ಶುಕ್ರವಾರ, ಡಿಸೆಂಬರ್ 6, 2019
24 °C

371(ಜೆ) ಬಗ್ಗೆ ಕೇವಲ ಶೇ 35ಜನರಿಗೆ ಮಾತ್ರ ಅರಿವು: ಡಾ.ಶರಣಪ್ರಕಾಶ ಪಾಟೀಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

371(ಜೆ) ಬಗ್ಗೆ ಕೇವಲ ಶೇ 35ಜನರಿಗೆ ಮಾತ್ರ ಅರಿವು: ಡಾ.ಶರಣಪ್ರಕಾಶ ಪಾಟೀಲ

ಚಿಂಚೋಳಿ: ‘ಹೈಕ ಭಾಗಕ್ಕೆ 371(ಜೆ) ಅಡಿಯಲ್ಲಿ ನೀಡುತ್ತಿರುವ ಸವಲತ್ತುಗಳ ಬಗ್ಗೆ ಕೇವಲ ಶೇ 35 ಜನರಿಗೆ ಮಾತ್ರ ಅರಿವಿದೆ’ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣಪ್ರಕಾಶ ಪಾಟೀಲ ಹೇಳಿದರು. ಅವರು ತಾಲ್ಲೂಕಿನ ಜಟ್ಟೂರು ಗ್ರಾಮದಲ್ಲಿ ಮಂಗಳವಾರ ಬ್ರಿಜ್‌ ಕಂ. ಬ್ಯಾರೇಜ್ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದರು.

‘ಈ ಕುರಿತು ಹೈಕ ಅಭಿವೃದ್ಧಿ ಮಂಡಳಿ ವತಿಯಿಂದ ಸಮೀಕ್ಷೆ ನಡೆಸಲಾಗಿದೆ. ಸಮೀಕ್ಷೆಯ ಪ್ರಕಾರ ಶೇ 35ರಷ್ಟು ಜನರು ಈ ಬಗ್ಗೆ ತಮಗಿರುವ ಮಾಹಿತಿ ಹಂಚಿಕೊಂಡಿದ್ದರೆ. ಶೇ 65ರಷ್ಟು ಜನರು ತಮಗೆ ಗೊತ್ತಿಲ್ಲ ಎಂಬ ಉತ್ತರ ನೀಡಿದ್ದಾರೆ’ ಎಂದರು.

‘ಕಲಬುರ್ಗಿಯಲ್ಲಿ ಸಚಿವ ಸಂಪುಟ ಸಭೆ ನಡೆದಾಗ ಈ ಭಾಗದ 30ಸಾವಿರ ಹುದ್ದೆ ಭರ್ತಿಗೆ ನಿರ್ಣಯಿಸಲಾಗಿತ್ತು. ಅದರಂತೆ ಈಗಾಗಲೇ 22 ಸಾವಿರ ಯುವಕರಿಗೆ ಉದ್ಯೋಗ ನೀಡಲಾಗಿದೆ. 10 ಶಿಕ್ಷಕರ ನೇಮಕಾತಿಗೆ ಅಧಿಸೂಚನೆ ಹೊರಡಿಸಲಾಗಿದೆ. ಈ ಮೂಲಕ 32ಸಾವಿರ ಹುದ್ದೆಗಳು ಭರ್ತಿಯಾಗುತ್ತಿವೆ’ ಎಂದು ಹೇಳಿದರು.

‘ವಿಶೇಷ ಅಭಿವೃದ್ಧಿ ಯೋಜನೆ ಅಡಿಯಲ್ಲಿ ಕಾಗಿಣಾ ನದಿಗೆ ಅಡ್ಡಲಾಗಿ ₹25 ಕೋಟಿ ಅಂದಾಜು ವೆಚ್ಚದಲ್ಲಿ ಬ್ರಿಜ್‌ ಕಂ ಬ್ಯಾರೇಜ್ ನಿರ್ಮಾಣದಿಂದ ಕರ್ನಾಟಕ ಮತ್ತು ತೆಲಂಗಾಣ ಎರಡು ರಾಜ್ಯಗಳ ರೈತರಿಗೆ ನೀರಾವರಿ ಕೈಗೊಳ್ಳಲು ಅನುಕೂಲವಾಗಲಿದೆ’ ಎಂದರು.

‘ತೆಲಂಗಾಣದ ಸರ್ಕಾರ ಆಕ್ಷೇಪಣೆ ರಹಿತ ಪ್ರಮಾಣ ಪತ್ರ ನೀಡಲು ನೆರೆಯ ತಾಂಡೂರು ಕ್ಷೇತ್ರ ಪ್ರತಿನಿಧಿಸುವ ತೆಲಂಗಾಣದ ಸಾರಿಗೆ ಸಚಿವ ಡಾ.ಪಿ.ಮಹೇಂದ್ರರೆಡ್ಡಿ ಹೆಚ್ಚಿನ ಸಹಕಾರ ನೀಡಿದ್ದಾರೆ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

‘ದಶಕದ ಹಿಂದೆಯೇ ಇಲ್ಲಿ ಬ್ರಿಜ್‌ ಕಂ ಬ್ಯಾರೇಜ್‌ ಮಂಜೂರಾಗಿತ್ತು. ನೆರೆ ರಾಜ್ಯದ ಅಸಹಕಾರದಿಂದ ಕಾಮಗಾರಿ ರದ್ದಾಗಿತ್ತು. ಈಗ ತಾವು ವಿಶೇಷ ಆಸಕ್ತಿ ವಹಿಸಿ ಸತತ ಪ್ರಯತ್ನ ನಡೆಸಿದ್ದರಿಂದ ನೆರೆ ರಾಜ್ಯ ನಮ್ಮ ಜತೆ ಕೈಜೋಡಿಸಿ ಸಹಕರಿಸಿದೆ’ ಎಂದರು.

