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ನಿಧಿಗೆ ಪ್ರತಿ ವರ್ಷವೂ ಸಕಾಲಕ್ಕೆ ನಾಲ್ಕು ಕಂತುಗಳಲ್ಲಿ ₹ 2 ಕೋಟಿ ಅನುದಾನ ಜಿಲ್ಲಾಡಳಿತದ ಖಾತೆಗೆ ಬಿಡುಗಡೆಯಾದರೂ, ಮಾರ್ಗಸೂಚಿ ಯಲ್ಲಿ ಇಂತಿಷ್ಟೇ ಅವಧಿಯೊಳಗೆ ಕಾಮಗಾರಿ ಪೂರ್ಣಗೊಳಿಸಬೇಕು ಎಂಬ ಷರತ್ತಾಗಲೀ, ಸೂಚನೆಯಾಗಲಿ ನಮೂದಾಗಿಲ್ಲ.

ಇದರ ಪರಿಣಾಮ ಅನುದಾನ ಬಿಡುಗಡೆಗೊಂಡರೂ, ನಿಗದಿತ ಅವಧಿಯೊಳಗೆ ರಸ್ತೆ ಕಾಮಗಾರಿ ಯೊಂದನ್ನು ಹೊರತು ಪಡಿಸಿ, ಉಳಿದ ಯಾವೊಂದು ಕಾಮಗಾರಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಪೂರ್ಣಗೊಂಡಿಲ್ಲ. ಇದು ವಿಜಯಪುರ ಜಿಲ್ಲೆಯಲ್ಲಿನ ಎಂಟು ವಿಧಾನಸಭಾ ಕ್ಷೇತ್ರಗಳಲ್ಲಿನ ವಾಸ್ತವ ಚಿತ್ರಣ.

ವಿಜಯಪುರ ಜಿಲ್ಲಾಡಳಿತ ಈ ವಿಳಂಬ ತಪ್ಪಿಸಲಿಕ್ಕಾಗಿ ಸ್ವಯಂ ಕಾಲ ಮಿತಿ ನಿಗದಿಪಡಿಸಿಕೊಂಡರೂ ಪ್ರಯೋಜನ ವಾಗಿಲ್ಲ. ಆರು ತಿಂಗಳೊಳಗೆ ಕಾಮಗಾರಿ ಪೂರ್ಣಗೊಳಿಸಬೇಕು ಎಂಬ ಮೌಖಿಕ ಸೂಚನೆ ಬಹುತೇಕ ಕಾಮಗಾರಿಗಳಲ್ಲಿ ಪಾಲನೆಯಾಗುವುದಿಲ್ಲ ಎಂದು ಮೂಲಗಳು ತಿಳಿಸಿವೆ.

ಶಾಸಕರ ಪ್ರದೇಶಾಭಿವೃದ್ಧಿ ಯೋಜನೆಯಡಿ ಕೈಗೊಳ್ಳುವ ಕಾಮ ಗಾರಿಗಳನ್ನು ಸರ್ಕಾರಿ ಇಲಾಖೆಗಳಾದ ಲೋಕೋಪಯೋಗಿ, ಪಂಚಾಯತ್‌ ರಾಜ್‌ ಎಂಜಿನಿಯರಿಂಗ್‌ ವಿಭಾಗ, ಏಜೆನ್ಸಿಗಳಾದ ಕೆಆರ್‌ಐಡಿಎಲ್‌, ನಿರ್ಮಿತಿ ಕೇಂದ್ರಕ್ಕೆ ವಹಿಸಬಹುದು.

ಅಂದಾಜು ಪತ್ರಿಕೆ ಸಿದ್ಧಪಡಿಸಬೇಕು. ಟೆಂಡರ್‌ ಕರೆಯಬೇಕು. ಅದಕ್ಕೆ ಮತ್ತೆ ಅನುಮೋದನೆ ಪಡೆಯ ಬೇಕು. ಇದರಿಂದಾಗಿ ಕಾಮಗಾರಿ ಅನುಷ್ಠಾನ ದಲ್ಲಿ ವಿಳಂಬವಾಗುತ್ತದೆ ಎನ್ನುವ ಕಾರಣಕ್ಕೆ ಸರ್ಕಾರಿ ಇಲಾಖೆ, ಏಜೆನ್ಸಿಗಳಿಗೆ ವಹಿಸಲಾಗುತ್ತಿದೆ. ಆದರೆ ಈ ಪ್ರಕ್ರಿಯೆಯಲ್ಲಿಯೂ ಕಾಮಗಾರಿಯನ್ನು ಬೇಗನೆ ಪೂರ್ಣಗೊಳಿಸಬೇಕು ಎಂಬ ಆಶಯ ಈಡೇರುತ್ತಿಲ್ಲ. ಕಾಮ ಗಾರಿಯನ್ನು ಇಲಾಖೆಗಳಿಗೆ ವಹಿಸಿ ಹಲವಾರು ವರ್ಷಗಳು ಕಳೆದರೂ ಪೂರ್ಣಗೊಂಡಿಲ್ಲ.

