ಸೋಮವಾರ, ಡಿಸೆಂಬರ್ 9, 2019
21 °C

ಆರೋಗ್ಯ, ಕೃಷಿ ಮತ್ತು ಶೈಕ್ಷಣಿಕ ವಲಯಕ್ಕೆ ಆದ್ಯತೆ ನೀಡಿದ ಬಜೆಟ್

Published:
Updated:
ಆರೋಗ್ಯ, ಕೃಷಿ ಮತ್ತು ಶೈಕ್ಷಣಿಕ ವಲಯಕ್ಕೆ ಆದ್ಯತೆ ನೀಡಿದ ಬಜೆಟ್

ನವದೆಹಲಿ: 2018-19ರ ಬಜೆಟ್‍ನ್ನು ಅಭಿವೃದ್ಧಿ ಕೇಂದ್ರಿತ ಲೆಕ್ಕಾಚಾರವನ್ನಾಗಿ ಮಾಡಲು ಹಣಕಾಸು ಸಚಿವ ಅರುಣ್ ಜೇಟ್ಲಿ ಪ್ರಯತ್ನಿಸಿದ್ದಾರೆ. ಲೋಕಸಭೆಯಲ್ಲಿಂದು ಬಜೆಟ್ ಮಂಡನೆ ಮಾಡಿದ ಜೇಟ್ಲಿ, ಆರೋಗ್ಯ ವಲಯಕ್ಕೆ ಹೆಚ್ಚು ಆದ್ಯತೆ ನೀಡಿದ್ದಾರೆ. ದೇಶದ 10 ಕೋಟಿ ಬಡ ಕುಟುಂಬಗಳ ಆರೋಗ್ಯ ಸುರಕ್ಷತೆಗಾಗಿ ವಿಶೇಷ ಯೋಜನೆಯನ್ನು ಪ್ರಕಟಿಸಿರುವ ಸಚಿವರು ರಾಷ್ಟ್ರೀಯ ಆರೋಗ್ಯ ಕಾರ್ಯಕ್ರಮಗಳಿಗಾಗಿ ₹1200 ಕೋಟಿ ಮೀಸಲಿಟ್ಟಿರುವುದಾಗಿ ಹೇಳಿದ್ದಾರೆ.

ರಾಷ್ಟ್ರೀಯ ಆರೋಗ್ಯ ಸುರಕ್ಷತಾ ಯೋಜನೆಯಿಂದಾಗಿ 10 ಕೋಟಿ ಬಡ ಕುಟುಂಬಗಳ 50 ಕೋಟಿ ಜನರಿಗೆ ಆರೋಗ್ಯ ಸುರಕ್ಷತೆ ಸಿಗಲಿದೆ. ಸರ್ಕಾರವು ಪ್ರತಿ ವರ್ಷ ಪ್ರತಿ ಕುಟುಂಬಕ್ಕೆ ₹5 ಲಕ್ಷ ಆರೋಗ್ಯ ವಿಮೆ ನೀಡಲಿದ್ದು, ದೇಶದ 10 ಕೋಟಿ ಬಡ ಕುಟುಂಬಗಳ ಆರೋಗ್ಯ ಸುರಕ್ಷತೆಗಾಗಿ ವಿಶೇಷ ಯೋಜನೆಯನ್ನು ಪ್ರಕಟಿಸಿದ್ದಾರೆ.

ಜಿಲ್ಲಾ ಆಸ್ಪತ್ರೆಗಳನ್ನು ವಿಕಸನಗೊಳಿಸಿ ಹೊಸದಾಗಿ 24 ಮೆಡಿಕಲ್ ಕಾಲೇಜುಗಳನ್ನು ಆರಂಭಿಸಲಾಗುವುದು. ಆಯುಷ್ಮಾನ್ ಭಾರತ್ ಯೋಜನೆ  ಅಂಗವಾಗಿ ಎರಡು ಹೊಸ ಯೋಜನೆಗಳನ್ನು ಪ್ರಕಟಿಸಲಾಗಿದೆ. ಒಂದೂವರೆ ಲಕ್ಷ  ಆರೋಗ್ಯ ಕೇಂದ್ರಗಳನ್ನು ಹೊಸದಾಗಿ ಆರಂಭಿಸಲಾಗುವುದು.