ತೆಲಂಗಾಣದ ಸಾರಿಗೆ ಸಚಿವ ಡಾ.ಪಿ.ಮಹೇಂದ್ರರೆಡ್ಡಿ ಮಾತನಾಡಿ, ‘ದೇಶದಲ್ಲಿಯೇ ರೈತರಿಗೆ ದಿನದ 24 ಗಂಟೆ ನಿರಂತರ ಉಚಿತ ವಿದ್ಯುತ್‌ ನೀಡುವ ಏಕೈಕ ರಾಜ್ಯ ತೆಲಂಗಾಣವಾಗಿದೆ. ಮುಖ್ಯಮಂತ್ರಿ ಕೆ.ಚಂದ್ರಶೇಖರರಾವ್‌ ಅವರು ನೀರಾವರಿಗೆ ಆದ್ಯತೆ ನೀಡಿ ರೈತರಿಗೆ ನೀರು ಹಾಗೂ ವಿದ್ಯುತ್‌ ನೀಡುತ್ತಿದ್ದಾರೆ. ಅಂತರ್ಜಲ ಮಟ್ಟ ಹೆಚ್ಚಳಕ್ಕೆ ನೆರವಾಗಲು ಇಂಗುಗುಂಡಿಗಳು, ಕೃಷಿಹೊಂಡ ನಿರ್ಮಾಣಕ್ಕೆ ಯೋಜನೆ ರೂಪಿಸಿ ಅನುಷ್ಠಾನಗೊಳಿಸಿದ್ದೇವೆ’ ಎಂದು ಹೇಳಿದರು.

‘ತೆಲಂಗಾಣ ರಾಜ್ಯದಿಂದಲೂ ಗಡಿ ಭಾಗದ ಗ್ರಾಮಗಳ ಜನರಿಗೆ ರಸ್ತೆ, ಸೇತುವೆ, ಸಾರಿಗೆ ಮುಂತಾದ ಮೂಲಸೌಕರ್ಯ ಕಲ್ಪಿಸಲಾಗುವುದು’ ಎಂದು ಭರವಸೆ ನೀಡಿದರು.

ಬ್ಲಾಕ್‌ ಕಾಂಗ್ರೆಸ್‌ ಮಾಜಿ ಅಧ್ಯಕ್ಷ ಸುಭಾಷ್‌ಚಂದ್ರ ನಿಷ್ಠಿ, ಗ್ರಾ.ಪಂ ಉಪಾಧ್ಯಕ್ಷ ಬಿಚ್ಚರೆಡ್ಡಿ ಪಾಟೀಲ ಮಾತನಾಡಿದರು. ಗ್ರಾ.ಪಂ ಅಧ್ಯಕ್ಷೆ ಚಂದ್ರಕಲಾ ಬಲರಾಮ ಅಧ್ಯಕ್ಷತೆ ವಹಿಸಿದ್ದರು. ಜಿ.ಪಂ ಸದಸ್ಯರಾದ ಶಿವಶರಣಪ್ಪ ಶಂಕರ, ಅಜಯ ಪ್ರಸಾದ್‌, ಚಂದ್ರಶೇಖರಯ್ಯ ಕಂಬದ್‌, ಶಿವಶರಣರೆಡ್ಡಿ ಪಾಟೀಲ, ಗುರುನಾಥರೆಡ್ಡಿ, ವೆಂಕಟರೆಡ್ಡಿ ಗೋನೂರು, ಲಿಂಗಶೆಟ್ಟಿ ತಟ್ಟೆಪಳ್ಳಿ, ರಾಜೇಶ ಗುತ್ತೇದಾರ, ಪುರುಷೋತ್ತಮರೆಡ್ಡಿ, ಶಿವಪುತ್ರ ಕಾಳಗಿ, ಕೃಷ್ಣ ಭಾಗ್ಯ ಜಲ ನಿಗಮದ ಮಹಮದ್‌ ಮಕ್ಸೂದ್ ಖಾನ್‌, ನಾಗಣ್ಣ ಇದ್ದರು. ಬಿಚ್ಚರೆಡ್ಡಿ ಪಾಟೀಲ ಸ್ವಾಗತಿಸಿದರು. ಸೋಮನಾಥರೆಡ್ಡಿ ವಂಗಾ ನಿರೂಪಿಸಿದರು. ವಿಶ್ವನಾಥರೆಡ್ಡಿ ಪೊತಂಗಲ್‌ ವಂದಿಸಿದರು.

* * 

ಕರ್ನಾಟಕ ಸಚಿವರಾದ ಡಾ. ಶರಣಪ್ರಕಾಶ ಪಾಟೀಲ ಅವರ ಮನವಿ ಮೇರೆಗೆ ಜಟ್ಟೂರು ಬಳಿ ಕಾಗಿಣಾ ನದಿಗೆ ಅಡ್ಡಲಾಗಿ ಬ್ರಿಜ್‌ ಕಂ ಬ್ಯಾರೇಜ್ ನಿರ್ಮಾಣಕ್ಕೆ ತೆಲಂಗಾಣ ಸರ್ಕಾರದಿಂದ ಆಕ್ಷೇಪಣೆ ರಹಿತ ಪ್ರಮಾಣ ಪತ್ರ ನೀಡಿದ್ದೇವೆ.

ಡಾ.ಪಿ.ಮಹೇಂದ್ರರೆಡ್ಡಿ, 

ಸಾರಿಗೆ ಸಚಿವರು, ತೆಲಂಗಾಣ

ಪ್ರತಿಕ್ರಿಯಿಸಿ (+)