ಬುಧವಾರ, ಡಿಸೆಂಬರ್ 11, 2019
20 °C

ಚಂದ್ರನ ಕಂಡು ಪುಳಕಿತರಾದ ಚಿಣ್ಣರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಂದ್ರನ ಕಂಡು ಪುಳಕಿತರಾದ ಚಿಣ್ಣರು

ಕಾರವಾರ: ಸಂಜೆಯಿಂದ ಕಾದುಕುಳಿತಿದ್ದ ವಿದ್ಯಾರ್ಥಿಗಳ ಚಡಪಡಿಕೆ, ಶಿಕ್ಷಕರು ಪೋಷಕರಿಂದ ಸಮಾಧಾನದ ನುಡಿಗಳು... ಫೇಸ್‌ಬುಕ್‌, ಯೂಟ್ಯೂಬ್‌ ಚಾನಲ್‌ಗಳಲ್ಲಿ ಬರುತ್ತಿದ್ದ ನೇರ ಪ್ರಸಾರ ನೋಡಿ, ‘ಇಲ್ಲಿ ಎಷ್ಟು ಹೊತ್ತಿಗಪ್ಪಾ ಕಾಣ್ಸುತ್ತೇ...’ ಎಂಬ ಉದ್ಗಾರ...

ಬುಧವಾರ ಈ ಸನ್ನಿವೇಶಗಳು ಕಂಡುಬಂದಿದ್ದು ಇಲ್ಲಿನ ಜಿಲ್ಲಾ ಉಪ ಪ್ರಾದೇಶಿಕ ವಿಜ್ಞಾನ ಕೇಂದ್ರದಲ್ಲಿ. 1866ರ ನಂತರ ಇದೇ ಮೊದಲ ಬಾರಿಗೆ ‘ಸೂಪರ್ ಮೂನ್’ ಮತ್ತು ‘ಬ್ಲ್ಯೂ ಬ್ಲಡ್ ಮೂನ್’ ಒಂದೇ ದಿನ ಕಾಣಿಸಿಕೊಂಡಿದೆ. ಈ ಅಪರೂಪದ ಕೌತುಕ ವೀಕ್ಷಿಸಲು ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯಿತಿ ಇಲ್ಲಿ ವ್ಯವಸ್ಥೆ ಮಾಡಿತ್ತು. ನಗರದ ವಿವಿಧ ಶಾಲೆಗಳ 300 ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಕೆಂಪಾದ ಚಂದ್ರನನ್ನು ದೂರದರ್ಶಕದಲ್ಲಿ ನೋಡಿ ಪುಳಕಿತಗೊಂಡ ಹಿಂದೂ ಪ್ರೌಢಶಾಲೆಯ 10ನೇ ತರಗತಿ ವಿದ್ಯಾರ್ಥಿಗಳಾದ ಓಂಕಾರ್ ಮತ್ತು ದರ್ಶನ್ ಸಂತಸ ವ್ಯಕ್ತಪಡಿಸಿದರು.

‘ಗ್ರಹಣ ಸಂದರ್ಭದಲ್ಲಿ ಏನನ್ನೂ ಸೇವಿಸಬಾರದು ಎನ್ನುವುದು ಮೂಢನಂಬಿಕೆ. ಹಿರಿಯರಿಗೆ ಹೇಳಿದರೆ ಕೇಳುವುದಿಲ್ಲ. ನಾವು ಮೂಢನಂಬಿಕೆ ದೂರ ಮಾಡಿದರೆ ಮುಂದಿನ ಪೀಳಿಗೆಯೂ ನಮ್ಮನ್ನು ಅನುಸರಿಸುತ್ತದೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಸುಮತಿ ದಾಮ್ಲೆ ಶಾಲೆಯ ಶಿಕ್ಷಕಿ ಸರಿತಾ ರಾಮದಾಸ್ ಕುಡ್ತಳಕರ್ ಮಾತನಾಡಿ, ‘ಈ ಬಾರಿಯ ಚಂದ್ರಗ್ರಹಣದ ಬಗ್ಗೆ ಹೆಚ್ಚಿನ ಕುತೂಹಲವಿತ್ತು. ವಿದ್ಯಾರ್ಥಿಗಳಿಗೂ ವೈಜ್ಞಾನಿಕ ಮಾಹಿತಿ ನೀಡಿದ್ದೆವು. ಇಲ್ಲಿ ಚಂದ್ರಗ್ರಹಣದ ಸಂಪೂರ್ಣ ಮಾಹಿತಿಯನ್ನು ತಜ್ಞರು ನೀಡುವ ಮೂಲಕ ಮೂಢನಂಬಿಕೆ ದೂರ ಮಾಡುವ ಕಾರ್ಯವನ್ನು ಮಾಡಿದ್ದಾರೆ’ ಎಂದು ಸಂತಸ ಹಂಚಿಕೊಂಡರು.

ಚಂದ್ರಗ್ರಹಣದ ವೇಳೆ ವಿದ್ಯಾರ್ಥಿಗಳಿಗೆ ಉಪ್ಪಿಟ್ಟು ಹಂಚಿ ಅರಿವು ಮೂಡಿಸಲಾಯಿತು. ಇದಕ್ಕೂ ಮೊದಲು ವಿದ್ಯಾರ್ಥಿಗಳಿಗೆ ತಜ್ಞರಾದ ಪ್ರೀಮಿಯರ್ ಪಿಯು ಕಾಲೇಜಿನ ರಾಘವೇಂದ್ರ, ಸರ್ಕಾರಿ ಪದವಿ ಕಾಲೇಜಿನ ಶ್ರೀನಿವಾಸ ಭಟ್, ಸರ್ಕಾರಿ ಪಿಯು ಕಾಲೇಜಿನ ಪ್ರಕಾಶ್ ಅಣ್ವೇಕರ್ ಹಾಗೂ ಚಾಮರಾಜನಗರದ ದೀನಬಂಧು ಟ್ರಸ್ಟ್‌ನ ಸುನಿಲ್ ಅವರು ಖಗೋಳ ವಿಸ್ಮಯದ ಮಾಹಿತಿ ನೀಡಿದರು.

ಪ್ರತಿಕ್ರಿಯಿಸಿ (+)