 ಕ್ಷಯರೋಗಿಗಳಿಗೆ ಪೌಷ್ಟಿಕ ಆಹಾರ ಪೂರೈಸುವುದಕ್ಕಾಗಿ  ₹600 ಕೋಟಿ ಅನುದಾನ ನೀಡಲಾಗಿದೆ, ದೇಶದ ಮೂರು ಲೋಕಸಭಾ ಕ್ಷೇತ್ರಗಳಿಗೆ ಒಂದು ಎಂಬಂತೆ ಮೆಡಿಕಲ್ ಕಾಲೇಜುಗಳನ್ನು ಸ್ಥಾಪಿಸಲಾಗುವುದು.ವೈದ್ಯಕೀಯ ವೆಚ್ಚದ ತೆರಿಗೆ ವಿನಾಯಿತಿ ₹40,000ಕ್ಕೆ ಹೆಚ್ಚಳ ಮಾಡಲಾಗಿದೆ.

ಮಹಿಳಾ ಕ್ಷೇಮಾಭಿವೃದ್ಧಿಗಾಗಿ ಈ ಬಜೆಟ್‍ನಲ್ಲಿ ಒತ್ತು ನೀಡಲಾಗಿದೆ. ಉಜ್ವಲ ಯೋಜನೆಯಡಿಯಲ್ಲಿ 8 ಕೋಟಿ ಬಡ ಮಹಿಳೆಯರಿಗೆ ಉಚಿತ ಅಡುಗೆ ಅನಿಲ ಸಂಪರ್ಕ ಕಲ್ಪಿಸಲಾಗುವುದು ಎಂದಿದ್ದಾರೆ ಜೇಟ್ಲಿ.

2019ರಲ್ಲಿ ಮಹಾತ್ಮ ಗಾಂಧೀಜಿ ಅವರ 150ನೇ ಜನ್ಮದಿನಾಚರಣೆ ಪ್ರಯುಕ್ತ ಪ್ರಧಾನ ಮಂತ್ರಿ, ಮುಖ್ಯಮಂತ್ರಿಗಳು ಮತ್ತು ಗಾಂಧೀವಾದಿಗಳು ಸದಸ್ಯರಾಗಿರುವ ಸಮಿತಿ ಆಯೋಜಿಸುವ ಕಾರ್ಯಕ್ರಮಗಳಿಗಾಗಿ ₹150 ಕೋಟಿ ಮೀಸಲಿಡಲಾಗಿದೆ.  ಅದೇ ವೇಳೆ ರಾಷ್ಟ್ರಪತಿಯ ಪ್ರತಿ ತಿಂಗಳ ವೇತನ ₹5 ಲಕ್ಷ ಮತ್ತು ಉಪರಾಷ್ಟ್ರಪತಿಯ ವೇತನ ₹4 ಲಕ್ಷವಾಗಿ ಏರಿಕೆ ಮಾಡಲಾಗುವುದು, ಸಂಸದರ ವೇತನ ಪ್ರತಿ ಐದು ವರ್ಷಗಳಿಗೊಮ್ಮೆ ಪರಿಷ್ಕರಿಸಲು ಕಾನೂನು ರೂಪಿಸಲಾಗುವುದು ಸಚಿವರು ಹೇಳಿದ್ದಾರೆ.

ಶೈಕ್ಷಣಿಕ ವಲಯ

* ಚೆನ್ನೈ ಐಐಟಿಯಲ್ಲಿ 5ಜಿ ಅಧ್ಯಯನ ಕೇಂದ್ರ ಸ್ಥಾಪನೆ ಪ್ರಸ್ತಾವ

* ಗುಣಮಟ್ಟದ ಶಿಕ್ಷಣಕ್ಕಾಗಿ ಶಿಕ್ಷಣ ಕ್ಷೇತ್ರದಲ್ಲಿ ಡಿಜಿಟಲ್‌ ಸೌಲಭ್ಯ ಹೆಚ್ಚಿಸಲು ಆದ್ಯತೆ

* ಬುಡಕಟ್ಟು ವಿದ್ಯಾರ್ಥಿಗಳಿಗಾಗಿ ನವೋದಯ ಮಾದರಿಯಲ್ಲಿ ‘ಏಕಲವ್ಯ ವಸತಿ ಶಾಲೆ’