ಶಾಸಕರು ಮಂಜೂರಾತಿ ಪತ್ರ ನೀಡಿ ವರ್ಷ ಗತಿಸಿದರೂ, ಸಂಬಂಧಿಸಿದ ಇಲಾಖೆಯ ಅಧಿಕಾರಿಗಳು ಅಂದಾಜು ಪತ್ರಿಕೆಯನ್ನೇ ಸಲ್ಲಿಸಿಲ್ಲ. ಮಂಜೂರಾತಿ ನೀಡಿದ ನಂತರ ಶಾಸಕರೂ ಇತ್ತ ಗಮನ ಹರಿಸುವುದಿಲ್ಲ. ಮಂಜೂರು ಮಾಡಿಸಿಕೊಂಡ ಬೆಂಬಲಿಗರು, ಹಿಂಬಾಲಕರು ಅನುಮೋದನೆ ಸಿಕ್ಕಿದೆ ಎಂದು ತಿಳಿಯುವುದರಿಂದ, ಅಧಿಕಾರಿಗಳು ಈ ಕಾಮಗಾರಿಗಳತ್ತ ಹೆಚ್ಚಿನ ಆಸಕ್ತಿ ತೋರುವುದಿಲ್ಲ.

ಯಾವ್ಯಾವ ಕಾಮಗಾರಿಗೆ ಅನುದಾನ: ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಯಡಿ ಬಿಡುಗಡೆಯಾದ ಅನುದಾನವನ್ನು ಯಾವ, ಯಾವ ಕಾಮಗಾರಿಗೆ ಬಳಸಬೇಕು ಎಂಬ ಬಗ್ಗೆ ಸರ್ಕಾರದ ನಿಯಮಾವಳಿಗಳಿವೆ. ಜತೆಗೆ ಈ ಕಾಮಗಾರಿಗಳನ್ನು ವಹಿಸುವ ಸರ್ಕಾರಿ ಇಲಾಖೆ, ಏಜೆನ್ಸಿಗಳ ಪಟ್ಟಿಯನ್ನೂ ನೀಡಲಾಗಿದೆ.

ಈ ಯೋಜನೆಯಡಿ ಸರ್ಕಾರಿ ಮತ್ತು ಅನುದಾನಿತ ಶಾಲಾ–ಕಾಲೇಜುಗಳ ಕೊಠಡಿ ದುರಸ್ತಿ, ಆವರಣ ಗೋಡೆ, ಆಟದ ಮೈದಾನ ಅಭಿವೃದ್ಧಿ, ಗ್ರಂಥಾಲಯ, ಪ್ರಯೋಗಾಲಯ, ಕಂಪ್ಯೂಟರ್‌, ಉನ್ನತ ಶಿಕ್ಷಣ ವ್ಯಾಪ್ತಿಯ ಎಂಜಿನಿಯರಿಂಗ್‌ ಕಾಲೇಜುಗಳಿಗೆ, ಕ್ರೀಡಾಂಗಣ ನಿರ್ಮಾಣ, ಕ್ರೀಡಾ ಪರಿಕರಗಳ ಪೂರೈಕೆ, ಆಸ್ಪತ್ರೆಗಳ ಕಟ್ಟಡ, ರಕ್ತನಿಧಿ ಸ್ಥಾಪನೆ, ಅಂಬುಲೆನ್ಸ್ ಖರೀದಿ, ಕುಡಿಯುವ ನೀರಿನ ಸೌಲಭ್ಯ ಒದಗಿಸಲು, ರಸ್ತೆ ನಿರ್ಮಾಣ, ಸಮುದಾಯ ಭವನ ನಿರ್ಮಾಣ, ಅಂಗವಿಕಲರಿಗೆ ತ್ರಿಚಕ್ರ ವಾಹನ ವಿತರಣೆಗೆ ಬಳಸಬಹುದಾಗಿದೆ.

ಅಂಗವಿಕಲರಿಗೆ ಪರಿಕರ ವಿತರಣೆಗೆ, ಅಂಗನವಾಡಿ ಕೇಂದ್ರಗಳ ನಿರ್ಮಾಣ, ಆಟದ ಉಪಕರಣ, ವಸತಿ ನಿಲಯಗಳ ಕಟ್ಟಡ, ನಿಲಯದ ಗ್ರಂಥಾಲಯಗಳಿಗೆ ಪುಸ್ತಕ ಪೂರೈಕೆ, ಶೌಚಾಲಯ ನಿರ್ಮಾಣ, ಪಶು ವೈದ್ಯಕೀಯ ಕಟ್ಟಡಗಳ ನಿರ್ಮಾಣ, ಉದ್ಯಾನ ಅಭಿವೃದ್ಧಿ, ಗೋದಾಮು ನಿರ್ಮಾಣ, ಪೊಲೀಸ್‌ ಇಲಾಖೆಗೆ ಹೊಯ್ಸಳ ವಾಹನ ಖರೀದಿಗೆ, ರಸ್ತೆ ಸಂಪರ್ಕ, ವಿದ್ಯುತ್‌ ಚಿತಾಗಾರ, ಸ್ಮಶಾನಗಳ ಭೂಮಿಗೂ ಅನುದಾನ ನೀಡಬಹುದಾಗಿದೆ.