* ವಡೋದರಾದಲ್ಲಿ ರೈಲ್ವೆ ವಿಶ್ವವಿದ್ಯಾಲಯ ನಿರ್ಮಾಣ ಘೋಷಣೆ

ಕೃಷಿ ವಲಯ

* ಕೃಷಿ ಉತ್ಪನ್ನ ಕಂಪೆನಿಗಳಿಗೆ ಶೇ 100ರ ತೆರಿಗೆ ವಿನಾಯಿತಿ

* 2018-19ನೇ ಸಾಲಿನಲ್ಲಿ ಕೃಷಿ ಸಾಂಸ್ಥಿಕ ಸಾಲದ ಮೊತ್ತವನ್ನು ₹11 ಲಕ್ಷ ಕೋಟಿಗೆ ಹೆಚ್ಚಿಸಲು ಪ್ರಸ್ತಾವ

* ₹500 ಕೋಟಿ ಅನುದಾನದಲ್ಲಿ ‘ಆಪರೇಷನ್ ಗ್ರೀನ್’ ಯೋಜನೆಗೆ ಪ್ರಸ್ತಾವ

* ಬಿದಿರು ಕೃಷಿಗಾಗಿ ₹ 1,290 ಕೋಟಿ ಮೊತ್ತದ ನಿಧಿ

* ಕೃಷಿ ಮಾರುಕಟ್ಟೆಗಳ ಅಭಿವೃದ್ಧಿಗಾಗಿ ₹ 2,000 ಕೋಟಿ ಮೊತ್ತದಲ್ಲಿ ‘ಕೃಷಿ ಮಾರುಕಟ್ಟೆ ನಿಧಿ’ ಘೋಷಣೆ

* 2022ರ ವೇಳೆಗೆ ಕೃಷಿಕರ ಆದಾಯ ದ್ವಿಗುಣಗೊಳಿಸಲು ಯೋಜನೆ

* 2018-19ನೇ ಸಾಲಿನಲ್ಲಿ ಕೃಷಿ ಸಾಂಸ್ಥಿಕ ಸಾಲದ ಮೊತ್ತವನ್ನು ₹11 ಲಕ್ಷ ಕೋಟಿಗೆ ಹೆಚ್ಚಿಸಲು ಪ್ರಸ್ತಾವ

ಆರೋಗ್ಯ ವಲಯ

* ವೈದ್ಯಕೀಯ ವೆಚ್ಚದ ತೆರಿಗೆ ವಿನಾಯಿತಿ ₹40,000ಕ್ಕೆ ಹೆಚ್ಚಳ

* 10 ಕೋಟಿ ಬಡ ಕುಟುಂಬಗಳ ಆರೋಗ್ಯ ಸುರಕ್ಷತೆಗಾಗಿ ಪ್ರತಿ ಕುಟುಂಬಕ್ಕೆ ₹5 ಲಕ್ಷ ವಿಮೆ

* ಕ್ಷಯ ರೋಗಿಗಳಿಗಾಗಿ ‘ಆಯುಷ್ಮಾನ್ ಭಾರತ್’ ಯೋಜನೆ, ₹600 ಕೋಟಿ ಅನುದಾನ

* ಆರೋಗ್ಯ ಕ್ಷೇಮ ಕೇಂದ್ರಗಳಿಗಾಗಿ ₹1,200 ಕೋಟಿ ಅನುದಾನ ಬಿಡುಗಡೆ, 10 ಕೋಟಿ ಬಡ ಕುಟುಂಬಗಳಿಗೆ ನೆರವು

* ಜಿಲ್ಲಾಸ್ಪತ್ರೆಗಳನ್ನು ಮೇಲ್ದರ್ಜೆಗೇರಿಸುವುದರ ಜತೆ 24 ಹೊಸ ಸರ್ಕಾರಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗಳ ಸ್ಥಾಪನೆ

* ಗುಣಮಟ್ಟದ ಶಿಕ್ಷಣಕ್ಕಾಗಿ ಶಿಕ್ಷಣ ಕ್ಷೇತ್ರದಲ್ಲಿ ಡಿಜಿಟಲ್‌ ಸೌಲಭ್ಯ ಹೆಚ್ಚಿಸಲು ಆದ್ಯತೆ

* ಸ್ವಚ್ಛ ಭಾರತ ಯೋಜನೆಯಡಿ ಈವರೆಗೆ 6 ಕೋಟಿ ಶೌಚಾಲಯಗಳ ನಿರ್ಮಾಣ

* ಸ್ವಚ್ಛ ಭಾರತ ಯೋಜನೆ ಅಡಿ ಇನ್ನೂ 2 ಕೋಟಿ ಶೌಚಾಲಯಗಳ ನಿರ್ಮಾಣದ ಗುರಿ

ಪ್ರತಿಕ್ರಿಯಿಸಿ (+)