ಸೇತುವೆ ನಿರ್ಮಾಣ, ಬಸ್ ತಂಗುದಾಣ, ಘನತ್ಯಾಜ್ಯ ವಸ್ತುಗಳ ನಿರ್ವಹಣೆ, ಕೊಳಚೆ ಪ್ರದೇಶದ ಕುಶಲಕರ್ಮಿಗಳಿಗೆ ಸಾಮಾನ್ಯ ಶೆಡ್‌ ಒದಗಿಸುವುದು, ಹಳ್ಳಿಗಳಲ್ಲಿ ಶುದ್ಧ ಕುಡಿಯುವ ನೀರಿನ ಸೌಲಭ್ಯ ಒದಗಿಸಲು, ಪ್ರವಾಸಿ ಸ್ಥಳಗಳಲ್ಲಿ ಮೂಲ ಸೌಕರ್ಯ, ಪಾರಂಪರಿಕ ಸ್ಥಳಗಳ ಸೌಂದರ್ಯ ರಕ್ಷಣೆಯ ಕಾಮಗಾರಿ, ಗ್ರಂಥಾಲಯ ನಿರ್ಮಾಣಕ್ಕೆ ಅನುದಾನ ಬಳಸಬಹುದಾಗಿದೆ ಎಂದು ಜಿಲ್ಲಾಡಳಿತ ಮಾಹಿತಿ ನೀಡಿದೆ.

ಖರ್ಚಿಗೂ ಅನುಷ್ಠಾನಕ್ಕೂ ವ್ಯತ್ಯಾಸ

ಶಾಸಕರ ಪ್ರದೇಶಾಭಿವೃದ್ಧಿ ಯೋಜನೆಯಡಿ ಜಿಲ್ಲಾಡಳಿತದಿಂದ ಬಿಡುಗಡೆಯಾಗುವ ಅನುದಾನಕ್ಕೂ, ಕಾಮಗಾರಿ ಅನುಷ್ಠಾನದ ಖರ್ಚಿಗೂ ಅಜಗಜಾಂತರ ವ್ಯತ್ಯಾಸವಿರುತ್ತದೆ.

ಶಾಸಕರು ಅನುದಾನ ಮಂಜೂರಾತಿ ಪತ್ರವನ್ನು ಜಿಲ್ಲಾಡಳಿತಕ್ಕೆ ನೀಡಿದ ಬಳಿಕ, ವಿವಿಧ ಹಂತದ ಪ್ರಕ್ರಿಯೆ ಪೂರ್ಣಗೊಂಡು ಆಡಳಿತಾತ್ಮಕ ಮಂಜೂರಾತಿ ದೊರಕುತ್ತದೆ. ನಿಯೋಜಿತ ಇಲಾಖೆಗಳಿಗೆ ಕಾಮಗಾರಿ ಕೈಗೊಳ್ಳುವಂತೆ ಸೂಚಿಸುವ ಜತೆಗೆ, ಒಟ್ಟು ವೆಚ್ಚದ ಶೇ 75ರಷ್ಟು ಅನುದಾನವನ್ನು ಜಿಲ್ಲಾಡಳಿತ ಸಂಬಂಧಿಸಿದವರ ಖಾತೆಗೆ ವರ್ಗಾಯಿಸಿ, ತನ್ನ ಖಾತೆಯಲ್ಲಿ ಖರ್ಚು ತೋರಿಸುತ್ತದೆ.

ಆದರೆ ವಾಸ್ತವದಲ್ಲಿ ಯಾವ ಕಾಮಗಾರಿ ನಡೆದಿರುವುದಿಲ್ಲ. ಇನ್ನೂ ಅನುಷ್ಠಾನದ ಹಂತದಲ್ಲಿರುತ್ತದೆ. ಕಾಮಗಾರಿ ಪೂರ್ಣಗೊಂಡ ಬಳಿಕ ಹಣ ಬಳಕೆಯ ಪತ್ರ ನೀಡಿ, ಉಳಿದ ಮೊತ್ತವನ್ನು ಪಡೆಯಬೇಕು.

ಪ್ರತಿಕ್ರಿಯಿಸಿ (+)